ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kcr Meets Nitish: ನಿತೀಶ್‌ ಕುಮಾರ್‌ ಭೇಟಿ ಮಾಡಿದ ಕೆಸಿಆರ್:‌ ಮೋದಿ ವಿರುದ್ಧ ತೊಡೆ ತಟ್ಟಿದ ʼಹಗಲುಗನಸಿನ ನಾಯಕರುʼ!

KCR Meets Nitish: ನಿತೀಶ್‌ ಕುಮಾರ್‌ ಭೇಟಿ ಮಾಡಿದ ಕೆಸಿಆರ್:‌ ಮೋದಿ ವಿರುದ್ಧ ತೊಡೆ ತಟ್ಟಿದ ʼಹಗಲುಗನಸಿನ ನಾಯಕರುʼ!

Nikhil Kulkarni HT Kannada

Aug 31, 2022 03:58 PM IST

ಕೆಸಿಆರ್-ನಿತೀಶ್‌ ಭೇಟಿ

    • ಭಾರತೀಯ ಜನತಾ ಪಕ್ಷದ ವಿರುದ್ಧ ಸಮಾನ ಮನಸ್ಕ ಪಕ್ಷಗಳ ಮೈತ್ರಿಯನ್ನು ಒಟ್ಟುಗೂಡಿಸುವ ಗುರಿಯೊಂದಿಗೆ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಇಂದು (ಆ.31-ಬುಧವಾರ) ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕೆಸಿಆರ್‌ ಮತ್ತು ನಿತೀಶ್‌ ಕುಮಾರ್‌ ಅವರ ಭೇಟಿಯ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ, ಹಗಲುಗನಸು ಕಾಣುತ್ತಿರುವ ಇಬ್ಬರು ನಾಯಕರ ಭೇಟಿ ಎಂದು ಬಣ್ಣಿಸಿದೆ.
ಕೆಸಿಆರ್-ನಿತೀಶ್‌ ಭೇಟಿ
ಕೆಸಿಆರ್-ನಿತೀಶ್‌ ಭೇಟಿ (Verified Twitter)

ಪಾಟ್ನಾ: ಭಾರತೀಯ ಜನತಾ ಪಕ್ಷದ ವಿರುದ್ಧ ಸಮಾನ ಮನಸ್ಕ ಪಕ್ಷಗಳ ಮೈತ್ರಿಯನ್ನು ಒಟ್ಟುಗೂಡಿಸುವ ಗುರಿಯೊಂದಿಗೆ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಇಂದು (ಆ.31-ಬುಧವಾರ) ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Sushil Kumar Modi: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅನಾರೋಗ್ಯದಿಂದ ವಿಧಿವಶ; ಗಣ್ಯರ ಕಂಬನಿ

Mumbai Dust Storm 2024: ಮುಂಬೈನಲ್ಲಿ ಭಾರೀ ಗಾಳಿಗೆ ಹೋರ್ಡಿಂಗ್‌ ಕುಸಿದು ನಾಲ್ವರ ಸಾವು, ಹಲವರ ಸ್ಥಿತಿ ಗಂಭೀರ, ಹೇಗಿತ್ತು ಸನ್ನಿವೇಶ

ಅಡ್ಡ ಬಂದ ಕೋತಿ ತಪ್ಪಿಸಲು ಹೋಗಿ ಅಪಘಾತ, ಬ್ಯಾಂಕ್‌ ಅಧಿಕಾರಿ,ಸಿಬ್ಬಂದಿ ಸೇರಿ ಮೂವರ ದುರ್ಮರಣ

4ನೇ ಹಂತದ ಲೋಕಸಭೆ ಚುನಾವಣೆ; ಬೆಳಗ್ಗೆ 11ರ ವರೆಗೆ ಶೇ 25 ರಷ್ಟು ಮತದಾನ, ಈವರೆಗೆ ತಿಳಿಯಬೇಕಾದ 10 ಅಂಗಳಿವು

ಬಿಹಾರ ರಾಜಧಾನಿ ಪಾಟ್ನಾದಲ್ಲಿ ನಿತೀಶ್‌ ಕುಮಾರ್‌ ಅವರನ್ನು ಭೇಟಿ ಮಾಡಿದ ಕೆ ಚಂದ್ರಶೇಖರ್ ರಾವ್‌, ದೇಶದ ಪ್ರಸ್ತುತ ರಾಜಕಾರಣದ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಬಿಹಾಋ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಕೂಡ ಉಪಸ್ಥಿತರಿದ್ದರು.

ಬಿಜೆಪಿಯ ಮಾಜಿ ಮಿತ್ರ ಪಕ್ಷ ಜೆಡಿ(ಯು) ಈಗಷ್ಟೇ ಬಿಜೆಪಿ ಸಖ್ಯ ತೊರೆದಿದ್ದು, ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ ಮೈತ್ರಿಕೂಟದ ಜೊತೆ ಸೇರಿಕೊಂಡು ಸರ್ಕಾರ ರಚಿಸಿದೆ. ಬಿಹಾರದಲ್ಲಿ ಬಿಜೆಪಿ ವಿರೋಧಿ ಸರ್ಕಾರ ರಚನೆಯಾಗುತ್ತಿದ್ದಂತೇ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್‌ ಅವರು ನಿತೀಶ್‌ ಕುಮಾರ್‌ ಅವರನ್ನು ಭೇಟಿ ಮಾಡಿರುವುದು ದೇಶದ ಗಮನ ಸೆಳೆದಿದೆ.

ಕಾರ್ಯಸಾಧ್ಯವಾದ ಬಿಜೆಪಿಯೇತರ, ಕಾಂಗ್ರೆಸ್ಸೇತರ ಮೈತ್ರಿಕೂಟವನ್ನು ರಚಿಸುವುದು ಕೆಸಿಆರ್ ಗುರಿಯಾಗಿದ್ದು, ಇದಕ್ಕಾಗಿ ಆಯಾ ರಾಜ್ಯಗಳಲ್ಲಿ ಪ್ರಬಲವಾಗಿರುವ ಪ್ರಾದೇಶಿಕ ಪಕ್ಷಗಳ ಬಾಗಿಲು ತಟ್ಟುತ್ತಿದ್ದಾರೆ. ಈ ನಿಟ್ಟಿನಲ್ಲಿ ನಿತೀಶ್‌ ಕುಮಾರ್‌ ಅವರೊಂದಿಗಿನ ಕೆಸಿಆರ್‌ ಭೇಟಿಯನ್ನು ಈ ಸಂಭಾವ್ಯ ಮೈತ್ರಿಕೂಟ ರಚನೆಯ ಮೊದಲ ಹೆಜ್ಜೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.

ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರ ಕಟು ಟೀಕಾಕಾರರಾಗಿರುವ ಕೆಸಿಆರ್‌, ಎರಡು ದಿನಗಳ ಹಿಂದೆ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರದ ತೀವ್ರ ವಾಗ್ದಾಳಿ ನಡೆಸಿದ್ದರು. ಪ್ರಧಾನಿ ಮೋದಿ ಅವರನ್ನು ʼಗೋಲ್‌ಮಾಲ್‌ ಪಿಎಂʼ ಎಂದು ಕರೆದಿದ್ದ ಕೆಸಿಆರ್‌,

2024ರಲ್ಲಿ ʼಬಿಜೆಪಿ-ಮುಕ್ತ್ ಭಾರತ್ ನಿರ್ಮಾಣ ತಮ್ಮ ಗುರಿ ಎಂದು ಬಹಿರಂಗವಾಗಿ ಸಾರಿದ್ದರು.

2024 ರಲ್ಲಿ ಬಿಜೆಪಿ ಮುಕ್ತ ಭಾರತವನ್ನು ರಚಿಸಲು ನಾವು ಪ್ರತಿಜ್ಞೆ ಮಾಡಬೇಕು ಎಂದು ಕರೆ ನೀಡಿರುವ ಕೆಸಿಆರ್‌, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡದಿದ್ದರೆ, ಈ ದೇಶ ಸರ್ವನಾಶವಾಗಲಿದೆ ಎಂದು ಗುಡುಗಿದ್ದರು. ಬಿಜೆಪಿ ವಿರೋಧಿ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿರುವ ಕೆಸಿಆರ್‌, ಶರದ್ ಪವಾರ್, ಉದ್ಧವ್ ಠಾಕ್ರೆ, ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಸೇರಿದಂತೆ ವಿವಿಧ ವಿರೋಧ ಪಕ್ಷದ ನಾಯಕರಿಗೆ ರಾಷ್ಟ್ರ ಮಟ್ಟದ ಮೈತ್ರಿಕೂಟಕ್ಕೆ ಆಹ್ವಾನ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರನ್ನು ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ ಎಂದು ಬಣ್ಣಿಸಿರುವ ಕೆಸಿಆರ್‌, ಕೇಂದ್ರದಲ್ಲಿ ಬಿಜೆಪಿಯೇತರ ಡಬಲ್‌ ಎಂಜಿನ್ ಸರ್ಕಾರದ ಅಗತ್ಯವಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಸಿಆರ್‌ ಮತ್ತು ನಿತೀಶ್‌ ಕುಮಾರ್‌ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ.

ಬಿಜೆಪಿ ತಿರುಗೇಟು:

ಇನ್ನು ಕೆಸಿಆರ್‌ ಮತ್ತು ನಿತೀಶ್‌ ಕುಮಾರ್‌ ಅವರ ಭೇಟಿಯ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ, ಪ್ರಧಾನಿ ಕುರ್ಚಿಗಾಗಿ ಈಗಿನಿಂದಲೇ ಟವಲ್‌ ಹಾಸಲು ಕಸರತ್ತು ಆರಂಭವಾಗಿದೆ ಎಂದು ಕಿಚಾಯಿಸಿದೆ. ಈ ಕುರಿತು ಮಾತನಾಡಿರುವ ಬಿಹಾರ ಬಿಜೆಪಿ ನಾಯಕ ಸುಶೀಲ್‌ ಕುಮಾರ್‌ ಮೋದಿ, ಕೆಸಿಆರ್‌ ಮತ್ತು ನಿತೀಶ್‌ ಕುಮಾರ್‌ ನಡುವಿನ ಭೇಟಿಯನ್ನು ಹಗಲುಗನಸು ಕಾಣುತ್ತಿರುವ ಇಬ್ಬರು ನಾಯಕರ ಭೇಟಿ ಎಂದು ಬಣ್ಣಿಸಿದ್ದಾರೆ.

ಪ್ರಧಾನಿ ಮೋದಿ ಅವರ ವಿರುದ್ಧ ವಿಪಕ್ಷಗಳ ನಾಯಕರು ಒಗ್ಗೂಡುತ್ತಿದ್ದಾರೆ. ಎಲ್ಲರೂ ಒಟ್ಟಾಗಿ ಮೋದಿ ಮೇಲೆ ಮುಗಿಬೀಳಲು ಯೋಜನೆ ರೂಪಿಸುತ್ತಿದ್ದಾರೆ. ಆದರೆ ದೇಶದ ಜನತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರವನ್ನು ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಸಭಾ ಸಂಸದ ಸುಶೀಲ್‌ ಕುಮಾರ್‌ ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ