Pak on Dawood: ಶ್...!ದಾವೂದ್ ಹಸ್ತಾಂತರ ಕುರಿತು ಕೇಳಿದ ಪ್ರಶ್ನೆಗೆ ಪಾಕ್ ಅಧಿಕಾರಿಯ ಪ್ರತಿಕ್ರಿಯೆ ಹೀಗಿತ್ತು!
Oct 18, 2022 08:57 PM IST
ಮೊಹ್ಸಿನ್ ಭಟ್
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಇಂಟರ್‌ಪೋಲ್ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿರುವ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ (ಎಫ್‌ಐಎ) ಮಹಾನಿರ್ದೇಶಕ ಮೊಹ್ಸಿನ್ ಭಟ್, ದಾವೂದ್ ಕುರಿತು ಕೇಳಲಾದ ಪ್ರಶ್ನೆಗೆ ಕೈಸನ್ನೆ ಮಾಡುವ ಮೂಲಕ ಉತ್ತರಿಸಲು ನಿರಾಕರಿಸಿರುವುದು ಗಮನ ಸೆಳೆದಿದೆ. ಹಫೀಜ್ ಸಯೀದ್ ಕುರಿತು ಕೇಳಲಾದ ಪ್ರಶ್ನೆಗೆ ಮೊಹ್ಸಿನ್ ಮೌನವೇ ಉತ್ತರವಾಗಿತ್ತು.
ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಮತ್ತು ಭೂಗತ ದೊರೆ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈ ಸತ್ಯವನ್ನು ನಿರಾಕರಿಸುತ್ತಲೇ ಬರುತ್ತಿರುವ ಪಾಕಿಸ್ತಾನ, ದಾವೂದ್‌ನನ್ನು ಭಾರತಕ್ಕೆ ಹಸ್ತಾಂತರಿಸಲು ತಯಾರಿಲ್ಲ. ಆದರೆ ದಾವೂದ್ ಪಾಕಿಸ್ತಾನದಲ್ಲೇ ಇರುವುದನ್ನು ಈಗ ಆ ದೇಶದ ಉನ್ನತ ಅಧಿಕಾರಿಯೇ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಇಂಟರ್‌ಪೋಲ್ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿರುವ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ (ಎಫ್‌ಐಎ) ಮಹಾನಿರ್ದೇಶಕ ಮೊಹ್ಸಿನ್ ಭಟ್, ದಾವೂದ್ ಕುರಿತು ಕೇಳಲಾದ ಪ್ರಶ್ನೆಗೆ ಕೈಸನ್ನೆ ಮಾಡುವ ಮೂಲಕ ಉತ್ತರಿಸಲು ನಿರಾಕರಿಸಿರುವುದು ಗಮನ ಸೆಳೆದಿದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನನ್ನು ಪಾಕಿಸ್ತಾನವು ಭಾರತಕ್ಕೆ ಹಸ್ತಾಂತರಿಸುವುದೇ ಎಂಬ ಪತ್ರಕರ್ತರ ಪ್ರಶ್ನೆಗೆ, ಮೊಹ್ಸಿನ್ ಭಟ್ ಉತ್ತರಿಸಲು ನಿರಾಕರಿಸಿದ್ದಾರೆ. ಅಲ್ಲದೇ ಈ ಕುರಿತು ಪದೇ ಪದೇ ಕುರಿತು ಕೇಳಲಾದ ಪ್ರಶ್ನೆಗೆ ಕೈಸನ್ನೆ ಮಾಡುವ ಮೂಲಕ ಮೊಹ್ಸಿನ್ ಭಟ್ ಪತ್ರಕರ್ತರನ್ನು ಸುಮ್ಮನಿಸಿರಿಸಿದರು.
ದಾವೂದ್ ಇಬ್ರಾಹಿಂ ಮತ್ತು ಹಫೀಜ್ ಸಯೀದ್ ಇಬ್ಬರೂ ಭಾರತೀಯ ಭದ್ರತಾ ಏಜೆನ್ಸಿಗಳಿಗೆ ಹೆಚ್ಚು ಬೇಕಾಗಿರುವ ಭಯೋತ್ಪಾದಕರಲ್ಲಿ ಸೇರಿದ್ದಾರೆ. ಇವರಿಬ್ಬರೂ ಪಾಕಿಸ್ತಾನದಲ್ಲಿ ನೆಲೆಸಿದ್ದು, ಪಾಕಿಸ್ತಾನ ಮಾತ್ರ ಇಬ್ಬರನ್ನೂ ಹಸ್ತಾಂತರಿಸಲು ನಿರಾಕರಿಸುತ್ತಿದೆ. ಇಂಟರ್‌ಪೋಲ್ ಜನರಲ್ ಅಸೆಂಬ್ಲಿ ಸಭೆಗಾಗಿ ನವದೆಹಲಿಗೆ ಕಳುಹಿಸಲಾದ ಪಾಕಿಸ್ತಾನದ ಇಬ್ಬರು ಸದಸ್ಯರ ನಿಯೋಗದ ಭಾಗವಾಗಿರುವ ಮೊಹ್ಸಿನ್ ಭಟ್, ದಾವೂದ್ ಮತ್ತು ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಇರುವಿಕೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಪಾಕಿಸ್ತಾನ ಮತ್ತು ನವದೆಹಲಿ ನಡುವೆ ಗಡಿಯಾಚೆಗಿನ ಭಯೋತ್ಪಾದನೆ ಸಮಸ್ಯೆಗೆ ಯಾವುದೇ ಪರಿಹಾರ ದೊರೆತಿಲ್ಲ. ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯಲ್ಲೂ ಪಾಕಿಸ್ತಾನ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿ ಭಾರತದಿಂದ ಛಿಮಾರಿ ಹಾಕಿಸಿಕೊಂಡಿತ್ತು. ಆದಾಗ್ಯೂ ದೆಹಲಿಯಲ್ಲಿ ಇಂಟರ್‌ಪೋಲ್ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನಿ ನಿಯೋಗದ ಭಾಗವಹಿಸುವಿಕೆ ಗಮನ ಸೆಳೆದಿದೆ.
ಆದರೆ ದಾವೂದ್ ಇಬ್ರಾಹಿಂ ಮತ್ತು ಹಫೀಜ್ ಸಯೀದ್ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರ ವರ್ತನೆ, ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿರುವುದು ಸುಳ್ಳಲ್ಲ. ಅವರ ವರ್ತನೆಯಿಂದಲೇ ಈ ಇಬ್ಬರೂ ಭಯೋತ್ಪಾದಕರು ಪಾಕಿಸ್ತಾನದಲ್ಲಿದ್ದಾರೆ ಎಂಬುದು ಸಾಬೀತಾಗಿರುವುದು ಸುಳ್ಳಲ್ಲ.
ಸಾಮಾನ್ಯ ಸಭೆಯು ಇಂಟರ್‌ಪೋಲ್‌ನ ಸರ್ವೋಚ್ಚ ಆಡಳಿತ ಮಂಡಳಿಯಾಗಿದೆ ಮತ್ತು ಅದರ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ವರ್ಷಕ್ಕೊಮ್ಮೆ ಸಭೆ ಸೇರುತ್ತದೆ. ಇಂದು(ಅ.18-ಮಂಗಳವಾರ) ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಅವರು ಇಂಟರ್‌ಪೋಲ್ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡಿದರು.
ಒಟ್ಟು ನಾಲ್ಕು ದಿನಗಳ ಈ ಸಭೆ ಶುಕ್ರವಾರದವರೆಗೆ(ಅ.21) ನಡೆಯಲಿದ್ದು, ವಿವಿಧ ದೇಶಗಳ ಮಂತ್ರಿಗಳು, ವಿವಿಧ ದೇಶಗಳ ಪೊಲೀಸ್ ಮುಖ್ಯಸ್ಥರು, ರಾಷ್ಟ್ರೀಯ ಕೇಂದ್ರ ಬ್ಯೂರೋಗಳ ಮುಖ್ಯಸ್ಥರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ 195 ಇಂಟರ್‌ಪೋಲ್ ಸದಸ್ಯ ರಾಷ್ಟ್ರಗಳ ನಿಯೋಗಗಳು ಭಾಗವಹಿಸಿವೆ.
ಸುಮಾರು 25 ವರ್ಷಗಳ ನಂತರ ಭಾರತದಲ್ಲಿ ಇಂಟರ್‌ಪೋಲ್ ಜನರಲ್ ಅಸೆಂಬ್ಲಿ ಸಭೆ ನಡೆಯುತ್ತಿದೆ. ಕೊನೆಯ ಬಾರಿ 1997ರಲ್ಲಿ ಭಾರತದಲ್ಲಿ ಇಂಟರ್‌ಪೋಲ್ ಸಭೆ ನಡೆದಿತ್ತು.
ಈ ಸಭೆಯಲ್ಲಿ ಪ್ರತಿ 195 ಸದಸ್ಯ ರಾಷ್ಟ್ರವನ್ನು ಒಬ್ಬ ಅಥವಾ ಹಲವಾರು ಪ್ರತಿನಿಧಿಗಳು ಪ್ರತಿನಿಧಿಸಬಹುದು. ಈ ಪ್ರತಿನಿಧಿಗಳು ಸಾಮಾನ್ಯವಾಗಿ ಮಂತ್ರಿಗಳು, ಪೊಲೀಸ್ ಮುಖ್ಯಸ್ಥರು, ಅವರ ಇಂಟರ್‌ಪೋಲ್ ರಾಷ್ಟ್ರೀಯ ಕೇಂದ್ರ ಬ್ಯೂರೋಗಳ ಮುಖ್ಯಸ್ಥರು ಮತ್ತು ಹಿರಿಯ ಸಚಿವಾಲಯದ ಅಧಿಕಾರಿಗಳಾಗಿರುತ್ತಾರೆ.
ವಿಭಾಗ