ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rich Indians Wealth: ಭಾರತದ ಶೇ.1ರಷ್ಟು ಶ್ರೀಮಂತರ ಬಳಿ ದೇಶದ ಶೇ.40ರಷ್ಟು ಸಂಪತ್ತು: ಈ ಅಸಮಾನತೆ ತರಲಿದೆಯೇ ಆಪತ್ತು?

Rich Indians Wealth: ಭಾರತದ ಶೇ.1ರಷ್ಟು ಶ್ರೀಮಂತರ ಬಳಿ ದೇಶದ ಶೇ.40ರಷ್ಟು ಸಂಪತ್ತು: ಈ ಅಸಮಾನತೆ ತರಲಿದೆಯೇ ಆಪತ್ತು?

HT Kannada Desk HT Kannada

Jan 16, 2023 02:50 PM IST

ಸಾಂದರ್ಭಿಕ ಚಿತ್ರ

    • ಭಾರತದಲ್ಲಿನ ಶೇ.1ರಷ್ಟು ಶ್ರೀಮಂತರ ಬಳಿ ದೇಶದ ಶೇ.40ಕ್ಕೂ ಹೆಚ್ಚು ಸಂಪತ್ತು ಇದ್ದು, ಜನಸಂಖ್ಯೆಯ ಕೆಳಭಾಗದ ಅರ್ಧದಷ್ಟು ಜನರು ಕೇವಲ ಶೇ.3ರಷ್ಟು ಸಂಪತ್ತನ್ನು ಹಂಚಿಕೊಂಡಿದ್ದಾರೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಮೊದಲ ದಿನ, ತನ್ನ ವಾರ್ಷಿಕ ಅಸಮಾನತೆಯ ವರದಿಯನ್ನು, ಆಕ್ಸ್‌ಫ್ಯಾಮ್ ಇಂಟರ್‌ನ್ಯಾಶನಲ್ ಬಿಡುಗಡೆ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ANI)

ದಾವೋಸ್: ಭಾರತದಲ್ಲಿನ ಶೇ.1ರಷ್ಟು ಶ್ರೀಮಂತರ ಬಳಿ ದೇಶದ ಶೇ.40ಕ್ಕೂ ಹೆಚ್ಚು ಸಂಪತ್ತು ಇದ್ದು, ಜನಸಂಖ್ಯೆಯ ಕೆಳಭಾಗದ ಅರ್ಧದಷ್ಟು ಜನರು ಕೇವಲ ಶೇ.3ರಷ್ಟು ಸಂಪತ್ತನ್ನು ಹಂಚಿಕೊಂಡಿದ್ದಾರೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಆಭರಣ ಪ್ರಿಯರಿಗೆ ಇಲ್ಲಿದೆ ಭರ್ಜರಿ ಸುದ್ದಿ, ಚಿನ್ನದೊಂದಿಗೆ ಬೆಳ್ಳಿ ಬೆಲೆಯೂ ಇಳಿಕೆ; ರಾಜ್ಯದಲ್ಲಿಂದು ದರ ಎಷ್ಟಿದೆ ಗಮನಿಸಿ

Explainer:ಊಟಿ, ಕೊಡೈಕೆನಾಲ್‌ಗೆ ಸ್ವಂತ ವಾಹನದಲ್ಲಿ ಹೊರಟಿದ್ದೀರಾ, ಇ ಪಾಸ್‌ ಕಡ್ಡಾಯ, ಪಡೆಯುವುದು ಹೀಗೆ

Modi Assets: ಪ್ರಧಾನಿ ಮೋದಿ ಆಸ್ತಿ ಎಷ್ಟು,5 ವರ್ಷದಲ್ಲಿ ಏರಿದ ಪ್ರಮಾಣವೇನು, ಅವರ ಬಳಿ ಸ್ವಂತ ಮನೆ, ಕಾರು ಇದೆಯೇ?

Closing Bell: ಷೇರುಪೇಟೆಗೆ ಬಲ ತುಂಬಿದ ಇಂಧನ-ಆಟೊಮೊಬೈಲ್‌, ಸೆನ್ಸೆಕ್ಸ್‌-ನಿಫ್ಟಿ ಏರಿಕೆ; ಇಂದು ಲಾಭ ಗಳಿಸಿದ ಷೇರುಗಳ ವಿವರ ಹೀಗಿದೆ

ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಮೊದಲ ದಿನ, ತನ್ನ ವಾರ್ಷಿಕ ಅಸಮಾನತೆಯ ವರದಿಯನ್ನು ಬಿಡುಗಡೆ ಮಾಡಿರುವ ಆಕ್ಸ್‌ಫ್ಯಾಮ್ ಇಂಟರ್‌ನ್ಯಾಶನಲ್, ಭಾರತದ ಹತ್ತು ಆಗರ್ಭ ಶ್ರೀಮಂತರಿಗೆ ಶೇಕಡಾ 5ರಷ್ಟು ತೆರಿಗೆ ವಿಧಿಸುವುದರಿಂದ ದೇಶದ ಎಲ್ಲಾ ಮಕ್ಕಳನ್ನು ಶಾಲೆಗೆ ಮರಳಿ ತರುವುದು ಸಾಧ್ಯ ಎಂದು ಹೇಳಿದೆ.

ಬಿಲಿಯನೇರ್ ಗೌತಮ್ ಅದಾನಿ ಮೇಲೆ 2017-2021 ರಿಂದ ಅವಾಸ್ತವಿಕ ಲಾಭಗಳ ಮೇಲೆ ತೆರಿಗೆ ವಿಧಿಸಿದ್ದರೆ, ಸರ್ಕಾರವು 1.79 ಲಕ್ಷ ಕೋಟಿ ರೂ.ಸಂಗ್ರಹಿಸಬಹುದಿತ್ತು. ಇದು ಒಂದು ವರ್ಷಕ್ಕೆ ಐದು ಮಿಲಿಯನ್‌ಗಿಂತಲೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳಲು ಸಾಕಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದ ಶತಕೋಟ್ಯಾಧಿಪತಿಗಳ ಸಂಪತ್ತಿನ ಮೇಲೆ ಕೇವಲ ಒಂದು ಬಾರಿ ಶೇ.2ರಷ್ಟು ತೆರಿಗೆ ವಿಧಿಸಿದರೆ, ಮುಂದಿನ ಮೂರು ವರ್ಷಗಳವರೆಗೆ ದೇಶದಲ್ಲಿ ಅಪೌಷ್ಟಿಕತೆಯ ಪೋಷಣೆಗಾಗಿ 40,423 ಕೋಟಿ ರೂ. ಸಂಗ್ರಹಿಸಬಹುದು 'ಸರ್ವೈವಲ್ ಆಫ್ ದಿ ರಿಚೆಸ್ಟ್' ಶೀರ್ಷಿಕೆಯ ವರದಿ ಹೇಳಿದೆ.

ದೇಶದ 10 ಶ್ರೀಮಂತ ಶತಕೋಟ್ಯಾಧಿಪತಿಗಳ (1.37 ಲಕ್ಷ ಕೋಟಿ ರೂ.) ಮೇಲೆ ಕೇವಲ ಒಂದು ಬಾರಿ ಶೇ.5ರಷ್ಟು ತೆರಿಗೆ ವಿಧಿಸಿದರೆ, ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (86,200 ಕೋಟಿ ರೂ.) ಮತ್ತು ಆಯುಷ್ ಸಚಿವಾಲಯ (86,200 ಕೋಟಿ ರೂ.) ಅಂದಾಜು ಮಾಡಿದ ನಿಧಿಗಿಂತ ಶೇ.1.5 ಪಟ್ಟು ಹೆಚ್ಚು. ಆದಾಯ ಸಂಗ್ರಹಿಸಬಹದು ಎಂದು ವರದಿ ತಿಳಿಸಿದೆ.

ಲಿಂಗ ಅಸಮಾನತೆಯ ಕುರಿತು ಬೆಳಕು ಚೆಲ್ಲಿರುವ ವರದಿಯು, ಭಾರತದಲ್ಲಿ ಪುರುಷ ಕಾರ್ಮಿಕರು ಗಳಿಸುವ ಪ್ರತಿ 1 ರೂಪಾಯಿಗೆ ಪ್ರತಿಯಾಗಿ, ಮಹಿಳಾ ಕಾರ್ಮಿಕರು ಕೇವಲ 63 ಪೈಸೆಗಳನ್ನು ಮಾತ್ರ ಗಳಿಸುತ್ತಾರೆ ಎಂದು ಹೇಳಿದೆ.

ಟಾಪ್ 100 ಭಾರತೀಯ ಬಿಲಿಯನೇರ್‌ಗಳಿಗೆ ಶೇಕಡಾ 2.5 ತೆರಿಗೆ ವಿಧಿಸುವುದು ಅಥವಾ ಅಗ್ರ 10 ಭಾರತೀಯ ಬಿಲಿಯನೇರ್‌ಗಳಿಗೆ ಶೇಕಡಾ 5 ರಷ್ಟು ತೆರಿಗೆ ವಿಧಿಸುವುದು, ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಅಗತ್ಯವಿರುವ ಸಂಪೂರ್ಣ ಮೊತ್ತವನ್ನು ಸರಿದೂಗಿಸುತ್ತದೆ ಎಂದು ವರದಿ ಅಂದಾಜಿಸಿದೆ.

ಭಾರತದಲ್ಲಿನ ಅಸಮಾನತೆಯ ಪರಿಣಾಮವನ್ನು ಅನ್ವೇಷಿಸಲು ಈ ವರದಿಯು ಗುಣಾತ್ಮಕ ಮತ್ತು ಪರಿಮಾಣಾತ್ಮಕ ಮಾಹಿತಿಯ ಮಿಶ್ರಣವಾಗಿದೆ ಎಂದು ಆಕ್ಸ್‌ಫ್ಯಾಮ್ ಹೇಳಿಕೊಂಡಿದೆ.

ದೇಶದ ಸಂಪತ್ತಿನ ಅಸಮಾನತೆ ಮತ್ತು ಬಿಲಿಯನೇರ್ ಸಂಪತ್ತನ್ನು ನೋಡಲು, Forbes ಮತ್ತು Credit Suisse ನಂತಹ ಮಾಧ್ಯಮಿಕ ಮೂಲಗಳನ್ನು ಬಳಸಲಾಗಿದೆ. ಆದರೆ ಯೂನಿಯನ್ ಬಜೆಟ್ ದಾಖಲೆಗಳು, ಸಂಸದೀಯ ಪ್ರಶ್ನೆಗಳು ಮುಂತಾದ ಸರ್ಕಾರಿ ಮೂಲಗಳನ್ನು ವರದಿಯ ಮೂಲಕ ಮಾಡಿದ ವಾದಗಳನ್ನು ದೃಢೀಕರಿಸಲು ಬಳಸಲಾಗಿದೆ ಎಂದೂ ಆಕ್ಸ್‌ಫ್ಯಾಮ್‌ ಸ್ಪಷ್ಟಪಡಿಸಿದೆ.

ಕೋವಿಡ್ ಸಾಂಕ್ರಾಮಿಕ ರೋಗ ಆರಂಭವಾದಾಗಿನಿಂದ ಕಳೆದ ನವೆಂಬರ್ 2022ರವರೆಗೆ, ಭಾರತದಲ್ಲಿನ ಬಿಲಿಯನೇರ್‌ಗಳ ಸಂಪತ್ತು ಶೇಕಡಾ 121ರಷ್ಟು ಅಥವಾ ದಿನಕ್ಕೆ 3,608 ಕೋಟಿ ರೂ.ಗಳಷ್ಟು ಏರಿಕೆ ಕಂಡಿದೆ. ಮತ್ತೊಂದೆಡೆ, 2021-22ರಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಲ್ಲಿನ ಒಟ್ಟು 14.83 ಲಕ್ಷ ಕೋಟಿ ರೂ.ಸಂಗ್ರಹದ ಪೈಕಿ, ಶೇ. 64ರಷ್ಟು ಸಂಗ್ರಹವು ಒಟ್ಟು ಜನಸಂಖ್ಯೆಯ ಶೇಕಡಾ 50ರಿಂದ ಬಂದಿದೆ. ಜಿಎಸ್‌ಟಿಯ ಶೇಕಡಾ 3ರಷ್ಟು ಮಾತ್ರ ಟಾಪ್ 10 ಶ್ರೀಮಂತರಿಂದ ಸಂಗ್ರಹವಾಗಿದೆ ಎಂದು ವರದಿ ಹೇಳಿದೆ.

ಭಾರತದಲ್ಲಿ ಒಟ್ಟು ಶತಕೋಟ್ಯಾಧಿಪತಿಗಳ ಸಂಖ್ಯೆ 2020ರಲ್ಲಿ 102ರಿಂದ 2022ರಲ್ಲಿ 166 ಕ್ಕೆ ಏರಿದೆ. ಭಾರತದ 100 ಶ್ರೀಮಂತರ ಒಟ್ಟು ಸಂಪತ್ತು 660 ಶತಕೋಟಿ ಮುಟ್ಟಿದೆ. ಇದು 18 ತಿಂಗಳುಗಳಿಗಿಂತ ಹೆಚ್ಚು ಕಾಲ ಇಡೀ ಕೇಂದ್ರ ಬಜೆಟ್‌ಗೆ ಹಣ ನೀಡಬಲ್ಲ ಮೊತ್ತವಾಗಿದೆ ಎಂದು ಆಕ್ಸ್‌ಫ್ಯಾಮ್‌ ವರದಿ ಅಂದಾಜಿಸಿದೆ.

"ಸಮಾಜದ ಅಂಚಿನಲ್ಲಿರುವ ದಲಿತರು, ಆದಿವಾಸಿಗಳು, ಮುಸ್ಲಿಮರು, ಮಹಿಳೆಯರು ಮತ್ತು ಅನೌಪಚಾರಿಕ ವಲಯದ ಕಾರ್ಮಿಕರು, ಶ್ರೀಮಂತರ ಉಳಿವನ್ನು ಖಾತ್ರಿಪಡಿಸುವ ವ್ಯವಸ್ಥೆಯಲ್ಲಿ ನರಳುತ್ತಿದ್ದಾರೆ.." ಎಂದು ಆಕ್ಸ್‌ಫ್ಯಾಮ್ ಇಂಡಿಯಾ ಸಿಇಒ ಅಮಿತಾಭ್ ಬೆಹರ್ ಸೂಚ್ಯವಾಗಿ ಹೇಳಿದ್ದಾರೆ.

"ಬಡವರು ಅಸಮಾನವಾಗಿ ಹೆಚ್ಚಿನ ತೆರಿಗೆಗಳನ್ನು ಪಾವತಿಸುತ್ತಿದ್ದಾರೆ. ಶ್ರೀಮಂತರಿಗೆ ಹೋಲಿಸಿದರೆ ಅಗತ್ಯ ವಸ್ತುಗಳು ಮತ್ತು ಸೇವೆಗಳ ಮೇಲೆ ಬಡವರು ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಶ್ರೀಮಂತರಿಗೆ ತೆರಿಗೆ ವಿಧಿಸುವ ಸಮಯ ಬಂದಿದೆ ಮತ್ತು ಅವರು ತಮ್ಮ ನ್ಯಾಯಯುತ ಪಾಲನ್ನು ಪಾವತಿಸುವುದನ್ನು ಆರಂಭಿಸಬೇಕು.." ಎಂದು ಅಮಿತಾಭ್‌ ಬೆಹರ್‌ ಆಗ್ರಹಿಸಿದ್ದಾರೆ.

ಆಕ್ಸ್‌ಫ್ಯಾಮ್‌ ಇಂಟರ್‌ನ್ಯಾಶನಲ್‌ ಸಂಸ್ಥೆಯು ಕೇವಲ ಭಾರತ ಮಾತ್ರವಲ್ಲದೇ, ವಿಶ್ವದ ಇತರ ದೇಶಗಳಲ್ಲಿರುವ ಆರ್ಥಿಕ ಅಸಮಾನತೆಯ ಬಗ್ಗೆಯೂ ವರದಿ ಪ್ರಕಟಿಸಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ