ಸಾರ್ವತ್ರಿಕ ಚುನಾವಣೆ; ರಾಜಕೀಯ ಪಕ್ಷಗಳು, ಅವುಗಳ ಚುನಾವಣಾ ಚಿಹ್ನೆಗಳು, ಇತಿಹಾಸದ ಪುಟದತ್ತ ಇಣುಕುನೋಟ
Apr 19, 2024 09:57 AM IST
ಸಾರ್ವತ್ರಿಕ ಚುನಾವಣೆ; ರಾಜಕೀಯ ಪಕ್ಷಗಳು, ಅವುಗಳ ಚುನಾವಣಾ ಚಿಹ್ನೆಗಳು. ಹಿನ್ನೆಲೆಯಲ್ಲಿರುವುದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ರಾಲಿಯ ದೃಶ್ಯಗಳು. 1951ರ ಚುನಾವಣೆ ಸಂದರ್ಭದಲ್ಲಿದ್ದ ಚುನಾವಣಾ ಚಿಹ್ನೆಗಳಿವು(ಮೇಲಿರುವ ಚಿತ್ರ) 1.ಕಾಂಗ್ರೆಸ್ ಪಕ್ಷದ ಚುನಾವಣಾ ಚಿಹ್ನೆ ಜೋಡೆತ್ತು. 2) ಸೋಷಿಯಲಿಸ್ಟ್ ಪಾರ್ಟಿಯ ಮರ 3) ಫಾರ್ವರ್ಡ್ ಬ್ಲಾಕ್ (ರುಯ್ಕರ್) ಮನುಷ್ಯ ಹಸ್ತ 4) ಕೆಎಂಪಿ ಪಾರ್ಟಿಯ ಗುಡಿಸಲು 5) ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಕತ್ತಿ ಮತ್ತು ಜೋಳದ ತೆನೆ 6) ರೆವೆಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿಯ ಹಾರೆ ಮತ್ತು ಕೋರಿ 7) ಕೃಷಿಕಾರ್ ಲೋಕ ಪಕ್ಷ - ಧಾನ್ಯ ಪ್ರತ್ಯೇಕಿಸುವ ಕೃಷಿಕ 8) ಭಾರತೀಯ ಜನಸಂಘದ - ಎಣ್ಣೆದೀಪ
ಲೋಕಸಭೆ ಚುನಾವಣೆ ಪ್ರಗತಿಯಲ್ಲಿದ್ದು, ಚುನಾವಣಾ ಚಿಹ್ನೆಗಳು ಗಮನಸೆಳೆಯುತ್ತಿವೆ. ಸಾರ್ವತ್ರಿಕ ಚುನಾವಣೆಯ ಇತಿಹಾಸ ಗಮನಿಸಿದರೆ, ರಾಜಕೀಯ ಪಕ್ಷಗಳು ಅವುಗಳ ಚುನಾವಣಾ ಚಿಹ್ನೆಗಳ ಇತಿಹಾಸದ ಪುಟದತ್ತ ಇಣುಕುನೋಟ ಬೀರುವುದಕ್ಕೆ ಈ ಸಂದರ್ಭ ಒಂದು ನಿಮಿತ್ತ. ಇಲ್ಲಿದೆ ಆ ವರದಿ.
ನವದೆಹಲಿ: ಲೋಕಸಭಾ ಚುನಾವಣೆ 2024ರ ಚುನಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಪ್ರಚಾರದ ವೇಳೆ ಜನರ ಗಮನಸೆಳೆಯುವ ಮುಖ್ಯ ಅಂಶ ಚುನಾವಣಾ ಚಿಹ್ನೆ. ಚುನಾವಣಾ ಕಣದಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ಇದ್ದಾಗ ಮತದಾರರು ಗೊಂದಲಕ್ಕೀಡಾಗುವುದು ಸಹಜ. ಸಂವಹನದಲ್ಲಿ ಬಹುಮುಖ್ಯ ಅಂಶ ಚಿತ್ರಗಳು/ಚಿಹ್ನೆಗಳು. ಅವುಗಳು ಮನಸ್ಸಿನಲ್ಲಿ ಬಹುಬೇಗ ತಮ್ಮ ಛಾಪು ಮೂಡಿಸುತ್ತವೆ. ಅಳಿಯದೇ ಉಳಿಯುತ್ತವೆ ಕೂಡ. ಭಾರತದಲ್ಲಿ ಆರಂಭ ಕಾಲಘಟ್ಟದಲ್ಲಿ ಸಾಕ್ಷರರ ಪ್ರಮಾಣ ಕಡಿಮೆ ಇತ್ತು. ಹೀಗಾಗಿಯೇ ಚುನಾವಣಾ ಆಯೋಗ ಚಿಹ್ನೆಗಳನ್ನು ಬಳಸಲು ಶುರು ಮಾಡಿದ್ದು. ಈಗಲೂ ಅಕ್ಷರಗಳಿಗಿಂತ ಹೆಚ್ಚು ಬೇಗ ಮನಮುಟ್ಟುವುದು ಚಿಹ್ನೆಗಳೇ ಎಂಬುದು ವಾಸ್ತವ.
ಮೊದಲ ಸಾರ್ವತ್ರಿಕ ಚುನಾವಣೆ (1951) ಅಂದರೆ ಲೋಕಸಭೆ ಮತ್ತು ವಿಧಾನಸಭೆಗಳ 4,500ರಷ್ಟು ಸ್ಥಾನಗಳಿಗೆ ಭಾರತದ ಚುನಾವಣಾ ಆಯೋಗ ಚುನಾವಣೆ ನಡೆಸಿದಾಗ, ಚುನಾವಣಾ ಚಿಹ್ನೆಗಳನ್ನು ಪಕ್ಷಗಳಿಗೆ ಹಂಚಿಕೆ ಮಾಡಿತ್ತು. ಈ ಪ್ರಕ್ರಿಯೆ ಬಳಿಕ ಇನ್ನಷ್ಟು ನಿಖರವಾಗಿ ಮಾಡಿದ್ದು, ರಾಷ್ಟ್ರೀಯ ಪಕ್ಷಗಳು, ರಾಜ್ಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಎಂದು ವರ್ಗೀಕರಿಸಿ ಚುನಾವಣಾ ಚಿಹ್ನೆಗಳನ್ನು ಒದಗಿಸುವ ಕ್ರಮ ರೂಢಿಗೆ ತಂದಿದೆ. ಪಕ್ಷ ವಿಭಜನೆಯಾದಾಗ, ವಿಲೀನವಾದಾಗ ಚಿಹ್ನೆಗಳ ಹಂಚಿಕೆ ಯಾವ ರೀತಿ ಮಾಡಬೇಕು ಎಂಬುದು ಸೇರಿ ಪ್ರತಿಯೊಂದಕ್ಕೂ ನಿಯಮವನ್ನು ರೂಪಿಸಿಕೊಂಡಿದೆ.
ಕಾಂಗ್ರೆಸ್ ಪಕ್ಷದ ಚುನಾವಣಾ ಚಿಹ್ನೆ
ಕಾಂಗ್ರೆಸ್ ಪಕ್ಷದ ಚುನಾವಣಾ ಚಿಹ್ನೆ ಮೊದಲ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಜೋಡೆತ್ತು ಇತ್ತು. ಆರಂಭಿಕ ಕಾಲಘಟ್ಟದಲ್ಲಿ ಜವಹರಲಾಲ್ ನೆಹರೂ ನಾಯಕತ್ವದಲ್ಲಿ ಪ್ರಚಾರ ನಡೆದಾಗ ಖ್ಯಾತ ಗಾಯಕ ಮೊಹಮ್ಮದ್ ರಫಿ ಕಂಠದಲ್ಲಿ ಪ್ರಚಾರ ಗೀತೆಯನ್ನು ಹಾಡಿಸಲಾಗಿತ್ತು. ಅದರಲ್ಲಿ ಸ್ವಾತಂತ್ರ್ಯದ ಇತಿಹಾಸ ಇದೆ ಪಕ್ಷಕ್ಕೆ ಎಂದು ಹೇಳಲಾಗಿತ್ತು. ಮುಂದೆ ನೆಹರೂ ಪುತ್ರಿ ಇಂದಿರಾ ಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ವಿಭಜನೆಯಾದಾಗ 1969ರಲ್ಲಿ ದನ ಕರು ಪಕ್ಷ (ಕಾಂಗ್ರೆಸ್ (ಆರ್) ದ ಚಿಹ್ನೆಯಾಯಿತು. ಈ ಚಿಹ್ನೆ 1977ರ ತನಕ ಇತ್ತು. ಬಳಿಕ ಈಗ ಚಾಲ್ತಿಯಲ್ಲಿರುವ ಹಸ್ತದ ಗುರುತು ಕಾಂಗ್ರೆಸ್ (ಐ) ಪಕ್ಷದ ಚುನಾವಣಾ ಚಿಹ್ನೆಯಾಗಿ ಬಳಕೆಗೆ ಬಂತು. ಈ ಹಸ್ತದ ಗುರುತು ಕೇರಳದ ಹೇಮಾಂಬಿಕಾ ದೇವಸ್ಥಾನದ ಅಭಯ ಹಸ್ತದ ಪ್ರೇರಣೆಯಿಂದ ಪಡೆದುದು ಎಂದು ಹೇಳಲಾಗುತ್ತಿದೆ. ಆದರೆ, ಇದನ್ನು ದೃಢೀಕರಿಸುವ ಕೆಲಸ ಆಗಿಲ್ಲ.
ಜನಸಂಘ, ಬಿಜೆಪಿಯ ಚುನಾವಣಾ ಚಿಹ್ನೆ
ಭಾರತದ ಮೊದಲ ಸಾರ್ವತ್ರಿಕ ಚುನಾವಣೆ ವೇಳೆ ಭಾರತೀಯ ಜನಸಂಘದ ಚುನಾವಣಾ ಚಿಹ್ನೆ 1977ರ ತನಕ ಎಣ್ಣೆ ದೀಪವಾಗಿತ್ತು. ಅದಾಗಿ ಭಾರತೀಯ ಜನಸಂಘವು ಜನತಾ ಪಾರ್ಟಿ ಜೊತೆಗೆ ವಿಲೀನವಾಗಿ ನೇಗಿಲು ಹೊತ್ತ ರೈತನ ಚುನಾವಣಾ ಚಿಹ್ನೆ ಪಡೆಯಿತು. 1980ರಲ್ಲಿ ಜನತಾ ಪಾರ್ಟಿಯಿಂದ ಹೊರಬಂದ ಜನಸಂಘ ನಾಯಕರು ಭಾರತೀಯ ಜನತಾ ಪಾರ್ಟಿ ಎಂಬ ಹೊಸ ಪಕ್ಷ ಕಟ್ಟಿದರು. ಅದಕ್ಕೆ ಕಮಲದ ಹೂವು ಚುನಾವಣಾ ಚಿಹ್ನೆಯಾಯಿತು.
ಇದಕ್ಕೂ ಮೊದಲು ಅಟಲ್ ಬಿಹಾರಿ ವಾಜಪೇಯಿ ಅವರು 1980 ರಲ್ಲಿ ಬಾಂಬೆಯಲ್ಲಿ ನಡೆದ ರ‍್ಯಾಲಿಯಲ್ಲಿ "ಅಂಧೇರಾ ಛಟೇಗಾ, ಸೂರಜ್ ನಿಕ್ಲೇಗಾ, ಕಮಲ್ ಖಿಲೇಗಾ" (ಕತ್ತಲೆಯು ಬೆಳಕಿಗೆ ದಾರಿ ಮಾಡಿಕೊಡುತ್ತದೆ, ಸೂರ್ಯ ಉದಯಿಸುತ್ತಾನೆ ಮತ್ತು ಕಮಲವು ಅರಳುತ್ತದೆ) ಎಂದು ಭವಿಷ್ಯ ನುಡಿದರು. ಅವರು ಸಹಜವಾಗಿ 1980 ಏಪ್ರಿಲ್ 6 ರಂದು ಭಾರತೀಯ ಜನತಾ ಪಕ್ಷದ ರಚನೆಯನ್ನು ಉಲ್ಲೇಖಿಸಿದ್ದರು.
ಕಮ್ಯೂನಿಸ್ಟ್ ಪಾರ್ಟಿಯ ಕತ್ತಿ ಸುತ್ತಿಗೆ ನಕ್ಷತ್ರ
ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)ಯು ಸಾರ್ವತ್ರಿಕವಾಗಿ ಗುರುತಿಸಬಹುದಾದ ಕತ್ತಿ (ಕುಡುಗೋಲು) ಸುತ್ತಿಗೆ ನಕ್ಷತ್ರಗಳನ್ನು ಚುನಾವಣಾ ಚಿಹ್ನೆಯಾಗಿ ಅಳವಡಿಸಿಕೊಂಡಿತು. 1964ರ ಹೊತ್ತಿಗೆ ಐದು ನಕ್ಷತ್ರಗಳು ಸೇರಿದವು. ಬಳಿಕ ಪಕ್ಷ ವಿಭಜನೆಯಾಗಿ ಸಿಪಿಐ (ಎಂ), ಸಿಪಿಐ (ಲೆಫ್ಟ್) ಹುಟ್ಟಿಕೊಂಡವು. ಈಗ ಎಡ ಪಕ್ಷಗಳ ಗುಂಪು ಹೆಚ್ಚಾಗಿದೆ. ಆಂಧ್ರಪ್ರದೇಶ, ಕೇರಳ ಮತ್ತು ಪಶ್ಚಿಮ ಬಂಗಾಳದ ಅಸೆಂಬ್ಲಿ ಚುನಾವಣೆಗಳಲ್ಲಿ ಅಗತ್ಯ ಸಂಖ್ಯೆಯ ಸ್ಥಾನಗಳನ್ನು ಪಡೆದ ನಂತರ ಪಕ್ಷಕ್ಕೆ 1964 ರಲ್ಲಿ ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡಲಾಯಿತು. ಆದಾಗ್ಯೂ, ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸಿಪಿಐ (ಮಾರ್ಕ್ಸ್‌ವಾದಿ)ಯ ಚುನಾವಣಾ ಚಿಹ್ನೆ ಕತ್ತಿ ಮತ್ತು ಜೋಳದ ತೆನೆಯಾಗಿತ್ತು.
ಇತರೆ ಪಕ್ಷಗಳ ಚುನಾವಣಾ ಚಿಹ್ನೆಗಳು
ಭಾರತದಲ್ಲಿ ಈಗ ಆರು ರಾಷ್ಟ್ರೀಯ ಮಾನ್ಯತೆಯ ರಾಜಕೀಯ ಪಕ್ಷಗಳಿವೆ. ಈ ಪೈಕಿ ಒಂದು ಕಾಂಗ್ರೆಸ್, ಇನ್ನೊಂದು ಬಿಜೆಪಿ, ಎಡ ಪಕ್ಷ. ನಾಲ್ಕನೇಯದು ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ). ಇದು 1980ರಲ್ಲಿ ಸ್ಥಾಪನೆಯಾದರೂ 1984ರಲ್ಲಿ ಅಗತ್ಯ ಮಾನದಂಡಗಳನ್ನು ಪೂರೈಸಿದ ಬಳಿಕ ನೀಲಿ ಬಣ್ಣದ ಧ್ವಜದ ಹಿನ್ನೆಲೆಯಲ್ಲಿ ಆನೆಯನ್ನು ಚುನಾವಣಾ ಚಿಹ್ನೆಯಾಗಿ ಪಡೆದುಕೊಂಡಿತು. ಈ ಚಿಹ್ನೆಯನ್ನು ಹಿಂದೊಮ್ಮೆ ಡಾ. ಬಿಆರ್ ಅಂಬೇಡ್ಕರ್ ಅವರು ತಮ್ಮ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾಕ್ಕೆ ಬಳಸಿದ್ದರು. ಸಂಭಾವ್ಯ ಪ್ರಾಣಿ ಹಿಂಸೆ ಕಾರಣ ಪ್ರಾಣಿ, ಪಕ್ಷಿಗಳನ್ನು ಚುನಾವಣಾ ಚಿಹ್ನೆಯನ್ನಾಗಿ ನೀಡುವುದನ್ನು ಚುನಾವಣಾ ಆಯೋಗ ನಿಲ್ಲಿಸಿದೆ. ಸಿಂಹ (ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ) ಮತ್ತು ಹುಂಜ (ನಾಗ ಪೀಪಲ್ಸ್ ಫ್ರಂಟ್) ಹೊರತುಪಡಿಸಿ ಬೇರಾವ ಪಕ್ಷಕ್ಕೂ ಪ್ರಾಣಿ/ಪಕ್ಷಿಗಳನ್ನು ಚುನಾವಣಾ ಚಿಹ್ನೆಯಾಗಿ ನೀಡಿಲ್ಲ.
ಆಮ್ ಆದ್ಮಿ ಪಾರ್ಟಿ- 2012ರಲ್ಲಿ ರೂಪುಗೊಂಡ ಪಕ್ಷಕ್ಕೆ 2013ರಲ್ಲಿ ಪೊರಕೆಯನ್ನು ಚುನಾವಣಾ ಚಿಹ್ನೆಯಾಗಿ ನೀಡಲಾಗಿದೆ. ಈ ಪಕ್ಷ ಕ್ಯಾಂಡಲ್, ಟ್ಯಾಪ್ ಮತ್ತು ಪೊರಕೆಯ ಆಯ್ಕೆಯನ್ನು ಒದಗಿಸಿತ್ತು. ಅದರಲ್ಲಿ ಚುನಾವಣಾ ಆಯೋಗವು ಪೊರಕೆಯನ್ನು ಪಕ್ಷಕ್ಕೆ ಚುನಾವಣಾ ಚಿಹ್ನೆಯಾಗಿ ನೀಡಿತು. ಅಣ್ಣಾ ಹಜಾರೆ ಅವರ ಇಂಡಿಯಾ ಅಗೇನೆಸ್ಟ್ ಕರಪ್ಶನ್ ಪ್ರತಿಭಟನೆಯ ಅನುಸರಣೆಯಾಗಿ ಹುಟ್ಟಿಕೊಂಡ ರಾಜಕೀಯ ಪಕ್ಷ ಇದು. ಪೊರಕೆ ಹಿಡಿದು ಆಡಳಿತ ಸ್ವಚ್ಛಗೊಳಿಸುವ ಘೋಷಣೆಯೊಂದಿಗೆ ಚುನಾವಣೆ ಎದುರಿಸಿದೆ.
ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯಿಂದ ಉಚ್ಚಾಟಿತರಾದ ಬಳಿಕ ಪಿಎ ಸಂಗ್ಮಾ ಅವರು 2013ರಲ್ಲಿ ಸ್ಥಾಪಿಸಿದ ನ್ಯಾಷನಲ್ ಪೀಪಲ್ಸ್ ಪಾರ್ಟಿಗೆ ಹಿಡಿದೆತ್ತಿದ ಪುಸ್ತಕವನ್ನು ಚುನಾವಣಾ ಚಿಹ್ನೆಯಾಗಿ ನೀಡಲಾಗಿತ್ತು. ಸಂಗ್ಮಾ ಅವರು ಇದನ್ನು ಸಾಕ್ಷರತೆ, ಶಿಕ್ಷಣದ ಪ್ರತೀಕವಾಗಿ ಬಿಂಬಿಸಿದ್ದರು.
ರಾಜ್ಯಮಟ್ಟದ ಪಕ್ಷಗಳಿಗೆ ಪ್ರತ್ಯೇಕ ಚುನಾವಣಾ ಚಿಹ್ನೆಗಳನ್ನು ಆಯೋಗ ನೀಡಿದೆ. ಪ್ರತಿ ರಾಜ್ಯದಲ್ಲೂ ಇಂತಹ ರಾಜ್ಯ ಪಕ್ಷಗಳಿವೆ. ಅವುಗಳಿಗೂ ಒಂದೊಂದು ಇತಿಹಾಸವೂ ಇದೆ. ಅವುಗಳನ್ನು ಪ್ರತ್ಯೇಕವಾಗಿ ಗಮನಿಸೋಣ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.