logo
ಕನ್ನಡ ಸುದ್ದಿ  /  ಮನರಂಜನೆ  /  ಆರ್ಟಿಕಲ್ 370 ಸಿನಿಮಾ ವಿಮರ್ಶೆ: ಸರಳ ನಿರೂಪಣೆ ಅತ್ಯುತ್ತಮ ನಿರ್ದೇಶನದ ಬೆಸ್ಟ್‌ ಕಾಶ್ಮೀರ ಸಿನಿಮಾ; ಯಾಮಿ, ಪ್ರಿಯಾಮಣಿಗೆ ಜೈಹೋ

ಆರ್ಟಿಕಲ್ 370 ಸಿನಿಮಾ ವಿಮರ್ಶೆ: ಸರಳ ನಿರೂಪಣೆ ಅತ್ಯುತ್ತಮ ನಿರ್ದೇಶನದ ಬೆಸ್ಟ್‌ ಕಾಶ್ಮೀರ ಸಿನಿಮಾ; ಯಾಮಿ, ಪ್ರಿಯಾಮಣಿಗೆ ಜೈಹೋ

Praveen Chandra B HT Kannada

Feb 23, 2024 11:20 AM IST

google News

ಆರ್ಟಿಕಲ್ 370 ಸಿನಿಮಾ ವಿಮರ್ಶೆ: ಸರಳ ನಿರೂಪಣೆ ಅತ್ಯುತ್ತಮ ನಿರ್ದೇಶನದ ಬೆಸ್ಟ್‌ ಸಿನಿಮಾ

    • Article 370 movie review: ಕಾಶ್ಮೀರವನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಹಲವು ಸಿನಿಮಾಗಳು ಬಂದಿರಬಹುದು. ಆದರೆ, ಯಾಮಿ ಮತ್ತು ಪ್ರಿಯಾಮಣಿ ನಟನೆಯ ಆರ್ಟಿಕಲ್‌ 370 ಅವೆಲ್ಲದ್ದಕ್ಕಿಂತ ಅತ್ಯುತ್ತಮವಾಗಿದೆ. ಸರಳ ಗಟ್ಟಿ ನಿರೂಪಣೆ, ಅತ್ಯುತ್ತಮ ನಿರ್ದೇಶನದಿಂದ ಆರ್ಟಿಕಲ್ 370 ಸಿನಿಮಾ ಗಮನ ಸೆಳೆಯುತ್ತದೆ.
ಆರ್ಟಿಕಲ್ 370 ಸಿನಿಮಾ ವಿಮರ್ಶೆ: ಸರಳ ನಿರೂಪಣೆ ಅತ್ಯುತ್ತಮ ನಿರ್ದೇಶನದ ಬೆಸ್ಟ್‌ ಸಿನಿಮಾ
ಆರ್ಟಿಕಲ್ 370 ಸಿನಿಮಾ ವಿಮರ್ಶೆ: ಸರಳ ನಿರೂಪಣೆ ಅತ್ಯುತ್ತಮ ನಿರ್ದೇಶನದ ಬೆಸ್ಟ್‌ ಸಿನಿಮಾ

Article 370 movie review: ಆರ್ಟಿಕಲ್ 370 ಸಿನಿಮಾ ಎಂದಾಕ್ಷಣ ಹಲವು ವಿಷಯಗಳು ಕಣ್ಮುಂದೆ ಬರಬಹುದು. 2022ರಲ್ಲಿ ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಬಿಡುಗಡೆಯಾಗಿತ್ತು. 1990ರ ಆಸುಪಾಸಿನ ಕಾಶ್ಮೀರ ಹಿಂದೂಗಳ ದುಸ್ಥಿತಿಯನ್ನು ಆ ಚಿತ್ರದ ಮೂಲಕ ಹೇಳಲಾಗಿತ್ತು. ಕೆಲವರಿಗೆ ಈ ಸಿನಿಮಾ ಇಷ್ಟವಾಗಿರಲಿಲ್ಲ. ಇದರಲ್ಲಿ ಅಜೆಂಡಾ ಇದೆ ಎಂದೆಲ್ಲ ಹೇಳಲಾಯಿತು. ಈ ಕಾಶ್ಮೀರ್‌ ಫೈಲ್‌ ಚಿತ್ರದಲ್ಲಿ ಆರ್ಟಿಕಲ್ 370 ರದ್ದು ಮಾಡಬೇಕೆಂದು ಹೇಳಲಾಗಿತ್ತು. ಆದರೆ, ಆರ್ಟಿಕಲ್ 370 ಏಕೆ ರದ್ದು ಮಾಡಬೇಕು, ರದ್ದು ಮಾಡಿದರೆ ಏನು ಪ್ರಯೋಜನವಾಗುತ್ತದೆ, ಕಾಶ್ಮೀರದ ಜನರ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂದು ಕಾಶ್ಮೀರ್‌ ಫೈಲ್ಸ್‌ನಲ್ಲಿ ಹೇಳಿರಲಿಲ್ಲ.

ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಬಿಡುಗಡೆಯಾಗಿ ಎರಡು ವರ್ಷ ಕಳೆದ ಬಳಿಕ ಬಿಡುಗಡೆಯಾದ ಆದಿತ್ಯ ಸುಹಾಸ್ ಜಂಭಾಲೆ ನಿರ್ದೇಶನದ ಆರ್ಟಿಕಲ್ 370 ಚಿತ್ರವು ಈ ವಿಧಿಯ ರದ್ದತಿಯ ಸಂಪೂರ್ಣ ಶಿಕ್ಷಣ ನೀಡುತ್ತದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ ಆರ್ಟಿಕಲ್‌ 370 ವಿಷಯದ ಕುರಿತು 1947ರಿಂದ ಚರ್ಚೆ ನಡೆಯುತ್ತಿದೆ. ಈ ಆರ್ಟಿಕಲ್‌ 370 ಅನ್ನು ಏಕೆ ರದ್ದು ಮಾಡಬೇಕಾಯಿತು, ಅದಕ್ಕೆ ಕಾರಣವಾದ ಘಟನೆಗಳು ಯಾವುವು ಇತ್ಯಾದಿ ವಿಷಯಗಳ ಸುತ್ತ ಈ ಸಿನಿಮಾ ಸುತ್ತುತ್ತದೆ.

ಬಿಗಿ ನಿರೂಪಣೆ ಹೊಂದಿರುವ ಈ ಚಿತ್ರಕ್ಕೆ ಬೆನ್ನೆಲುಬು ಆಗಿ ಯಾಮಿ ಗೌತಮ್ ಮತ್ತು ಪ್ರಿಯಾಮಣಿ ನಟಿಸಿದ್ದಾರೆ. ಆರ್ಟಿಕಲ್‌ 370 ಕುರಿತು ಸರಿಯಾದ ಮಾಹಿತಿ ಹೊಂದಿಲ್ಲದೆ ಇರುವವರಿಗೆ "ಶಿಕ್ಷಣ" ನೀಡುವಂತಹ ಕೆಲಸವನ್ನೂ ಈ ಸಿನಿಮಾ ಮಾಡುತ್ತದೆ. ಸುಮಾರು 2 ಗಂಟೆ 30 ನಿಮಿಷಗಳ ಈ ಸಿನಿಮಾವು ಕಾನೂನು ಮತ್ತು ರಾಜಕೀಯವನ್ನು ಸರಳವಾಗಿ ಅರ್ಥ ಮಾಡಿಸುತ್ತದೆ. ಅಲ್ಲಲ್ಲಿ ಪ್ರೇಕ್ಷಕರನ್ನು ಸೀಟಿನಂಚಿಗೆ ತಂದು ಕೂರಿಸುತ್ತದೆ.

ಕಾಶ್ಮೀರ ಫೈಲ್‌ಗಿಂತ ಆರ್ಟಿಕಲ್ 370 ಭಿನ್ನವಾಗಿರುವುದೇ?

ಆರ್ಟಿಕಲ್ 370 ಸಿನಿಮಾವು ಕಾಶ್ಮೀರ ಫೈಲ್‌ನ ಮುಂದುವರೆದ ಭಾಗವ? ಸ್ವಲ್ಪ ಮಟ್ಟಿಗೆ ಹೌದೆನ್ನಬಹುದು. ಆದರೆ, ಆರ್ಟಿಕಲ್‌ 370 ಸಿನಿಮಾವನ್ನು ಬೇರೆ ಕನ್ನಡಿಯಿಂದ, ದೃಷ್ಟಿಕೋನದಿಂದ ಹೊರತಂದಿರುವುದಕ್ಕೆ ಶಹಬ್ಬಾಸ್‌ ಎನ್ನಬಹುದು. ಈ ಸಿನಿಮಾ ಜಿಂಗೋಸ್ಟಿಕ್ ನಿರೂಪಣೆಯ ಆಸರೆ ಪಡೆಯುವುದಿಲ್ಲ. ಪ್ರೊಪಗಾಂಡದ ವಲಯವನ್ನೂ ಪ್ರವೇಶಿಸಲು ಪ್ರಯತ್ನಿಸುವುದಿಲ್ಲ. ನಿಖರ ಸಂಶೋಧನೆಯ ಬೆಂಬಲದಿಂದ ಎಲ್ಲಿ ಯಾವಾಗ ಏನು ಘಟನೆ ನಡೆಯಿತು ಎಂದು ಹೇಳುತ್ತಾ ಸಾಗುತ್ತದೆ.

ಘಟನೆಗಳ ವಿವರಣೆ ನೀಡುವ ಜತೆಗೆ ಕಾಶ್ಮೀರದಲ್ಲಿ ನಡೆಯುತ್ತಿದ್ದ ಹಿಂಸಾಚಾರ, ಗಲಭೆಗಳು ಹೇಗೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲು ಉತ್ತೇಜಿಸಿತು ಎಂದು ಚಿತ್ರ ತಿಳಿಸುತ್ತದೆ. ಇಂತಹ ವಿಷಯ ತಿಳಿಸಲು ಸಿನಿಮಾ ತಯಾರಕರು ದೇಶಭಕ್ತಿಯನ್ನು ಊರುಗೋಲಾಆಗಿ ಆಸರೆ ಪಡೆದಿಲ್ಲ. ಗಟ್ಟಿಯಾದ ಕಥೆ ಮತ್ತು ಚಿತ್ರಕಥೆಗೆ ಸಮರ್ಪಕ ನಿರೂಪಣೆಯ ಬೆಂಬಲ ನೀಡಲಾಗಿದೆ. ಇದೇ ಈ ಚಿತ್ರದ ಪ್ಲಸ್‌ ಪಾಯಿಂಟ್‌.

ಪ್ರಿಯಾಮಣಿ

ಆರ್ಟಿಕಲ್ 370 ಸಿನಿಮಾ ಹೇಗಿದೆ?

1947ರ ದೃಶ್ಯಗಳು ಮತ್ತು ಅಜಯ್ ದೇವಗನ್ ಅವರ ಧ್ವನಿಯೊಂದಿಗೆ ಚಿತ್ರ ಆರಂಭವಾಗುತ್ತದೆ. ಕಾಶ್ಮೀರದ ಒಂದು ಭಾಗ ಪಾಕಿಸ್ತಾನಕ್ಕೆ ಹೇಗೆ ಹೋಯಿತು, ಆರ್ಟಿಕಲ್‌ 370 ಹೇಗೆ ಅಸ್ತಿತ್ವಕ್ಕೆ ಬಂತೆಂದು ಆರಂಭದಲ್ಲಿ ವಿವರಿಸಲಾಗುತ್ತದೆ. ಬಳಿಕ ರಾಜಕೀಯ ಆಕ್ಷನ್ ಥ್ರಿಲ್ಲರ್ 2016 ಕಾಲಕ್ಕೆ ಆಗಮಿಸುತ್ತದೆ. ಕಾಶ್ಮೀರದಲ್ಲಿ ನಡೆಯುವ ಹಿಂಸಾಚಾರಗಳ ಬಳಿಕ ಸ್ಥಳೀಯ ಏಜೆಂಟ್ ಮತ್ತು ಗುಪ್ತಚರ ಫೀಲ್ಡ್ ಆಫೀಸರ್ ಝೂನಿ ಹಕ್ಸರ್ (ಯಾಮಿ ಗೌತಮ್ ಧರ್) ಅವರನ್ನು ಪಿಎಂಒ ಕಾರ್ಯದರ್ಶಿ ರಾಜೇಶ್ವರಿ (ಪ್ರಿಯಾಮಣಿ ಸ್ವಾಮಿನಾಥನ್) ರಹಸ್ಯವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುನ್ನಡೆಸಲು ನೇಮಕ ಮಾಡುತ್ತಾರೆ. ಆರ್ಟಿಕಲ್‌ 370 ರದ್ದುಪಡಿಸುವ ಮೊದಲು ಹಲವು ತಿಂಗಳ ಕಾಲ ಇವರು ಕಾರ್ಯಾಚರಣೆನ ನಡೆಸುತ್ತಾರೆ. ಕಾಶ್ಮೀರದಲ್ಲಿ ನಡೆಯುವ ಗಲಭೆಗಳಿಗೆ ನೆರವಾಗುವ ಆರ್ಥಿಕ ಮೂಲಗಳನ್ನು ಬಹಿರಂಗಪಡಿಸುವುದು, ಪ್ರತ್ಯೇಕತಾವಾದಿಗಳು ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಹೋರಾಡುವುದು, ಭಯೋತ್ಪಾದಕ ಪರಿಸ್ಥಿತಿಯನ್ನು ನಿಗ್ರಹಿಸುವುದು ಇತ್ಯಾದಿ ಕಾರ್ಯಗಳನ್ನು ಮಾಡುತ್ತಾರೆ.

ಮೊದಲಾರ್ಧ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಪುಲ್ವಾಮಾ ದಾಳಿಯಾದಗ ಸಿನಿಮಾ ಮಧ್ಯಂತರ ತಲುಪುತ್ತದೆ. ಸಿನಿಮಾದ ದ್ವಿತೀಯಾರ್ಧವು ವೇಗ ಪಡೆದುಕೊಳ್ಳುತ್ತದೆ. ಕೊನೆಯ 30 ನಿಮಿಷದ ಕ್ಲೈಮ್ಯಾಕ್ಸ್‌ ಅಂತೂ ರೋಮಾಂಚನಕಾರಿ. ಕಾಶ್ಮೀರ ಆಧರಿತ ಹಲವು ಸಿನಿಮಾಗಳಲ್ಲಿ ಕೇಳಿಸಿದ ಸಂಭಾಷನೆಗಳು ಇಲ್ಲಿ ಮತ್ತೆ ಕೇಳಿಸುತ್ತವೆ.

ಈ ಸಿನಿಮಾದ ಬರವಣಿಗೆ ಗಮನ ಸೆಳೆಯುತ್ತದೆ. ಚಿತ್ರಕಥೆ ಅದ್ಭುತ ಎನ್ನಬಹುದು. ಇದಕ್ಕಾಗಿ ಆದಿತ್ಯ ಧರ್, ಆದಿತ್ಯ ಸುಹಾಸ್ ಜಂಭಾಲೆ, ಅರ್ಜುನ್ ಧವನ್ ಮತ್ತು ಮೋನಾಲ್ ಥಾಕರ್‌ಗೆ ಥ್ಯಾಂಕ್ಸ್‌ ಹೇಳಬೇಕು. 370ನೇ ವಿಧಿ ತೆಗೆಯುವವರೆಗೆ ಈ ಸಿನಿಮಾದ ಚಿತ್ರಕಥೆ ಬಿಗಿತಪ್ಪುವುದಿಲ್ಲ. ದಿ ಲವರ್ ಆಫ್ ದಿ ಟ್ರಾಲ್, ಬ್ಲೈಂಡ್‌ಸ್ಪಾಟ್, ಸೇವ್ ದಿ ಡೇಟ್, ಸಬ್-ಕ್ಲಾಸ್ (ಡಿ) ಮತ್ತು ವಾಸ್, ಈಸ್ ಮತ್ತು ಆಲ್ವೇಸ್ ವಿಲ್ ಬಿ ಹೀಗೆ ಈ ಸಿನಿಮಾದಲ್ಲಿ ಹಲವು ಅಧ್ಯಾಯಗಳು ಇವೆ. ಶಿವಕುಮಾರ್ ವಿ.ಪಣಿಕ್ಕರ್ ಅವರ ಸಂಕಲನಕ್ಕೂ ಫುಲ್‌ ಮಾರ್ಕ್‌ ಕೊಡಬಹುದು.

ಆರ್ಟಿಕಲ್ 370 ರ ಬಹುಪಾಲು ನೈಜ ಘಟನೆಗಳಿಂದ ಪ್ರೇರಿತವಾಗಿದ್ದರೂ, ತಯಾರಕರು ತೆಗೆದುಕೊಂಡ ಸೃಜನಶೀಲ ಸ್ವಾತಂತ್ರ್ಯಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಉದಾಹರಣೆಗೆ, ಯಾಮಿ ಮತ್ತು ಅವರ ಸಹೋದ್ಯೋಗಿಯು ಗ್ರೆನೆಡ್‌ ದಾಳಿಯಿಂದ ಬದುಕಿ ಉಳಿಯುವುದು, ಅತಿಯಾದ ಆಕ್ಷನ್‌ ಸೀಕ್ವೆನ್ಸ್‌ಗಳು, ಮುಚ್ಚಿದ ಬಾಗಿಲಲ್ಲಿ ಎನ್‌ಐಎಯು ಶಂಕಿತರನ್ನು ತನಿಖೆ ಮಾಡುವುದು ಇತ್ಯಾದಿಗಳು ನಿರ್ದೇಶಕರ ಸೃಜನಶೀಲ ಸ್ವಾತಂತ್ರ್ಯದಿಂದ ಮೂಡಿಬಂದಿರುವುದು.

ಯಾಮಿ ಗೌತಮ್‌

ಚಿತ್ರವನ್ನು ಭುಜದ ಮೇಲೆ ಹೊತ್ತು ಸಾಗಿದ ಯಾಮಿ, ಪ್ರಿಯಾಮಣಿ

ಯಾಮಿ ಗೌತಮ್‌ ಅವರು ತನಗೆ ನೀಡಲಾದ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದಾರೆ. ಆಕೆಯ ಅಸಂಬದ್ಧ ವರ್ತನೆಯು ಚಿತ್ರದ ತೂಕ ಹೆಚ್ಚಿಸಿದೆ. ಆಕೆಯ ಆಕ್ಷನ್‌ ಮತ್ತು ತೀವ್ರ ಸಂಭಾಷಣೆಯೂ ಗಮನ ಸೆಳೆಯುತ್ತದೆ. ಸಮವಸ್ತ್ರದಲ್ಲಿ ಸಹವರ್ತಿ ಪುರುಷರಿಗೆ ಸರಿಸಮಾನಾಗಿ ನಿಲ್ಲುತ್ತಾಳೆ. ದಿಟ್ಟ ಹೆಣ್ಣಾಗಿ ಗಮನ ಸೆಳೆಯುತ್ತಾಳೆ. ಇದೇ ಸಮಯದಲ್ಲಿ ಶಕ್ತಿಯುತ ಅಭಿನಯದಿಂದ ಪ್ರಿಯಾಮಣಿ ಗಮನ ಸೆಳೆಯುತ್ತಾರೆ. ಅವರದ್ದು ಸಂಯಮ ಮತ್ತು ಪರಿಣಾಮಕಾರಿ ನಟನೆ. ಚಿತ್ರದ ಉದ್ದಕ್ಕೂ ಸುತ್ತಲಿನ ಎಲ್ಲಾ ಗೊಂದಲದ ನಡುವೆಯೂ ಆಕೆ ಶಾಂತಮೂರ್ತಿ. ಈ ಇಬ್ಬರು ಮಹಿಳೆಯರು ಇಡೀ ಚಿತ್ರವನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು ಸಾಗಿದ್ದಾರೆ ಎಂದರೆ ತಪ್ಪಾಗದು.

ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ನೆನಪಿಸುವಂತೆ ಪ್ರಧಾನಿಯಾಗಿ ಅರುಣ್ ಗೋವಿಲ್ ಮತ್ತು ಗೃಹ ಸಚಿವರಾಗಿ ಕಿರಣ್ ಕರ್ಮಾರ್ಕರ್ ನಟಿಸಿದ್ದಾರೆ. ಇವರ ಅಭಿನಯ ಮತ್ತು ಡೈಲಾಗ್‌ ಡೆಲಿವರಿ ಗಮನ ಸೆಳೆಯುತ್ತದೆ. ನಟರಾದ ರಾಜ್ ಝುತ್ಶಿ, ರಾಜ್ ಅರುಣ್ ಮತ್ತು ವೈಭವ್ ತತ್ವವಾದಿ ನಟನೆಯೂ ಉತ್ತಮವಾಗಿದೆ. ಭಾರತದ ಇತಿಹಾಸದಲ್ಲಿ 370 ನೇ ವಿಧಿ ರದ್ದತಿ ಪ್ರಮುಖ ಅಧ್ಯಾಯ. ಸರಳ ನಿರೂಪಣೆ ಮತ್ತು ಅತ್ಯುತ್ತಮ ನಿರ್ದೇಶನದೊಂದಿಗೆ ಆರ್ಟಿಕಲ್‌ 370 ಸಿನಿಮಾ ಆಪ್ತವಾಗುತ್ತದೆ. ಕಾಶ್ಮೀರವನ್ನು ಕೇಂದ್ರಬಿಂದುವಾಗಿ ನಿರ್ಮಿಸಿರುವಂತಹ ಹಲವು ಸಿನಿಮಾಗಳು ಬಾಲಿವುಡ್‌ನಲ್ಲಿವೆ. ಯಾಮಿ ಮತ್ತು ಪ್ರಿಯಾಮಣಿ ನಟಿಸಿದ ಈ ಚಿತ್ರ ಅತ್ಯುತ್ತಮ ಎನ್ನಬಹುದು.

ಚಲನಚಿತ್ರ: ಆರ್ಟಿಕಲ್ 370

ಪಾತ್ರವರ್ಗ: ಯಾಮಿ ಗೌತಮ್, ಪ್ರಿಯಾಮಣಿ, ಕಿರಣ್ ಕರ್ಮಾರ್ಕರ್, ಅರುಣ್ ಗೋವಿಲ್, ರಾಜ್ ಅರುಣ್

ನಿರ್ದೇಶಕ: ಆದಿತ್ಯ ಸುಹಾಸ್ ಜಂಬಾಳೆ

ಮೂಲ ವಿಮರ್ಶೆ: ಮೋನಿಕಾ ರಾವಲ್‌ ಕುಕ್ರೆಜಾ (ಹಿಂದೂಸ್ತಾನ್‌ ಟೈಮ್ಮ್ಸ್‌) ಕನ್ನಡಕ್ಕೆ: ಪ್ರವೀಣ್‌ ಚಂದ್ರ ಪುತ್ತೂರು (ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ