logo
ಕನ್ನಡ ಸುದ್ದಿ  /  ಮನರಂಜನೆ  /  ಹೇಟ್‌ ವಿರುದ್ಧ ಓಟ್‌ ಹಾಕಿದ ಪ್ರಕಾಶ್‌ ರಾಜ್‌, ನಾನು ಮತ ಹಾಕಿದವರೇ ಗೆಲ್ತಾರೆ ಅಂದ್ರು ರಕ್ಷಿತ್‌ ಶೆಟ್ಟಿ; ಶಿವಣ್ಣ, ಯಶ್‌, ರಚಿತಾ ಏನಂದ್ರು

ಹೇಟ್‌ ವಿರುದ್ಧ ಓಟ್‌ ಹಾಕಿದ ಪ್ರಕಾಶ್‌ ರಾಜ್‌, ನಾನು ಮತ ಹಾಕಿದವರೇ ಗೆಲ್ತಾರೆ ಅಂದ್ರು ರಕ್ಷಿತ್‌ ಶೆಟ್ಟಿ; ಶಿವಣ್ಣ, ಯಶ್‌, ರಚಿತಾ ಏನಂದ್ರು

Praveen Chandra B HT Kannada

Apr 26, 2024 06:28 PM IST

google News

ಪ್ರಕಾಶ್‌ ರಾಜ್‌, ರಕ್ಷಿತ್‌ ಶೆಟ್ಟಿ; ಶಿವಣ್ಣ, ಯಶ್‌, ರಚಿತಾ ಮತದಾನ

    • ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಇಂದು ಬಹುಉತ್ಸಾಹದಿಂದ ಮತ ಚಲಾವಣೆ ಮಾಡಿದ್ದಾರೆ. ಇದೇ ಸಮಯದಲ್ಲಿ ಎಲ್ಲರಿಗೂ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಿದ್ದಾರೆ. ಯಶ್‌ ರಾಧಿಕಾ ಪಂಡಿತ್‌, ಶಿವರಾಜ್‌ಕುಮಾರ್‌, ಧ್ರುವ, ರಕ್ಷಿತ್‌ ಶೆಟ್ಟಿ ಸೇರಿದಂತೆ ಇಂದು ಮತ ಚಲಾಯಿಸಿದ ಕೆಲವು ಸೆಲೆಬ್ರಿಟಿಗಳು ಏನಂದ್ರು ಎಂದು ನೋಡೋಣ.
ಪ್ರಕಾಶ್‌ ರಾಜ್‌,  ರಕ್ಷಿತ್‌ ಶೆಟ್ಟಿ; ಶಿವಣ್ಣ, ಯಶ್‌, ರಚಿತಾ ಮತದಾನ
ಪ್ರಕಾಶ್‌ ರಾಜ್‌, ರಕ್ಷಿತ್‌ ಶೆಟ್ಟಿ; ಶಿವಣ್ಣ, ಯಶ್‌, ರಚಿತಾ ಮತದಾನ

ಲೋಕಸಭಾ ಚುನಾವಣೆ 2024 ಮತದಾನದ ಪ್ರಯುಕ್ತ ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿಗಳು ಇಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಯಶ್‌ ರಾಧಿಕಾ ಪಂಡಿತ್‌, ಶಿವರಾಜ್‌ಕುಮಾರ್‌, ಧ್ರುವ, ರಕ್ಷಿತ್‌ ಶೆಟ್ಟಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಓಟ್‌ ಮಾಡಿದ್ದಾರೆ. ಎಲ್ಲರೂ ಮರೆಯದೆ ಮತದಾನ ಮಾಡಿ ಎಂದು ಸೆಲೆಬ್ರಿಟಿಗಳು ಮನವಿ ಮಾಡಿದ್ದಾರೆ. ಇದೇ ಸಮಯದಲ್ಲಿ ನಾನು ಹೇಟ್‌ ವಿರುದ್ಧ ಮತ ಚಲಾಯಿಸಿದೆ ಎಂದು ಪ್ರಕಾಶ್‌ ರಾಜ್‌ ಹೇಳಿದ್ದಾರೆ. ನಾನು ಯಾರಿಗೆ ಮತ ಹಾಕಿದ್ದೇನೆಯೋ ಅವರೇ ಗೆಲ್ತಾರೆ ಎಂದು ನಟ ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ. ಪತ್ನಿ ಸಮೇತ ಬಂದ ನಟ ದರ್ಶನ್‌ ಮತ ಚಲಾಯಿಸಿದ್ದಾರೆ. ದೇಶಕ್ಕಾಗಿ ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಕೆಜಿಎಫ್‌ ನಟ ಯಶ್‌ ಮನವಿ ಮಾಡಿದ್ದಾರೆ. ನೀವು ಚಲಾಯಿಸುವ ಒಂದೊಂದು ಮತವು ಅಮೂಲ್ಯವಾಗಿದೆ. ನಿಮ್ಮ ಒಂದೊಂದು ಮತವು ಒಬ್ಬರ ಭವಿಷ್ಯವನ್ನು ಬದಲಾಯಿಸುವ ಶಕ್ತಿ ಹೊಂದಿದೆ ಎಂದು ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಹೇಳಿದ್ದಾರೆ. ಅನಂತ್‌ ನಾಗ್‌ ಮತಚಲಾಯಿಸುವ ಸಂದರ್ಭದಲ್ಲಿ ಒಂದಿಷ್ಟು ಹೊತ್ತು ತಾಂತ್ರಿಕ ಸಮಸ್ಯೆಯೂ ಕಾಣಿಸಿಕೊಂಡಿದೆ. ದೇಶಕ್ಕಾಗಿ ಎಲ್ಲರೂ ತಪ್ಪದೆ ಮತದಾನ ಮಾಡಿ ಎಂದು ಯಶ್‌ ಹೇಳಿದ್ದಾರೆ.

ದ್ವೇಷದ ವಿರುದ್ಧ ಮತ ಚಲಾಯಿಸಿದೆ ಎಂದ ಪ್ರಕಾಶ್‌ ರಾಜ್‌

ಬಹುಭಾಷಾ ನಟ ಪ್ರಕಾಶ್‌ ರೈ ಇಂದು ಬೆಳಗ್ಗೆ ಮತದಾನ ಮಾಡಿದ್ದಾರೆ. ಈ ಕುರಿತಂತೆ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಬದಲಾವಣೆಗಾಗಿ ಎಲ್ಲರೂ ಮತದಾನ ಮಾಡಿ ಎಂದು ಕೋರಿದ್ದಾರೆ. ಇದೇ ಸಮಯದಲ್ಲಿ "ದ್ವೇಷದ ವಿರುದ್ಧ ಮತದಾನ ಮಾಡಿದೆ. ನೀವೂ ಬದಲಾವಣೆಗಾಗಿ ಮತದಾನ ಮಾಡಿ" ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಸಂಸತ್‌ನಲ್ಲಿ ನನ್ನ ಪರವಾದ ಧ್ವನಿ ಕೇಳಲಿ ಎಂದು ಮತದಾನ ಮಾಡಿದ್ದೇನೆ. ಎಲ್ಲರೂ ಮತದಾನ ಮಾಡಿ ಎಂಬ ಸಂದೇಶವನ್ನು ವಿಡಿಯೋದಲ್ಲಿ ನೀಡಿದ್ದಾರೆ.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತದಾನ

ಕೈನೋವಿದ್ದರೂ ದರ್ಶನ್‌ ತಪ್ಪದೇ ಬಂದು ಮತದಾನ ಮಾಡಿದ್ದಾರೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆಗೆ ಬಂದ ಕಾಟೇರ ನಟ ದರ್ಶನ್‌ ಓಟ್‌ ಮಾಡಿದ್ದಾರೆ. ದರ್ಶನ್‌ ಜತೆಗೆ ಪತ್ನಿ ವಿಜಯಲಕ್ಷ್ಮಿಯೂ ಆಗಮಿಸಿದ್ದು, ಮತ ಚಲಾಯಿಸಿದ್ದಾರೆ.

ಓಟ್‌ ಮಾಡಿದ ರಚಿತರಾಮ್‌

ನಟಿ ರಚಿತಾ ರಾಮ್‌ ಅವರು ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಓಟ್‌ ಮಾಡಿದ್ದಾರೆ. "ಬಿಸಿಲು ಜಾಸ್ತಿ ಇದೆ ಎಂದು ಮನೆಯಲ್ಲಿ ಕುಳಿತುಕೊಳ್ಳಬೇಡಿ. ಹಿರಿಯರೇ ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಎಲ್ಲರೂ ಬಂದು ತಪ್ಪದೇ ಓಟ್‌ ಮಾಡಿ. ಮನೆಯಲ್ಲಿ ಕುಳಿತು ಕಾಮೆಂಟ್‌ ಮಾಡುವ ಬದಲು ಮತಗಟ್ಟೆಗೆ ಬಂದು ಓಟ್‌ ಮಾಡಿ" ಎಂದು ಮನವಿ ಮಾಡಿದ್ದಾರೆ.

ಮತದಾನ ಮಾಡಿದ ಶಿವರಾಜ್‌ ಕುಮಾರ್‌

ಸೆಂಚುರಿಸ್ಟಾರ್‌ ಶಿವರಾಜ್‌ಕುಮಾರ್‌ ಅವರು ರಾಚೇನಹಳ್ಳಿಯಲ್ಲಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದರು. "ಮತದಾನ ಮಾಡುವ ಅವಕಾಶ ದೊರಕುವುದು ಖುಷಿಯ ಸಂಗತಿ. ಎಲ್ಲರೂ ಮತದಾನ ಮಾಡಬೇಕು. ಮತದಾನ ಮಾಡಿ ಎಂದು ನಾವು ಮನವಿ ಮಾಡಬಹುದು. ಆದರೆ, ಯಾರನ್ನೂ ಎಬ್ಬಿಸಿ ಮತ ಮಾಡಿ ಎಂದು ಹೇಳಲಾಗದು. ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಒಂದೊಂದು ಮತದಿಂದ ಭವಿಷ್ಯ ಬರೆಯುವ ಶಕ್ತಿ ಇದೆ" ಎಂದು ಶಿವರಾಜ್‌ ಕುಮಾರ್‌ ಹೇಳಿದ್ದಾರೆ.

ನಾನು ಮತ ಹಾಕಿದ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದ ರಕ್ಷಿತ್‌ ಶೆಟ್ಟಿ

ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ಮತ ಚಲಾಯಿಸಿದ್ದಾರೆ. "ನಾನು ಮತ ಚಲಾವಣೆ ಮಾಡಿದ ಅಭ್ಯರ್ಥಿಯೇ ಗೆಲ್ಲುತ್ತಾರೆ. ಕಡ್ಡಾಯ ಮತದಾನ ಜಾರಿಗೆ ತರಬೇಕೆಂದು ಪೇಜಾವರ ಶ್ರೀಗಳು ಹೇಳಿದ್ದರು. ಅದು ತುಂಬಾ ಒಳ್ಳೆಯ ಪ್ಲಾನ್‌. ಶೇಕಡ 100ರಷ್ಟು ಮತದಾನ ಕಷ್ಟ. ಆನ್‌ಲೈನ್‌ ಮೂಲಕ ಮತದಾನ ಮಾಡುವ ಅವಕಾಶ ನೀಡಬೇಕು" ಎಂದು ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ