‘ಶಂಕರ್‌ ನಾಗ್‌ ಅಂಕಲ್‌ ಹೋಗಿ ಎರಡೇ ವರ್ಷಕ್ಕೆ ಅಪ್ಪ ಹೋದ್ರು! ಬದುಕಿಗೂ ಬರಸಿಡಿಲು ಬಡಿಯಿತು, ಆಗ ನನಗೆ ಬರೀ 16 ವರ್ಷ’; ಮಾಸ್ಟರ್‌ ಮಂಜುನಾಥ್‌-sandalwood news master manjunath untold story of child artist life struggles life lesson learnt with shankar nag mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ಶಂಕರ್‌ ನಾಗ್‌ ಅಂಕಲ್‌ ಹೋಗಿ ಎರಡೇ ವರ್ಷಕ್ಕೆ ಅಪ್ಪ ಹೋದ್ರು! ಬದುಕಿಗೂ ಬರಸಿಡಿಲು ಬಡಿಯಿತು, ಆಗ ನನಗೆ ಬರೀ 16 ವರ್ಷ’; ಮಾಸ್ಟರ್‌ ಮಂಜುನಾಥ್‌

‘ಶಂಕರ್‌ ನಾಗ್‌ ಅಂಕಲ್‌ ಹೋಗಿ ಎರಡೇ ವರ್ಷಕ್ಕೆ ಅಪ್ಪ ಹೋದ್ರು! ಬದುಕಿಗೂ ಬರಸಿಡಿಲು ಬಡಿಯಿತು, ಆಗ ನನಗೆ ಬರೀ 16 ವರ್ಷ’; ಮಾಸ್ಟರ್‌ ಮಂಜುನಾಥ್‌

“ನನ್ನ ಜೀವನ ಎಲ್ಲ ರೀತಿಯ ರುಚಿಯನ್ನೂ ನೋಡಿದೆ. ಚಿಕ್ಕ ವಯಸ್ಸಲ್ಲೇ ಫೇಮ್‌ ಸಿಕ್ತು, ಹಣವೂ ಸಿಕ್ತು. ಕಲರ್‌ಫುಲ್‌ ಸಿನಿಮಾ ಜೀವನ ನೋಡಿದೆ. ಅದಾದ ಮೇಲೆ ಶಂಕರ್‌ ನಾಗ್ ಅಂಕಲ್‌ ಹೋದ್ರು. ಅವರ ಹಿಂದೆಯೇ ಅಪ್ಪ ಹೋದ್ರು. ಬದುಕಿಗೂ ಬರಸಿಡಿಲು ಬಡೀತು” ಹೀಗೆ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ ಮಾಸ್ಟರ್‌ ಮಂಜುನಾಥ್.‌

‘ಶಂಕರ್‌ ನಾಗ್‌ ಅಂಕಲ್‌ ಹೋಗಿ ಎರಡೇ ವರ್ಷಕ್ಕೆ ಅಪ್ಪ ಹೋದ್ರು! ಬದುಕಿಗೂ ಬರಸಿಡಿಲು ಬಡಿಯಿತು, ಆಗ ನನಗೆ ಬರೀ 16 ವರ್ಷ’ ಮಾಸ್ಟರ್‌ ಮಂಜುನಾಥ್‌
‘ಶಂಕರ್‌ ನಾಗ್‌ ಅಂಕಲ್‌ ಹೋಗಿ ಎರಡೇ ವರ್ಷಕ್ಕೆ ಅಪ್ಪ ಹೋದ್ರು! ಬದುಕಿಗೂ ಬರಸಿಡಿಲು ಬಡಿಯಿತು, ಆಗ ನನಗೆ ಬರೀ 16 ವರ್ಷ’ ಮಾಸ್ಟರ್‌ ಮಂಜುನಾಥ್‌ (Photo/ Youtube Rapid rashmi)

Master Manjunath: ಮಾಸ್ಟರ್‌ ಮಂಜುನಾಥ್‌ ಅಂದ ತಕ್ಷಣ 90ರ ಕಾಲಘಟ್ಟದ ಅವರ ಸಾಕಷ್ಟು ಸಿನಿಮಾಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ನೋಡಿ ಸ್ವಾಮಿ ನಾವಿರೋದೆ ಹೀಗೆ, ಮಾಲ್ಗುಡಿ ಡೇಸ್, ರಣಧೀರ, ಸಾಂಗ್ಲಿಯಾನ, ಅಂಜದ ಗಂಡು, ರಣರಂಗ, ಯುದ್ಧಕಾಂಡ, ಕಿಂದರಿ ಜೋಗಿ.. ಹೀಗೆ ಒಂದಕ್ಕಿಂತ ಒಂದು ಸಿನಿಮಾಗಳ ಮೂಲಕವೇ ಇಂದಿಗೂ ನಾಡಿನ ಜನರ ಮನದಲ್ಲಿದ್ದಾರೆ. ಆದರೆ, ತೆರೆಮೇಲಿನ ಕಲರ್‌ಫುಲ್‌ ಪಾತ್ರಗಳಂತೆ, ತೆರೆ ಹಿಂದೆಯೂ ಅಷ್ಟೇ ಏರಿಳಿತಗಳನ್ನು ಕಂಡಿದ್ದಾರೆ ಮಾಸ್ಟರ್‌ ಮಂಜುನಾಥ್‌. ಸದ್ಯ ಸಿನಿಮಾ ಬಿಟ್ಟು, IT ಉದ್ಯೋಗದಲ್ಲಿದ್ದಾರೆ. ಮಡದಿ ಮಗನ ಜತೆ ಜೀವನ ಸಾಗಿಸುತ್ತಿದ್ದಾರೆ.

ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ, ಬರೀ 15ವರೆ ವರ್ಷದವರಿದ್ದಾಗಲೇ ಮಾಸ್ಟರ್‌ ಮಂಜುನಾಥ್‌ ಬದುಕಿಗೆ ಬರಸಿಡಿಲು ಬಡಿದಿತ್ತು. ಸದಾ ಅವರ ಏಳಿಗೆ, ಖುಷಿಯನ್ನೇ ಬಯಸುತ್ತಿದ್ದ ಶಂಕರ್‌ನಾಗ್‌ 1990ರಲ್ಲಿ ನಿಧನರಾದರು. ಆ ನೋವು ಇನ್ನೂ ಹಸಿರಾಗಿರುವಾಗಲೇ ಎರಡೇ ವರ್ಷಕ್ಕೆ ಅಪ್ಪನನ್ನೂ ಕಳೆದುಕೊಂಡರು ಮಂಜುನಾಥ್.‌ 1992ರಲ್ಲಿ ಅಪ್ಪ ಹೋದ ಮೇಲೆ ಇಡೀ ಮನೆ ಜವಾಬ್ದಾರಿಯನ್ನೂ ಹೊತ್ತು, ಚಿತ್ರರಂಗಕ್ಕೆ ಗುಡ್‌ ಬೈ ಹೇಳಿದ್ರು. 1992ರಲ್ಲಿ ತೆರೆಗೆ ಬಂದ ಸ್ವಾತಿ ಕಿರಣಂ ಚಿತ್ರವೇ ಕೊನೇ, ಮತ್ತೆ ಚಿತ್ರರಂಗದ ಕಡೆ ಅವರು ಹೊರಳಲೇ ಇಲ್ಲ. ಅಂದಿನ ಆ ದಿನಗಳನ್ನು ರ್ಯಾಪಿಡ್‌ ರಶ್ಮಿ ಅವರ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮೆಲುಕು ಹಾಕಿದ್ದಾರೆ.

ಶಂಕರ್‌ ‌ನಾಗ್ ಅಂಕಲ್‌ ನಿಧನರಾದಾಗ ನಾನು...

"ಶಂಕರ್‌ ನಾಗ್‌ ನಿಧನರಾದಾಗ ನಾನು ಇಂಡಿಯಾದಲ್ಲಿ ಇರಲಿಲ್ಲ. ಆವತ್ತು ನಾನು ನಾಗಾಭರಣ ಅವರ ಜತೆಗೆ ಸ್ಟೋನ್‌ ಬಾಯ್‌ ಶೂಟಿಂಗ್‌ನಲ್ಲಿ ಇದ್ದೆ. ಆ ಸಮಯದಲ್ಲಿ (1990) ವಾರಕ್ಕೆ ಒಂದೇ ಫ್ಲೈಟ್‌ ಇರ್ತಿತ್ತು. ಏನಾದ್ರೂ ಆದ್ರೆ, ತಕ್ಷಣ ಬರೋಕೆ ಯಾವ ವ್ಯವಸ್ಥೆಯೂ ನಮಗಿರಲಿಲ್ಲ. ನಾವು ಅಸಹಾಯಕರಾಗಿದ್ದೆವು. ಶಂಕರ್‌ನಾಗ್‌ಗೆ ಆಕ್ಸಿಡೆಂಟ್‌ ಆಗಿದೆ ಅನ್ನೋ ಸುದ್ದಿ ನಮಗೂ ಬಂತು. ಆದರೆ, ನಾವು ಅದನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಹೇ.. ಅದೆಲ್ಲ ಚಾನ್ಸೇ ಇಲ್ಲ ಅನ್ನೋ ಭಾವ ಆವರಿಸಿತ್ತು. ಆ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ"

ಈ ವಿಚಾರಕ್ಕೆ ಸ್ವಾರ್ಥಿಯಾಗಿದ್ದೆ..

"ಯಾರ ಮಾತಿನ ಮೇಲೂ ನಂಬಿಕೆ ಇರಲಿಲ್ಲ. ನಾಗಾಭರಣ ಅವರೂ ನಂಬಿರಲಿಲ್ಲ. ಕೊನೆಗೆ ಅದು ನಿಜ ಅನ್ನೋದು ಗೊತ್ತಾಯ್ತು. ಆದರೆ, ಅವರ ರೂಲ್ಸ್‌ ಹೇಗಿತ್ತು ಅಂದರೆ, ಹಿಡಿದ ಕೆಲಸ ಮುಗಿಸಿಯೇ ಬರಬೇಕು. ನಿರ್ಮಾಪಕರಿಗೆ ಅನ್ಯಾಯ ಆಗುತ್ತೆ ಎಂದಿದ್ದರು. ಹಾಗಾಗಿ ಆ ನೋವಿನಲ್ಲಿಯೇ ಆ ಪ್ರಾಜೆಕ್ಟ್‌ ಮುಗಿಸಿ ಭಾರತಕ್ಕೆ ಮರಳಿದ್ವಿ. ಕೊನೆಯದಾಗಿ ಅವರ ಮುಖವನ್ನೂ ನಾನು ನೋಡಲು ಚಾನ್ಸ್‌ ಸಿಗಲಿಲ್ಲ. ಈ ಒಂದು ವಿಚಾರಕ್ಕೆ ಸ್ವಾರ್ಥಿ ಎನ್ನಬಹುದು. ನನ್ನ ಮನಸಲ್ಲಿ ಅವರ ಜತೆಗಿನ ಒಳ್ಳೆಯ ಮೆಮೊರಿಗಳೇ ಉಳಿದಿವೆ"

ಶಂಕರ್‌ ಅಂಕಲ್‌ ಆದ್ಮೆಲೆ ಅಪ್ಪನೂ ಹೋದ..

"1990ರಲ್ಲಿ ಶಂಕರ್‌ ಅಂಕಲ್‌ ಹೋದ್ರು, 1992ರಲ್ಲಿ ಹೃದಯಾಘಾತದಿಂದ ನಾನು ನನ್ನ ಅಪ್ಪನನ್ನು ಕಳೆದುಕೊಂಡೆ. ಆಗಿನ್ನೂ ನನಗೆ 15ವರೆ ವರ್ಷ. ಯಾಕೋ ಗೊತ್ತಿಲ್ಲ ಭರತನಾಟ್ಯ ಕ್ಲಾಸ್‌ ಹಚ್ಚಿದೆ. ಅಪ್ಪನನ್ನು ಕಳೆದುಕೊಂಡ ಮೇಲೆ ನಾನು ಅಕ್ಷರಶಃ ಏನೂ ಗೊತ್ತಾಗಲಿಲ್ಲ. ಏಕೆಂದರೆ ನನ್ನ ಪೂರ್ತಿ ಜವಾಬ್ದಾರಿ ಅಮ್ಮನದ್ದೇ ಆಗಿತ್ತು. ನಾನು ಏನನ್ನೂ ಹುಡುಕುವ ಅವಶ್ಯಕತೆ ಇರುತ್ತಿರಲಿಲ್ಲ. ಎಲ್ಲವೂ ರೆಡಿ ಇರುತ್ತಿತ್ತು. ನಾನು ಒಂದು ಶೇಪ್‌ಗೆ ಬರ್ತಾಯಿದ್ದ ಸಂದರ್ಭದಲ್ಲಿ ಅವರೇ ಇಲ್ಲವಾದರು. ಆಗ ನಾನು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ"

ನನ್ನ ಜೀವನದಲ್ಲಿ ಎಲ್ಲ ರುಚಿಯನ್ನೂ ಅನುಭವಿಸಿದ್ದೇನೆ..

"ನನ್ನ ಜೀವನ ಎಲ್ಲ ರೀತಿಯ ರುಚಿಯನ್ನೂ ನೋಡಿದೆ. ಚಿಕ್ಕ ವಯಸ್ಸಲ್ಲೇ ಫೇಮ್‌ ಸಿಕ್ತು, ಹಣವೂ ಸಿಕ್ತು. ಕಲರ್‌ಫುಲ್‌ ಸಿನಿಮಾ ಜೀವನ ನೋಡಿದೆ. ಅದಾದ ಮೇಲೆ ಶಂಕರ್‌ ಅಂಕಲ್‌ ಹೋದ್ರು. ಅವರ ಹಿಂದೆಯೇ ಅಪ್ಪ ಹೋದ್ರು. ಅದಾದ ಮೇಲೆ ಅಮ್ಮನೇ ನನ್ನ ಪೂರ್ತಿ ಜವಾಬ್ದಾರಿ ವಹಿಸಿಕೊಂಡ್ರು. ವಿದ್ಯಾಭ್ಯಾಸಕ್ಕೆ ಮೊದಲ ಪ್ರಾಶಸ್ತ್ಯ. ನಾನು ಈಗ ಏನಾಗಿದ್ದೇನೋ ಅದಕ್ಕೆ ಅಮ್ಮನೇ ಕಾರಣ. ದುರದೃಷ್ಟವಶಾತ್‌, 2019ರಲ್ಲಿ ಅಮ್ಮನನ್ನೂ ಕಳೆದುಕೊಂಡೆ"

ಒಳ್ಳೆಯ ನೆನಪುಗಳಿಗೆ ಹೂಡಿಕೆ ಮಾಡಿ...

"ಅಪ್ಪ ಹೋದ ಮೇಲೆ ಕಷ್ಟದ ದಿನಗಳು ಶುರುವಾದ್ವು. ನನ್ನ ಪೂರ್ತಿ ಸೇವಿಂಗ್ಸ್‌ ಮನೆಗೆ ಹೋಯ್ತು. ಒಂದು ಸಮಯದಲ್ಲಿ ಯಾವುದೇ ಕೊರತೆ ಇಲ್ಲದ್ದನ್ನು ನೋಡಿದೆ. ಅದಾದ ಬಳಿಕ ಏನೂ ಇಲ್ಲದ ದಿನಗಳನ್ನೂ ನೋಡಿದೆ. ಪರಿಸ್ಥಿತಿ ಎಲ್ಲವನ್ನೂ ಕಲಿಸತೊಡಗಿತು. ಯಾಕಂದ್ರೆ ಇದ್ದಿದ್ದೇ ನಾನು ಮತ್ತು ಅಮ್ಮ ಇಬ್ಬರೇ. ಹಾಗಾಗಿ ಓದಿನ ಕಡೆಗೆ ಗಮನ ಹರಿಸಿದೆ. ಆವತ್ತಿನ ಆ ಕಷ್ಟದ ದಿನಗಳೇ ನಮಗೆ ಸ್ಪೂರ್ತಿ. ಏನೇ ಹೂಡಿಕೆ ಮಾಡುವುದಿದ್ದರೆ, ಇತರರಿಗೂ ಹೇಳುವುದು ಏನೆಂದರೆ ಒಳ್ಳೆಯ ನೆನಪುಗಳಿಗೆ, ಒಳ್ಳೆಯನ ಮನುಷ್ಯನಾಗಲು ಇನ್ವೆಸ್ಟ್‌ ಮಾಡಿ. ಫ್ಯಾನ್ಸಿ ಖರೀದಿಗಳಿಗೆ ಬೇಡ" ಎಂದಿದ್ದಾರೆ.

mysore-dasara_Entry_Point