logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Weather: ಬಿಸಿ ಗಾಳಿಗೆ ಸಿಲಿಕಾನ್ ಸಿಟಿ ಜನ ತತ್ತರ; ಬೆಂಗಳೂರಿನಲ್ಲಿ ಇನ್ನೂ ಒಂದು ವಾರ ಗರಿಷ್ಠ ತಾಪಮಾನ; ವರದಿ

Bangalore Weather: ಬಿಸಿ ಗಾಳಿಗೆ ಸಿಲಿಕಾನ್ ಸಿಟಿ ಜನ ತತ್ತರ; ಬೆಂಗಳೂರಿನಲ್ಲಿ ಇನ್ನೂ ಒಂದು ವಾರ ಗರಿಷ್ಠ ತಾಪಮಾನ; ವರದಿ

Raghavendra M Y HT Kannada

Apr 22, 2024 03:17 PM IST

google News

ಬೆಂಗಳೂರಿನಲ್ಲಿ ಇನ್ನೂ ಒಂದು ವಾರ ಗರಿಷ್ಠ ತಾಪಮಾನ ಇರಲಿದೆ ಎಂದು ವರದಿಯಾಗಿದೆ.

    • 2024ರ ಏಪ್ರಿಲ್ 6 ರಂದು ಬೆಂಗಳೂರಿನಲ್ಲಿ 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು 8 ವರ್ಷಗಳಲ್ಲಿ ಏಪ್ರಿಲ್ ತಿಂಗಳೊಂದರಲ್ಲಿ ದಾಖಲಾದ ಗರಿಷ್ಠ ತಾಪಮಾನವಾಗಿದೆ. ಇನ್ನೂ 1 ವಾರ ಬಿಸಿ ಇರಲಿದೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ಇನ್ನೂ ಒಂದು ವಾರ ಗರಿಷ್ಠ ತಾಪಮಾನ ಇರಲಿದೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ಇನ್ನೂ ಒಂದು ವಾರ ಗರಿಷ್ಠ ತಾಪಮಾನ ಇರಲಿದೆ ಎಂದು ವರದಿಯಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bangalore Rains) ಅಲ್ಲಲ್ಲಿ ಲಘು ಮಳೆಯಾಗಿತ್ತು. ವಾರಾಂತ್ಯದಲ್ಲಿ (ಏಪ್ರಿಲ್ 20ರ ಶನಿವಾರ) ಬಂದ ತುಂತುರು ಮಳೆಯಿಂದಾಗಿ ಇಲ್ಲಿನ ಜನರು ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಬಿಸಿಲಿಗೆ ಬೆಂದಿದ್ದ ಜನರಿಗೆ ವರುಣ ಕೃಪೆ ತೋರುತ್ತಿದ್ದಾನೆ. ಅದನ್ನು ಹೀಗೆ ಮುಂದುವರಿಸಿಕೊಂಡು ಹೋಗ್ತಾನೆ ಅಂತ ಜನರು ನಿರೀಕ್ಷೆ ಮಾಡಿದ್ರು. ಆದರೆ ನಗರದಲ್ಲಿ ಮತ್ತದೇ ಬಿಸಿಯ ಪರಿಸ್ಥಿತಿ ಮುಂದುವರಿದೆ. ಬೆಂಗಳೂರಿನಲ್ಲಿ ಕನಿಷ್ಠ ಇನ್ನೂ ಒಂದು ವಾರ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಮುಂದಿನ ವಾರ ಮಳೆಯಾಗುವ ಯಾವುದೇ ಮುನ್ಸೂಚನೆಗಳು ಇಲ್ಲ ಮತ್ತು ತಾಪಮಾನವು (Bangalore Temperature) ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಮುಂಬರುವ ವಾರದಲ್ಲಿ ತಾಪಮಾನವು ಎರಡು ಅಥವಾ ಮೂರು ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಏಪ್ರಿಲ್ 6 ರಂದು ಬೆಂಗಳೂರಿನಲ್ಲಿ 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು 8 ವರ್ಷಗಳಲ್ಲಿ ಏಪ್ರಿಲ್ ತಿಂಗಳೊಂದರಲ್ಲಿ ದಾಖಲಾಗಿರುವ ಗರಿಷ್ಠ ತಾಪಮಾನವಾಗಿದೆ.

ಸುಮಾರು ಐದು ತಿಂಗಳ ನಂತರ ಶುಕ್ರವಾರ (ಏಪ್ರಿಲ್ 19) ಮತ್ತು ಶನಿವಾರ (ಏಪ್ರಿಲ್ 20) ಬೆಂಗಳೂರಿನ ಕೆಲವು ಭಾಗಗಳಲ್ಲಿ ಲಘು ಮಳೆಯಾಗಿದೆ. ಆದಾಗ್ಯೂ, ಟೆಕ್ ರಾಜಧಾನಿಯ ಕೆಲವು ಭಾಗಗಳಲ್ಲಿ ಇನ್ನೂ ಯಾವುದೇ ಮಳೆಯಾಗುವ ಮುನ್ಸೂಚನೆ ಕಾಣ್ತಿಲ್ಲ. ಗರಿಷ್ಠ ಮಟ್ಟದಲ್ಲಿ ತಾಪಮಾನ ದಾಖಲಾಗುತ್ತಿದೆ. ಮಳೆಯು 1 ಮಿ.ಮೀ ಸಹ ದಾಟಿಲ್ಲ ಎಂದು ವರದಿಯಲ್ಲಿ ಹೇಳಿದೆ.

ಬಿಸಿಗಾಳಿಯಿಂದ ಜಾಗ್ರತೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರಿನ ಜನರು ಅಸಾಮಾನ್ಯ ತಾಪಮಾನದಿಂದ ದೀರ್ಘ ಪರಿಹಾರಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈಗಾಗಲೇ ಜನ ಸಾಮಾನ್ಯರಿಗೆ ಆರೋಗ್ಯ ಸಲಹೆಯನ್ನು ನೀಡಿದೆ. ಮುಂದಿನ ಕೆಲವು ದಿನಗಳವರೆಗೆ ತಾಪಮಾನವು ಗರಿಷ್ಠ ಮಟ್ಟದಲ್ಲಿ ಮುಂದುವರಿಯುವುದರಿಂದ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ಸರ್ಕಾರ ಕೇಳಿದೆ.

ನಿರ್ಜಲೀಕರಣದಿಂದ ಪಾರಾಗಲು ಹೈಡ್ರೇಟ್ ಆಗಿರಲು ಮತ್ತು ದ್ರವಗಳನ್ನು ಸೇವಿಸುವಂತೆ ಸೂಚಿಸಲಾಗಿದೆ. ಶಿಶುಗಳು, ಗರ್ಭಿಣಿಯರು, ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿರುವ ಜನರು ಮತ್ತು ವಯಸ್ಸಾದವರಂತಹ ದುರ್ಬಲ ಜನರು ಇಂತಹ ಅಸಾಮಾನ್ಯ ತಾಪಮಾನದಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ. ತಲೆಯನ್ನು ನೇರ ಸೂರ್ಯನ ಬೆಳಕಿನಿಂದ ಮುಚ್ಚಿಡಬೇಕು, ಮೌಖಿಕ ಮರುಜಲೀಕರಣ ದ್ರಾವಣಗಳನ್ನು (ಒಆರ್‌ಎಸ್‌) ಬಳಸಬೇಕು ಎಂದು ಸೂಚಿಸಲಾಗಿದೆ.

ಇವತ್ತು (ಏಪ್ರಿಲ್ 22, ಸೋಮವಾರ) ಬೆಂಗಳೂರು ನಗರದಲ್ಲಿ ಮುಂಜಾನೆ ಭಾಗಶಃ ಮೋಡ ಕವಿದ ವಾತಾವರಣ ಇದ್ದು, ಸಂಜೆ ಶುಭ್ರವಾದ ಆಕಾಶ ಇರುತ್ತದೆ. ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.

ಏಪ್ರಿಲ್ 20ರ ಶನಿವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ 13 ಸೆಂಟಿ ಮೀಟರ್ ವರೆಗೆ ಮಳೆಯಾಗಿತ್ತು. ಆದರೆ ನಿನ್ನೆ (ಏಪ್ರಿಲ್ 21ರ ಭಾನುವಾರ) ಬೆಳಗಾವಿ ಹಾಗೂ ಹಾವೇರಿ ಜಿಲ್ಲೆಗಳನ್ನು ಹೊರತುಪಡಿಸಿದರೆ ಎಲ್ಲೂ ಮಳೆಯಾಗಿಲ್ಲ. ಒಣಹವೆ ಮುಂದುವರಿದೆ. ಬೆಳಗಾವಿಯಲ್ಲಿ 2 ಸೆಂಟಿ ಮೀಟರ್ ಹಾಗೂ ಹಾವೇರಿಯಲ್ಲಿ 1 ಸೆಂಟಿ ಮೀಟರ್ ಮಳೆಯಾಗಿದೆ. ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಉಷ್ಣಾಂಶ ಗಮನಾರ್ಹವಾಗಿ ಏರಿಕೆಯಾಗಿದೆ. ಅಂದ್ರೆ 2.1 ಡಿಗ್ರಿ ಸೆಲ್ಸಿಯಸ್‌ನಿಂದ 4 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಳ ಕಂಡಿದೆ.

ನಾಳೆ (ಏಪ್ರಿಲ್ 23, ಮಂಗಳವಾರ) ಬೀದರ್ ಕಲಬುರ್ಗಿ, ಬೆಳಗಾವಿ, ಬಾಗಲಕೋಟೆಯ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ