ಕನ್ನಡ ಸುದ್ದಿ  /  ಕರ್ನಾಟಕ  /  Bengaluru Crime: ಬೆಂಗಳೂರು ಕೆಫೆ ಸ್ಫೋಟ; ಸಹ ಸಂಚುಕೋರನ ಬಂಧನ, ಬಾಂಬ್ ಇಟ್ಟ ಆರೋಪಿಗಾಗಿ ತೀವ್ರ ಶೋಧ

Bengaluru Crime: ಬೆಂಗಳೂರು ಕೆಫೆ ಸ್ಫೋಟ; ಸಹ ಸಂಚುಕೋರನ ಬಂಧನ, ಬಾಂಬ್ ಇಟ್ಟ ಆರೋಪಿಗಾಗಿ ತೀವ್ರ ಶೋಧ

Umesh Kumar S HT Kannada

Mar 29, 2024 12:53 PM IST

ಬೆಂಗಳೂರು ಕೆಫೆ ಸ್ಫೋಟ ಪ್ರಕರಣದ ಸಹ ಸಂಚುಕೋರನ ಬಂಧನವಾಗಿದೆ. (ಬೆಂಗಳೂರು ಕೆಫೆ ಸ್ಫೋಟದ ಕಡತ ಚಿತ್ರ)

  • ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಮೊದಲ ಆರೋಪಿಯ ಬಂಧನವಾಗಿದೆ. ಸ್ಫೋಟದ ಸಹ ಸಂಚುಕೋರನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದು, ಬಾಂಬ್ ಇಟ್ಟ ಆರೋಪಿಗಾಗಿ ತೀವ್ರ ಶೋಧ ಮುಂದುವರಿಸಿದ್ದಾರೆ. (ವರದಿ-ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಕೆಫೆ ಸ್ಫೋಟ ಪ್ರಕರಣದ ಸಹ ಸಂಚುಕೋರನ ಬಂಧನವಾಗಿದೆ. (ಬೆಂಗಳೂರು ಕೆಫೆ ಸ್ಫೋಟದ ಕಡತ ಚಿತ್ರ)
ಬೆಂಗಳೂರು ಕೆಫೆ ಸ್ಫೋಟ ಪ್ರಕರಣದ ಸಹ ಸಂಚುಕೋರನ ಬಂಧನವಾಗಿದೆ. (ಬೆಂಗಳೂರು ಕೆಫೆ ಸ್ಫೋಟದ ಕಡತ ಚಿತ್ರ) (PTI)

ಬೆಂಗಳೂರು: ಬೆಂಗಳೂರಿನ ದಿ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ ಒಂದರಂದು ನಡೆದ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಯಶಸ್ವಿಯಾಗಿದೆ. ಈ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳ ಪೈಕಿ ಒಬ್ಬನಾದ ಮುಜಮೀಲ್ ಶರೀಫ್‌ನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಹವಾಮಾನ ಮೇ 15; ಬಾಗಲಕೋಟೆ, ಬೀದರ್ ಸೇರಿ 6 ಜಿಲ್ಲೆ ಬಿಟ್ಟು ಉಳಿದ ಜಿಲ್ಲೆಗಳ ಕೆಲವೆಡೆ ಮಳೆ ನಿರೀಕ್ಷೆ, ಉಳಿದಂತೆ ಒಣಹವೆ

Hassan Scandal: ಪ್ರಜ್ವಲ್‌ ರೇವಣ್ಣ ವಿದೇಶದಿಂದ ಇಂದು ವಾಪಾಸ್‌ ನಿರೀಕ್ಷೆ, ಕಾದು ಕುಳಿತಿರುವ ಎಸ್‌ಐಟಿ ಪೊಲೀಸರು

Bangalore News: ಬೆಂಗಳೂರಿನ ಪ್ರತಿಷ್ಠಿತ ಜೈನ್ ಹೆರಿಟೇಜ್ ಶಾಲೆಗೆ ಹುಸಿ ಬಾಂಬ್ ಬೆದರಿಕೆ ಸಂದೇಶ; ಆತಂಕದ ವಾತಾವರಣ

Mangalore News: ಮಂಗಳೂರು ನಗರಕ್ಕೆ ಬೇಕಿವೆ ತಂಗುದಾಣಗಳು, ಬಸ್‌ಗೆ ಕಾಯುವವರ ಸಂಕಟ ಕೇಳೋರು ಯಾರು

ಬಾಂಬ್ ಇಟ್ಟಿದ್ದ ಶಂಕಿತ ಆರೋಪಿ ಮುಸಾವೀರ್ ಹುಸೇನ್ ಶಾಜಿದ್, ಅಬ್ದುಲ್ ಮಥೀನ್ ತಾಹಾ ಜೊತೆ ಸೇರಿಕೊಂಡು ಮುಜಮೀಲ್ ಸಂಚು ರೂಪಿಸಿದ್ದ ಎಂದು ಹೇಳಲಾಗಿದೆ. ಆರೋಪಿಗಳನ್ನು ಬಂಧಿಸಲು ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ತಮಿಳುನಾಡಿನ ಹಲವಾರು ಪ್ರದೇಶಗಳಲ್ಲಿ ತಪಾಸಣೆ ನಡೆಸಲಾಗಿತ್ತು.

ಈ ಸ್ಫೋಟ ನಡೆಸಲು ಸಂಚು ರೂಪಿಸಿದ್ದವರ ಸುಳಿವು ಆಧರಿಸಿ ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ ಒಂದು ಸ್ಥಳದ ಮೇಲೆ ದಾಳಿ ನಡೆಸಲಾಗಿತ್ತು. ಎನ್‌ಐಎ ಮುಜಮೀಲ್ ಶರೀಫ್‌ನನ್ನು ಬುಧವಾರವೇ ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಕೆಫೆ ಸ್ಫೋಟದಲ್ಲಿ ಬಂಧಿತ ಮುಜಮೀಲ್‌ ಪಾತ್ರವೇನು

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಲು ಮುಂದಾಗಿದ್ದ ಮುಸಾವೀರ್ ತಾಹಾಗೆ ಬೇಕಿದ್ದ ಕಚ್ಚಾ ಸಾಮಗ್ರಿಗಳನ್ನು ಮುಜಮೀಲ್ ಒದಗಿಸಿದ್ದ. ರಾಮೇಶ್ವರಂ ಕೆಫೆ ಹೋಟೆಲ್ ಗೆ ಹೋಗಲು ಮತ್ತು ಅಲ್ಲಿಂದ ಬೇರೆ ಬೇರೆ ಊರುಗಳಿಗೆ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟಿದ್ದ. ಹಾಗಾಗಿ ಈತನ ನೆರವಿನಿಂದ ಮುಸಾವೀರ್, ಹೋಟೆಲ್‌ನಲ್ಲಿ ಬಾಂಬ್ ಇರಿಸಿ ಪರಾರಿಯಾಗಿದ್ದಾನೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಚಿಕ್ಕಮಗಳೂರಿನ ಮುಜಮೀಲ್‌ನ ಮನೆ ಮತ್ತು ಮೊಬೈಲ್ ಅಂಗಡಿ ಮೇಲೆ ದಾಳಿ ನಡೆಸಿದಾಗ ಆತ ಸಿಕ್ಕಿ ಬಿದ್ದಿದ್ದಾನೆ. ಅವನಿಂದ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಅಬ್ದುಲ್ ಮಥೀನ್ ತಾಹಾ ತೀರ್ಥಹಳ್ಳಿಯ ನಿವಾಸಿ ಎಂದು ತಿಳಿದು ಬಂದಿದ್ದು, ಆತನ ಮನೆಯ ಮೇಲೂ ದಾಳಿ ನಡೆದಿದೆ. ಮುಸಾವೀರ್, ಅಬ್ದುಲ್ ಮಥೀನ್ ಮತ್ತು ಮುಜಮೀಲ್ ಶಂಕಿತ ಆರೋಪಿಗೆ ಕಚ್ಚಾ ಬಾಂಬ್ ತಯಾರಿಸಲು ಅಗತ್ಯ ವಸ್ತುಗಳನ್ನು ಪೂರೈಸಿದ್ದರು. ಬೆಂಗಳೂರಿನಲ್ಲೇ ಐ ಇ ಡಿ ಬಾಂಬ್ ತಯಾರಿಸಲಾಗಿದೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಮುಸಾವೀರ್ ಮತ್ತು ಅಬ್ದುಲ್ ಮಥೀನ್ ತಾಹಾ ಇಬ್ಬರೂ ತಲೆ ಮರೆಸಿಕೊಂಡಿದ್ದು, ಇವರ ಪತ್ತೆಗೆ ನಾಲ್ಕೈದು ರಾಜ್ಯಗಳಲ್ಲಿ ಶೋಧ ನಡೆಸಲಾಗುತ್ತಿದೆ.

ಕುಂದಲಹಳ್ಳಿ ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆ ಸ್ಫೋಟ

ಮಾ.1ರಂದು ಮಧ್ಯಾಹ್ನ ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಸಂಭವಿಸಿದ್ದು, 10 ಜನ ಗಾಯಗೊಂಡಿದ್ದರು. ಈ ಪೈಕಿ ಒಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿತ್ತಾದರೂ ಸದ್ಯ ಚೇತರಿಸಿಕೊಂಡಿದ್ದಾರೆ. ಕುಂದಲಹಳ್ಳಿ ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಶಂಕಿತ ಬಾಂಬರ್‌ ಬಗ್ಗೆ ಮಾಹಿತಿ ನೀಡುವವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) 10 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಮಾಹಿತಿದಾರರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದೂ ಮಾರ್ಚ್‌ 6ರಂದು ಪ್ರಕಟಿಸಿತ್ತು.

ಕೆಫೆ ಬಾಂಬ್ ಸ್ಫೋಟದ ಆರೋಪಿಗೆ ಸಂಬಂಧಿಸಿದ ಮತ್ತೆ ಎರಡು ವಿಡಿಯೋಗಳನ್ನು ಹಂಚಿಕೊಂಡಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಈತನ ಪತ್ತೆಗೆ ಸಾರ್ವಜನಿಕರು ಸಹಕಾರ ನೀಡುವಂತೆ ಕೋರಿತ್ತು. ಎಕ್ಸ್ ಖಾತೆಯಲ್ಲಿ ಈತನ ಚಲನವಲನಗಳ ವಿಡಿಯೋಗಳನ್ನು ಹಂಚಿಕೊಂಡಿರುವ ಎನ್‌ಐಎ ಬಾಂಬರ್ ನ ಗುರುತು ಕಂಡು ಬಂದರೆ ಮಾಹಿತಿ ನೀಡುವಂತೆ ಮಾರ್ಚ್ 9 ರಂದು ಕೋರಿತ್ತು.

ಹಂತ ಹಂತವಾಗಿ ತನಿಖೆಯಲ್ಲಿ ಪ್ರಗತಿ ದಾಖಲಿಸುತ್ತ ಸಾಗಿರುವ ಎನ್‌ಐಎ ಈಗ ಪ್ರಮುಖ ಆರೋಪಿ ಪತ್ತೆಗೆ ಬಲೆ ಬೀಸಿದೆ.

(ವರದಿ-ಎಚ್. ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ