ಕನ್ನಡ ಸುದ್ದಿ  /  ಕರ್ನಾಟಕ  /  Siddaramaiah: 'ಟೀಕೆಗಳಿಗೆ ಹೆದರುವ ಗಿರಾಕಿ ನಾನಲ್ಲ.. ಹೆದರಿಸುವ ಪ್ರಯತ್ನ ಮಾಡಿದರೆ ತೊಡೆ ತಟ್ಟುವುದು ನನಗೂ ಗೊತ್ತಿದೆ'

Siddaramaiah: 'ಟೀಕೆಗಳಿಗೆ ಹೆದರುವ ಗಿರಾಕಿ ನಾನಲ್ಲ.. ಹೆದರಿಸುವ ಪ್ರಯತ್ನ ಮಾಡಿದರೆ ತೊಡೆ ತಟ್ಟುವುದು ನನಗೂ ಗೊತ್ತಿದೆ'

HT Kannada Desk HT Kannada

Feb 05, 2023 09:40 PM IST

ಯಾತ್ರಿ ನಿವಾಸ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ

    • ನಾನು ನ್ಯಾಯಕ್ಕಾಗಿ ತಲೆಬಾಗುವೆನೇ ಹೊರತು ಮತ್ತಾವುದಕ್ಕೂ ತಲೆ ಬಾಗಲಾರೆ. ಟೀಕೆಗಳಿಗೆ ಹೆದರುವ ಗಿರಾಕಿ ನಾನಲ್ಲ. ಯಾರಾದರೂ ಹೆದರಿಸುವ ಪ್ರಯತ್ನ ಮಾಡಿದರೆ ತೊಡೆ ತಟ್ಟುವುದು ನನಗೂ ಗೊತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಯಾತ್ರಿ ನಿವಾಸ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ
ಯಾತ್ರಿ ನಿವಾಸ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ

ವಿಜಯನಗರ: ನಾನು ನ್ಯಾಯಕ್ಕಾಗಿ ತಲೆಬಾಗುವೆನೇ ಹೊರತು ಮತ್ತಾವುದಕ್ಕೂ ತಲೆ ಬಾಗಲಾರೆ. ಟೀಕೆಗಳಿಗೆ ಹೆದರುವ ಗಿರಾಕಿ ನಾನಲ್ಲ. ಯಾರಾದರೂ ಹೆದರಿಸುವ ಪ್ರಯತ್ನ ಮಾಡಿದರೆ ತೊಡೆ ತಟ್ಟುವುದು ನನಗೂ ಗೊತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಟ್ರೆಂಡಿಂಗ್​ ಸುದ್ದಿ

Bangalore News: ಕೆಎಎಸ್‌ ಅಧಿಕಾರಿ ಪತ್ನಿ, ಹೈಕೋರ್ಟ್‌ ವಕೀಲೆ ಆತ್ಮಹತ್ಯೆ, ಕಾರಣವೇನು

Bangalore Mango Fair: ಬೆಂಗಳೂರಲ್ಲಿ ಮೇ 23ರಿಂದ ಮಾವಿನ ಮೇಳ ಶುರು, ಈ ಬಾರಿ ಮೇಳದ ವಿಶೇಷ ಏನು

ಪುತ್ತೂರು: ಸಂಕೋಲೆ ಕುತ್ತಿಗೆಗೆ ಸಿಲುಕಿ ಯುವಕ ಸಾವು, ಆತ್ಮಹತ್ಯೆ ಎಂದ ತಾಯಿ, ನಡೆದದ್ದೇನು; ಇಲ್ಲಿದೆ ಪೂರ್ಣ ವಿವರ

ಸೋಮವಾರಪೇಟೆಯ 16 ವರ್ಷದ ಬಾಲಕಿಯ ಹತ್ಯೆ ಕೇಸ್‌; ಪೈಶಾಚಿಕ ಕೃತ್ಯವೆಸಗಿದ ಆರೋಪಿಯ ಬಂಧನ, ಕತ್ತರಿಸಿ ಕೊಂಡೊಯ್ದ ತಲೆ ಪತ್ತೆ- 5 ಮುಖ್ಯ ಅಂಶ

ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಇಂದು ಯಾತ್ರಿ ನಿವಾಸ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಅಧಿಕಾರ ಇದ್ದಾಗ ಇಲ್ಲದಿದ್ದಾಗ ಸಾಮಾಜಿಕ ನ್ಯಾಯದ ಪರ ಹೋರಾಟ ಮಾಡಿದ್ದೇನೆ. ಮುಂದೆಯೂ ಹೋರಾಡುವೆ. ನಾನೆಂದೂ ಅಧಿಕಾರದ ಹಿಂದೆ ಬಿದ್ದಿಲ್ಲ. ನನಗೆ ಸರಿ ಎಂದು ಕಂಡದ್ದು , ನ್ಯಾಯಯುತವಾಗಿದೆ ಎಂದು ಅನಿಸಿದ್ದನ್ನು ಮಾಡುತ್ತೇನೆ ಎಂದರು.

ನಾನು ಕುರುಬ ಜಾತಿಯವನು ಎನ್ನುವ ಕಾರಣಕ್ಕೆ ಟಗರು ಎನ್ನುವುದಲ್ಲ

ಜನ ನನ್ನನ್ನು ಟಗರು ಎಂದು ಪ್ರೀತಿಯಿಂದ ಕರೆಯುತ್ತಾರೆ, ನಾನು ಸಮಾಜದಲ್ಲಿನ ಎಲ್ಲಾ ಜಾತಿಗಳ ಬಡಜನರಿಗೆ ಸಹಾಯ ಮಾಡಬೇಕು ಎಂದು ಕೆಲಸ ಮಾಡಿದ್ದೆ, ನಾನು ಕುರುಬ ಜಾತಿಯವನು ಎನ್ನುವ ಕಾರಣಕ್ಕೆ ಟಗರು ಎನ್ನುವುದಲ್ಲ. ನಾವು ಅನ್ನಭಾಗ್ಯ ಅಕ್ಕಿಯನ್ನು ಯಾವುದೇ ಒಂದು ಜಾತಿಗೆ ಮಾತ್ರ ಸೀಮಿತಗೊಳಿಸಿ ಜಾರಿ ಮಾಡಿದ್ವಾ? ಎಲ್ಲಾ ಬಡವರಿಗೆ ನೀಡಿರಲಿಲ್ವಾ? ಕೃಷಿ ಭಾಗ್ಯ ಯೋಜನೆಯನ್ನು ಬರೀ ಕುರುಬ ಜಾತಿಯ ರೈತರಿಗೆ ಮಾತ್ರ ನೀಡಿದ್ದೆವಾ? ಶೂಭಾಗ್ಯ, ಇಂದಿರಾ ಕ್ಯಾಂಟೀನ್‌, ವಿದ್ಯಾಸಿರಿ, ಶಾದಿ ಭಾಗ್ಯ, ಇವೆಲ್ಲ ಯೋಜನೆಯನ್ನು ಬರೀ ಹಿಂದುಳಿದ ಜಾತಿಗಳಿಗೆ ಸೀಮಿತವಾಗಿ ಜಾರಿ ಮಾಡಿರಲಿಲ್ಲ, ಈ ನಾಡಿನಲ್ಲಿ ಆರ್ಥಿಕವಾಗಿ ಯಾರೆಲ್ಲ ದುರ್ಬಲರಿದ್ದಾರೆ ಅವರಿಗೆ ಸಹಾಯವಾಗಲಿ ಎಂದು ಮಾಡಿದ್ದು ಎಂದು ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ಅವರ ಭಾಷಣದ ವಿವರ...

1988ರಲ್ಲಿ ನಾನು ರಾಜ್ಯವನ್ನು ಸುತ್ತಿ 500ನೇ ಕನಕ ಜಯಂತಿ, ಜೊತೆಗೆ ಇತರೆ ಕಾರ್ಯಕ್ರಮಗಳನ್ನು ಸರ್ಕಾರದಿಂದ ವಿಜೃಂಭಣೆಯಿಂದ ಆಚರಣೆ ಮಾಡುವ ಕೆಲಸ ಮಾಡಿದ್ದೆ. ದೇ.ಜವರೇ ಗೌಡ ಅವರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿ, ಕನಕದಾಸರ ಕೃತಿಗಳಾದ ಮೋಹನ ತರಂಗಿಣಿ, ರಾಮಧಾನ್ಯ ಚರಿತೆ, ಹರಿಭಕ್ತ ಸಾರ ಈ ಎಲ್ಲವುಗಳನ್ನು ಕಡಿಮೆ ದುಡ್ಡಿನಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡಿದ್ದೆ, ಕನಕದಾಸರ ಬದುಕು, ಹೋರಾಟ, ವಿಚಾರಧಾರೆಯನ್ನು ಜನರಿಗೆ ತಿಳಿಸಬೇಕು ಎಂದು ಅವರ ಸಾಹಿತ್ಯವನ್ನು ಕಡಿಮೆ ದರದಲ್ಲಿ ಎಲ್ಲ ಕಡೆ ಹಂಚುವುದು ನನ್ನ ಉದ್ದೇಶವಾಗಿತ್ತು. ನಂತರ ನಮ್ಮ ಸರ್ಕಾರ ಹೊರಟುಹೋದ ಮೇಲೆ ಈ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲೇ ಇಲ್ಲ.

ಕುರುಬರಿಗೆ ಒಂದು ಗುರುಪೀಠ ಇಲ್ಲ, ಒಂದು ಗುರುಪೀಠ ಸ್ಥಾಪನೆ ಮಾಡಬೇಕು ಎಂದು ನಾನು ಮತ್ತು ಹಲವು ಮಂದಿ ಸೇರಿ ತೀರ್ಮಾನ ಮಾಡಿ ಎಲ್ಲ ಭಾಗದಲ್ಲೂ ಸಂಚರಿಸಿದ್ದೆವು. ಮಂಗಳೂರು ಮತ್ತು ಉಡುಪಿ ಜಿಲ್ಲೆ ಬಿಟ್ಟು ಬಾಕಿ ಎಲ್ಲಾ ಜಿಲ್ಲೆಗಳಿಗು ಹೋಗಿದ್ದೆವು. ಶಿವಮೊಗ್ಗದಲ್ಲಿ ನಡೆದ ಮೊದಲನೆ ಮೀಟಿಂಗಿಗೆ ಈಶ್ವರಪ್ಪ ಬಂದಿದ್ದರು, ಎರಡನೇ ಮೀಟಿಂಗಲ್ಲಿ ದುಡ್ಡು ಕೊಡುತ್ತೇವೆ ಎಂದು ನಮ್ಮನ್ನು ಕರೆದಿದ್ದರು, ಹೋಗಿ ನೋಡಿದರೆ ಆ ಮೀಟಿಂಗಿಗೆ ಈಶ್ವರಪ್ಪ ಬರಲೇ ಇಲ್ಲ. ಪುಟ್ಟಪ್ಪ ಮತ್ತು ತಿಮ್ಮಯ್ಯ ಶಿವಮೊಗ್ಗ ಜಿಲ್ಲೆಯಿಂದ 3 ಲಕ್ಷ ರೂಪಾಯಿ ಸಂಗ್ರಹ ಮಾಡಿ ಕೊಟ್ಟಿದ್ದರು. ದುಡ್ಡು ಕೊಡದಿದ್ದರೂ ಪರವಾಗಿರಲಿಲ್ಲ, ಉದ್ಘಾಟನಾ ಸಮಾರಂಭಕ್ಕಾದರೂ ಬರುವುದು ಬೇಡವೇ? ಗುರುಪೀಠದ ಉದ್ಘಾಟನೆ ಮಾಡಿದ್ದು ಶರದ್‌ ಪವಾರ್‌, ಅವರು ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿದ್ದರು. ಕಾರ್ಯಕ್ರಮಕ್ಕೆ ಸುಮಾರು 5 ಲಕ್ಷ ಜನ ಸೇರಿದ್ದರು.

ಎಸ್‌,ಆರ್‌ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಗಿನೆಲೆ ಗುರುಪೀಠಕ್ಕೆ ಜಾಗ ಕೊಡಿಸಿದ್ದೆ. ಕಾಗಿನೆಲೆ ಕನಕದಾಸರ ಕರ್ಮಭೂಮಿ, ಅವರು ಹೆಚ್ಚು ಕಾಲ ಕಾಗಿನೆಲೆಯಲ್ಲಿದ್ದರು ಹಾಗಾಗಿ ಅಲ್ಲಿಯೇ ಗುರುಪೀಠ ಸ್ಥಾಪನೆ ಮಾಡಬೇಕು ಎಂದು ಮಾಡಿದ್ದೆವು. ಕಾಗಿನೆಲೆ ಗುರುಪೀಠದ ಮೊದಲ ಸ್ವಾಮೀಜಿ ವೀರೇಂದ್ರ ಕೇಶವ ತಾರಕಾನಂದ ಸ್ವಾಮೀಜಿಗಳು. ಇವರೊಮ್ಮೆ ಸ್ವಾಮೀಜಿ ಆಗುವ ಮೊದಲು ಚುನಾವಣೆಗೆ ಸ್ಪರ್ಧೆ ಮಾಡಿದ್ದರು, ಅವರನ್ನು ಹರಿದ್ವಾರಕ್ಕೆ ಕಳಿಸಿ, ನಂತರ ಸ್ವಾಮೀಜಿ ಮಾಡಿದ್ದು. ಈಗ ಮುಖ್ಯ ಸ್ವಾಮೀಜಿ ನಿರಂಜನಾನಂದ ಸ್ವಾಮೀಜಿ ಅವರು. ಈಗ ಒಂದು ಟ್ರಸ್ಟ್ ಕೂಡ ಇದೆ, ನಾನು ಅದರ ಧರ್ಮದರ್ಶಿ ಆಗಿದ್ದೇನೆ. ಗುರುಪೀಠ ಸ್ಥಾಪನೆ ಆಗಿ 31 ವರ್ಷಗಳು ಕಳೆದಿದೆ. 535ನೇ ಕನಕ ಜಯಂತಿ ಈಗ ಆಚರಣೆ ಮಾಡಿದ್ದೇವೆ.

ಕನಕದಾಸರು ಬುದ್ಧ, ಬಸವಾದಿ ಶರಣರಂತೆ ಓರ್ವ ಮಹಾನ್‌ ದಾರ್ಶನಿಕರು. ಬಸವಾದಿ ಶರಣರು ಇವನಾರವ, ಇವನಾರವ, ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎಂದೆಣಿಸಯ್ಯ,ಎನ್ನ ಮನೆಮನಗನೆಂದಣಿಸಯ್ಯ ಎಂದು ಹೇಳಿದ್ದಾರೆ. ಕನಕದಾಸರು ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ, ಬಲ್ಲಿರಾ? ಎಂದು ಜಾತಿವಾದಿಗಳಿಗೆ ಪ್ರಶ್ನೆ ಮಾಡಿದ್ದಾರೆ.

ನಮ್ಮ ದೇಶದಲ್ಲಿ ಇನ್ನೂ ಜಾತಿ ವ್ಯವಸ್ಥೆ ಹೋಗಿಲ್ಲ. ಯಾವ ಜಾತಿಯೂ ಶ್ರೇಷ್ಠ, ಕನಿಷ್ಠ ಎಂದು ನಾವು ಮಾಡಿದ್ದಲ್ಲ, ಮನವಾದಿಗಳು ಮಾಡಿದ್ದು. ಅವಕಾಶ ಸಿಕ್ಕಿದ್ದರೆ ಎಲ್ಲರೂ ಶ್ರೇಷ್ಠ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟುತ್ತಿದ್ದರು. ವಿವೇಕಾನಂದರು ಹಿಂದುತ್ವ ಬೇರೆ, ಹಿಂದೂ ಧರ್ಮ ಬೇರೆ ಎಂದು ಹೇಳಿದ್ದಾರೆ. ಹಿಂದುತ್ವ ಎಂದರೆ ಮನುವಾದಿ ಧರ್ಮ. ಮನುವಾದಿಗಳು ಮತ್ತು ಪುರೋಹಿತಶಾಹಿಗಳು ನಮ್ಮ ಸಮಾಜಕ್ಕೆ ಶಾಪ ಎಂದು ಹೇಳಿದ್ದರು. ಇಂದು ವಿವೇಕಾನಂದರ ಜನ್ಮದಿನವನ್ನು ಯುವಜನೋತ್ಸವ ಎಂದು ಆಚರಣೆ ಮಾಡುತ್ತೇವೆ, ಅವರನ್ನು ಪೂಜಿಸುತ್ತೇವೆ ಆದರೆ ಅವರ ಮಾತುಗಳನ್ನು ಮುಚ್ಚಿಹಾಕಲು ನೋಡುತ್ತೇವೆ.

ಗಾಂಧಿ, ಅಂಬೇಡ್ಕರ್‌ ಅವರು ಆಶಯವೂ ಇದೆ ಆಗಿದೆ. ಶೋಷಿತ ಜನರು ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಬೇಕು ಎಂದು ಬಾಬಾ ಸಾಹೇಬರು ಹೇಳಿದ್ದರು. ಸ್ವಾತಂತ್ರ್ಯ ಬಂದಾಗ ದೇಶದ ಶಿಕ್ಷಿತರ ಪ್ರಮಾಣ 16% ಇತ್ತು, ಇನ್ನುಳಿದ 84% ಜನರನ್ನು ಶಿಕ್ಷಣದಿಂದ ದೂರ ಇಡಲಾಗಿತ್ತು. ಸಮಾಜದ ಮೇಲ್ವರ್ಗದ ಜನರು ಮಾತ್ರ ಶಿಕ್ಷಣ ಪಡೆಯಲು, ಆಸ್ತಿ ಗಳಿಸಲು, ಅದನ್ನು ಅನುಭವಿಸಲು ಅವಕಾಶ ಇತ್ತು. ಇದರ ಪರಿಣಾಮವಾಗಿ ಇಂದು ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಮುಂದುವರೆದುಕೊಂಡು ಹೋಗುತ್ತಿದೆ. ನಮ್ಮ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ, ಜಡತ್ವದಿಂದ ಕೂಡಿದೆ. ಎಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಗಳು ಇರುವುದಿಲ್ಲ ಅಲ್ಲಿಯವರೆಗೆ ಜಡತ್ವ ಇರುತ್ತದೆ. ಜಡತ್ವ ಇರುವವರೆಗೆ ಜಾತಿ ವ್ಯವಸ್ಥೆ ಹೀಗೆ ಇರುತ್ತದೆ. ಇದೇ ಕಾರಣಕ್ಕೆ ಅಂಬೇಡ್ಕರರು ಎಲ್ಲರೂ ಶಿಕ್ಷಣ ಪಡೆದುಕೊಂಡು, ಹೋರಾಟದ ಮೂಲಕ ನಿಮ್ಮ ಹಕ್ಕುಗಳನ್ನು ಪಡೆಯಿರಿ ಎಂದು ಹೇಳಿದ್ದರು. ಎಲ್ಲ ಶೂದ್ರ ವರ್ಗದ ಜನರಿಗೆ ಈ ಕರೆಯನ್ನು ನೀಡಿದ್ದರು. ಅದಕ್ಕೆ ನಾವು ಶಿಕ್ಷಣ, ಆರ್ಥಿಕ ಚಟುವಟಿಕೆಗಳು ಆರಂಭವಾಗುತ್ತದೆ ಎಂದು ಗುರುಪೀಠ ಸ್ಥಾಪನೆ ಮಾಡಿದ್ದು.

ಬಾಬಾ ಸಾಹೇಬ್‌ ಅಂಬೇಡ್ಕರರು ನವೆಂಬರ್‌ 25, 1949 ರಂದು ಸಂವಿಧಾನ ಸಭೆಯಲ್ಲಿ ಮಾಡಿರುವ ಭಾಷಣ ಒಂದು ಐತಿಹಾಸಿಕವಾದುದ್ದು. ಇದನ್ನು ಎಲ್ಲರೂ ಓದಬೇಕು. ಅವರು ತಮ್ಮ ಭಾಷಣದಲ್ಲಿ “ಸಂವಿಧಾನದ ಮೂಲಕ ನಾವು ಒಬ್ಬ ವ್ಯಕ್ತಿ, ಒಂದು ಮತ ಮತ್ತು ಒಂದು ಮೌಲ್ಯ ಎಂದು ಮಾಡಿದ್ದೇವೆ, ಆದರೆ ಇದೇ ವ್ಯವಸ್ಥೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಇಲ್ಲ. ಜನವರಿ 26, 1950 ನೇ ಇಸವಿಯಿಂದ ನಾವು ವೈರುಧ್ಯವಿರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ, ಇಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆ ಇದೆ. ಇದನ್ನು ಹೋಗಲಾಡಿಸಲು ಎಲ್ಲರೂ ಸೇರಿ ಪ್ರಯತ್ನ ಮಾಡಬೇಕು. ಈ ಕೆಲಸವನ್ನು ಮಾಡದೇ ಇದ್ದರೆ ಅಸಮಾನತೆಯಿಂದ ನರಳುವ ಜನರೇ ಪ್ರಜಾಪ್ರಭುತ್ವದ ಸೌಧವನ್ನು ದ್ವಂಸ ಮಾಡುತ್ತಾರೆ” ಎಂದಿದ್ದರು.

ನಮ್ಮ ಸ್ವಾಮೀಜಿಗಳು ವಸತಿ ಶಾಲೆಗಳನ್ನು ಸ್ಥಾಪನೆ ಮಾಡಿದ್ದಾರೆ, ಇದು ಇನ್ನೂ ಹೆಚ್ಚಾಗಬೇಕು. ನಾವು ಮಠ ಸ್ಥಾಪನೆ ಮಾಡಿದ್ದು ಬರೀ ಕುರುಬರಿಗೆ ಮಾತ್ರ ಅಲ್ಲ, ಎಲ್ಲಾ ಹಿಂದುಳಿದ ಜಾತಿಗಳಿಗೆ ಅಂತ ಮಠ ಸ್ಥಾಪನೆ ಮಾಡಿದ್ದು. ನಾನು ಮುಖ್ಯಮಂತ್ರಿಯಾಗಿರುವಾಗ ಕನಕ ಜಯಂತಿ, ಭಗೀರಥ ಜಯಂತಿ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ದೇವರ ದಾಸಿಮ್ಮಯ್ಯ, ಕೆಂಪೇಗೌಡ ಜಯಂತಿ, ಟಿಪ್ಪು ಜಯಂತಿ, ಅಂಬಿಗರ ಚೌಡಯ್ಯ ಜಯಂತಿ, ಸೇವಾಲಾಲ್‌ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಲು ಆರಂಭಿಸಿದ್ದು. ಬಸವಣ್ಣನವರ ಭಾವಚಿತ್ರವನ್ನು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಇಡುವಂತೆ ಆದೇಶ ಮಾಡಿದ್ದು ನಾನು. ಬಿಜಾಪುರದಲ್ಲಿರುವ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಿದ್ದು ನಾನು. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಿದ್ದು, ಕೆಂಪೇಗೌಡ ಪ್ರಾಧಿಕಾರ ರಚನೆ ಮಾಡಿದ್ದು ನಾನು. ಈಗ ನನ್ನನ್ನು ಬಿಟ್ಟು ಜಯಂತಿ ಆಚರಣೆ ಮಾಡುತ್ತಾರೆ, ಸಂತೋಷ ಮಾಡಿಕೊಳ್ಳಲಿ. ಈ ಎಲ್ಲಾ ಮಹನೀಯರ ಜಯಂತಿ ಆಚರಣೆ ಮಾಡಲು ಕಾರಣ ಇವರೆಲ್ಲರೂ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದ್ದಾರೆಂದು ಎಂದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ