ಕನ್ನಡ ಸುದ್ದಿ  /  ಕರ್ನಾಟಕ  /  Torch Light Parade: ಮೈಸೂರು ದಸರಾ ದೇದಿಪ್ಯಮಾನ ಬೆಳಕಲ್ಲಿ ಪಂಜಿನ ಕವಾಯತು ಆಕರ್ಷಣೆ: 350 ದ್ರೋಣ್‌ಗಳ ಚಮತ್ಕಾರ

Torch light parade: ಮೈಸೂರು ದಸರಾ ದೇದಿಪ್ಯಮಾನ ಬೆಳಕಲ್ಲಿ ಪಂಜಿನ ಕವಾಯತು ಆಕರ್ಷಣೆ: 350 ದ್ರೋಣ್‌ಗಳ ಚಮತ್ಕಾರ

Umesha Bhatta P H HT Kannada

Oct 24, 2023 10:55 PM IST

ಮೈಸೂರಿನ ದಸರಾ ಪಂಜಿನ ಕವಾಯಿತಿನ ವಿಶೇಷ ಮತ್ತೆ ಭೇಟಿಯಾಗೋಣ ಎನ್ನುವ ಬೆಳಕಿನ ಚಿತ್ತಾರದೊಂದಿಗೆ ಈ ವರ್ಷದ ದಸರೆಗೆ ವಿದಾಯ

    • Mysuru dasara torch light parade ಮೈಸೂರಿನ ದಸರಾದ ( Mysuru dasara) ಕೊನೆ ಕಾರ್ಯಕ್ರಮ ಪಂಜಿನ ಕವಾಯತು( torch light parade). ಅಲ್ಲಿ ಬರೀ ಸಾಹಸಗಳ ಪ್ರದರ್ಶನವೇ ಅಧಿಕ. ಅದರಲ್ಲೂ ಕರ್ನಾಟಕ ಪೊಲೀಸರು( Karnataka Police) ನಡೆಸಿಕೊಡುವ ಹಾಡು- ಬೆಳಕಿನ ಸಂಯೋಜನೆಯೇ ಪಂಜಿನ ಕವಾಯತು.
ಮೈಸೂರಿನ ದಸರಾ ಪಂಜಿನ ಕವಾಯಿತಿನ ವಿಶೇಷ ಮತ್ತೆ ಭೇಟಿಯಾಗೋಣ ಎನ್ನುವ ಬೆಳಕಿನ ಚಿತ್ತಾರದೊಂದಿಗೆ ಈ ವರ್ಷದ ದಸರೆಗೆ ವಿದಾಯ
ಮೈಸೂರಿನ ದಸರಾ ಪಂಜಿನ ಕವಾಯಿತಿನ ವಿಶೇಷ ಮತ್ತೆ ಭೇಟಿಯಾಗೋಣ ಎನ್ನುವ ಬೆಳಕಿನ ಚಿತ್ತಾರದೊಂದಿಗೆ ಈ ವರ್ಷದ ದಸರೆಗೆ ವಿದಾಯ

ಮೈಸೂರು: ಮೈಸೂರು ದಸರಾದ ಧಾರ್ಮಿಕ ಹಾಗೂ ಪರಂಪರೆ ಆಕರ್ಷಣೆಯ ಜಂಬೂ ಸವಾರಿ ಮುಗಿಯುತ್ತಿದ್ದಂತೆ ಆರಂಭವಾಗೋದು ಮೈ ನವಿರೇಳಿಸುವ ಪಂಜಿನ ಕವಾಯತು. ಅದರಲ್ಲೂ ಪೊಲೀಸ್‌ ಸಿಬ್ಬಂದಿ ಪಂಜು ಹಿಡಿದು ಮಾಡುವ ಬಗೆಬಗೆಯ ಕವಾಯತಿನ ಆ ಶಿಸ್ತಿನ ಹಾಗೂ ಮೈ ಜುಮ್‌ ಎನ್ನಿಸುವ ಪ್ರದರ್ಶನ ನೋಡುವುದೇ ಚಂದ.

ಟ್ರೆಂಡಿಂಗ್​ ಸುದ್ದಿ

Indian Railways: ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬೀದರ್‌ನ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ, ಯಾವ ರೈಲು, ಎಲ್ಲಿಯವರೆಗೆ

Bangalore News: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ವೇಗವಾಗಿ ವಾಹನ ಚಾಲನೆ ಮಾಡಿದರೆ ದಂಡ ಕಟ್ಟ ಬೇಕಾದೀತು, ಹುಷಾರು

ನಮ್ಮಲ್ಲಿ ಒಳಜಗಳ ಇಲ್ಲ, ನಮ್ಮ ಸರ್ಕಾರ ಉರುಳಿಸಿಕೊಳ್ಳಲು ಯಾರಿಂದಲೂ ಆಗೋಲ್ಲ: ಸಿಎಂ ಸಿದ್ದರಾಮಯ್ಯ

Hassan Scandal: 6 ದಿನ ಜೈಲು ವಾಸದ ನಂತರ ಜಾಮೀನಿನ ಮೇಲೆ ರೇವಣ್ಣ ಬಿಡುಗಡೆ

ಜತೆಗೆ ಸೇನಾ ತಂಡದ ಸಾಹಸ ಪ್ರದರ್ಶನ, ಅಶ್ವರೋಹಿ ಪಡೆಯ ತಂಡದ ಪ್ರದರ್ಶನಗಳು ಕೂಡ ಅಷ್ಟೇ ರೋಚಕ. ಹೊಸದಾಗಿ ಒಂದು ವರ್ಷದಿಂದ ಸೇರ್ಪಡೆಯಾಗಿರುವ ದ್ರೋಣ್‌ ಶೋ ಕೂಡ ಮೆರಗು ನೀಡಿತು, ಕಲಾವಿದರ ನೃತ್ಯಗಳು, ಲೇಸರ್‌ ಶೋ ಕೂಡ ಪಂಜಿನ ಕವಾಯಿತಿನ ಆಕರ್ಷಣೆ.

ಹಾಡು ಬೆಳಕಿನ ಸಂಯೋಜನೆ

ದೇದೀಪ್ಯಮಾನವಾಗಿ ಉರಿಯುವ ಕಂದೀಲು ಹಿಡಿದು ಪೊಲೀಸರು ತೋರುವ ಈ ಪಂಜಿನ ಕವಾಯಿತಿಗೆ ಸುಧೀರ್ಘ ಇತಿಹಾಸವಿದೆ. ಆಗಿನಿಂದಲೂ ಒಂದಿಲ್ಲೊಂದು ಭಿನ್ನ ಪ್ರದರ್ಶನದೊಂದಿಗೆ ಚಿತ್ತಾರ ಮೂಡಿಸುತ್ತಾರೆ ಪೊಲೀಸರು

ಬೆಂಗಳೂರಿನ ಥಣಿ ಸಂದ್ರದ ಮೀಸಲು ಪಡೆಯ ಪೊಲೀಸ್‌ ಸಿಬ್ಬಂದಿ ಈ ಬಾರಿಯ ಪಂಜಿನ ಕವಾಯಿತಿನಲ್ಲಿ ಎರಡೂ ಕೈಗಳಲ್ಲಿ ಪಂಜು ಹಿಡಿದು ಹೆಜ್ಜೆ ಹಾಕುತ್ತಾ ಬಂದರು. ಸುಮಾರು ಒಂದು ಗಂಟೆ ಕಾಲ ಅವರು ಹದಿನೈದಕ್ಕೂ ಹೆಚ್ಚು ಕನ್ನಡ, ಹಿಂದಿ ಹಾಡುಗಳ ಸಂಗೀತಕ್ಕೆ ಪಂಜು ಹಿಡಿದು ನೀಡಿದ ಪ್ರದರ್ಶನ ಗಮನ ಸೆಳೆಯಿತು.

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಹಾಡು, ಒಂದು ಗಂಡು ಹೆಣ್ಣು ಸೃಷ್ಟಿಯ ಕಣ್ಣು, ಸಂತೋಷಕೆ, ಸಂತೋಷಕೆ ಹಿನ್ನೆಲೆಯ ಸಂಗೀತದಲ್ಲಿ ಪಂಜಿನಿಂದ ಎಲ್ಲರನ್ನೂ ಹೆರಿಟೇಜ್‌ ನಗರಕ್ಕೆ ಸ್ವಾಗತ ಎನ್ನುವ ಅಕ್ಷರ ಸೃಷ್ಟಿಸಿದರು.

ಇದಾಗುತ್ತಲೇ ಈ ಶ್ಯಾಮ್‌ ಮಸ್ತಾನಿ ಎನ್ನು ಹಿಂದಿನ ಹಾಡು ನುಡಿಸಿದಾಗ ಸೃಷ್ಟಿಸಿದ್ದು ಕರ್ನಾಟಕ ಪೊಲೀಸ್‌ ಎನ್ನುವ ಚಿತ್ತಾರ. ಕಾಣದಂತೆ ಮಾಯವಾದನು ಹಾಡಿಗೆ ಸಾಲುಗಳಲ್ಲಿ ಹೆಜ್ಜೆ ಹಾಕುತ್ತಾ ಸಿಬ್ಬಂದಿ ಬಗೆಬಗೆಯ ಪ್ರದರ್ಶನ ಕವಾಯತು ಪ್ರದರ್ಶನ ಮಾಡಿದರು. ಇದಕ್ಕೆ ಜೀನಾ ಯಹಾ ಮರ್ನಾ ಯಹಾ ಎನ್ನುವ ಜನಪ್ರಿಯ ಹಿಂದಿ ಹಾಡಿಗೆ ಅತ್ಯಾಕರ್ಷಕ ಕವಾಯತು ಪ್ರದರ್ಶನ ತೋರಿದರು. ಇದಂತೂ ಬೆಳಕಿನ ಭಿನ್ನ ಲೋಕವನ್ನೇ ಸೃಷ್ಟಿಸಿತು. ಹಾಡಿನ ಜತೆಗೆ ಬೆಳಕು ಎರಡರ ಸಂಯೋಜನೆಯಂತೂ ಆಕರ್ಷಕವಾಗಿತ್ತು.

ಟುವ್ವಿ ಟುವ್ಟಿ ಟುವ್ವಿ ಹಾಡಿಗೆ ಭಿನ್ನ ಚಿತ್ತಾರ ಕಂಡು ಬಂದಿತು. ನಾನೂ ನೀನು ಒಂದಾದ ಮೇಲೆ ಹಾಡಿಗೂ ದೀಪದ ಬೆಳಕಿನ ಲೋಕವನ್ನೇ ಸೃಷ್ಟಿಸಿದರು ಪೊಲೀಸ್‌ ಸಿಬ್ಬಂದಿ. ಏಕ್‌ ದೋ ತೀನ್‌ ಚಾರ್‌ ಹಿಂದಿನ ಹಾಡಿಗೆ ಹ್ಯಾಪಿ ದಸರಾ-413 ಎನ್ನುವ ಚಿತ್ತಾರ ಮೂಡಿಸಲಾಯಿತು.

ನಾನು ಯಾರು ಯಾವ ಊರು ಇಲ್ಲಿಯಾರೂ ಬಲ್ಲೋರಿಲ್ಲ, ನೋಡು ನೋಡು ಕಣ್ಣಾರ ನಿಂತಿಹಳು ಹಾಡಿನ ಹಿನ್ನೆಲೆಯಲ್ಲಿ ಜೈ ಚಾಮುಂಡಿ, ಮತ್ತೆ ಭೇಟಿಯಾಗೋಣ ಎನ್ನುವ ಚಿತ್ತಾರ ಮೂಡಿಸಲಾಯಿತು. ಜೋ ಶಹೀದ್‌ ಹುವೇ ಹೈ ಉನ್ಕೋ ಜರಾ ಯಾದ್‌ ಕರೋ ಖುರ್ಬಾನಿ ಹಾಡಿಗೆ ಜೈ ಹಿಂದ್‌ ಹಿನ್ನೆಲೆಯ ಚಿತ್ತಾರ. ಒಂದಕ್ಕೊಂದು ಪ್ರದರ್ಶನವೂ ಇಡೀ ತಂಡದ ತಾಲೀಮು, ಸಂಯೋಜನೆಯ ಹಾಗೂ ಪ್ರತಿಭೆಯ ಸಂಗಮದಂತೆಯೇ ಇತ್ತು.

ದ್ರೋಣ್‌ ಚಮತ್ಕಾರ

ಈ ಬಾರಿಯೂ ದ್ರೋಣ್‌ ಬಳಸಿ ಬಗೆಬಗೆಯ ಬೆಳಕಿನ ಚಮತ್ಕಾರವನ್ನು ಪ್ರದರ್ಶಿಸಲಾಯಿತು. ಬೆಂಗಳೂರಿನ ಬೋಟ್‌ಲ್ಯಾಬ್‌ ಡೈನಾಮಿಕ್ಸ್( BotLab Dynamics)‌ ತಂಡವು ಅರ್ಧಗಂಟೆಗೂ ಹೆಚ್ಚು ಕಾಲ ಜನರು ಸತತ 30 ನಿಮಿಷಗಳ ಕಾಲ ಡ್ರೋನ್ ಸೃಷ್ಟಿಸಿದ ಕಲಾಕೃತಿಗಳನ್ನು ವೀಕ್ಷಿಸಿ ಖುಷಿಪಟ್ಟರು. ದಸರೆಯಲ್ಲಿ ಈ ವರ್ಷವೂಆಯೋಜಿಸಿದ್ದ ಡ್ರೋನ್ ಲೈಟ್ ಶೋ ಪಂಜಿನ ಕವಾಯತಿಗೆ ಮತ್ತಷ್ಟು ಮೆರುಗು ಹೆಚ್ಚಿಸಿತು. ಹೊಸ ಬೆಳಕಿನ ಲೋಕವೇ ಇಡೀ ಮೈದಾನದಲ್ಲಿ ತುಂಬಿಕೊಂಡಿತ್ತು. ಹಿಂದಿನ ವರ್ಷ 200 ದ್ರೋಣ್‌ ಬಳಸಿದ್ದರೆ ಈ ಬಾರಿ 350 ದ್ರೋಣ್‌ ಬಳಸಿ ಬಗೆಬಗೆಯ ಚಮತ್ಕಾರ ಪ್ರದರ್ಶಿಸಲಾಯಿತು. ಬೆಟ್ಟದ ನಂದಿ, ಜಯಚಾಮರಾಜ ಒಡೆಯರ್‌, ಗಂಡಭೇರುಂಡ, ಅಂಬಾರಿಯಲ್ಲಿ ಹೊತ್ತ ಜಂಬೂಸವಾರಿಯ ಅಭಿಮನ್ಯುವಿನ ಚಿತ್ರಗಳನ್ನು ದ್ರೋಣ್‌ನಲ್ಲಿ ಬಿಡಿಸಲಾಯಿತು. ಕೊನೆಗೆ ಮುಂದಿನ ವರ್ಷ ಭೇಟಿಯಾಗೋಣ ಕೂಡ ಪ್ರದರ್ಶನಗೊಂಡಿತು,

ಸೇನಾ ತಂಡದ ಸಾಹಸ

ಇದರೊಟ್ಟಿಗೆ ಈ ಬಾರಿಯೂ ಸೇನಾ ತಂಡದ ಬೈಕ್‌ ಸಾಹಸದ ಪ್ರದರ್ಶನಗಳು ಗಮನ ಸೆಳೆದವು. ಬೈಕ್‌ಗಳಲ್ಲಿ ಕ್ರಾಸ್‌ ಮಾಡುತ್ತಾ, ಒಬ್ಬರ ಮೇಲೆ ಒಬ್ಬರು ನಿಂತುಕೊಂಡು ನಡೆಸಿಕೊಟ್ಟ ಸಾಹಸ ಪ್ರದರ್ಶನಗಳಂತೂ ಗಮನ ಸೆಳೆದವು. ಬೆಂಕಿಯಲ್ಲಿ ನುಗ್ಗುವ ಪ್ರದರ್ಶನವೂ ರೋಮಾಂಚಕವಾಗಿತ್ತು. ಇಪ್ಪತ್ತರಿಂದ ಮೂವತ್ತು ಮಂದಿ ನಿಂತು ಬೈಕ್‌ನಲ್ಲಿ ಸಂಚರಿಸುತ್ತಾ ಮಾಡಿದ ಸಾಹಸಗಳು ಆಕರ್ಷಕವಾಗಿದ್ದವು. ಜೋಕರ್‌ ನ ಸಾಹಸ ಪ್ರದರ್ಶನಗಳೂ ನಗು ಉಕ್ಕಿಸಿದವು. ಮೂವತ್ತು ನಿಮಿಷಕ್ಕೂ ಹೆಚ್ಚು ಸಮಯ ಸೇನಾ ತಂಡದ ಪ್ರದರ್ಶನ ಗಮನ ಸೆಳೆಯಿತು.

ಹಳೆ ಹೊಸ ಹಾಡುಗಳ ಸಂಗಮ

ಇನ್ನು ಕಲಾವಿದರು ಹಲವು ಕನ್ನಡದ ಹಾಡುಗಳಿಗೆ ಹೆಜ್ಜೆ ಹಾಕಿದರು. ಹಳೆಯ ಹಾಡುಗಳಿಂದ ಈಗಿನ ಹಾಡುಗಳಿಗೆ ಜೀವ ತುಂಬಿದರು. ಅದರಲ್ಲೂ ಕನ್ನಡದ ಅಭಿಮಾನ ಉಕ್ಕಿಸುವ ಹಲವು ಹಾಡುಗಳಿದ್ದವು. ನೂರಕ್ಕೂ ಹೆಚ್ಚು ಕಲಾವಿದರ ಸಮೂಹ ನೃತ್ಯಗಳು ಮೆರಗು ತಂದವು.

ಮೈಸೂರಿನ ಅಶ್ವಾರೋಹಿ ಪಡೆಯಿಂದ ಸಾಹಸ ಪ್ರದರ್ಶನವೂ ನಡೆಯಿತು. ಟೆಂಟ್‌ ಪೆಗ್ಗಿಂಗ್‌ ಸಹಿತ ನಾನಾ ಪ್ರದರ್ಶನಗಳನ್ನು ಅಶ್ವಾರೋಹಿ ಪಡೆಯವರು ನಡಸಿಕೊಟ್ಟರು.

ರಾಜ್ಯಪಾಲರಿಗೆ ಸ್ವಾಗತ

ಪಂಜಿನ ಕವಾಯತಿಗೆ ಆಗಮಿಸಿದ ರಾಜ್ಯಪಾಲ ಥಾವರ್‌ಚಂದ್‌ ಗಹ್ಲೋಟ್‌ ಅವರು ಪೊಲೀಸ್‌ ಪಡೆಗಳ ವಂದನೆ ಸ್ವೀಕರಿಸಿದರು. ಪರೇಡ್‌ ಮಾಸ್ಟರ್‌ ಅವರು ರಾಜ್ಯಪಾಲರನ್ನು ಕರೆದುಕೊಂಡು ಹೋಗಿ ತಮ್ಮ ತಂಡಗಳ ಪರಿಚಯ ಮಾಡಿಕೊಟ್ಟರು. ಅಲ್ಲಿಂದ ಒಂದು ಸುತ್ತು ಹಾಕಿ ಬಂದ ರಾಜ್ಯಪಾಲರು ಪ್ರತಿ ತಂಡದ ಪಥಸಂಚಲನದೊಂದಿಗೆ ವಂದನೆ ಸ್ವೀಕರಿಸಿದರು. ಅದರಲ್ಲಿ ಪೊಲೀಸ್‌, ಸ್ಕೌಟ್ಸ್‌ ಮತ್ತು ಗೈಡ್ಸ್‌, ಎನ್‌ಸಿಸಿ ತಂಡಗಳೂ ಇದ್ದವು, ಪೊಲೀಸ್‌ ಬ್ಯಾಂಡ್‌ ಕೂಡ ಗೌರವ ಸಲ್ಲಿಸಿತು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಚಿವ ವೆಂಕಟೇಶ್‌, ಶಿವರಾಜ ತಂಗಡಗಿ ಸಹಿತ ಹಲವರು ಈ ವೇಳೆ ಹಾಜರಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ