Hassan Scandal: 6 ದಿನ ಜೈಲು ವಾಸದ ನಂತರ ಜಾಮೀನಿನ ಮೇಲೆ ರೇವಣ್ಣ ಬಿಡುಗಡೆ
May 14, 2024 04:42 PM IST
ಜೈಲಿನಿಂದ ಬಿಡುಗಡೆಯಾದ ಮಾಜಿ ಸಚಿವ ಎಚ್.ಡಿ.ರೇವಣ್ಣ
- ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಬೆಂಗಳೂರಿನ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಹಾಗೂ ಪೆನ್‌ಡ್ರೈವ್ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರ ಅಪಹರಣಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಹತ್ತು ದಿನದ ಹಿಂದೆ ಬಂಧನಕ್ಕೆ ಒಳಗಾಗಿ ಆರು ದಿನ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಸಂಜೆ ನೀಡಿದ್ದ ಷರತ್ತು ಬದ್ದ ಜಾಮೀನಿನ ಹಿನ್ನೆಲೆಯಲ್ಲಿ ರೇವಣ್ಣ ಅವರನ್ನು ಬಿಡುಗಡೆ ಮಾಡಲಾಯಿತು. ಅವರ ಕುಟುಂಬದವರು ರೇವಣ್ಣ ಅವರನ್ನು ಕರೆದೊಯ್ದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಜೈಲು ಆವರಣದಲ್ಲಿ ಸೇರಿದ್ದರು.
ಸೋಮವಾರವೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಅವರು ಜಾಮೀನು ಮಂಜೂರು ಮಾಡಿದ್ದ ಆದೇಶದ ಪ್ರತಿಯನ್ನು ಕಾರಾಗೃಹ ಇಲಾಖೆಗೆ ಸಲ್ಲಿಸಿದ ನಂತರ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ರೇವಣ್ಣ ಅವರನ್ನು ಬಿಡುಗಡೆ ಮಾಡಲಾಯಿತು. ಮಧ್ಯಾಹ್ನದ ಹೊತ್ತಿಗೆ ಅವರು ಜೈಲಿನಿಂದ ಹೊರಕ್ಕೆ ಬಂದರು.
ಆರು ದಿನಗಳ ಕಾಲ ಜೈಲಿನಲ್ಲೇ ಇದ್ದ ರೇವಣ್ಣ ಅವರು ಜಾಮೀನು ದೊರೆತಿದ್ದರಿಂದ ಸೋಮವಾರ ಸಂಜೆಯಿಂದಲೇ ಕೊಂಚ ಲವಲವಿಕೆಯಿಂದ ಇದ್ದರು. ರಾತ್ರಿಯೂ ಊಟ ಮಾಡಿದರು. ಮಂಗಳವಾರ ಬೆಳಿಗ್ಗೆಯೂ ತಿಂಡಿಯನ್ನು ಸಹಜವಾಗಿಯೇ ಸೇವಿಸಿದರು. ಮಂಗಳವಾರ ಬೆಳಿಗ್ಗೆ ತಮ್ಮನ್ನು ಭೇಟಿಯಾಗಲು ಬಂದಿದ್ದ ಕುಟುಂಬದವರೊಂದಿಗೆ ರೇವಣ್ಣ ಕೆಲಹೊತ್ತು ಮಾತುಕತೆ ನಡೆಸಿದರು.
ರೇವಣ್ಣ ಅವರು ಜೈಲಿನಿಂದ ಹೊರಬರುತ್ತಿದ್ದಂತೆ ಹಾಸನ, ಹೊಳೆ ನರಸೀಪುರ ಸೇರಿದಂತೆ ನಾನಾ ಭಾಗಗಳಿಂದ ಆಗಮಿಸಿದ್ದ ಜೆಡಿಎಸ್ ಕಾರ್ಯಕರ್ತರು ಅವರನ್ನು ಸ್ವಾಗತಿಸಲು ಮುಂದಾದರು. ಈ ವೇಳೆ ತಳ್ಳಾಟ ನೂಕಾಟ ಜೋರಾಗಿತ್ತು. ಕೊನೆಗೆ ಅಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಕಾರ್ಯಕರ್ತರನ್ನು ಚದುರಿಸಿ ರೇವಣ್ಣ ಅವರು ಕಾರು ಏರಲು ಅವಕಾಶ ಮಾಡಿಕೊಟ್ಟರು.
ರೇವಣ್ಣ ಅವರಿಗೆ ಜಾಮೀನು ಸಿಗುತ್ತಿದ್ದಂತೆ ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅಭಿಮಾನಿಗಳು ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಸಿ ಈಡುಗಾಯಿ ಒಡೆದಿದ್ದರು.
ಮಾಜಿ ಸಚಿವ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಹದಿನೇಳು ದಿನದ ಹಿಂದೆ ಹೊಳೆ ನರಸೀಪುರದಲ್ಲಿ ದಾಖಲಾಗಿತ್ತು. ಆನಂತರ ಇದೇ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯನ್ನು ಮೈಸೂರು ಜಿಲ್ಲೆ ಕೆಆರ್‌ನಗರದಿಂದ ಅಪಹರಿಸಲು ರೇವಣ್ಣ ಕುಮ್ಮಕ್ಕು ನೀಡಿದ್ದರು ಎಂದು ಪ್ರಕರಣ ದಾಖಲಿಸಲಾಗಿತ್ತು. ಇದೇ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಆರು ದಿನ ಎಸ್ ಐಟಿ ವಶದಲ್ಲಿದ್ದ ಅವರ ಜಾಮೀನು ತಿರಸ್ಕೃತಗೊಂಡಿತ್ತು. ಆನಂತರ ಆರು ದಿನ ಜೈಲಿನಲ್ಲಿದ್ದರು. ಈ ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದರಿಂದ ಈಗ ಬಿಡುಗಡೆಯಾಗಿದೆ.
ದೇವೇಗೌಡರ ಭೇಟಿ
ಜೈಲಿನಿಂದ ಬಿಡುಗಡೆಯಾದ ಬಳಿಕ ನೇರವಾಗಿ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸಕ್ಕೆ ರೇವಣ್ಣ ತೆರಳಿ ತಂದೆ ತಾಯಿ ಆಶಿರ್ವಾದ ಪಡೆದರು. ಈ ವೇಳೆ ಮನೆಯವರು ರೇವಣ್ಣ ಅವರನ್ನು ಆರತಿ ಎತ್ತಿ ಬರ ಮಾಡಿಕೊಂಡರು.
ಹಾಸನಕ್ಕೆ ಭೇಟಿ
ಹಾಸನ ಹಾಗೂ ಹೊಳೆ ನರಸೀಪುರಕ್ಕೆ ರೇವಣ್ಣ ಅವರು ಬುಧವಾರ ಭೇಟಿ ಮಾಡಲಿದ್ದಾರೆ. ಎರಡೂ ಕಡೆ ಅವರನ್ನು ಸ್ವಾಗತಿಲು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)