ಕನ್ನಡ ಸುದ್ದಿ  /  ಕರ್ನಾಟಕ  /  ಉತ್ತರ ಕನ್ನಡದಲ್ಲಿ ಗರ್ಭಿಣಿಯರನ್ನು ದತ್ತು ಪಡೆದ ಅಧಿಕಾರಿಗಳು; ಇಲ್ಲಿದೆ ಸಂಪೂರ್ಣ ಮಾಹಿತಿ

ಉತ್ತರ ಕನ್ನಡದಲ್ಲಿ ಗರ್ಭಿಣಿಯರನ್ನು ದತ್ತು ಪಡೆದ ಅಧಿಕಾರಿಗಳು; ಇಲ್ಲಿದೆ ಸಂಪೂರ್ಣ ಮಾಹಿತಿ

HT Kannada Desk HT Kannada

Oct 26, 2023 12:55 PM IST

ಗರ್ಭಿಣಿಯರ ದತ್ತು (ಪ್ರಾತಿನಿಧಿಕ ಚಿತ್ರ)

    • Uttara Kannada News: ಉತ್ತರಕನ್ನಡ ಜಿಲ್ಲೆಯಲ್ಲಿ ಗರ್ಭಿಣಿಯರ ಆರೋಗ್ಯವನ್ನು  ಕಾಪಾಡುವ ದೃಷ್ಠಿಯಿಂದ ಗರ್ಭಿಣಿಯರ ಸದರಿ ಸಮಯದಲ್ಲಿ ಸಿಗುವ ಸೇವೆಗಳನ್ನು ಅನುಸರಣೆ ಮಾಡಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ದತ್ತು ನೀಡುವ ರಾಜ್ಯದಲ್ಲೇ ಅಪರೂಪದ ಹಾಗೂ ವಿನೂತನ ಯೋಜನೆಯನ್ನು ಜಿಲ್ಲಾಧಿಕಾರಿ ಅವರ ವಿಶೇಷ ಮುತುವರ್ಜಿಯ ಮೇರೆಗೆ ಹಮ್ಮಿಕೊಳ್ಳಲಾಗಿದೆ.
ಗರ್ಭಿಣಿಯರ ದತ್ತು (ಪ್ರಾತಿನಿಧಿಕ ಚಿತ್ರ)
ಗರ್ಭಿಣಿಯರ ದತ್ತು (ಪ್ರಾತಿನಿಧಿಕ ಚಿತ್ರ)

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಮಲ್ಲಾಪುರ ಗ್ರಾಮದ 3 ತಿಂಗಳ ಗರ್ಭಿಣಿ ಮಹಿಳೆ ಕೋಮಲ್ ಎಂದಿನಂತೆ ಮಧ್ಯಾಹ್ನ 4 ಗಂಟೆಗೆ ಮನೆ ಕೆಲಸದಲ್ಲಿ ತೊಡಗಿದ್ದರು, ಆ ಸಮಯದಲ್ಲಿ ಅವರ ಮೊಬೈಲ್ ಬಂದ ಕರೆ ಅವರನ್ನು ಆಶ್ಚರ್ಯಕ್ಕೀಡು ಮಾಡಿತ್ತು.. ಆ ಕಡೆಯಿಂದ ದೂರವಾಣಿ ಕರೆ ಮಾಡಿದವರು, ಈ ತಮ್ಮ ಆರೋಗ್ಯ ಹೇಗಿದೆ? ವೈದ್ಯರ ಬಳಿ ಹೋಗಿದ್ದೀರಾ? ವೈದ್ಯರು ಏನು ಹೇಳಿದರು? ಕಾಲಕಾಲಕ್ಕೆ ಔಷಧಿ ತೆಗದುಕೊಳ್ಳುತ್ತಿದ್ದಿರಾ ಎಂದು ವಾತ್ಸಲ್ಯದಿಂದ ವಿಚಾರಿಸುತ್ತಿದ್ದರು, ಆ ಆತ್ಮೀಯತೆಗೆ ಸೋತು ಎಲ್ಲಾ ಪ್ರಶ್ನೆಗೆ ಉತ್ತರಿಸಿದ ಕೋಮಲ್ ಕೊನೆಗೆ ತಾವು ಯಾರು ಮೇಡಮ್ ಎಂದು ಕೇಳಿದಾಗ ಅವರಿಂದ ಉತ್ತರ ಕೇಳಿದ ನಂತರ ಆತ್ಯಾಶ್ಚರ್ಯದಿಂದ ತಮ್ಮ ಕಿವಿಗಳನ್ನು ತಾವೇ ನಂಬದಾದರು, ಏಕೆಂದರೆ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದು ಸ್ವತಃ ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ..

ಟ್ರೆಂಡಿಂಗ್​ ಸುದ್ದಿ

Comedk Exam 2024: ಇಂದು ಕಾಮೆಡ್-ಕೆ ಆನ್‌ಲೈನ್ ಪರೀಕ್ಷೆ; ಪ್ರವೇಶ ಪತ್ರದ ಲಿಂಕ್, ಪರೀಕ್ಷಾ ಸಮಯ ಸೇರಿ ಸಂಪೂರ್ಣ ಮಾಹಿತಿ

ಕರ್ನಾಟಕ ಹವಾಮಾನ ಮೇ 12: ರಾಜಧಾನಿ ಬೆಂಗಳೂರು ಸೇರಿ ಇಂದು ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆ

Karnataka Rains: ಹುಬ್ಬಳ್ಳಿ ಧಾರವಾಡ, ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ, ಕೊಚ್ಚಿ ಹೋದ ಕಾರುಗಳು

Bangalore News: ಮಳೆ ತಾರದ ವಿದೇಶಿ ಮರ ಬೆಂಗಳೂರಲ್ಲಿ ಬೆಳೆಸುವುದಕ್ಕೆ ವಿರೋಧ, ದೇಸಿ ಮರಕ್ಕೆ ಒತ್ತು ನೀಡಲು ಸಲಹೆ

ಉತ್ತರಕನ್ನಡ ಜಿಲ್ಲೆಯಲ್ಲಿ ಗರ್ಭಿಣಿಯರ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡುವ ದೃಷ್ಠಿಯಿಂದ 2023ರ ಸೆಪ್ಟೆಂಬರ್ ತಿಂಗಳಲ್ಲಿ ಆರೋಗ್ಯ ಇಲಾಖೆಯ ಆರ್.ಸಿ.ಹೆಚ್. ತಂತ್ರಾಂಶದಲ್ಲಿ ದಾಖಲಾದ ಗರ್ಭಿಣಿಯರ ಸದರಿ ಸಮಯದಲ್ಲಿ ಸಿಗುವ ಸೇವೆಗಳನ್ನು ಅನುಸರಣೆ ಮಾಡಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ದತ್ತು ನೀಡುವ ರಾಜ್ಯದಲ್ಲೇ ಅಪರೂಪದ ಹಾಗೂ ವಿನೂತನ ಯೋಜನೆಯನ್ನು ಜಿಲ್ಲಾಧಿಕಾರಿ ಅವರ ವಿಶೇಷ ಮುತುವರ್ಜಿಯ ಮೇರೆಗೆ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಜಿಲ್ಲಾಧಿಕಾರಿ ಅವರು ತಮಗೆ ದತ್ತು ನಿಯೋಜಿಸಿರುವ ಮಹಿಳೆಯ ಆರೋಗ್ಯ ವಿಚಾರಿಸುವ ಮೂಲಕ ಯೋಜನೆಗೆ ಮುನ್ನುಡಿ ಬರೆದರು.

ಜಿಲ್ಲೆಯಲ್ಲಿನ ಗರ್ಭಿಣಿ ಮಹಿಳೆಯರು ಸುರಕ್ಷಿತವಾಗಿ, ಆರೋಗ್ಯವಂತ ಶಿಶುವಿಗೆ ಜನ್ಮ ನೀಡಿ, ಮಗುವಿಗೆ 2 ವರ್ಷದವರೆಗೆ ಅಗತ್ಯ ಎಲ್ಲಾ ಲಸಿಕೆಗಳನ್ನು ಪಡೆಯುವವರೆಗೂ ತಾಯಿ ಮತ್ತು ಮಗುವಿನ ಯೋಗಕ್ಷೇಮ ವಿಚಾರಿಸಲು ಜಿಲ್ಲೆಯ ಎಲ್ಲಾ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ದತ್ತು ನೀಡುವ ಕುರಿತಂತೆ ಪ್ರತಿಯೊಬ್ಬ ಅಧಿಕಾರಿಗೆ ಜವಾಬ್ದಾರಿಯನ್ನು ನಿಗದಿಪಡಿಸಲಾಗಿದೆ. ದತ್ತು ಪಡೆದ ಸಂಬಂಧಪಟ್ಟ ಅಧಿಕಾರಿಗಳು ತಮಗೆ ದತ್ತು ವಹಿಸಲಾದ ಗರ್ಭಿಣಿ ಮಹಿಳೆಯರಿಗೆ ವಿವಿಧ ಆರೋಗ್ಯ ಸೇವೆಗಳನ್ನು ಸಕಾಲದಲ್ಲಿ ಪಡೆದಿದ್ದಾರೆಯೇ ಎಂದು ದೂರವಾಣಿ ಮುಖಾಂತರ ಸಂಪರ್ಕಿಸಿ ಖಚಿತಪಡಿಸಿಕೊಳ್ಳುವುದು ಹಾಗೂ ಸೇವೆಗಳನ್ನು ಪಡೆಯದೇ ಇದ್ದಲ್ಲಿ ಸಂಬಂಧಿಸಿದ ನೋಡೆಲ್ ಅಧಿಕಾರಿಗಳನ್ನು ಅಥವಾ ತಾಲೂಕು ವೈದ್ಯಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸದರಿಯವರಿಗೆ ಸಕಾಲದಲ್ಲಿ ಸೇವೆಗಳು ದೊರಕುವಂತೆ ಮಾಡುವ ಜವಾಬ್ದಾರಿ ಹೊಂದಿದ್ದಾರೆ.

ದತ್ತು ಪಡೆದ ಅಧಿಕಾರಿಗಳು, ಗರ್ಭಿಣಿ ಮಹಿಳೆಗೆ ತಾಯಿ ಕಾರ್ಡ ನೀಡಲಾಗಿದೆಯೇ? ಗರ್ಭಿಣಿ ಆದ 12 ವಾರದೊಳಗೆ ದಾಖಲಾತಿ ಮಾಡಲಾಗಿದೆಯೇ, ಹೆರಿಗೆಯಾಗುವ ಅಂದಾಜು ದಿನಾಂಕ (ಇ.ಡಿ.ಡಿ)ಯನ್ನು ತಿಳಿಸಲಾಗಿದೆಯೇ, ಗರ್ಭಿಣಿ ದಾಖಲಾತಿ ಆದ ಕೂಡಲೇ ಟಿ.ಡಿ. ಲಸಿಕೆ ನೀಡಲಾಗಿದೆಯೇ?, ಇದು ಮೊದಲನೇ ಅಥವಾ ಎಷ್ಟನೇ ಗರ್ಭಧಾರಣೆ ಎಂದು ತಿಳಿದುಕೊಳ್ಳುವುದು. ಅಥವಾ ಅದಕ್ಕಿಂತ ಹೆಚ್ಚಿನ ಗರ್ಭಧಾರಣೆ ಆಗಿದ್ದಲ್ಲಿ ಕೊನೆಯ ಮಗುವಿನ ವಯಸ್ಸು ಎಷ್ಟು? 2 ಅಥವಾ ಅದಕ್ಕಿಂತ ಹೆಚ್ಚಿನ ಗರ್ಭಧಾರಣೆ ಆಗಿದ್ದಲ್ಲಿ ಕೊನೆಯ ಗರ್ಭಧಾರಣೆಯ ಸಂಪೂರ್ಣ ವಿವರವನ್ನು ಕೇಳುವುದು, ಮೊದಲನೇ ತ್ರೈಮಾಸಿಕದಲ್ಲಿ ಸ್ಕ್ಯಾನಿಂಗ್ ಆಗಿದೆಯೇ? ತೊಡಕಿನ ಗರ್ಭಾವಸ್ಥೆ ( High Risk Pregnancy) ಬಗ್ಗೆ ಮಾಹಿತಿಯನ್ನು ನೀಡಲಾಗಿದೆಯೇ ಎಂದು ವಿಚಾರಿಸಬೇಕು.

ತೊಡಕಿನ ಗರ್ಭಾವಸ್ಥೆಯ ಕಾರಣಗಳು (ಮಧುಮೇಹ, ಅಧಿಕ ರಕ್ತದ ಒತ್ತಡ, ತೀವ್ರತರ ರಕ್ತ ಹೀನತೆ, ಈ ಹಿಂದೆ ಸಿಜೇರಿಯನ್ ಶಸ್ತ್ರಚಿಕತ್ಸೆ ಒಳಗಾಗಿದ್ದರೆ, ಮೂರ್ಛೆ, ಅಸ್ತಮಾ ಇನ್ನಿತರ ರೋಗಗಳಿಂದ ಬಳಲುತ್ತಿದ್ದರೆ, 145 ಸೆ.ಮೀ ಕ್ಕಿಂತ ಕಡಿಮೆ ಎತ್ತರವಿದ್ದರೆ, ಅವಳಿ, ತ್ರಿವಳಿ ಭ್ರೂಣ ಇತ್ಯಾದಿ, ಭ್ರೂಣದ ಕುಂಠಿತ ಬೆಳವಣಿಗೆ ಸೋಂಕುಗಳಾದ ಹೆಚ್.ಐ.ವಿ, ಹೆಚ್.ಬಿ.ಎಸ್.ಏ.ಜಿ, ಸಿಫಿಲಿಸ್, ಇತ್ಯಾದಿ, ಭ್ರೂಣವು ಅಡ್ಡವಾಗಿರುವುದು, ಭ್ರೂಣದಲ್ಲಿ ನ್ಯೂನ್ಯತೆಗಳಿರುವುದು, ಥೈರಾಡ್ ಖಾಯಿಲೆಗಳು, 4 ಅಥವಾ ಅದಕ್ಕಿಂತ ಹೆಚ್ಚುಬಾರಿ ಗರ್ಭಿಣಿಯಾಗಿರುವುದು.) ರಕ್ತ ಪರೀಕ್ಷೆ ಮತ್ತು ಮೂತ್ರ ಪರೀಕ್ಷೆಗಳನ್ನ್ಷು ಮಾಡಿಸಲಾಗಿದೆಯೇ?, ರಕ್ತದೊತ್ತಡ ಪರೀಕ್ಷೆ ಮಾಡಲಾಗಿದೆಯೇ? ಆಗಿದ್ದಲ್ಲಿ ಏನಾದರೂ ತೊಂದರೆ ಇದೆಯೇ?, ಮಧುಮೇಹ ಪರೀಕ್ಷೆ ಆಗಿದೆಯೇ? ಆಗಿದ್ದಲ್ಲಿ ಏನಾದರೂ ತೊಂದರೆ ಇದೆಯೇ? ಎರಡನೇ ತ್ರೈಮಾಸಿಕದಲ್ಲಿ ಪುನಃ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ & ಸ್ಕ್ಯಾನಿಂಗ್ ಆಗಿದೆಯೇ? ತಿಂಗಳ ಒಳಗೆ Folic Acid 30 ಮಾತ್ರೆ ಹಾಗೂ 3 ತಿಂಗಳ ನಂತರ ಜಂತುಹುಳ ಮಾತ್ರೆ, IFA-180 & Calcium-360 ಮಾತ್ರೆಗಳನ್ನು ತೆಗೆದುಕೊಂಡ ಬಗ್ಗೆ ವಿಚಾರಿಸಬೇಕು.

ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ರಕ್ತ ಹೀನತೆ ಕಂಡು ಬರುತ್ತಿರುವುದಿಂದ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಅಥವಾ ಆಶಾ ಕಾರ್ಯಕರ್ತೆಯರು ಅಥವಾ ಅಂಗನವಾಡಿ ಕಾರ್ಯಕರ್ತೆಯರು ನೀಡಿದ ಮಾತ್ರೆಗಳನ್ನು ತಪ್ಪದೇ ಸೇವಿಸುವುದು. ಸುಸ್ತು ಮತ್ತು ಆಯಾಸ ಕಂಡು ಬಂದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆದಷ್ಟು ಬೇಗನೆ ಹೋಗಿ ಚಿಕಿತ್ಸೆ ಪಡೆಯುವುದು. 5 ತಿಂಗಳ ನಂತರ ನಿರಂತರ 15 ದಿನಕ್ಕೊಮ್ಮೆ ಬಿ.ಪಿ. ಪರೀಕ್ಷೆ ಮಾಡಿಸುಕೊಳ್ಳುವಂತೆ ತಿಳಿಸುವುದು. ಮೂರನೇ ತ್ರೈಮಾಸಿಕದಲ್ಲಿ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ ಹಾಗೂ ರಕ್ತದೊತ್ತಡ ಪರೀಕ್ಷೆ ಮಾಡಲಾಗಿದೆಯೇ? ಹೆರಿಗೆಯನ್ನು ಕಡ್ಡಾಯವಾಗಿ ಆಸ್ಪತ್ರೆಯಲ್ಲಿಯೇ ಮಾಡಿಕೊಳ್ಳುವ ಬಗ್ಗೆ ಮಾಹಿತಿಯನ್ನು ನೀಡಲಾಗಿದೆಯೇ? ಎಂಬುದನ್ನು ತಿಳಿದುಕೊಳ್ಳಬೇಕು.

ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಲ್ಲಿ ಸಂಪೂರ್ಣವಾಗಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜನನಿ ಶಿಶು ಸುರಕ್ಷಾ ಯೋಜನೆಯಡಿಯಲ್ಲಿ ಗರ್ಭಿಣಿಯರಿಗೆ ಉಚಿತ ರಕ್ತ ಪರೀಕ್ಷೆಗಳನ್ನು ಮಾಡಲಾಗುವುದು. ಗರ್ಭಾವಸ್ಥೆಯಲ್ಲಿ ಅವಶ್ಯಕತೆಗೆ ಅನುಗುಣವಾಗಿ ಉಚಿತವಾಗಿ ರಕ್ತವನ್ನು ನೀಡಲಾಗುವುದು. ತೊಡಕಿನ ಗರ್ಭಿಣಿಯನ್ನು ಮೇಲ್ದರ್ಜೆಯ ಆಸ್ಪತ್ರೆಗಳಿಗೆ ಜನನಿ ಸುರಕ್ಷಾ ವಾಹಿನಿ(ಜೆ.ಎಸ್.ವಿ) ಆಂಬ್ಯುಲನ್ಸಗಳಲ್ಲಿ ಉಚಿತವಾಗಿ ಕಳಿಸಲಾಗುವುದು. ಗರ್ಭಾವಸ್ಥೆ ಸಮಯದಲ್ಲಿ ಮುಂದೆ ಹುಟ್ಟುವ ಶಿಶುವಿಗೆ ಅರ್ಧಗಂಟೆ ಒಳಗೆ ಎದೆ ಹಾಲು ಉಣಿಸುವ ಬಗ್ಗೆ ಹಾಗೂ ಅದರ ಮಹತ್ವವನ್ನು ತಿಳಿಸುವುದು. Colostrum ಅಥವಾ ಗಿಣ್ಣುಹಾಲು ಕುಡಿಸುವುದರಿಂದ ಶಿಶುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ಹಾಗೂ ಮಾರಕ ರೋಗಗಳಿಂದ ರಕ್ಷಣೆ ಪಡೆದುಕೊಳ್ಳಬಹುದು ಎಂದು ತಿಳಿಸುವುದು. ಹೆರಿಗೆ ಪೂರ್ವ ತಯಾರಿ ಹಾಗೂ ಹೆರಿಗೆ ನಂತರ ಆರೋಗ್ಯ ಕಾರ್ಯಕರ್ತೆಯರು ಎಲ್ಲಾ ಮಾಹಿತಿಯನ್ನು ನೀಡಿದ ಬಗ್ಗೆ ವಿಚಾರಿಸಲಿದ್ದಾರೆ.

ಹೆರಿಗೆಯ ನಂತರ, ಹೆರಿಗೆ ಸಹಜವೇ ಅಥವಾ ಅಸಹಜವೇ ಎಂದು ತಿಳಿದುಕೊಳ್ಳುವುದು. ಹುಟ್ಟಿದ ಮಗುವಿನ ತೂಕವನ್ನು ವಿಚಾರಿಸುವುದು, ಹೆರಿಗೆ ಆದ ಅರ್ಧ ಗಂಟೆಯ ಒಳಗೆ ಎದೆ ಹಾಲನ್ನು ಉಣಿಸಲಾಗಿದೆಯೇ ಎಂದು ವಿಚಾರಿಸುವುದು. ಹೆರಿಗೆ ಆದ 6 ತಿಂಗಳವರೆಗೆ ಕಡ್ಡಾಯವಾಗಿ ಎದೆ ಹಾಲನ್ನು ಮಾತ್ರ ಮಗುವಿಗೆ ನೀಡುವುದು. ಮಗು ಜನಿಸಿದಾಗಿನಿಂದ 24 ತಿಂಗಳವರೆಗೆ ನಿಗಧಿತ ವೇಳಾ ಪಟ್ಟಿಯಂತೆ 6 ವಾರ, 10 ವಾರ, 14 ವಾರ, 9-12 ತಿಂಗಳು, 16-24 ತಿಂಗಳಲ್ಲಿ ಪಡೆಯಬೇಕಾಗಿರುವ ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಲಿದ್ದಾರೆ.

ಜಿಲ್ಲೆಯಲ್ಲಿ ಪ್ರಸ್ತುತ 358 ಗರ್ಭಿಣಿಯರ ಆರೋಗ್ಯ ವಿಚಾರಿಸಲು ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳನ್ನು ನಿಯೋಜಿಸಿದ್ದು, ಕಾರವಾರ ತಾಲೂಕಿನ (79), ಅಂಕೋಲ (24), ಕುಮಟಾ (30), ಹೊನ್ನಾವರ (42), ಭಟ್ಕಳ (21), ಶಿರಸಿ (40), ಸಿದ್ದಾಪುರ (25), ಯಲ್ಲಾಪುರ (20), ಹಳಿಯಾಳ (43), ಮುಂಡಗೋಡ (16), ಜೊಯಿಡಾ (18), ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಜಿಲ್ಲೆಯಲ್ಲಿನ ಗರ್ಭಿಣಿ ಮಹಿಳೆಯರು ಸುರಕ್ಷಿತ ಆರೋಗ್ಯ ಪರಿಶೀಲನೆಗೆ ಅಧಿಕಾರಿಗಳನ್ನು ನಿಯೋಜಿಸಿ, ಒಂದೇ ಯೋಜನೆಯ ಮೂಲಕ ಹಲವು ಸರ್ಕಾರದ ಯೋಜನೆಗಳನ್ನು ಪರಿಶೀಲಿಸಿ ಅಗತ್ಯ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ. ಪ್ರಮುಖವಾಗಿ ಗರ್ಭೀಣಿ ಮತ್ತು ನವಜಾತ ಶಿಶುವಿನ ಬಗ್ಗೆ ನಿರಂತರವಾಗಿ ವಿಚಾರಿಸುವ ಮೂಲಕ ಯಾವುದೇ ಆರೋಗ್ಯ ಸೆವೆಯಿಂಧ ವಂಚಿತವಾಗದಂತೆ ನೋಡಿಕೊಂಡು, ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣವನ್ನು ಶೂನ್ಯಕ್ಕೆ ತರುವ ಉದ್ದೇಶ ಹೊಂದಲಾಗಿದೆ. ಅಲ್ಲದೆ ಯಾವುದೇ ಹಂತದಲ್ಲೂ ಜಿಲ್ಲೆಯ ಗರ್ಭಿಣಿ ಮಹಿಳೆಯರು ಪ್ರಸವಪೂರ್ಣ ಲಿಂಗಪತ್ತೆಗೆ ಒಳಗಾಗಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸಲು ಹಾಗೂ ಭ್ರೂಣ ಹತ್ಯೆ ತಡೆಯಲು ಸಾಧ್ಯವಾಗಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಯ ಯೋಜನೆಗಳಾದ ಮಾತೃಪೂರ್ಣ ಮತ್ತು ಮಾತೃ ವಂದನ ಕಾರ್ಯಕ್ರಮಗಳ ಸಂಪೂರ್ಣ ಸೌಲಭ್ಯ ಒದಗಿಸಲು ಹಾಗೂ ಹೆಣ್ಣು ಮಗು ಜನಿಸಿದ್ದಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲು ಸಾಧ್ಯವಾಗಲಿದೆ. ಜಿಲ್ಲೆಯ ಆರೋಗ್ಯ ಸೌಲಭ್ಯಗಳ ಬಗ್ಗೆ ಮಹಿಳೆಯರಿಂದ ಮಾಹಿತಿ ಪಡೆದು ನ್ಯೂತೆಗಳಿದ್ದಲ್ಲಿ ಅವುಗಳನ್ನು ಸರಿಪಡಿಸಿ, ಉತ್ತಮ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗಲಿದೆ ಎನ್ನುತ್ತಾರೆ ಮಾನಕರ.

ವರದಿ: ಹರೀಶ ಮಾಂಬಾಡಿ, ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ