ಕನ್ನಡ ಸುದ್ದಿ  /  ಜೀವನಶೈಲಿ  /  ಹಾಲೇಕೆ ಉಕ್ಕುತ್ತೆ? ಕಣ್ರೆಪ್ಪೆ ಏಕೆ ಮುಚ್ಚುತ್ತೆ? ಕಾದ ಎಣ್ಣೆ ಮೇಲೆ ನೀರು ಸಿಡಿಯುವುದೇಕೆ? ಇಲ್ಲಿದೆ 6 ವೈಜ್ಞಾನಿಕ ಸಂಗತಿ -ಜ್ಞಾನ ವಿಜ್ಞಾನ

ಹಾಲೇಕೆ ಉಕ್ಕುತ್ತೆ? ಕಣ್ರೆಪ್ಪೆ ಏಕೆ ಮುಚ್ಚುತ್ತೆ? ಕಾದ ಎಣ್ಣೆ ಮೇಲೆ ನೀರು ಸಿಡಿಯುವುದೇಕೆ? ಇಲ್ಲಿದೆ 6 ವೈಜ್ಞಾನಿಕ ಸಂಗತಿ -ಜ್ಞಾನ ವಿಜ್ಞಾನ

D M Ghanashyam HT Kannada

Apr 29, 2024 07:00 AM IST

ಹಾಲೇಕೆ ಉಕ್ಕುತ್ತೆ? ಕಣ್ರೆಪ್ಪೆ ಏಕೆ ಮುಚ್ಚುತ್ತೆ? ಕಾದ ಎಣ್ಣೆ ಮೇಲೆ ನೀರು ಸಿಡಿಯುವುದೇಕೆ?

    • ಎಚ್‌.ಎ.ಪುರುಷೋತ್ತಮ ರಾವ್: ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಹುಟ್ಟಿಸಬೇಕಿದ್ದರೆ ಮೊದಲು ಅಡುಗೆಮನೆಯನ್ನು ವಿವರಿಸಿ ಎನ್ನುತ್ತಾರೆ ಹಿರಿಯ ವಿಜ್ಞಾನಿಗಳು. ಏಕೆಂದರೆ ಅಡುಗೆಮನೆ ಎನ್ನುವುದೇ ಮನೆಯ ಪ್ರಯೋಗಶಾಲೆ. ಅಲ್ಲಿ ಎಷ್ಟೋ ಜೀವ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರದ ಪ್ರಕ್ರಿಯೆಗಳು ನಿರಂತರ ನಡೆಯುತ್ತಲೇ ಇರುತ್ತವೆ.
ಹಾಲೇಕೆ ಉಕ್ಕುತ್ತೆ? ಕಣ್ರೆಪ್ಪೆ ಏಕೆ ಮುಚ್ಚುತ್ತೆ? ಕಾದ ಎಣ್ಣೆ ಮೇಲೆ ನೀರು ಸಿಡಿಯುವುದೇಕೆ?
ಹಾಲೇಕೆ ಉಕ್ಕುತ್ತೆ? ಕಣ್ರೆಪ್ಪೆ ಏಕೆ ಮುಚ್ಚುತ್ತೆ? ಕಾದ ಎಣ್ಣೆ ಮೇಲೆ ನೀರು ಸಿಡಿಯುವುದೇಕೆ?

Scientific Facts: ವಿಜ್ಞಾನ ಎಂದರೆ ಎಲ್ಲಿಯೋ ಇರುವುದಲ್ಲ, ಕೇವಲ ಪುಸ್ತಕದಲ್ಲಷ್ಟೇ ಇರುವ ಜ್ಞಾನವಲ್ಲ. ನಮ್ಮ ನಿತ್ಯದ ಜೀವನದಲ್ಲಿ ನಮಗೆ ತಿಳಿದೋ, ತಿಳಿಯದೆಯೋ ಹಲವು ವೈಜ್ಞಾನಿಕ ಸಂಗತಿಗಳಿಗೆ ನಾವು ಸಾಕ್ಷಿಯಾಗುತ್ತಲೇ ಇರುತ್ತವೆ. ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಹುಟ್ಟಿಸಬೇಕಿದ್ದರೆ ಮೊದಲು ಅಡುಗೆಮನೆಯನ್ನು ವಿವರಿಸಿ ಎನ್ನುತ್ತಾರೆ ಹಿರಿಯ ವಿಜ್ಞಾನಿಗಳು. ಏಕೆಂದರೆ ಅಡುಗೆಮನೆ ಎನ್ನುವುದೇ ಮನೆಯ ಪ್ರಯೋಗಶಾಲೆ. ಅಲ್ಲಿ ಎಷ್ಟೋ ಜೀವ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರದ ಪ್ರಕ್ರಿಯೆಗಳು ನಿರಂತರ ನಡೆಯುತ್ತಲೇ ಇರುತ್ತವೆ. ಇದನ್ನು ಗಮನಿಸುವ ಮಕ್ಕಳಲ್ಲಿ ಹತ್ತಾರು ಪ್ರಶ್ನೆಗಳೂ ಮೂಡುತ್ತವೆ. ಅವರು ಕೇಳುವ ಪ್ರಶ್ನೆಗೆ ಉತ್ತರ ಹುಡುಕುವಲ್ಲಿ ಕಲಿಕೆಯೂ ಸಾಗುತ್ತದೆ. ನಮ್ಮೆಲ್ಲರ ಮನೆಗಳಲ್ಲಿ ಪ್ರತಿದಿನ ಕೇಳಿಬರಬಹುದಾದ 6 ವೈಜ್ಞಾನಿಕ ಪ್ರಶ್ನೆಗಳಿಗೆ ಈ ಬರಹದಲ್ಲಿ ಉತ್ತರವಿದೆ. ನೀವೂ ಓದಿ, ನಿಮ್ಮ ಮಕ್ಕಳಿಗೂ ವಿವರಿಸಿ.

ಟ್ರೆಂಡಿಂಗ್​ ಸುದ್ದಿ

Personality Test: ಮನುಷ್ಯನ ಮುಖ, ಬಂಡೆ ಚಿತ್ರದಲ್ಲಿ ಮೊದಲು ಕಾಣಿಸಿದ್ದೇನು, ನಿಮ್ಮ ಗುಪ್ತ ಸ್ವಭಾವ ತಿಳಿಸುತ್ತೆ ಈ ಚಿತ್ರ

ಕಂದಮ್ಮನ ತ್ವಚೆಗೆ ಫೇಸ್‌ಕ್ರೀಮ್‌ ಬಳಕೆ ಸುರಕ್ಷಿತವೇ? ಮಗುವಿನ ಫೇಸ್‌ಕ್ರೀಮ್‌ ಆಯ್ಕೆಗೂ ಮುನ್ನ ಪೋಷಕರು ಗಮನಿಸಲೇಬೇಕಾದ ಅಂಶಗಳಿವು

ದೋಸೆ, ಇಡ್ಲಿ ಮಾತ್ರವಲ್ಲ; ಅಕ್ಕಿ ಹಿಟ್ಟಿನಿಂದ ತಯಾರಿಸಬಹುದಾದ ಬಗೆಬಗೆಯ ತಿನಿಸುಗಳ ವಿವರ ಇಲ್ಲಿದೆ ನೋಡಿ

Brain Teaser: ಈ ಬೀಗ ತೆಗೆಯಲು ಕೋಡ್ ಏನಿರಬಹುದು? ಬುದ್ಧಿವಂತರಾಗಿದ್ರೆ 10 ಸೆಕೆಂಡ್‌ನಲ್ಲಿ ಪತ್ತೆಹಚ್ಚಿ ನೋಡೋಣ

1) ಕಣ್ಣನ್ನು ಹೆಚ್ಚು ಕಾಲ ಒಂದೇ ಸಮನೆ ತೆರೆದಿಡಲು ಸಾಧ್ಯವಿಲ್ಲ ಏಕೆ?

ಕಣ್ಣಿನ ರೆಪ್ಪೆ ಅನೇಕ ಪದರಗಳಿಂದ ಕೂಡಿದೆ ಚರ್ಮ ಹಾಗೂ ಊತಕಗಳಿಂದ ಕೂಡಿದೆ. ಇದು ಕಣ್ಣಿನ ಕಾರ್ನಿಯಾ ಹಾಗೂ ಇನ್ನಿತರ ಸೂಕ್ಷ್ಮ ಭಾಗಗಳನ್ನು ರಕ್ಷಿಸುವುದು ಮಾತ್ರವಲ್ಲದೆ ಕಾರ್ನಿಯಾದ ಮೇಲ್ಮೈಯನ್ನು ಸದಾ ತೇವದಿಂದ ಇಡುತ್ತದೆ. ರೆಪ್ಪೆ ನಿಗದಿತ ಆವರ್ತನದಲ್ಲಿ ಮುಚ್ಚಿ ತೆರೆಯುವ ಕ್ರಿಯೆ ಒಂದು ಸ್ವಯಂ ನಿಯಂತ್ರಕ ಕ್ರಿಯೆ. ಅಂದರೆ ಅನೈಚ್ಛಿಕ ನರಮಂಡಲದ ನಿಯಂತ್ರಣದಲ್ಲಿದೆ. ಈ ಕಣ್ಣುಮುಚ್ಚಿತೆರೆಯುವ ಕ್ರಿಯೆಯಲ್ಲಿ ಅಶ್ರು ಗ್ರಂಥಿಗಳು ಕಣ್ಣೀರನ್ನು ಉತ್ಪತ್ತಿ ಮಾಡುತ್ತವೆ. ಅದು ಕಣ್ಣನ್ನು ತೊಳೆದು ಸ್ವಚ್ಛ ಮಾಡುತ್ತಿರುತ್ತದೆ. ಈ ಕ್ರಿಯೆಗೆ, ಅಂದರೆ ಕಣ್ಣೀರು ಉತ್ಪಾದನೆಗೆ ಅಡಚಣೆಯಾಗುವುದರಿಂದಲೇ ಕಣ್ಣನ್ನು ಹೆಚ್ಚುಕಾಲ ಒಂದೇ ಸಮನೆ ತೆರೆದಿಟ್ಟುಕೊಳ್ಳುವುದು ಸಾಧ್ಯವಾಗುವುದಿಲ್ಲ.

2) ಹೆದರಿಕೆಯಾದಾಗ ನಾವು ಹೆಚ್ಚು ಬೆವರುತ್ತೇವೆ ಏಕೆ?

ಬೆವರು ಎರಡು ರೀತಿಯ ಕಾರ್ಯಗಳಿಗಾಗಿ ಚರ್ಮದಲ್ಲಿ ಉತ್ಪತ್ತಿಯಾಗುತ್ತದೆ. ಮೊದಲನೆಯದು ದೇಹದಲ್ಲಿನ ಹಲವು ಲವಣಗಳು ಹಾಗೂ ಅನುಪಯುಕ್ತ ವಸ್ತುಗಳ ವಿಸರ್ಜನೆ. ಮತ್ತೊಂದು ದೇಹದ ಶಾಖವನ್ನು ನಿಯಂತ್ರಿಸುವುದು. ಹೆದರಿಕೆಯಾದಾಗ ದೇಹದಲ್ಲಿ ಆಡ್ರಿನಲಿನ್ ಎಂಬ ಹಾರ್ಮೋನು ಉತ್ಪತ್ತಿಯಾಗುತ್ತದೆ. ದೇಹದ ಚಯಾಪಚಯ (ಮೆಟಬಾಲಿಸಂ) ಕ್ರಿಯೆಯೂ ವೇಗದಿಂದ ಜರುಗುತ್ತವೆ. ಹೀಗಾಗಿ ದೇಹದಲ್ಲಿ ಹೆಚ್ಚಿನ ಶಾಖ ಉತ್ಪತ್ತಿಯಾಗುತ್ತದೆ. ಈ ಕ್ರಿಯೆಯಿಂದ ಉಂಟಾಗುವ ಹೆಚ್ಚಿನ ಶಾಖವನ್ನು ಕಡಿಮೆ ಮಾಡಲೆಂದೇ ನಾವು ಹೆಚ್ಚು ಬೆವರುತ್ತೇವೆ.

3) ಕಾಯಿಸಿದಾಗ ಹಾಲು ಉಕ್ಕುವುದೇಕೆ?

ಹಾಲು ಒಂದು ಕಲಾಯ್ಡ್. ಅಂದರೆ ಇದರಲ್ಲಿ ನೀರು ಪ್ರೊಟೀನ್ ಮತ್ತು ಕೊಬ್ಬಿನ ಕಣಗಳು ನಿಲಂಬಿತ ಸ್ಥಿತಿಯಲ್ಲಿರುತ್ತವೆ. ಹಾಲನ್ನು ಕಾಯಿಸಿದಾಗ ಕೊಬ್ಬಿನಂಶ ಮೇಲಕ್ಕೆ ಬಂದು ಹಾಲಿನ ಮೇಲ್ಪದರದಲ್ಲಿ ಕೆನೆಯಾಗಿ ಶೇಖರಗೊಳ್ಳುತ್ತದೆ. ಇದು ತಳಭಾಗದಲ್ಲಿ ಉತ್ಪತ್ತಿಯಾಗುವ ಹಬೆಯನ್ನು ಪಾತ್ರೆಯಿಂದ ಹೊರಹೋಗದಂತೆ ತಡೆಯುತ್ತದೆ. ಆದರೆ ತಳಭಾಗದಲ್ಲಿ ಹಬೆಯ ಒತ್ತಡ ಅತಿಯಾದಾಗ ಅದು ಕೆನೆಯನ್ನು ಹಾಲಿನೊಂದಿಗೆ ಮೇಲಕ್ಕೇರುವಂತೆ ಮಾಡುತ್ತದೆ. ಇದು ಪಾತ್ರೆಯ ಅಂಚನ್ನು ಮೀರಿ ಉಕ್ಕಿ ಹರಿಯುವುದುಂಟು.

4) ಕಾದ ಎಣ್ಣೆಯಲ್ಲಿ ನೀರು ಚಿಮುಕಿಸಿದಾಗ ಎಣ್ಣೆ ಸಿಡಿಯುವಂತಾಗುತ್ತದೆ ಏಕೆ?

ಅಡುಗೆ ಸಮಯದಲ್ಲಿ ಸಸ್ಯಮೂಲದ ಎಣ್ಣೆಗಳು ಸಾಮಾನ್ಯವಾಗಿ 200-250 ಡಿಗ್ರೀ ಸೆಲ್ಷಿಯಸ್‌ನಷ್ಟು ಕುದಿಯುವ ಬಿಂದು ಹೊಂದಿರುತ್ತದೆ. ಆದರೆ ನೀರಿನ ಕುದಿಯುವ ಬಿಂದು 100 ಡಿಗ್ರೀ ಸೆಲ್ಷಿಯಸ್ ಮಾತ್ರ. ನೀರಿನ ತೊಟ್ಟೊಂದು ಎಣ್ಣೆಯ ಮೇಲೆ ಬಿದ್ದಾಗ ಅದು ಎಣ್ಣೆಯ ಪದರವನ್ನು ಮುಟ್ಟುತ್ತಲೇ ವಿಕಸನಗೊಂಡು ಆವಿಯಾಗಿಬಿಡುತ್ತದೆ. ಹೀಗಾಗಿ ಬಿಸಿಎಣ್ಣೆಯೇ ಚಿಮ್ಮಿದಂತಹ ಅನುಭವವಾಗುತ್ತದೆ. ವಾಸ್ತವವಾಗಿ ಇಲ್ಲಿ ಎಣ್ಣೆಯ ಅಂಶ ಸಿಡಿದಿರುವುದಿಲ್ಲ. ಆದರೆ ಇದಕ್ಕೆ ತದ್ವಿರುದ್ದವಾಗಿ ಬಿಸಿನೀರಿನ ಪಾತ್ರೆಗೆ ಕಾದ ಎಣ್ಣೆಯನ್ನು ಸುರಿದರೆ ಈ ಪ್ರಕ್ರಿಯೆ ಉಂಟಾಗುವುದಿಲ್ಲ. ಕೇವಲ ನೀರಿನ ಮೇಲ್ಪದರದಲ್ಲಿ ಒಂದು ಪದರವನ್ನು ಉಂಟುಮಾಡುತ್ತದಷ್ಟೇ.

5) ಗಾಜಿನಂತಹ ಅತ್ಯಂತ ನಾಜೂಕು ಮೇಲ್ಮೈ ಮೇಲೆ ಬಾಲ್ ಪಾಯಿಂಟ್ ಪೆನ್ನಿನಿಂದ ಬರೆಯಲು ಸಾಧ್ಯವಾಗುವುದಿಲ್ಲವೇಕೆ?

ಬಾಲ್ ಪಾಯಿಂಟ್ ಪೆನ್ನಿನಲ್ಲಿ ಹೆಸರೇ ಸೂಚಿಸುವಂತೆ ತುದಿಯಲ್ಲಿ ಸೂಕ್ಷ್ಮಗಾತ್ರದ ಒಂದು ದುಂಡನೆಯ ಚಲಿಸುವ ಲೋಹದ ಚೆಂಡು ಇರುತ್ತದೆ. ಬರೆಯುವಾಗ ಈ ಚೆಂಡು ಕಾಗದದ ಮೇಲೆ ಉಂಟುಮಾಡುವ ಘರ್ಷಣೆಯಿಂದಾಗಿ ಶಾಯಿ ನಿಧಾನವಾಗಿ ಹೊರಬಂದು ಗುರುತನ್ನು ಉಂಟು ಮಾಡುತ್ತದೆ. ಆದರೆ ಗಾಜಿನಂತಹ ಅತ್ಯಂತ ನಯವಾದ ಮೇಲ್ಮೈ ಮೇಲೆ ಘರ್ಷಣೆ ಸಾಧ್ಯವಿಲ್ಲದ್ದರಿಂದ ಪೆನ್ನಿನ ಚೆಂಡು ಉರುಳುವುದಿಲ್ಲ. ಹೀಗಾಗಿ ಬರೆಯಲು ಸಾಧ್ಯವಿಲ್ಲ. ಪ್ಲಾಸ್ಟಿಕ್ ಮೇಲೆ ಈ ಚೆಂಡು ಉರುಳಿದರೂ ಅದರ ಮೇಲೆ ಶಾಯಿ ಅಂಟಿಕೊಳ್ಳುವುದಿಲ್ಲ. ಹೀಗಾಗಿ ಅಲ್ಲಿಯೂ ಸಹ ಬರೆಯಲು ಅಸಾಧ್ಯ.

6) ಬಾಳೆಹಣ್ಣನ್ನು ರೆಫ್ರಿಜಿರೇಟರ್‌ಗಳಲ್ಲಿ ಇಡಬಾರದು ಏಕೆ?

ಬಾಳೆಹಣ್ಣು ಸಾಮಾನ್ಯವಾಗಿ ಅತ್ಯಂತ ಕನಿಷ್ಠ ತಾಪವನ್ನು ಸಹಿಸಲಾರದು. ಅಂತೆಯೇ ಅತಿಶೀತಕ. ಅತ್ಯಂತ ತಂಪು ಇದರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ. ಆಕ್ಸಿಡೇಸ್ ಎಂಬ ಕಿಣ್ವವೊಂದರ ಪ್ರಕ್ರಿಯೆಯಿಂದಾಗಿ ಬಾಳೆಹಣ್ಣು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಆದರೆ ಹಸಿರು ಬಣ್ಣದ ಬಾಳೆಕಾಯಿಯನ್ನು ರೆಫ್ರಿಜಿರೇಟರ್‌ನಲ್ಲಿ ಇಟ್ಟರೆ ಯಾವ ಪರಿಣಾಮವೂ ಉಂಟಾಗುವುದಿಲ್ಲ.

(ಬರಹ: ಎಚ್‌.ಎ.ಪುರುಷೋತ್ತಮ ರಾವ್)

ಎಚ್‌.ಎ.ಪುರುಷೋತ್ತಮ ರಾವ್ ಅವರ ಜ್ಞಾನ ವಿಜ್ಞಾನ ಅಂಕಣ

ಎಚ್‌ಎ ಪುರುಷೋತ್ತಮ ರಾವ್ ಪರಿಚಯ

ಅರಣ್ಯ ಇಲಾಖೆಯಲ್ಲಿ ಆಡಳಿತ ವಿಭಾಗದಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ ಕೋಲಾರದ ಎಚ್‌.ಎ.ಪುರುಷೋತ್ತಮ ರಾವ್ ವಿಜ್ಞಾನ ಬರಹಗಾರರಾಗಿ ಪ್ರಸಿದ್ಧರು. ಕಿವುಡನ ಮಾಡಯ್ಯ ತಂದೆ (ವಿಜ್ಞಾನ ವಿದ್ಯಮಾನಗಳು), ಭೂರಮೆಗೆ ಸ್ಪೆಥೋಸ್ಕೋಪ್ (ವಿಜ್ಞಾನ ಲೇಖನಗಳು), ಕಾಡು ಪ್ರತಿಭೆ ಮಾರಪ್ಪ (ಅರಣ್ಯಾಧಿಕಾರಿಯ ಬದುಕು-ಸಾಧನೆ), ಗಾಳಿಬೇರುಗಳು (ವಿಜ್ಞಾನ ಮತ್ತು ಪರಿಸರ ಲೇಖನಗಳು), ಅರಣ್ಯ ತಜ್ಞ ಅಜ್ಜಂಪುರ ಕೃಷ್ಣಸ್ವಾಮಿ (ವ್ಯಕ್ತಿ ಚಿತ್ರ) ಇವರ ಪ್ರಕಟಿತ ಕೃತಿಗಳು. ಕೋಲಾರ ಪತ್ರಿಕೆ, ಪ್ರಜಾವಾಣಿ ಸೇರಿದಂತೆ ಹಲವು ದಿನಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಸಂಪರ್ಕ ಸಂಖ್ಯೆ: 99723 39974

    ಹಂಚಿಕೊಳ್ಳಲು ಲೇಖನಗಳು