ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜಿಎಸ್ಎಲ್‌ವಿ ಪುನರಾಗಮನ: ಯಶಸ್ವಿಯಾಗಿ ಕಕ್ಷೆ ಸೇರಿದ ಇನ್ಸಾಟ್-3ಡಿಎಸ್ ಉಪಗ್ರಹ, ನಾಟಿ ಬಾಯ್‌ ಈಗ ಶಿಸ್ತಿನ ಸಿಪಾಯಿ

ಜಿಎಸ್ಎಲ್‌ವಿ ಪುನರಾಗಮನ: ಯಶಸ್ವಿಯಾಗಿ ಕಕ್ಷೆ ಸೇರಿದ ಇನ್ಸಾಟ್-3ಡಿಎಸ್ ಉಪಗ್ರಹ, ನಾಟಿ ಬಾಯ್‌ ಈಗ ಶಿಸ್ತಿನ ಸಿಪಾಯಿ

HT Kannada Desk HT Kannada

Feb 19, 2024 04:01 PM IST

ಇನ್ಸಾಟ್-3ಡಿಎಸ್ (ಎಡಚಿತ್ರ) ಗಿರೀಶ್ ಲಿಂಗಣ್ಣ (ಬಲಚಿತ್ರ)

    • ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಕಳೆದೆರಡು ದಿನಗಳ ಹಿಂದೆ ಇನ್ಸಾಟ್‌-3ಡಿಎಸ್‌ ಎಂಬ ಉಪಗ್ರಹವೊಂದನ್ನು ಉಡಾವಣೆ ಮಾಡಿದೆ. ಇದು ಹವಾಮಾನ ಮುನ್ಸೂಚನೆ ನೀಡುವ ಉಪಗ್ರಹವಾಗಿದೆ. ಯಶಸ್ವಿಗಾಗಿ ತನ್ನ ಕಕ್ಷೆಯನ್ನು ಸೇರಿದ ಇನ್ಸಾಟ್‌-3ಡಿಎಸ್‌ ಜಿಎಸ್ಎಲ್‌ವಿ ರಾಕೆಟ್‌ಗಿದ್ದ ʼನಾಟಿ ಬಾಯ್‌ʼ ಎಂಬ ಅಡ್ಡ ಹೆಸರು ಅಳಿಸಿ ಹಾಕುವಂತೆ ಮಾಡಿದೆ. (ಬರಹ: ಗಿರೀಶ್‌ ಲಿಂಗಣ್ಣ)
ಇನ್ಸಾಟ್-3ಡಿಎಸ್ (ಎಡಚಿತ್ರ) ಗಿರೀಶ್ ಲಿಂಗಣ್ಣ (ಬಲಚಿತ್ರ)
ಇನ್ಸಾಟ್-3ಡಿಎಸ್ (ಎಡಚಿತ್ರ) ಗಿರೀಶ್ ಲಿಂಗಣ್ಣ (ಬಲಚಿತ್ರ)

ಶನಿವಾರ (ಫೆ.17) ಸಂಜೆ ವೇಳೆಗೆ ಭಾರತ ಯಶಸ್ವಿಯಾಗಿ ತನ್ನ ನೂತನ ಹವಾಮಾನ ವೀಕ್ಷಣಾ ಉಪಗ್ರಹವನ್ನು ಕಕ್ಷೆಗೆ ಉಡಾವಣೆಗೊಳಿಸಿತು. ಮೂರು ಹಂತಗಳ, 51.7 ಮೀಟರ್ ಎತ್ತರ ಹೊಂದಿರುವ ಜಿಯೋಸಿಂಕ್ರನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್‌ವಿ) ಫೆಬ್ರವರಿ 17ರಂದು ಸಂಜೆ 5:35ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿತು.

ಟ್ರೆಂಡಿಂಗ್​ ಸುದ್ದಿ

ಅಡ್ಡ ಬಂದ ಕೋತಿ ತಪ್ಪಿಸಲು ಹೋಗಿ ಅಪಘಾತ, ಬ್ಯಾಂಕ್‌ ಅಧಿಕಾರಿ,ಸಿಬ್ಬಂದಿ ಸೇರಿ ಮೂವರ ದುರ್ಮರಣ

4ನೇ ಹಂತದ ಲೋಕಸಭೆ ಚುನಾವಣೆ; ಬೆಳಗ್ಗೆ 11ರ ವರೆಗೆ ಶೇ 25 ರಷ್ಟು ಮತದಾನ, ಈವರೆಗೆ ತಿಳಿಯಬೇಕಾದ 10 ಅಂಗಳಿವು

CBSE 10th Result: ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಬಿಡುಗಡೆ; ಶೇ 93.60 ರಷ್ಟು ವಿದ್ಯಾರ್ಥಿಗಳು ತೇರ್ಗಡೆ

CBSE 12th Result: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ; ಶೇ 87.98 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ಬಾಲಕಿಯರೇ ಮೇಲುಗೈ

ಈ ಉಡಾವಣೆಯ ಬಹುತೇಕ 19 ನಿಮಿಷಗಳ ಬಳಿಕ, ಇನ್ಸಾಟ್-3ಡಿಎಸ್ ಹವಾಮಾನ ಮುನ್ಸೂಚನಾ ಉಪಗ್ರಹ ಉಡಾವಣಾ ವಾಹನದಿಂದ ಬೇರ್ಪಟ್ಟಿತು. ಉಪಗ್ರಹ ಮೊದಲಿಗೆ ಜಿಯೋಸಿಂಕ್ರನಸ್ ಟ್ರಾನ್ಸ್‌ಫರ್ ಕಕ್ಷೆಗೆ ಅಳವಡಿಸಲ್ಪಟ್ಟಿತು. ಅಲ್ಲಿಂದ ಕಕ್ಷೆ ಎತ್ತರಿಸುವ ಪ್ರಕ್ರಿಯೆ ಆರಂಭಗೊಂಡು, ಉಪಗ್ರಹ ಭೂಸ್ಥಿರ ಕಕ್ಷೆಯಲ್ಲಿ 74 ಡಿಗ್ರಿ ಪೂರ್ವದಲ್ಲಿ, ಭೂಮಧ್ಯ ರೇಖೆಯ ಮೇಲೆ 35,786 ಕಿಲೋಮೀಟರ್ ಎತ್ತರದಲ್ಲಿ ಅಳವಡಿಸಲ್ಪಡಲಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಖ್ಯಸ್ಥರಾದ ಎಸ್ ಸೋಮನಾಥ್ ಅವರು ಯಶಸ್ವಿ ಉಡಾವಣೆಯ ಬಳಿಕ ತನ್ನ ಸಂಭ್ರಮವನ್ನು ವ್ಯಕ್ತಪಡಿಸಿದರು. ʼಜಿಎಸ್ಎಲ್‌ವಿ ಎಫ್-14 / ಇನ್ಸಾಟ್-3ಡಿಎಸ್ ಯೋಜನೆ ಯಶಸ್ವಿಯಾಗಿದೆ ಎಂದು ಘೋಷಿಸಲು ನಾನು ಸಂಭ್ರಮ ಪಡುತ್ತೇನೆ. ಈ ಬಾಹ್ಯಾಕಾಶ ನೌಕೆ ಒಂದು ಅತ್ಯುತ್ತಮ ಕಕ್ಷೆಯನ್ನು ಪ್ರವೇಶಿಸಿದೆʼ ಎಂದು ಸೋಮನಾಥ್ ಹೇಳಿಕೆ ನೀಡಿದ್ದಾರೆ.

ʼಇನ್ಸಾಟ್-3ಡಿಎಸ್ ಉಪಗ್ರಹ, ಅದರ ಪೇಲೋಡ್‌ಗಳು ಮತ್ತು ಉಡಾವಣಾ ವಾಹನದ ನಿರ್ಮಾಣದ ಜವಾಬ್ದಾರಿ ಹೊಂದಿದ್ದ ತಂಡಗಳನ್ನು ನಾನು ಅಭಿನಂದಿಸುತ್ತೇನೆ. ಅವರ ಕಾರ್ಯದಕ್ಷತೆಯ ಕಾರಣದಿಂದ ಈ ವರ್ಷ ಇಸ್ರೋ ಇಷ್ಟರಮಟ್ಟಿಗೆ ಯಶಸ್ಸು ಸಾಧಿಸಲು ಸಾಧ್ಯವಾಯಿತುʼ ಎಂದು ಸೋಮನಾಥ್ ಇಸ್ರೋದ ವಿವಿಧ ತಂಡಗಳನ್ನು ಅಭಿನಂದಿಸಿದ್ದರು.

ಜಿಎಸ್ಎಲ್‌ವಿ ರಾಕೆಟ್ ತನ್ನ ಈ ಹಿಂದಿನ 15 ಯೋಜನೆಗಳಲ್ಲಿ ಒಟ್ಟು ಆರು ವೈಫಲ್ಯಗಳು ಅಥವಾ ಅರೆಬರೆ ಯಶಸ್ಸು ಅನುಭವಿಸಿ, ಇದರಿಂದಾಗಿ 'ನಾಟಿ ಬಾಯ್' (Naughty boy) ಎಂಬ ಅಡ್ಡ ಹೆಸರು ಸಂಪಾದಿಸಿತ್ತು. ಆದರೆ ಇನ್ಸಾಟ್-3ಡಿಎಸ್ ಯಶಸ್ಸಿನ ಬಳಿಕ, ಯೋಜನಾ ನಿರ್ದೇಶಕರಾದ ಟಾಮಿ ಜೋಸೆಫ್ ಅವರು ನಾಟಿ ಬಾಯ್ ಆಗಿದ್ದ ರಾಕೆಟ್ ಈಗ ಅತ್ಯಂತ ವಿನಮ್ರ, ಶಿಸ್ತಿನ ರಾಕೆಟ್ ಆಗಿ ರೂಪುಗೊಂಡಿದೆ ಎಂದಿದ್ದಾರೆ.

ಇನ್ಸಾಟ್ ಸರಣಿಯ ಆರನೇ ಉಪಗ್ರಹವಾದ ಇನ್ಸಾಟ್-3ಡಿಎಸ್ ಉಡಾವಣೆಯ ವೇಳೆ 2,274 ಕೆಜಿ ತೂಕ ಹೊಂದಿತ್ತು. ಈ ಉಪಗ್ರಹ ನಾಲ್ಕು ಪೇಲೋಡ್‌ಗಳನ್ನು ಹೊಂದಿದ್ದು, ಆರು ಚಾನೆಲ್ ಮಲ್ಟಿಸ್ಪೆಕ್ಟ್ರಲ್ ಇಮೇಜರ್, 19 ಚಾನೆಲ್ ಸೌಂಡರ್, ಒಂದು ಡೇಟಾ ರಿಲೇ ಟ್ರಾನ್ಸ್‌ಪಾಂಡರ್ (ಡಿಆರ್‌ಟಿ), ಮತ್ತು ಸ್ಯಾಟಲೈಟ್ ಏಯ್ಡೆಡ್ ಸರ್ಚ್ ಆ್ಯಂಡ್ ರೆಸ್ಕ್ಯೂ (ಉಪಗ್ರಹ ಆಧಾರಿತ ಶೋಧ ಮತ್ತು ರಕ್ಷಣೆ - ಎಸ್ಎಎಸ್&ಆರ್) ಟ್ರಾನ್ಸ್‌ಪಾಂಡರ್ ಹೊಂದಿದೆ.

ಈ ಯೋಜನೆಗೆ ಭಾರತೀಯ ಭೂ ವಿಜ್ಞಾನ ಸಚಿವಾಲಯದ ಹಣಕಾಸಿನ ನೆರವು ಲಭಿಸಿದೆ. ಈ ಉಪಗ್ರಹ ಕನಿಷ್ಠ 2030ರ ತನಕ ಕಾರ್ಯಾಚರಿಸುವ ನಿರೀಕ್ಷೆಗಳಿವೆ.

ಭೂ ವೀಕ್ಷಣಾ ಸಾಮರ್ಥ್ಯ ವೃದ್ಧಿ

ಇಸ್ರೋ ನೀಡಿರುವ ಮಾಹಿತಿಗಳ ಪ್ರಕಾರ, ಇನ್ಸಾಟ್-3ಡಿಎಸ್ ಉಪಗ್ರಹ ವಿವಿಧ ಹವಾಮಾನಶಾಸ್ತ್ರದ ಸ್ಪೆಕ್ಟ್ರಲ್ ಚಾನೆಲ್‌ಗಳನ್ನು ಬಳಸಿಕೊಂಡು, ಭೂಮಿಯ ಮೇಲ್ಮೈ ಮತ್ತು ಸಾಗರ ವೀಕ್ಷಣೆ ನಡೆಸಲು ಪ್ರಯತ್ನಿಸುತ್ತದೆ. ಇವುಗಳು ವಿವಿಧ ಮಾಹಿತಿ ಸಂಗ್ರಹಣಾ ವ್ಯವಸ್ಥೆಗಳಿಂದ (ಡಿಸಿಪಿ) ಮಾಹಿತಿ ಕಲೆಹಾಕಿ, ಅವುಗಳನ್ನು ಹಂಚಿಕೊಳ್ಳುತ್ತವೆ. ಅದರೊಡನೆ, ಉಪಗ್ರಹ ಆಧಾರಿತ ಶೋಧ ಮತ್ತು ರಕ್ಷಣಾ ಸೇವೆಗಳನ್ನು ಒದಗಿಸುತ್ತವೆ.

ಉಪಗ್ರಹ ಭೂಮಿಯ ಮೇಲ್ಮೈ ಮತ್ತು ಸಾಗರವನ್ನು ವಿವಿಧ ಹವಾಮಾನ ಶಾಸ್ತ್ರೀಯ ಉಪಕರಣಗಳ ಮೂಲಕ ಗಮನಿಸಲಿದ್ದು, ಇದು ಬೆಳಕಿನ ವಿವಿಧ ತರಂಗಾಂತರಗಳಿಂದ ಮಾಹಿತಿಗಳನ್ನು ಕಲೆಹಾಕಲು ವಿವಿಧ ವಿಶಿಷ್ಟ ಸೆನ್ಸರ್‌ಗಳನ್ನು ಒಳಗೊಂಡಿದೆ. ಇದರಿಂದ ಹವಾಮಾನ ಮಾದರಿಗಳನ್ನು ವಿಸ್ತೃತವಾಗಿ ಗಮನಿಸಲು, ಸಾಗರ ತಾಪಮಾನವನ್ನು ಅಳೆಯಲು ಮತ್ತು ಭೂ ಮೇಲ್ಮೈ ಸನ್ನಿವೇಶಗಳನ್ನು ಗಮನಿಸಲು ಸಾಧ್ಯವಾಗುತ್ತದೆ. ಇದು ವಾತಾವರಣದ ವಿವಿಧ ಎತ್ತರಗಳಲ್ಲಿ ವಿಭಿನ್ನ ಮಾಹಿತಿಗಳನ್ನು ಕಲೆಹಾಕಲು ಸಮರ್ಥವಾಗಿದ್ದು, ಭೂಮಿಯ ಮೇಲ್ಮೈಯಿಂದ ವಾತಾವರಣದ ಔನ್ನತ್ಯದ ತನಕ ತಾಪಮಾನವನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಇದು ಸಂಪಾದಿಸುವ ಮಾಹಿತಿಗಳು ವಾತಾವರಣದ ವಿವಿಧ ಪದರಗಳಲ್ಲಿ ತಾಪಮಾನ, ಆರ್ದ್ರತೆ, ಹಾಗೂ ಗಾಳಿಯ ವಿನ್ಯಾಸಗಳನ್ನು ಅರ್ಥೈಸಿಕೊಳ್ಳಲು ಪೂರಕವಾಗಿವೆ. ಇದರಿಂದ ಹವಾಮಾನ ಮುನ್ಸೂಚನೆ ಮತ್ತು ಹವಾಮಾನ ಬದಲಾವಣೆಯ ಮುನ್ಸೂಚನೆ ಪಡೆಯಲು ಸಾಧ್ಯವಾಗುತ್ತದೆ.

ಡೇಟಾ ಕಲೆಕ್ಷನ್ ಪ್ಲಾಟ್‌ಫಾರಂಗಳಿಂದ (ಮಾಹಿತಿ ಸಂಗ್ರಹಣಾ ಕೇಂದ್ರ - ಡಿಸಿಪಿ) ಮಾಹಿತಿ ಸಂಗ್ರಹಿಸಿ, ಮಾಹಿತಿಗಳನ್ನು ಹಂಚುವುದೆಂದರೆ, ಭೂಮಿಯ ಮೇಲ್ಮೈಯಾದ್ಯಂತ ಚದುರಿರುವ ಸೆನ್ಸರ್‌ಗಳಿಂದ ಹವಾಮಾನ ಸಂಬಂಧಿತ ಮಾಹಿತಿಗಳನ್ನು ಸಂಗ್ರಹಿಸಿ, ಈ ಮಾಹಿತಿಗಳನ್ನು ಜಗತ್ತಿನಾದ್ಯಂತ ಸಂಶೋಧಕರು ಮತ್ತು ಹವಾಮಾನಶಾಸ್ತ್ರಜ್ಞರೊಡನೆ ಹಂಚಿಕೊಳ್ಳುವುದಾಗಿದೆ. ಈ ಸಮಗ್ರ ವಿಧಾನದಿಂದ, ಹವಾಮಾನ ಪ್ರಕ್ರಿಯೆಗಳನ್ನು ಗಮನಿಸುವ ಮತ್ತು ಮುನ್ಸೂಚನೆ ನೀಡುವ ಸಾಮರ್ಥ್ಯ ವೃದ್ಧಿಯಾಗುತ್ತದೆ. ಈ ಮಾಹಿತಿಗಳು ಯಾವುದೇ ಸಂಭಾವ್ಯ ವಿಪತ್ತಿನ ಮುನ್ಸೂಚನೆ ನೀಡಲು, ಅದನ್ನು ಎದುರಿಸಲು ಸಿದ್ಧವಾಗಲು, ವಾತಾವರಣದ ನಿರ್ವಹಣೆ ಕೈಗೊಳ್ಳಲು ಸಹಾಯಕವಾಗಿವೆ. ಇನ್ಸಾಟ್-3ಡಿಎಸ್ ಉಪಗ್ರಹದ ಇನ್ನೊಂದು ವೈಶಿಷ್ಟ್ಯವೆಂದರೆ ಸ್ಯಾಟಲೈಟ್ ಏಯ್ಡೆಡ್ ಸರ್ಚ್ ಆ್ಯಂಡ್ ರೆಸ್ಕ್ಯೂ (ಎಸ್ಎಎಸ್&ಆರ್) ಸೇವೆಗಳು. ಇದರಲ್ಲಿ, ದುರ್ಗಮ ಪ್ರದೇಶಗಳಾದ ಸಮುದ್ರ, ಪರ್ವತ ಅಥವಾ ಮರುಭೂಮಿಗಳಲ್ಲಿ ಕಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿರುವವರನ್ನು ಪತ್ತೆಹಚ್ಚಲು ಮತ್ತು ಅವರಿಗೆ ಸೂಕ್ತ ನೆರವು ರವಾನಿಸಲು ಸಾಧ್ಯವಾಗುತ್ತದೆ.

ಎಸ್ಎಎಸ್&ಆರ್ ವ್ಯವಸ್ಥೆ ಹಡಗುಗಳಿಂದ, ವಿಮಾನಗಳಿಂದ ಅಥವಾ ಅಪಾಯದ ಪರಿಸ್ಥಿತಿಯಲ್ಲಿ ಸಿಲುಕಿರುವ ವ್ಯಕ್ತಿಗಳ ಬಳಿ ಇರುವ ಬೀಕನ್‌ಗಳಿಂದ ಬರುವ ತುರ್ತು ಸಂಕೇತಗಳನ್ನು ಗ್ರಹಿಸಿ, ಸಂಕೇತದ ಸ್ಥಳವನ್ನು ಅತ್ಯಂತ ನಿಖರವಾಗಿ ಗುರುತಿಸುವ ಮೂಲಕ ಕಾರ್ಯಾಚರಿಸುತ್ತದೆ. ಈ ರೀತಿ ಕಲೆಹಾಕಿದ ಪ್ರದೇಶದ ಮಾಹಿತಿಯನ್ನು ಉಪಗ್ರಹ ರಕ್ಷಣಾ ಸಮನ್ವಯ ಕೇಂದ್ರಕ್ಕೆ ರವಾನಿಸುತ್ತದೆ. ರಕ್ಷಣಾ ಕೇಂದ್ರ ರಕ್ಷಣಾ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತದೆ. ಇಂತಹ ಸಾಮರ್ಥ್ಯ ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡಲು, ಹುಡುಕಾಟದ ಸಮಯವನ್ನು ಕಡಿಮೆಗೊಳಿಸಿ, ಅಪಾಯದಲ್ಲಿರುವ ವ್ಯಕ್ತಿಗಳನ್ನು ರಕ್ಷಿಸುವ ಸಾಧ್ಯತೆಗಳನ್ನು ಹೆಚ್ಚಿಸಲು ಪೂರಕವಾಗಿದೆ. ಎಸ್ಎಎಸ್&ಆರ್ ಸೇವೆಗಳನ್ನು ಜಾರಿಗೆ ತರುವುದರಿಂದ, ಈ ಉಪಗ್ರಹ ಜಾಗತಿಕ ಮಟ್ಟದಲ್ಲಿ ಸುರಕ್ಷತೆ ಹೆಚ್ಚಿಸಲು ಮತ್ತು ತುರ್ತು ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ. ಇದು ಉಪಗ್ರಹಗಳಲ್ಲಿ ಮಾನವೀಯ ಮೌಲ್ಯಗಳ ಅಳವಡಿಕೆಗೆ ಉತ್ತಮ ಉದಾಹರಣೆಯಾಗಿದೆ.

2024ರಲ್ಲಿ ಬಾಹ್ಯಾಕಾಶ ಯೋಜನೆಗಳಲ್ಲಿ ಭಾರತದ ಜಿಗಿತ

ಭಾರತದ ಇನ್ಸಾಟ್-3ಡಿಎಸ್ ಉಪಗ್ರಹ ಉಡಾವಣೆ 2024ರಲ್ಲಿ ಭಾರತದ ಎರಡನೇ ಬಾಹ್ಯಾಕಾಶ ಯೋಜನೆಯಾಗಿದೆ. ಭಾರತ 2024ರ ಜನವರಿ 1ರಂದೇ ಎಕ್ಸ್‌ಪೋಸ್ಯಾಟ್ ಕ್ಷ-ಕಿರಣ ಅನ್ವೇಷಣಾ ಉಪಗ್ರಹವನ್ನು ಉಡಾವಣೆಗೊಳಿಸಿತ್ತು.

ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರೊಮೋಷನ್ ಆ್ಯಂಡ್ ಆಥರೈಸೇಷನ್ ಸೆಂಟರ್ (ಇನ್-ಸ್ಪೇಸ್ IN-SPACe) ಮುಂದಿನ 15 ತಿಂಗಳುಗಳ ಅವಧಿಯಲ್ಲಿ 30 ಉಡಾವಣೆಗಳನ್ನು ನಡೆಸುವ ಮಹತ್ವಾಕಾಂಕ್ಷೆಯನ್ನು ಘೋಷಿಸಿತ್ತು. ಇದು ಮೊದಲು ಭಾರತದಲ್ಲಿ ಅತಿಹೆಚ್ಚು ಬಾಹ್ಯಾಕಾಶ ಚಟುವಟಿಕೆಗಳು ನಡೆದ 2023ಕ್ಕೆ ಹೋಲಿಸಿದರೆ, ಬಹಳಷ್ಟು ಹೆಚ್ಚಿನ ಯೋಜನೆಗಳಾಗಿವೆ. 2023ರಲ್ಲಿ ಭಾರತ 8 ಉಡಾವಣೆಗಳನ್ನು ನಿರ್ವಹಿಸಿತ್ತು.

2024ರಲ್ಲಿ ಗಗನಯಾನ ಮಾನವ ಸಹಿತ ಬಾಹ್ಯಾಕಾಶ ಯೋಜನೆಯ ಭಾಗವಾದ ಪರೀಕ್ಷಾ ಹಾರಾಟಗಳ ಕಡೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ಇದರ ಸಿದ್ಧತೆಯ ಅಂಗವಾಗಿ, ಇಸ್ರೋ ಕಳೆದ ಅಕ್ಟೋಬರ್ ತಿಂಗಳಲ್ಲಿ ಸಿಬ್ಬಂದಿ ರಹಿತವಾದ ಕ್ಯಾಪ್ಸೂಲ್‌ನ ಸಬ್‌ಆರ್ಬಿಟಲ್ ಪರೀಕ್ಷಾ ಹಾರಾಟ ಮತ್ತು ಅಬಾರ್ಟ್ ಪರೀಕ್ಷೆಯನ್ನು ನಡೆಸಿತ್ತು.

ಲೇಖಕರು: ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ