ಕನ್ನಡ ಸುದ್ದಿ  /  ಕ್ರೀಡೆ  /  Watch: ಸೋರುತ್ತಿದೆ ನರೇಂದ್ರ ಮೋದಿ ಸ್ಟೇಡಿಯಂ; ಇಲ್ಲಿ ವಿಶ್ವಕಪ್ ಆಯೋಜಿಸ್ತಾರಂತೆ ಎಂದು ಟೀಕಿಸಿದ ಫ್ಯಾನ್ಸ್

Watch: ಸೋರುತ್ತಿದೆ ನರೇಂದ್ರ ಮೋದಿ ಸ್ಟೇಡಿಯಂ; ಇಲ್ಲಿ ವಿಶ್ವಕಪ್ ಆಯೋಜಿಸ್ತಾರಂತೆ ಎಂದು ಟೀಕಿಸಿದ ಫ್ಯಾನ್ಸ್

Jayaraj HT Kannada

May 29, 2023 02:35 PM IST

ನರೇಂದ್ರ ಮೋದಿ ಸ್ಟೇಡಿಯಂನ ಚಾವಣಿ ಸೋರಿಕೆ ಬಗ್ಗೆ ಅಭಿಮಾನಿಗಳ ದೂರು

    • Narendra Modi Stadium: ಸಿಎಸ್‌ಕೆ ಮತ್ತು ಗುಜರಾತ್‌ ಟೈಟಾನ್ಸ್ ನಡುವಿನ ಐಪಿಎಲ್ 2023ರ ಫೈನಲ್‌ ಪಂದ್ಯ ನಡೆಯುವ ನರೇಂದ್ರ ಮೋದಿ ಸ್ಟೇಡಿಯಂನ ಚಾವಣಿಯಲ್ಲಿ ನೀರು ಸೋರಿಕೆಯಾಗುತ್ತಿರುವ ಕುರಿತು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ, 
ನರೇಂದ್ರ ಮೋದಿ ಸ್ಟೇಡಿಯಂನ ಚಾವಣಿ ಸೋರಿಕೆ ಬಗ್ಗೆ ಅಭಿಮಾನಿಗಳ ದೂರು
ನರೇಂದ್ರ ಮೋದಿ ಸ್ಟೇಡಿಯಂನ ಚಾವಣಿ ಸೋರಿಕೆ ಬಗ್ಗೆ ಅಭಿಮಾನಿಗಳ ದೂರು (Twitter)

ಅಹಮದಾಬಾದ್‌ನಲ್ಲಿ ಭಾನುವಾರ ನಡೆಯಬೇಕಿದ್ದ ಐಪಿಎಲ್‌ 16ನೇ ಆವೃತ್ತಿಯ ಫೈನಲ್‌ (IPL 2023 final) ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳು ಇಂದು (ಸೋಮವಾರ) ನಡೆಯುವ ಮೀಸಲು ದಿನದ ಪಂದ್ಯದಲ್ಲಿ ಕಣಕ್ಕಿಳಿಯುತ್ತಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

ದೋಹಾ ಡೈಮಂಡ್ ಲೀಗ್​​​ 2024: ನೀರಜ್ ಚೋಪ್ರಾಗೆ 2ನೇ ಸ್ಥಾನ; ಕೇವಲ 2 ಸೆಂಟಿ ಮೀಟರ್​​ಗಳಲ್ಲಿ ತಪ್ಪಿತು ಮೊದಲ ಸ್ಥಾನ

Brij Bhushan Singh: ಬ್ರಿಜ್​ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಎಂದ ದೆಹಲಿ ಕೋರ್ಟ್

ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್​ಶಿಪ್​​; ಬೆಂಗಳೂರಿನ ದೇವಿಕಾ ದೇಸಾಯಿ, ದಿಶಾ ಮೋಹನ್ ಆಯ್ಕೆ

ಮಳೆಯಿಂದಾಗಿ ಐಪಿಎಲ್ 2023ರ ಫೈನಲ್ ಪಂದ್ಯ ಮುಂದೂಡಿದ್ದರಿಂದ, ಅಭಿಮಾನಿಗಳು ನಿರಾಶರಾದರು. ಇದೊಂದೇ ಅಲ್ಲ, ರೋಚಕ ಫೈನಲ್‌ ಪಂದ್ಯ ಕಣ್ತುಂಬಿಕೊಳ್ಳಲು ಬಂದಿದ್ದ ಕೆಲವು ಅಭಿಮಾನಿಗಳಿಗೆ ಮತ್ತೊಂದು ವಿಚಾರವಾಗಿ ಬೇಸರವಾಗಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೇರಿದ್ದ ಕೆಲ ಅಭಿಮಾನಿಗಳಿಗೆ ಸ್ಟೇಡಿಯಂನ ಚಾವಣಿಯಲ್ಲಿ ಸೋರಿಕೆಯಾಗುತ್ತಿದ್ದ ನೀರಿನಿಂದ ಕಿರಿಕಿರಿಯಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕೆಲ ಅಭಿಮಾನಿಗಳು ಆಕ್ರೋಶ ಹಾಗೂ ಟೀಕೆ ಹೊರಹಾಕಿದ್ದಾರೆ.

ಟ್ವಿಟರ್‌ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನ ದೃಶ್ಯಗಳನ್ನು ಹಂಚಿಕೊಂಡಿರುವ ಅಭಿಮಾನಿಯೊಬ್ಬರು, ಅಲ್ಲಿನ ವ್ಯವಸ್ಥೆ ಬಗ್ಗೆ ಟೀಕಿಸಿದ್ದಾರೆ. ಈ ವಿಡಿಯೋದಲ್ಲಿ ಪ್ರೇಕ್ಷಕರು ಕ್ರೀಡಾಂಗಣದ ಚಾವಣಿಯ ನಡುವೆ ನೀರು ಸುರಿಯುವುದನ್ನು ಕಾಣಬಹುದು. “ಮುಚ್ಚಿದ ಚಾವಣಿ ಇರುವ ಕ್ರೀಡಾಂಗಣಗಳಿಗೆ ಬೇಡಿಕೆ ಇಡುವ ಜನರು ಇಲ್ಲೊಮ್ಮೆ ನೋಡಿ. ವಿಶ್ವದ ಅತಿದೊಡ್ಡ ಕ್ರೀಡಾಂಗಣ(ಕ್ರಿಕೆಟ್‌ ಸ್ಟೇಡಿಯಂ)ದ ಪಿಲ್ಲರ್‌ಗಳು ಮತ್ತು ಚಾವಣಿಗಳನ್ನೊಮ್ಮೆ ನೋಡಿ. ಶ್ರೀಮಂತ ಕ್ರಿಕೆಟ್ ಮಂಡಳಿ ಸೋರುತ್ತಿದೆ” ಎಂದು ಟ್ವಿಟರ್ ಬಳಕೆದಾರರೊಬ್ಬರು ವ್ಯಂಗ್ಯವಾಗಿ ಶೀರ್ಷಿಕೆ ನೀಡಿದ್ದಾರೆ. ಆ ಮೂಲಕ ಕ್ರೀಡಾಂಗಣದಲ್ಲಿ ವ್ಯವಸ್ಥೆ ಸರಿ ಇಲ್ಲ ಎಂಬ ಬಗ್ಗೆ ಬಿಸಿಸಿಐಯನ್ನು ಕುಟುಕಿದ್ದಾರೆ.

ವೈರಲ್ ಆಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಗಮನ ಸೆಳೆದಿದೆ. ಇದಕ್ಕೆ ಹಲವು ಪ್ರತಿಕ್ರಿಯೆ ನೀಡಿದ್ದಾರೆ. “ಕಳಪೆ ಅನುಭವ. ಸ್ಟೇಡಿಯಂನ ಒಳಗೆ ಮತ್ತು ಹೊರಗಡೆ ಕೂಡಾ. ಪಾರ್ಕಿಂಗ್‌ಗೆ ಗೊತ್ತುಪಡಿಸಲಾದ ಸ್ಥಳವು ಮಣ್ಣಿನಲ್ಲಿ ಮುಳುಗಿತ್ತು. ಮಳೆಯಿಂದಾಗಿ ಆ ಪ್ರದೇಶ ಈಜುಕೊಳವಾಗಿ ಬದಲಾಯ್ತು. ಕ್ರೀಡಾಂಗಣದ ಪಕ್ಕದಲ್ಲಿ ಅಭಿವೃದ್ಧಿಯಾಗದ ಪ್ರದೇಶವಿದೆ,” ಎಂದು ಒಬ್ಬ ಬಳಕೆದಾರರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

“ನನಗೆ ಇಂದು ಆಗಿದ್ದು ಎಂತಹ ಅದ್ಭುತ ಅನುಭವ. ಇದೀಗ ಈ ಕ್ರೀಡಾಂಗಣದಲ್ಲಿ ವಿಶ್ವಕಪ್ ಫೈನಲ್ ಪಂದ್ಯವನ್ನು ಆಯೋಜಿಸಲು ಯೋಜಿಸಲಾಗುತ್ತಿದೆ” ಎಂದು ಮತ್ತೊಬ್ಬ ಬಳಕೆದಾರ ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.

ಈ ಹಿಂದೆ ಮೊಟೆರಾ ಸ್ಟೇಡಿಯಂ ಎಂದು ಕರೆಯಲಾಗುತ್ತಿದ್ದ ಅಹಮದಾಬಾದ್‌ ಸ್ಟೇಡಿಯಂ ಅನ್ನು 2021ರಲ್ಲಿ ನವೀಕರಿಸಿದ ಬಳಿಕ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಯಿತು. 2015ರಲ್ಲಿ ಇದನ್ನು ನವೀಕರಣಕ್ಕಾಗಿ ಮುಚ್ಚಲಾಗಿತ್ತು. ನವೀಕರಣದ ಬಳಿಕ ಇದು ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬರೋಬ್ಬರಿ 1.32 ಲಕ್ಷ ಪ್ರೇಕ್ಷಕರಿಗೆ ಈ ಸ್ಟೇಡಿಯಂ ಅವಕಾಶ ಕಲ್ಪಿಸುತ್ತದೆ. 2023ರ ಐಸಿಸಿ ವಿಶ್ವಕಪ್‌ನ ಫೈನಲ್‌ ಪಂದ್ಯಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸುವ ಸಾಧ್ಯತೆಯಿದೆ.

ಭಾನುವಾರದಂದು, ಅಹಮದಾಬಾದ್‌ನಲ್ಲಿ ಟಾಸ್ ಪ್ರಕ್ರಿಯೆಗಿಂತ ಅರ್ಧ ಗಂಟೆಗೆ ಮುಂಚಿತವಾಗಿ ಮಳೆ ಆರಂಭವಾಯಿತು. ಮುಂದಿನ ಎರಡೂವರೆ ಗಂಟೆಗಳ ಕಾಲ ವರುಣ ಹಿಂತಿರುಗಲೇ ಇಲ್ಲ. ರಾತ್ರಿ 9:00 ಗಂಟೆಯ ನಂತರ ಮಳೆ ನಿಂತ ಬಳಿಕ ಪಿಚ್‌ನ ಕವರ್‌ಗಳನ್ನು ತೆಗೆಯಲಾಯಿತು. ಆದರೆ, ಮತ್ತೆ ಭಾರಿ ಮಳೆ ಬಂದ ಹಿನ್ನೆಲೆಯಲ್ಲಿ ಬೇರೆ ದಾರಿ ಇಲ್ಲದೆ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಯ್ತು.‌ ಹೀಗಾಗಿ ಫೈನಲ್‌ ಪಂದ್ಯ ಇಂದು ನಡೆಯಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ