Bangalore Crime: ಬೆಂಗಳೂರಲ್ಲಿ ತಾಯಿ ಮಗಳ ಜಗಳ, ಮಗಳನ್ನು ಕೊಂದಳಾ ತಾಯಿ, ತಲಾಖ್ ನೀಡಿಯೂ ಪತ್ನಿ ಕೊಲೆ
Apr 29, 2024 11:41 PM IST
ಬೆಂಗಳೂರಿನಲ್ಲಿ ಎರಡು ಕಡೆ ಕೊಲೆ ಪ್ರಕರಣ ನಡೆದಿವೆ.
- ಬೆಂಗಳೂರಿನಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಕೊಲೆಯಾಗಿವೆ. ತಾಯಿಯೇ ಮಗಳನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿರುವುದು ಒಂದೆಡೆಯಾದರೆ, ಮತ್ತೊಂದು ಕಡೆ ಪತ್ನಿಯನ್ನು ಪತಿ ಹತ್ಯೆಗೈದಿರುವುದು ಕಂಡು ಬಂದಿದೆ. ಪ್ರಕರಣಗಳ ವಿಚಾರಣೆ ನಡೆದಿದೆ.
- (ವರದಿ: ಎಚ್.ಮಾರುತಿ. ಬೆಂಗಳೂರು)
ಬೆಂಗಳೂರು:ಪಿಯುಸಿ ಫಲಿತಾಂಶದ ವಿಚಾರವಾಗಿ ತಾಯಿ ಮಗಳು ಜಗಳವಾಡಿಕೊಂಡು ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದು, ಮಗಳು ಮೃತಪಟ್ಟು ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 19 ವರ್ಷದ ಪಿಯುಸಿ ವಿದ್ಯಾರ್ಥಿನಿ ಸಾಹಿತಿ ಮೃತಪಟ್ಟ ಯುವತಿ. ಇದೇ ಠಾಣೆ ವ್ಯಾಪ್ತಿಯ ಶಾಸ್ತ್ರಿನಗರದಲ್ಲಿ ಸಾಹಿತಿ ಮತ್ತು ಅವರ ತಾಯಿ ವಾಸವಾಗಿದ. ಕೆಲವು ವರ್ಷಗಳ ಹಿಂದೆ ಅವರ ತಂದೆ ಮೃತಪಟ್ಟಿದ್ದಾರೆ.ತಾಯಿ ಮತ್ತು ಮಗಳು ಪದೇ ಪದೇ ಜಗಳವಾಡುತ್ತಿದ್ದರು. ಎಂದಿನಂತೆ ಸೋಮವಾರವೂ ಇಬ್ಬರ ನಡುವೆ ಜಗಳವಾಗಿದೆ. ಸಿಟ್ಟಿನಲ್ಲಿ ಮಗಳು ಸಾಹಿತಿ ತಾಯಿಗೆ ಚಾಕುವಿನಿಂದ ಇರಿದಿದ್ದಾರೆ.ಅದೇ ಸಿಟ್ಟಿನಲ್ಲಿ ತಾಯಿಯೂ ಸಹ ಮಗಳಿಗೆ ಚಾಕುವಿನಿಂದ ಇರಿದಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಚಾಕು ಇರಿತದಿಂದ ತೀವ್ರ ರಕ್ತಸ್ರಾವವಾಗಿ ಸಾಹಿತಿ ಮೃತಪಟ್ಟಿದ್ದಾರೆ. ಸಾಹಿತಿ ಮೃತಪಟ್ಟಿದ್ದಾರೆ.ಅವರ ತಾಯಿ ಸಹ ಚಾಕು ಇರಿತದಿಂದ ಗಾಯಗೊಂಡಿದ್ದಾರೆ. ಅಪಾಯದಿಂದ ಪಾರಾಗಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ತಾಯಿಯೇ ಆಕಸ್ಮಿಕವಾಗಿ ಹತ್ಯೆ ಮಾಡಿರಬಹುದು ಎನ್ನುವುದು ಊಹೆಯಷ್ಟೇ. ಬೇರೆಯವರೂ ಕೊಲೆ ಮಾಡಿರುವ ಆಯಾಮದಿಂದಲೂ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಲಾಖ್ ನೀಡಿಯೂ ಪತ್ನಿ ಕೊಲೆ
ತಲಾಖ್ ನೀಡಿದ ಪತಿಯಿಂದ ದೂರ ಉಳಿಯಲು ನಿರ್ಧರಿಸಿ ಮನೆಯಿಂದ ಸಾಮಾನು ಸರಂಜಾಮು ತೆಗೆದುಕೊಂಡು ಹೋಗಲು ಬಂದಿದ್ದ ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಘಟನೆ
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿಯಾಫತ್ ಉನ್ನೀಸಾ ಕೊಲೆಗೀಡಾದ ಮಹಿಳೆ. ಈ ಕೃತ್ಯ ಎಸಗಿರುವ ಆರೋಪದಡಿಯಲ್ಲಿ ಪತಿ ನೂರುಲ್ಲಾ ಎಂಬಾತನನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.
ನೂರುಲ್ಲಾ ಮತ್ತು ಉನ್ನೀಸಾ ದಂಪತಿಗಳು ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದಾರೆ. ಇತ್ತೀಚೆಗೆ ದಂಪತಿ ನಡುವೆ ಕಲಹ ಶುರುವಾಗಿತ್ತು. ನೂರುಲ್ಲಾ ಪತ್ನಿ ಉನ್ನೀಸಾಗೆ ತಲಾಖ್ ನೀಡಿದ್ದ. ಇದರಿಂದ ಪತ್ನಿ ಬೇರೆ ಮನೆ ಮಾಡಿಕೊಂಡು ವಾಸವಿದ್ದರು.
ಉನ್ನೀಸಾ ಅವರು ಪತಿಯ ಮನೆಯಲ್ಲಿದ್ದ ಕೆಲವು ಸಾಮಾನುಗಳನ್ನು ತೆಗೆದುಕೊಂಡು ಹೋಗಲು ಪತಿಯ ಮನೆಗೆ ಆಗಮಿಸಿದ್ದು ಈ ಸಂದರ್ಭದಲ್ಲಿ ಆರೋಪಿ ನೂರುಲ್ಲಾ ಪತ್ನಿ ಜೊತೆ ಜಗಳ ಆರಂಭಿಸಿ ಚಾಕುವಿನಿಂದ ಚುಚ್ಚಿದ್ದಾನೆ. ಇದರಿಂದ ಪತ್ನಿ ಮೃತಪಟ್ಟಿದ್ದಾರೆ ಎಂದು ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಾರು ಮತ್ತು ಬೈಕ್ ನಡುವೆ ಡಿಕ್ಕಿ; ಹಿಂಬದಿ ಸವಾರ ಸಾವು
ಬೆಂಗಳೂರು ಹೊರ ವಲಯದ ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಗುರು ಸಿದ್ದೇಶ್ವರ ಚಿತ್ರಮಂದಿರ ಹತ್ತಿರ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಹಿಂಬದಿ ಸವಾರ ರಾಜು ಹುಸೇನ್ ಎಂಬುವವರು ಮೃತಪಟ್ಟಿದ್ದಾರೆ.
ಅಸ್ಸಾಂ ಮೂಲದ 33 ವರ್ಷದ ರಾಜು ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಸಹೋದ್ಯೋಗಿ ದಾದಾಪೀರ್ ಎಂಬುವವರ ಜೊತೆ ಬೈಕ್‌ನಲ್ಲಿ ಹೊರಟಿದ್ದಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಪಘಾತ ಸಂಭವಿಸಿದ ರಭಸಕ್ಕೆ ಬೈಕ್ ಸಮೇತ ದಾದಾಪೀರ್ ಹಾಗೂ ರಾಜು ಹುಸೇನ್ ರಸ್ತೆಗೆ ಬಿದ್ದಿದ್ದರು. ತೀವ್ರವಾಗಿ ಗಾಯಗೊಂಡ ರಾಜು ಹುಸೇನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ದಾದಾಪೀರ್ ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.
ಕಾರು ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ. ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ವರದಿ:ಎಚ್. ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy appeared in Hindustan Times Kannada website. To read more like this please logon to kannada.hindustantimes.com)