ಕನ್ನಡ ಸುದ್ದಿ  /  ಕರ್ನಾಟಕ  /  Mysore Poilitics:ಪ್ರಸಾದ್ ಬೆಂಬಲಕ್ಕೆ ಕಾಂಗ್ರೆಸ್, ಬಿಜೆಪಿ ನಾಯಕರ ಪೈಪೋಟಿ , ಸಿದ್ದರಾಮಯ್ಯ ನಂತರ ಬಿಎಸ್‌ವೈ ಭೇಟಿ, ಯಾರಿಗೆ ಬೆಂಬಲ?

Mysore Poilitics:ಪ್ರಸಾದ್ ಬೆಂಬಲಕ್ಕೆ ಕಾಂಗ್ರೆಸ್, ಬಿಜೆಪಿ ನಾಯಕರ ಪೈಪೋಟಿ , ಸಿದ್ದರಾಮಯ್ಯ ನಂತರ ಬಿಎಸ್‌ವೈ ಭೇಟಿ, ಯಾರಿಗೆ ಬೆಂಬಲ?

Umesha Bhatta P H HT Kannada

Apr 14, 2024 06:40 PM IST

ಶ್ರೀನಿವಾಸಪ್ರಸಾದ್‌ ಅವರನ್ನು ಸಿಎಂ ಹಾಗೂ ಮಾಜಿ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

    • ಹಿರಿಯ ರಾಜಕಾರಣಿ ವಿ.ಶ್ರೀನಿವಾಸಪ್ರಸಾದ್‌ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅವರ ಬೆಂಬಲ ಪಡೆಯಲು ಕಾಂಗ್ರೆಸ್‌, ಬಿಜೆಪಿ ಮುಂದಾಗಿವೆ. ಆದರೆ ಅವರ ಬೆಂಬಲ ಯಾರಿಗೆ. ಇಲ್ಲಿದೆ ವಿವರ..
    • ವರದಿ:ಪಿ.ರಂಗಸ್ವಾಮಿ, ಮೈಸೂರು
ಶ್ರೀನಿವಾಸಪ್ರಸಾದ್‌ ಅವರನ್ನು ಸಿಎಂ ಹಾಗೂ ಮಾಜಿ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಶ್ರೀನಿವಾಸಪ್ರಸಾದ್‌ ಅವರನ್ನು ಸಿಎಂ ಹಾಗೂ ಮಾಜಿ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಮೈಸೂರು: ಈಗಾಗಲೇ ಸಕ್ರಿಯ ರಾಜಕಾರಣದಿಂದಲೇ ದೂರ ಉಳಿದಿರುವ ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ವಿ.ಶ್ರೀನಿವಾಸಪ್ರಸಾದ್‌ ಬೆಂಬಲ ಪಡೆಯಲು ಪೈಪೋಟಿ ಜೋರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಪ್ರಸಾದ್‌ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಬೆನ್ನಲ್ಲೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಭಾನುವಾರ ಪ್ರಸಾದ್‌ ನಿವಾಸಕ್ಕೆ ದೌಡಾಯಿಸಿದ್ದರು. ಪ್ರಸಾದ್‌ ಅವರನ್ನು ಮೈಸೂರಿನಲ್ಲಿ ಆಯೋಜನೆಗೊಂಡಿದ್ದ ಪ್ರಧಾನಿ ಮೋದಿ ಅವರ ಸಮಾವೇಶಕ್ಕೆ ಆಹ್ವಾನಿಸಿದರು. ಆದರೆ ಪ್ರಸಾದ್‌ ಅನಾರೋಗ್ಯದ ಕಾರಣದಿಂದ ನಾನು ಎಲ್ಲಿಗೂ ಬರುವುದಿಲ್ಲ ಎಂದು ನಯವಾಗಿಯೇ ತಿಳಿಸಿದರು.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ಸಂಚಾರ ಸಲಹೆ; ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ, ಕೆಆರ್‌ಪುರ ಅಪ್‌ ರ‍್ಯಾಂಪ್‌ ಬಂದ್‌, 5 ಪರ್ಯಾಯ ಮಾರ್ಗಗಳ ವಿವರ ಹೀಗಿದೆ

ಬೆಂಗಳೂರು ಕಮಲಾನಗರದ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣ, ಒಂದು ವರ್ಷದ ಬಳಿಕ ಸೆರೆ ಸಿಕ್ಕ ಕಳ್ಳ; ಇನ್ನೆರಡು ಅಪರಾಧ ಸುದ್ದಿಗಳು

ಬೆಂಗಳೂರು ಅಪರಾಧ ಸುದ್ದಿ; 4 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಿಸಿಬಿ ಯಶಸ್ವಿ ಕಾರ್ಯಾಚರಣೆ, 2.74 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳ ವಶ

ಕರ್ನಾಟಕ ಅಣೆಕಟ್ಟೆ ನೀರಿನ ಮಟ್ಟ ಮೇ 15; ರಾಜ್ಯದ 22 ಜಲಾಶಯಗಳ ಪೈಕಿ ಬರಿದಾಗಿವೆ 8 ಡ್ಯಾಮ್‌ಗಳು, ಬಳಕೆಗೆ ಸಿಗುವ ನೀರು ಶೇಕಡ 8.81 ಮಾತ್ರ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದ ಬಿಜೆಪಿ‌ ಸಂಸದ ವಿ ಶ್ರೀನಿವಾಸಪ್ರಸಾದ್ ಅವರ ಬೆಂಬಲ ನಮಗೇ ಸಿಗಲಿದೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ರಾಜಕೀಯ ನಿವೃತ್ತಿಯಾಗಿದ್ದರೂ ಸಂಸದ‌ ವಿ ಶ್ರೀನಿವಾಸಪ್ರಸಾದ್ ಅವರ ಬೆಂಬಲ ಪಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ತೀವ್ರ ಪೈಪೋಟಿ ನಡೆದಿದೆ. ಮೊದಲಿಗೆ ಕಾಂಗ್ರೆಸ್ ನಾಯಕರ ದಂಡು ಶ್ರೀನಿವಾಸಪ್ರಸಾದ್ ಅವರನ್ನು ಭೇಟಿ‌ ಮಾಡಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿತ್ತು. ಕಾಂಗ್ರೆಸ್ ನಾಯಕರ ಭೇಟಿ ಬೆನ್ನಲ್ಲೇ ಶ್ರೀನಿವಾಸಪ್ರಸಾದ್ ಕುಟುಂಬದ ಕೆಲ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು‌. ಇದಾದ ನಂತರ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಅವರು ಕೂಡ ಶ್ರೀನಿವಾಸಪ್ರಸಾದ್ ಅವರನ್ನು ಭೇಟಿ ಮಾಡಿದ್ದು, ಶ್ರೀನಿವಾಸಪ್ರಸಾದ್ ಅವರ ಬೆಂಬಲ ಆಶೀರ್ವಾದ ನನಗಿದೆ ಎಂದು ಹೇಳಿಕೊಂಡು ಬಾಲರಾಜ್ ಪ್ರಚಾರ ನಡೆಸುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಸೇರಿರುವ ಶ್ರೀನಿವಾಸಪ್ರಸಾದ್ ಅಭಿಮಾನಿಗಳು, ಪ್ರಸಾದ್ ಅವರ ಬೆಂಬಲ ಆಶೀರ್ವಾದ ನಮಗೇ ಸಿಗಲಿದೆ ಎಂದು ಹೇಳುತ್ತಿದ್ದಾರೆ‌‌. ಹಾಲಿ ಬಿಜೆಪಿ ಸಂಸದ ಹಾಗೂ ದಲಿತ ಸಮುದಾಯದ ಪ್ರಬಲ ಮುಖಂಡರಾಗಿರುವ ವಿ ಶ್ರೀನಿವಾಸಪ್ರಸಾದ್ ಮಾತ್ರ ರಾಜಕೀಯ ನಿವೃತ್ತಿ ಪಡೆದಿರುವುದರಿಂದ ತಟಸ್ಥವಾಗಿದ್ದಾರೆ. ಇದೇ ಕಾರಣದಿಂದ ಅವರ ಆಶೀರ್ವಾದ ಬೆಂಬಲ ಸಿಕ್ಕರೆ ಅನುಕೂಲ ಎಂಬ ಕಾರಣಕ್ಕೆ ಶ್ರೀನಿವಾಸಪ್ರಸಾದ್ ಅವರ ಮನವೊಲಿಸಲು‌ ಬಿಜೆಪಿ ಹಾಗು ಕಾಂಗ್ರೆಸ್ ನಾಯಕರು ಹರಸಾಹಸ ಪಡುತ್ತಿದ್ದಾರೆ.

ಸಿದ್ದು ಭೇಟಿ ಸಂಚಲನ

ರಾಜಕೀಯ ಬದ್ದ ವೈರಿಗಳಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಸಂಸದ ವಿ ಶ್ರೀನಿವಾಸಪ್ರಸಾದ್ ಅವರನ್ನು ಇಂದು (ಏಪ್ರಿಲ್ 13ರಂದು) ದಿಢೀರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದು ರಾಜಕೀಯವಾಗಿ ಸಂಚಲನವನ್ನು ಉಂಟುಮಾಡಿದೆ.

ಚಾಮರಾಜನಗರ ಬಿಜೆಪಿ ಸಂಸದ ವಿ ಶ್ರೀನಿವಾಸಪ್ರಸಾದ್ ಅವರ ನಿವಾಸಕ್ಕೆ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಢೀರ್ ಭೇಟಿ ನೀಡಿದ್ದು, ಅಚ್ಚರಿಯ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಸಿದ್ದರಾಮಯ್ಯ ಹಾಗು ಶ್ರೀನಿವಾಸಪ್ರಸಾದ್ ಕಳೆದ ಹಲವು ವರ್ಷಗಳಿಂದ ರಾಜಕೀಯವಾಗಿ ದೂರವಾಗಿಯೇ ಇದ್ದರು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಸಿದ್ದರಾಮಯ್ಯರಿಂದ ಅಂತರ ಕಾಯ್ದುಕೊಂಡಿದ್ದ ವಿ ಶ್ರೀನಿವಾಸಪ್ರಸಾದ್ ಅವರು ತಮಗೆ ಅವಕಾಶ ಸಿಕ್ಕಾಗಲೆಲ್ಲಾ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡುತ್ತಾ ಬಂದಿದ್ದರು. ಇತ್ತೀಚೆಗೆ ರಾಜಕೀಯ ನಿವೃತ್ತಿ ಘೋಷಿಸಿರುವ ವಿ ಶ್ರೀನಿವಾಸಪ್ರಸಾದ್ ಅವರ ಆರೋಗ್ಯ ವಿಚಾರಿಸುವ ನೆಪದಲ್ಲಿ ಮೈಸೂರಿನ ಜಯಲಕ್ಷ್ಮಿಪುರನಲ್ಲಿರುವ ಶ್ರೀನಿವಾಸಪ್ರಸಾದ್ ಅವರ ನಿವಾಸಕ್ಕೆ ದಿಢೀರ್ ಭೇಟಿ ನೀಡಿದ ಸಿದ್ದರಾಮಯ್ಯ, ಕೆಲ ಸಮಯ ಉಭಯಕುಶಲೋಪರಿಯಾಗಿ ಮಾತುಕತೆ ನಡೆಸಿದರು. ಆದರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇವರಿಬ್ಬರ ಭೇಟಿ ಭಾರೀ ಮಹತ್ವ ಪಡೆದುಕೊಂಡಿತು. ಏಕೆಂದರೆ ವಿ ಶ್ರೀನಿವಾಸಪ್ರಸಾದ್ ಅವರ ಮನೆಗೆ ನಾನು ಹೋಗುವುದಿಲ್ಲ ಎಂದು ವಾರದ ಹಿಂದಷ್ಟೇ ಹೇಳಿದ್ದ ಸಿಎಂ ಸಿದ್ದರಾಮಯ್ಯ, ಒಂದೇ ವಾರದಲ್ಲಿ ತಮ್ಮ ನಿಲುವು ಬದಲಾಯಿಸಿಕೊಂಡು ಪ್ರಸಾದ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದು ವಿಶೇಷ ಎನಿಸಿತು‌. ಶ್ರೀನಿವಾಸಪ್ರಸಾದ್ ಅವರ ಮನೆಗೆ ಹೋಗದಿದ್ದರೆ ಕಾಂಗ್ರೆಸ್ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂಬ ಸುಳಿವು ನಾಯಕರಿಗೆ ಸಿಕ್ಕಿತ್ತು. ಶ್ರೀನಿವಾಸಪ್ರಸಾದ್ ಭೇಟಿ ಮಾಡದಿದ್ದರೆ ಆಗುವ ನಷ್ಟದ ಬಗ್ಗೆ ನಿನ್ನೆ ರಾತ್ರಿ ಸ್ಥಳೀಯ ನಾಯಕರು ಸಿದ್ದರಾಮಯ್ಯಗೆ ಮನವರಿಕೆ ಮಾಡಿಕೊಟ್ಟಿದ್ದರು. ಇದೇ ಕಾರಣದಿಂದಲೇ ಏಕಾಏಕಿ ಶ್ರೀನಿವಾಸಪ್ರಸಾದ್ ರನ್ನು ಸಿದ್ದರಾಮಯ್ಯ ಭೇಟಿ ಮಾಡಿದರು.

ಪರಸ್ಪರ ಭೇಟಿ ಕುರಿತು ಹೇಳಿದ್ದೇನು?

ವಿ ಶ್ರೀನಿವಾಸಪ್ರಸಾದ್ ರನ್ನು ದಿಢೀರ್ ಭೇಟಿಯಾದ ಬಗ್ಗೆ ಪ್ರತಿಕ್ರಿಸಿರುವ ಸಿಎಂ ಸಿದ್ದರಾಮಯ್ಯ, ನೀವು ಕಾಂಗ್ರೆಸ್ ನಲ್ಲಿ ಇದ್ದವರು ಕಾಂಗ್ರೆಸ್ ಬಗ್ಗೆ ಸಿಂಪಥಿ ಇರಲಿ‌ ಎಂದು ಹೇಳಿದ್ದೇನೆ. ಶ್ರೀನಿವಾಸಪ್ರಸಾದ್ ಜೊತೆ ರಾಜಕೀಯದ ಬಗ್ಗೆ ಚರ್ಚೆ ಮಾಡಿಲ್ಲ. ಏಕೆಂದರೆ ಅವರು ರಾಜಕೀಯವಾಗಿ ನಿವೃತ್ತಿ ತೆಗೆದುಕೊಂಡಿದ್ದಾರೆ. ಹೀಗಾಗಿ ರಾಜಕೀಯದ ಬಗ್ಗೆ ಹೆಚ್ಚು ಏನು ಮಾತನಾಡಲಿಲ್ಲ. ಅವರು ನಮ್ಮ ಹಳೆಯ ಸ್ನೇಹಿತರು. ರಾಜಕೀಯ ಕಾರಣಗಳಿಂದ ಅವರು ಬಿಜೆಪಿಗೆ ಹೋಗಿದ್ದರು. ಈಗ ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ ಅಷ್ಟೇ ಎಂದು ಸಿದ್ದರಾಮಯ್ಯ ಹೇಳಿದರು.

ಇದೇ ವೇಳೆ ಸಂಸದ ವಿ ಶ್ರೀನಿವಾಸಪ್ರಸಾದ್ ಅವರು ಪ್ರತಿಕ್ರಿಯಿಸಿ, ನರೇಂದ್ರಮೋದಿಯವರ ನಾಳಿನ ಮೈಸೂರು ಸಮಾವೇಶಕ್ಕೆ ನನಗೆ ಆಹ್ವಾನ ಬಂದಿಲ್ಲ, ಬರುವುದೂ ಇಲ್ಲ. ನನ್ನನ್ನು ಕರೆದಿಲ್ಲ, ಕರೆಯೋದೂ ಇಲ್ಲ, ನಾನು ಹೋಗೋದೂ ಇಲ್ಲ. ಸಿದ್ದರಾಮಯ್ಯ ಜೊತೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಅವರ ಭೇಟಿ ನನಗೆ ಸಹಜವಾಗಿ ಖುಷಿ ಕೊಟ್ಟಿದೆ. ಅವರು ನನ್ನ ಬೆಂಬಲ ಕೇಳಿದ್ದಾರೆ. ನಾನೀಗ ರಾಜಕೀಯವಾಗಿ ನಿವೃತ್ತಿಯಾಗಿದ್ದೇನೆಂದು ಹೇಳಿದ್ದೇನೆ ಅಷ್ಟೇ. ಚಾಮರಾಜನಗರದಲ್ಲಿ ಕಾಂಗ್ರೆಸ್ ಗೆ ಉತ್ತಮವಾದ ವಾತಾವರಣ ಇದೆ ಎನ್ನುವ ಮೂಲಕ ಕಾಂಗ್ರೆಸ್‌ಗೆ ಪರೋಕ್ಷವಾಗಿ ಪ್ರಸಾದ್‌ ಬೆಂಬಲಿಸಿದ್ದಾರೆ.

ಬಿಎಸ್‌ವೈ ದೌಡು

ಈ ನಡುವೆ ಮೈಸೂರಿಗೆ ಭಾನುವಾರ ಆಗಮಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪ್ರಸಾದ್‌ ನಿವಾಸಕ್ಕೆ ಆಗಮಿಸಿದ್ದರು. ಕೆಲ ಹೊತ್ತು ಅವರೊಂದಿಗೆ ಚರ್ಚಿಸಿದರು. ಬಿಜೆಪಿ ಕೊನೆಗಾಲದಲ್ಲಿ ನಿಮ್ಮೊಂದಿಗೆ ಇದೆ. ನಿಮ್ಮ ಕುಟುಂಬದ ಜತೆಯೂ ಇದೆ. ಈ ಚುನಾವಣೆಯಲ್ಲಿ ನಮ್ಮೊಂದಿಗೆ ಇರಿ. ಎರಡು ಕ್ಷೇತ್ರದಲ್ಲಿ ಪಕ್ಷ ಬೆಂಬಲಿಸಿ ಎಂದು ಯಡಿಯೂರಪ್ಪ ಮನವಿ ಮಾಡಿದರು. ಸಮಾವೇಶಕ್ಕೆ ಬನ್ನಿ ಎಂದು ಕೂಡ ಆಹ್ವಾನಿಸಿದರು.

ಈಗಾಗಲೇ ಕಳೆದ ತಿಂಗಳೇ ನಾನು ರಾಜಕೀಯ ನಿವೃತ್ತಿ ಘೋಷಿಸಿದ್ದೇನೆ. ರಾಜಕೀಯ ಸಮಾವೇಶಕ್ಕೆ ಬರುವುದು ಕಷ್ಟ, ಈಗ ನನ್ನ ಆರೋಗ್ಯ ಬೇರೆ ಸರಿಯಿಲ್ಲ. ನಡೆಯಲು ಆಗುವುದಿಲ್ಲ. ಕುಳಿತುಕೊಳ್ಳುವುದು ಕಷ್ಟವಾಗಲಿದೆ. ಇದರಿಂದ ಕ್ಷಮೆ ಇರಲಿ. ನನ್ನನ್ನು ನೋಡಲು ಬಂದಿದ್ದೂ ಖುಷಿಯಾಗಿದೆ ಎಂದು ಪ್ರಸಾದ್‌ ಪ್ರತಿಕ್ರಿಯಿಸಿದರು.

(ವರದಿ: ಪಿ.ರಂಗಸ್ವಾಮಿ, ಮೈಸೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ