ಕನ್ನಡ ಸುದ್ದಿ  /  ಕರ್ನಾಟಕ  /  Mysuru Dasara: ಮೈಸೂರು ದಸರಾ ಜಂಬೂ ಸವಾರಿ: 3ಗಂಟೆ ಮೆರವಣಿಗೆಯಲ್ಲಿ ಕನ್ನಡದ ಭವ್ಯ ಸಂಸ್ಕೃತಿ ಅನಾವರಣ, ಅಭಿಮನ್ಯು ಗಾಂಭಿರ್ಯದ ಹೆಜ್ಜೆ

Mysuru Dasara: ಮೈಸೂರು ದಸರಾ ಜಂಬೂ ಸವಾರಿ: 3ಗಂಟೆ ಮೆರವಣಿಗೆಯಲ್ಲಿ ಕನ್ನಡದ ಭವ್ಯ ಸಂಸ್ಕೃತಿ ಅನಾವರಣ, ಅಭಿಮನ್ಯು ಗಾಂಭಿರ್ಯದ ಹೆಜ್ಜೆ

Umesha Bhatta P H HT Kannada

Oct 24, 2023 06:50 PM IST

ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿ ಹೊತ್ತ ಅಭಿಮನ್ಯು.

    • Mysuru Dasara Jamboo savari ಮೈಸೂರು ದಸರಾದ( Mysore Dasara) ಪ್ರಮುಖ ಘಟ್ಟವಾದ ಜಂಬೂಸವಾರಿ( Jamboo savari) ಮೂರು ಗಂಟೆಗೂ ಹೆಚ್ಚು ಕಾಲ ಅಂಬಾರಿ ಹೊತ್ತ ಅಭಿಮನ್ಯುವಿನ ನೇತೃತ್ವದಲ್ಲಿ ನಡೆಯಿತು.
ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿ ಹೊತ್ತ ಅಭಿಮನ್ಯು.
ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿ ಹೊತ್ತ ಅಭಿಮನ್ಯು.

ಮೈಸೂರು: ಬಗೆಬಗೆಯ ಕಲಾ ತಂಡಗಳು, ಕರ್ನಾಟಕದ ಜಿಲ್ಲೆಗಳ ಮಹತ್ವ ಸಾರುವ ಸ್ಥಬ್ಧಚಿತ್ರಗಳು, ತಾಯಿ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗಿ ಬಂದ ಅಭಿಮನ್ಯು ನೇತೃತ್ವದ ಜಂಬೂ ಸವಾರಿ ಮೂರು ಗಂಟೆಗೂ ಹೆಚ್ಚು ಸಾಗಿತು.

ಟ್ರೆಂಡಿಂಗ್​ ಸುದ್ದಿ

ನಮ್ಮಲ್ಲಿ ಒಳಜಗಳ ಇಲ್ಲ, ನಮ್ಮ ಸರ್ಕಾರ ಉರುಳಿಸಿಕೊಳ್ಳಲು ಯಾರಿಂದಲೂ ಆಗೋಲ್ಲ: ಸಿಎಂ ಸಿದ್ದರಾಮಯ್ಯ

Hassan Scandal: 6 ದಿನ ಜೈಲು ವಾಸದ ನಂತರ ಜಾಮೀನಿನ ಮೇಲೆ ರೇವಣ್ಣ ಬಿಡುಗಡೆ

Namma Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ; ನಾಗಸಂದ್ರ-ಮಾದಾವರ ಮೆಟ್ರೋ ರೈಲು ಸಂಚಾರ ಜುಲೈ ಅಂತ್ಯಕ್ಕೆ ಆರಂಭ

Bengaluru News: ಬೆಳೆಸೋಕೆ ವರುಷ ಮಳೆಗೆ ನಿಮಿಷ; ಬೆಂಗಳೂರಿನಲ್ಲಿ ಒಂದೇ ವಾರದಲ್ಲಿ ಧರೆಗುರುಳಿದ 1000 ಮರಗಳು

ಇಡೀ ಜಂಬೂಸವಾರಿ ಮೆರವಣಿಗೆ ಕನ್ನಡದ ಭವ್ಯ ಸಂಸ್ಕೃತಿಯನ್ನು ಅನಾವರಣಗೊಳಿಸಿದರೆ ಮತ್ತೊಂದು ಕಡೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಕಾದಿದ್ದ ಸಹಸ್ರಾರು ಜನರಲ್ಲಿ ಸಂತೃಪ್ತಿಯ ಭಕ್ತಿಯ ಭಾವವೂ ಮೂಡಿತು. ಐದು ಲಕ್ಷಕ್ಕೂ ಅಧಿಕ ಮಂದಿ ಈ ಬಾರಿ ಜಂಬೂ ಸವಾರಿಯನ್ನು ನೇರವಾಗಿಯೇ ಕಣ್ತುಂಬಿಕೊಂಡರು.

ಸಿಎಂ ಡಿಸಿಎಂ ಚಾಲನೆ

ಮಧ್ಯಾಹ್ನ 1.45 ರ ಹೊತ್ತಿಗೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಆಗಮಿಸಿದರು. ಅವರೊಂದಿಗೆ ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ, ಕೆ.ವೆಂಕಟೇಶ್‌, ಶಿವರಾಜ ತಂಗಡಗಿ, ರಾಜಣ್ಣ, ಬೈರತಿ ಸುರೇಶ್‌, ಎಂ.ಸಿ.ಸುಧಾಕರ, ಮಂಕಾಳು ವೈದ್ಯ ಸಹಿತ ಹಲವರು ಜತೆಯಲ್ಲಿಯೇ ಅರಮನೆಗೆ ಆಗಮಿಸಿ ಜಂಬೂ ಸವಾರಿ ವೀಕ್ಷಿಸಿದರು. ಡಿಕೆಶಿ ಅವರು ಪತ್ನಿ ಉಷಾ ಸಮೇತರಾಗಿ ಆಗಮಿಸಿ ಇಡೀ ಜಂಬೂ ಸವಾರಿಯನ್ನು ವೀಕ್ಷಿಸಿದ್ದು ವಿಶೇಷವಾಗಿತ್ತು. ಮಧ್ಯಾಹ್ನ 2.10 ರ ಹೊತ್ತಿಗೆ ಮೆರವಣಿಗೆ ಶುರುವಾಯಿತು. ಎಲ್ಲವನ್ನೂ ಗಣ್ಯರು ಆಸಕ್ತಿಯಿಂದಲೇ ವೀಕ್ಷಿಸಿದರು.

ಬಳಿಕ ಸಂಜೆ 5.10 ರ ಹೊತ್ತಿಗೆ ಅಭಿಮನ್ಯು ಅಂಬಾರಿಯನ್ನು ಹೊತ್ತು ಕುಮ್ಕಿ ಆನೆಗಳಾದ ವಿಜಯ ಹಾಗೂ ವರಲಕ್ಷ್ಮಿಯೊಂದಿಗೆ ಆಗಮಿಸಿದಾಗ ಗಣ್ಯರು ವೇದಿಕೆ ಏರಿ ತಾಯಿ ಚಾಮುಂಡೇಶ್ವರಿ ಪುಷ್ಪಾರ್ಚನೆ ಮಾಡಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಭಕ್ತಿ ಭಾವಗಳಿಂದಲೇ ಪುಷ್ಪವನ್ನು ಸಲ್ಲಿಸಿ ಚಾಮುಂಡೇಶ್ವರಿಗೆ ನಮಿಸಿದರು. ಆನೆಗಳೂ ಗಣ್ಯರಿಗೆ ಸೊಂಡಿಲು ಎತ್ತಿ ಗೌರವ ಸಮರ್ಪಿಸಿದವು. ಈ ವೇಳೆ ಕುಶಾಲು ತೋಪು ಹಾರಿಸಿ ರಾಷ್ಟ್ರಗೀತೆ ನುಡಿಸಲಾಯಿತು.

ಸಿಎಂ ಹಾಗೂ ಡಿಸಿಎಂ ಜತೆಯಲ್ಲಿ ಕರ್ನಾಟಕದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ, ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಸಚಿವರಾದ ಡಾ.ಮಹದೇವಪ್ಪ, ಶಿವರಾಜ ತಂಗಡಗಿ, ಮೇಯರ್‌ ಶಿವಕುಮಾರ್‌, ಡಿಸಿ ಡಾ.ರಾಜೇಂದ್ರ, ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಕೂಡ ಪುಷ್ಪಾರ್ಚನೆ ಮಾಡಿದರು. ಮೆರವಣಿಗೆ ಸಂಜೆ 6 ದಾಟಿದರೂ ಅರ್ಧವೂ ಸಾಗಿರಲಿಲ್ಲ.

ಭವ್ಯ ಮೆರವಣಿಗೆ

ಎಂದಿನಂತೆ ಐದು ಕಿ.ಮಿಗೂ ಉದ್ದನೆಯ ಮೆರವಣಿಗೆ ಈ ಬಾರಿ ಇತ್ತು. ಇದರಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ಮಹತ್ವ ಸಾರುವ ಸ್ಥಬ್ಧಚಿತ್ರಗಳು, ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಹಿರಿಮೆ ತಿಳಿಸುವ ಕಲಾ ತಂಡಗಳು ಸಾಗಿದವು. ಜಿಲ್ಲೆಗಳ ಜತೆಯಲ್ಲಿ ಸರ್ಕಾರಿ ಇಲಾಖೆಗಳು, ನಿಗಮ, ಮಂಡಳಿಗಳನ್ನು ಒಳಗೊಂಡ 49 ಸ್ಥಬ್ಧಚಿತ್ರಗಳು ಗಮನ ಸೆಳೆದವು. ಬಹುತೇಕ ಸಂಸ್ಕೃತಿ ಮಹತ್ವ ತಿಳಿಸಿಕೊಡುವ, ಧರ್ಮಗುರುಗಳು, ದಾರ್ಶನಿಕರು, ಪ್ರವಾಸಿ ಸ್ಥಳ, ದೇಗುಲಗಳ, ಅರಣ್ಯ, ವನ್ಯಜೀವಿ ಸೇರಿ ವಿಭಿನ್ನ ವಿಷಯದ ಮಾಹಿತಿ ಪೂರ್ಣ ಸ್ಥಬ್ಧ ಚಿತ್ರಗಳೇ ಆಗಿದ್ದವು. ಕಲಾ ತಂಡಗಳೂ ಇಡೀ ಜಂಬೂ ಸವಾರಿ ಮೆರವಣಿಗೆ ಜೀವಂತಿಕೆ ತುಂಬಿದವು. ಮೈಸೂರು, ದಾವಣಗೆರೆ, ಕೊಡಗು, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕದ ಜನಪದ ವೈಭವ, ಕಲಾವಂತಿಕೆ ಸಾರುವ ತಂಡಗಳು ಕಲೆ ಪ್ರದರ್ಶನ ನೀಡುತ್ತಲೇ ಹೆಜ್ಜೆ ಹಾಕಿದವು.ಆಳೆತ್ತರ ಮರಗಾಲಿನಲ್ಲಿ ತಾಯಿ ಚಾಮುಂಡೇಶ್ವರಿ ರೂಪದಲ್ಲಿ ಬಂದ ಕಲಾವಿದನ ನಡೆ ಗಮನ ಸೆಳೆಯುವಂತಿತ್ತು.

ಪೊಲೀಸ್‌ ಪಡೆಗಳ ಹೆಜ್ಜೆ

ಇನ್ನು ಇಡೀ ಮೆರವಣಿಗೆಯಲ್ಲಿ ಪೊಲೀಸ್‌ ಪಡೆಗಳೂ ಹೆಜ್ಜೆಹಾಕಿದವು. ಮೈಸೂರಿನ ನಗರ ಪೊಲೀಸ್‌, ಜಿಲ್ಲಾ ಪೊಲೀಸ್‌, ಮೀಸಲು ಪಡೆ, ಅಶ್ವರೋಹಿ ಪಡೆ, ಸಂಗೀತ ಪಡೆ, ಮಹಿಳಾ ಪಡೆ ಸೇರಿ ಹಲವು ಪಡೆಗಳು ಪರೇಡ್‌ ನಡೆಸುತ್ತಲೇ ಗಣರಾಜ್ಯೋತ್ಸವ ದಿನದ ಮೆರವಣಿಗೆ ನೆನಪು ಮಾಡಿದವು.

ಅಭಿಮನ್ಯು ನೇತೃತ್ವ

ಸತತ ನಾಲ್ಕನೇ ಬಾರಿ ಅಂಬಾರಿ ಹೊತ್ತ ಅಭಿಮನ್ಯು ಆನೆ ಮಾವುತ ವಸಂತ ಅವರ ಅಣತಿಯಂತೆ ಹೆಜ್ಜೆ ಹಾಕುತ್ತಾ ಸಾಗಿತು. ಜತೆಯಲ್ಲಿಹಿರಿಯ ಆನೆ ವಿಜಯ ಹಾಗೂ ಕಿರಿಯ ವರಲಕ್ಷ್ಮಿ ಆನೆಗಳ ಜತೆಗೆ ಅಲಂಕೃತಗೊಂಡ ಅಭಿಮನ್ಯು ಒಂದಿನಿತೂ ಅಚೀಚೆ ಮಾಡದೇ ಚಿನ್ನ ಅಂಬಾರಿ ಹೊತ್ತು ಗಜ ಗಾಂಭೀರ್ಯದಿಂದಲೇ ಹೆಜ್ಜೆ ಹಾಕುತ್ತಾ ಸಾಗಿದ.

ಅರ್ಜುನ ನಿಶಾನೆ ಆನೆಯಾಗಿ ಇಡೀ ಜಂಬೂಸವಾರಿ ಮೆರವಣಿಗೆ ದಿಕ್ಕು ತೋರಿದರೆ, ಭೀಮ ಹಾಗೂ ಗೋಪಿ ಆನೆಗಳು ನೌಫತ್‌ ಆನೆಗಳಾಗಿ ಮೆರವಣಿಗೆಯಲ್ಲಿ ಭಾಗಿಯಾದವು. ಮಹೇಂದ್ರ, ಧನಂಜಯ, ಪ್ರಶಾಂತ ಸಾಲು ಆನೆಗಳಾಗಿದ್ದವು.

ಹೊಸ ಪ್ರಯೋಗ

ಒಂದೂವರೆ ದಶಕದ ಹಿಂದೆ ಮೈಸೂರು ದಸರಾದಲ್ಲಿ ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳ ದರ್ಬಾರು ಪೋಷಾಕಿನಲ್ಲಿ ಜಂಬೂ ಸವಾರಿಯಲ್ಲಿ ಭಾಗಿಯಾಗಿದ್ದರು. ಈ ಬಾರಿ ಮೆರವಣಿಗೆಯಲ್ಲಿ ಅರಮನೆ ಮಂಡಳಿ 200 ಅಧಿಕಾರಿಗಳು ಹಾಗೂ ಸಿಬ್ಬಂದಿ ವಿವಿಧ ವೇಷಗಳಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು. ಚಂದ್ರಮಂಡಲ,ಸೂರ್ಯ ಮಂಡಲ, ಗಂಡ ಬೇರುಂಡ ಸಹಿತ ಹಲವು ಲಾಂಛನಗಳನ್ನೊಳಗೊಂಡ ಉಡುಗೆ ಧರಿಸಿ ಮೆರವಣಿಗೆಗೆ ಕಳೆ ತಂದರು.

ಪೊಲೀಸರ ಸರ್ಪಗಾವಲು

ಈ ಬಾರಿ ದಸರಾಕ್ಕೆ ಹೆಚ್ಚು ಜನ ಆಗಮಿಸುವ ನಿರೀಕ್ಷೆ ಇದ್ದುದರಿಂದ ಭಾರೀ ಪೊಲೀಸ್‌ ಭದ್ರತೆಯನ್ನೇ ಹಾಕಲಾಗಿತ್ತು. ಅರಮನೆ ಒಳಾವರಣದಲ್ಲಿಯೇ 2 ಸಾವಿರ ಅಧಿಕ ಪೋಲೀಸರಿದ್ದರೆ, ಹೊರಾವರಣದಲ್ಲೂ ಅಷ್ಟೇ ಸಂಖ್ಯೆಯಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಇದಲ್ಲದೇ ಪ್ರಮುಖ ವೃತ್ತ, ರಸ್ತೆಗಳ ಸುತ್ತಲೂ ಪೊಲೀಸರ ಸರ್ಪಗಾವಲು ಬಿಗಿಯಾಗಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ