Congress vs BJP: 'ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು' ಕಾಂಗ್ರೆಸ್ ಜಾಹೀರಾತಿಗೆ ಬಿಜೆಪಿ ತಿರುಗೇಟು
Apr 19, 2024 04:00 PM IST
'ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು' ಎಂಬ ಕಾಂಗ್ರೆಸ್ ಜಾಹೀರಾತಿಗೆ ಕರ್ನಾಟಕ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.
- ಕಾಂಗ್ರೆಸ್-ಬಿಜೆಪಿ ನಡುವೆ ಇದೀಗ ಲೋಕಸಭೆ ಚುನಾವಣಾ ‘ಚೊಂಬು’ ಜಾಹೀರಾತು ಫೈಟ್ ನಡೆಯುತ್ತಿದ್ದು, ಕೈ ನಾಯಕರ ಕೌಂಟರ್‌ಗೆ ಕೇಸರಿ ಪಾಳೆಯದವರು ಪ್ರತಿ ಕೌಂಟರ್ ನೀಡಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ (Karnataka Lok Sabha Election 2024) 14 ಕ್ಷೇತ್ರಗಳ ಮೊದಲ ಹಂತದ ಮತದಾನಕ್ಕೆ ಕೇವಲ ಒಂದು ವಾರ ಮಾತ್ರ (ಏಪ್ರಿಲ್ 28, ಶುಕ್ರವಾರ) ಬಾಕಿ ಇದ್ದು, ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದೊಂದಿಗೆ ಮತಯಾಚನೆ ಮಾಡುತ್ತಿವೆ. ಇದರ ದೊತೆಗೆ ಪರಸ್ಪರ ಆರೋಪ, ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಿವೆ. ಕೌಂಟರ್‌ಗೆ ಪ್ರತಿಕೌಂಟರ್ ಎಂಬಂತೆ ಇವತ್ತು (ಏಪ್ರಿಲ್ 19, ಶುಕ್ರವಾರ) ಕಾಂಗ್ರೆಸ್ (Congress) ನೀಡಿರುವ ಮಾಧ್ಯಮ ಜಾಹೀರಾತಿಗೆ ಬಿಜೆಪಿ (BJP) ಕೆಂಡವಾಗಿದೆ. ಅಷ್ಟಕ್ಕೂ ಕಾಂಗ್ರೆಸ್ ನೀಡಿರುವ ಜಾಹೀರಾತನ್ನು ಮೊದಲು ನೋಡುವುದಾದರೆ ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು ಎಂದು ಆರೋಪಿಸಿದ್ದು, ಪ್ರಮುಖವಾಗಿ ನಾಲ್ಕು ಅಂಶಗಳನ್ನು ಜಾಹೀರಾತಿನಲ್ಲಿ ಪ್ರಸ್ತಾಪಿಸಿದೆ.
- ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುವ ಚೊಂಬು
- ರೈತರ ಆದಾಯ ಡಬಲ್ ಮಾಡುವ ಚೊಂಬು
- ತೆರಿಗೆ ಹಂಚಿಕೆಯಲ್ಲಿ ಚೊಂಬು
- ಬರ/ನೆರೆ ಪರಿಹಾರದ ಚೊಂಬು
ಈ ನಾಲ್ಕು ಅಂಶಗಳೊಂದಿಗೆ 27 ಜನ ಬಿಜೆಪ, ಜೆಡಿಎಸ್ ಸಂಸದರು ರಾಜ್ಯಕ್ಕೆ ನೀಡಿದ ಕೊಡುಗೆ ಕೇವಲ ಚೊಂಬು. ಈ ಚುನಾವಣೆಯಲ್ಲಿ ಬಿಜೆಪಿಗೆ ನಾವು ನೀಡೋಣ ಇದೇ ಚೊಂಬು ಎಂದು ಜಾಹೀರಾತಿನಲ್ಲಿ ನೀಡಿದೆ. ಈ ಜಾಹೀರಾತಿನ ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಜಾಹೀರಾತಿನ ಮಾಹಿತಿಯನ್ನು ಹಂಚಿಕೊಂಡು ಬಿಜೆಪಿಗರ ಕಾಲೆಳೆದಿದ್ದಾರೆ.
ಕಾಂಗ್ರೆಸ್ ಜಾಹೀರಾತಿಗೆ ಕೇಸರಿ ನಾಯಕರು ಕೆಂಡವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ತಮಿಳುನಾಡಿಗೆ ನೀರು ಬಿಟ್ಟು ಕಾವೇರಿ ಮಾತೆಯ ‘ತುಂಬಿದ ಕೊಡ’ ಬರಿದು ಮಾಡಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟವರು ನೀವು ಎಂದಿದ್ದಾರೆ.
ಬಿವೈ ವಿಜಯೇಂದ್ರ ಅವರು ಕೊಟ್ಟ ಕೌಂಟರ್ ಹೀಗಿತ್ತು
ಕಾಂಗ್ರೆಸ್ಸಿಗರೇ,
- ತಮಿಳುನಾಡಿಗೆ ನೀರು ಬಿಟ್ಟು ಕಾವೇರಿ ಮಾತೆಯ ‘ತುಂಬಿದ ಕೊಡ’ ಬರಿದು ಮಾಡಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟವರು ನೀವು
- ಬೆಳೆ ಒಣಗಿಸಿ ರೈತರಿಗೆ ಚೊಂಬು ಕೊಟ್ಟವರು ನೀವು
- ಇದ್ದ ಬದ್ದ ಹಣವನ್ನೆಲ್ಲ ಖಾಲಿಮಾಡಿಕೊಂಡು ಪರಿಶಿಷ್ಟರ/ ಹಿಂದುಳಿದವರ ಕಲ್ಯಾಣಕ್ಕೆ ಮೀಸಲಾದ ಹಣವನ್ನೂ ವರ್ಗಾಯಿಸಿಕೊಂಡು ಶೋಷಿತರಿಗೆ ಚೊಂಬು ಕೊಟ್ಟವರು ನೀವು.
- ಕುಡಿಯುವ ನೀರೂ ಒದಗಿಸಲಾರದೇ ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಅಲೆದಾಡುವ ಸ್ಥಿತಿ ತಂದವರು ನೀವು
- ನಿರುದ್ಯೋಗಿಗಳಿಗೆ ಯುವನಿಧಿ ಹೆಸರಲ್ಲಿ ಖಾಲಿ ಚೊಂಬು ಕೊಟ್ಟವರು ನೀವು.
- ದೇಶದಲ್ಲಿ ಕಾಣದ ‘ಕೈ’ ಸ್ಥಿತಿ ತಲುಪುತ್ತಿರುವ ನಿಮಗೆ ಕೆಲವೇ ದಿನಗಳಲ್ಲಿ ಜನರೇ ನೀಡಲಿದ್ದಾರೆ ‘ಖಾಲಿ ಚೊಂಬು’.
ಲೋಕಸಭೆ ಚುನಾವಣೆ ಗೆಲ್ಲೋಕೆ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಿದೆ. ರಾಜ್ಯದಲ್ಲಿ ಏಪ್ರಿಲ್ 28 ಮತ್ತು ಮೇ 7 ರಂದು ಎರಡು ಹಂತದಲ್ಲಿ ತಲಾ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಜೂನ್ 4ಕ್ಕೆ ದೇಶದ ಫಲಿತಾಂಶ ಹೊರ ಬೀಳಲಿದೆ. ಆಗ ಲೋಕ ಕದನದಲ್ಲಿ ಯಾರ ಕೈ ಮೇಲಾಗಿದೆ ಅನ್ನೋದು ಗೊತ್ತಾಗಲಿದೆ.