Mysore News: ಸ್ವಗ್ರಾಮದಲ್ಲೇ ಮತಗಟ್ಟೆ ಸ್ಥಾಪಿಸಿ, ಇಲ್ಲದಿದ್ದರೆ ಲೋಕಸಭೆ ಚುನಾವಣೆಗೆ ಬಹಿಷ್ಕರಿಸುತ್ತೇವೆ: ಹಾಡಿಯ ಜನರ ಎಚ್ಚರಿಕೆ
Apr 18, 2024 07:11 PM IST
ಹಾಡಿ ನಿವಾಸಿಗಳಿಗೆ ಪ್ರತ್ಯೇಕ ಮತಗಟ್ಟೆ ಸ್ಥಾಪಿಸುವ ಬೇಡಿಕೆ ಕೇಳಿ ಬಂದಿದೆ
- Voting Boycotts ಮೈಸೂರು ಜಿಲ್ಲೆ ಸರಗೂರಿನ ಹಾಡಿಯಲ್ಲಿ ಮತಗಟ್ಟೆ ಸ್ಥಾಪಿಸದೇ ಇದ್ದರೆ ಮತ ಹಾಕುವುದಿಲ್ಲ ಎಂದು ಗಿರಿಜನ ನಿವಾಸಿಗಳು ಹೇಳಿದ್ದಾರೆ.
- ವರದಿ: ಪಿ.ರಂಗಸ್ವಾಮಿ, ಮೈಸೂರು
ಮೈಸೂರು: ನಮ್ಮ ಗ್ರಾಮದಲ್ಲೇ ನಾವು ಮತ ಹಾಕಬೇಕು, ಮತ ಚಲಾಯಿಸಲು ಬೇರೆ ಊರಿಗೆ ಹೋಗಲಾಗುವುದಿಲ್ಲ, ನಮ್ಮೂರಲ್ಲೇ ನಮಗೆ ಮತಗಟ್ಟೆ ಸ್ಥಾಪಿಸಿ. ಇಲ್ಲದಿದ್ದರೇ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತೇವೆಂದು ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಚನ್ನಗುಂಡಿ ಹಾಡಿಯಲ್ಲಿನ ಆದಿವಾಸಿ ಜನರು ಎಚ್ಚರಿಕೆ ನೀಡಿದ್ದಾರೆ. ಇದೇ ಏಪ್ರಿಲ್ 26ರಂದು ನಡೆಯುವ ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಚನ್ನಗುಂಡಿ ಹಾಡಿಯ ಮತದಾರರು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಚುನಾವಣಾಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಅವರಿಂದ ಬರುವ ಅನುಮತಿ ಆಧರಿಸಿ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಅಧಿಕಾರಿಗಳು ಹೇಳುತ್ತಿದ್ದಾರೆ.
ಬಂಡೀಪುರದ ಅರಣ್ಯದಂಚಿನಲ್ಲಿ ಬರುವ ಸರಗೂರು ತಾಲ್ಲೂಕಿನ ಹಲವಾರು ಹಾಡಿಗಳಲ್ಲಿ ಈ ಸಮಸ್ಯೆ ಇದೆ. ಮೈಸೂರು ಜಿಲ್ಲೆಯಲ್ಲಿದ್ದರೂ ಇದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಭಾಗ. ಈ ಹಿಂದೆ ಮೈಸೂರು ಲೋಕಸಭಾ ಕ್ಷೇತ್ರದಲ್ಲಿದ್ದ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರ ಈಗ ಚಾಮರಾಜನಗರ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಸರಗೂರು ಕೂಡ ಎಚ್‌ಡಿಕೋಟೆ ತಾಲ್ಲೂಕಿನಿಂದ ಪ್ರತ್ಯೇಕವಾಗಿ ಹೊಸ ತಾಲ್ಲೂಕಾಗಿ ರೂಪುಗೊಂಡಿದೆ. ಈ ಭಾಗದಲ್ಲಿರುವ ಹಲವಾರು ಹಾಡಿಗಳಲ್ಲಿ ಮೂಲಸೌಕರ್ಯವೂ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಮತಗಟ್ಟೆ ವಿಚಾರದಲ್ಲೂ ಅಸಮಾಧಾನವಿದೆ. ಈ ಹಿಂದೆ ಹಲವಾರು ಬಾರಿ ಮತಗಟ್ಟೆ ಸಮಸ್ಯೆ ವಿಚಾರವಾಗಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈಗಲೂ ಗ್ರಾಮಕ್ಕೆ ಬರುವ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಹೀಗಿದ್ದರೂ ಯಾವುದೇ ಕ್ರಮ ವಹಿಸದೇ ಮುಂದಿನ ಚುನಾವಣೆಗೆ ನೋಡೋಣ ಎನ್ನುವ ಅಭಿಪ್ರಾಯವನ್ನು ಕೆಲವರು ಹೇಳಿದರೆ, ಇನ್ನಷ್ಟು ಅಧಿಕಾರಿಗಳು ಅನುಮತಿ ಪಡೆಯಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.
ನಮ್ಮ ತಾತ, ಮುತ್ತಾತನ ಕಾಲದಿಂದಲೂ ನಾವು ಚನ್ನಗುಂಡಿಹಾಡಿ ಗ್ರಾಮದಲ್ಲೇ ಮತವನ್ನು ಹಾಕಿದ್ದೇವೆ. ನಮ್ಮೂರಲ್ಲೇ ಸ್ಥಾಪಿಸುತ್ತಿದ್ದ ಮತಗಟ್ಟೆಯನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ, ಪಕ್ಕದ ಅರಳಹಳ್ಳಿ ಗ್ರಾಮಕ್ಕೆ ಸ್ಥಳಾಂತರ ಮಾಡಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಅರಳಹಳ್ಳಿ ಗ್ರಾಮಕ್ಕೆ ಹೋಗಿ ಮತ ಹಾಕಬೇಕು ಎಂದು ಹೇಳುತ್ತಿದ್ದಾರೆ. ನಮ್ಮಲ್ಲಿ ವಯಸ್ಸಾದ ವೃದ್ಧರು, ವಿಶೇಷ ಚೇತನರು, ಗರ್ಭಿಣಿಯರು, ಬಾಣಂತಿಯರು ಇದ್ದಾರೆ. ಸುಮಾರು 4 ಕಿಲೋ ಮೀಟರ್ ದೂರದಲ್ಲಿರುವ ಅರಳಹಳ್ಳಿ ಗ್ರಾಮಕ್ಕೆ ಕಾಲ್ನಡಿಗೆ ಮೂಲಕ ನಡೆದುಕೊಂಡು ಹೋಗಿ ಮತವನ್ನು ಚಲಾಯಿಸಲು ನಮ್ಮಿಂದ ಸಾಧ್ಯವಿಲ್ಲ ಎನ್ನುವುದು ಗ್ರಾಮದವರು ಹೇಳುವ ಮಾತು.
ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರಳಹಳ್ಳಿ ಗ್ರಾಮಕ್ಕೆ ಹೋಗಿ ನಮ್ಮ ಮತವನ್ನು ಚಲಾಯಿಸಿದ್ದೇವೆ. ಚುನಾವಣೆಯ ದಿನ ಹೋಗಿ ಬರಲು ಅನುಕೂಲವಾಗುವಂತೆ ಯಾವುದೇ ವಾಹನದ ವ್ಯವಸ್ಥೆ ಕಲ್ಪಿಸಿರಲಿಲ್ಲ. ಆಗ ನಾವು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಮುಂದಿನ ಲೋಕಸಭಾ ಚುನಾವಣೆಗೆ ನಿಮ್ಮ ಗ್ರಾಮದಲ್ಲೇ ಮತಗಟ್ಟೆ ತೆರೆಯುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಈ ಬಾರಿಯೂ ನಮ್ಮ ಗ್ರಾಮದಲ್ಲಿ ಮತಗಟ್ಟೆಯನ್ನು ತೆರೆಯಲು ಮುಂದಾಗದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ನಮ್ಮ ಗ್ರಾಮದಲ್ಲಿ ಮತಗಟ್ಟೆ ತೆರೆದರೆ ಮಾತ್ರ ನಾವು ವೋಟ್ ಹಾಕುತ್ತೇವೆ. ಇಲ್ಲವಾದರೆ ಯಾವುದೇ ಕಾರಣಕ್ಕೂ ನಾವು ಮತ ಚಲಾಯಿಸುವುದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಸ್ವಗ್ರಾಮದಲ್ಲಿ ಮತಗಟ್ಟೆ ಸ್ಥಾಪನೆಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೇ, ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಚನ್ನಗುಂಡಿ ಹಾಡಿಯ ಜನರು ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ಮತದಾರರ ಪಟ್ಟಿಯಲ್ಲಿ ಮರಣ ಹೊಂದಿದವರ ಬದಲು ಜೀವಂತವಾಗಿರುವವರ ಹೆಸರನ್ನು ಡಿಲೀಟ್ ಮಾಡಿದ್ದಾರೆ ಎಂದು ಕೂಡ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
(ವರದಿ: ಪಿ.ರಂಗಸ್ವಾಮಿ, ಮೈಸೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)