logo
ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭೆ ಚುನಾವಣೆ; ಬೆಂಗಳೂರು ಪ್ರಚಾರ ಸಭೆಯಲ್ಲಿ ಪ್ರಶ್ನೆಗಳ ಸುರಿಮಳೆ, ತೇಜಸ್ವಿ ಸೂರ್ಯ ತುರ್ತು ನಿರ್ಗಮನ ವಿಡಿಯೋ ವೈರಲ್‌

ಲೋಕಸಭೆ ಚುನಾವಣೆ; ಬೆಂಗಳೂರು ಪ್ರಚಾರ ಸಭೆಯಲ್ಲಿ ಪ್ರಶ್ನೆಗಳ ಸುರಿಮಳೆ, ತೇಜಸ್ವಿ ಸೂರ್ಯ ತುರ್ತು ನಿರ್ಗಮನ ವಿಡಿಯೋ ವೈರಲ್‌

Umesh Kumar S HT Kannada

Apr 16, 2024 06:57 AM IST

ವೈರಲ್ ವಿಡಿಯೋದಲ್ಲಿ ತೇಜಸ್ವಿ ಸೂರ್ಯ ಸಭೆಯಿಂದ ಹೊರಗೆ ಹೋಗುತ್ತಿದ್ದಾಗಿನ ದೃಶ್ಯ (ಎಡ ಚಿತ್ರ). ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ, ಅಭ್ಯರ್ಥಿ ತೇಜಸ್ವಿ ಸೂರ್ಯ (ಬಲ ಚಿತ್ರ)

  • ಲೋಕಸಭಾ ಚುನಾವಣೆಯ ಪ್ರಚಾರ ಬಿರುಸು ಪಡೆದುಕೊಂಡಿದ್ದು, ಬೆಂಗಳೂರು ಸಭೆಯಲ್ಲಿ ಪ್ರಶ್ನೆಗಳ ಸುರಿಮಳೆ ಎದುರಿಸಿದ ಬಿಜೆಪಿಯ ತೇಜಸ್ವಿ ಸೂರ್ಯ ತುರ್ತು ನಿರ್ಗಮನವಾದ ವಿಡಿಯೋ ವೈರಲ್‌ ಆಗಿದೆ. ಇದು ಕಾಂಗ್ರೆಸ್‌ ಮತ್ತು ತೇಜಸ್ವಿ ಸೂರ್ಯ ನಡುವೆ ಟ್ವೀಟ್ ವಾರ್‌ಗೂ ದಾರಿ ಮಾಡಿಕೊಟ್ಟಿದೆ. ಅದರ ವಿವರ ಇಲ್ಲಿದೆ. 

ವೈರಲ್ ವಿಡಿಯೋದಲ್ಲಿ ತೇಜಸ್ವಿ ಸೂರ್ಯ ಸಭೆಯಿಂದ ಹೊರಗೆ ಹೋಗುತ್ತಿದ್ದಾಗಿನ ದೃಶ್ಯ (ಎಡ ಚಿತ್ರ). ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ, ಅಭ್ಯರ್ಥಿ ತೇಜಸ್ವಿ ಸೂರ್ಯ (ಬಲ ಚಿತ್ರ)
ವೈರಲ್ ವಿಡಿಯೋದಲ್ಲಿ ತೇಜಸ್ವಿ ಸೂರ್ಯ ಸಭೆಯಿಂದ ಹೊರಗೆ ಹೋಗುತ್ತಿದ್ದಾಗಿನ ದೃಶ್ಯ (ಎಡ ಚಿತ್ರ). ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ, ಅಭ್ಯರ್ಥಿ ತೇಜಸ್ವಿ ಸೂರ್ಯ (ಬಲ ಚಿತ್ರ)

ಬೆಂಗಳೂರು: ಲೋಕಸಭಾ ಚುನಾವಣೆ ಪ್ರಚಾರ ಕಾರ್ಯ ಬೆಂಗಳೂರು ದಕ್ಷಿಣದಲ್ಲಿ ಬಿರುಸುಗೊಂಡಿದ್ದು, ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಸಿಟ್ಟಿಗೆದ್ದು ಪ್ರಚಾರ ಸಭೆಯಿಂದ ಹೊರ ನಡೆದ ಘಟನೆ ನಡೆದಿದೆ. ಬಸವನಗುಡಿಯ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಿಯಮಿತದ ಬಹುಕೋಟಿ ಹಗರಣದಲ್ಲಿ ಕೋಟ್ಯಂತರ ರೂಪಾಯಿ ಕಳೆದುಕೊಂಡ ಸಂತ್ರಸ್ತರು ಮುಗಿಬಿದ್ದು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಆಕ್ರೋಶಭರಿತರ ನಡುವಿನಿಂದ ಅನಿವಾರ್ಯವಾಗಿ ಹೊರನಡೆಯಬೇಕಾಗಿ ಬಂತು. ಇದರ ವಿಡಿಯೋ ವೈರಲ್ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಹವಾಮಾನ ಮೇ 20; ದಕ್ಷಿಣ ಕನ್ನಡ, ಉಡುಪಿ ಸೇರಿ 8ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌, 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಮಳೆ ಮುನ್ಸೂಚನೆ

Hubli News: ಅಂಜಲಿ ಹತ್ಯೆ, ಹುಬ್ಬಳ್ಳಿಯಲ್ಲಿ ಇಂದು ಪರಮೇಶ್ವರ್‌ ಸಭೆ, ಸಿಬಿಐ ತನಿಖೆಗೆ ಜೋಶಿ ಆಗ್ರಹ

CET Results2024: ಕರ್ನಾಟಕ ಸಿಇಟಿ ಫಲಿತಾಂಶ ಇಂದು ಪ್ರಕಟ ಸಾಧ್ಯತೆ, ನಿಮ್ಮ ಅಂಕ ನೋಡುವುದು ಹೀಗೆ

Bangalore News: ತಮಿಳುನಾಡಿನಲ್ಲಿ ಗುಂಡು ತಗುಲಿ ಬೆಂಗಳೂರಿನ ಯೋಧ ಸಾವು

ಬೆಂಗಳೂರು ದಕ್ಷಿಣದ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರು ಶನಿವಾರ (ಏಪ್ರಿಲ್ 13) ಬೆಂಗಳೂರಿನಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಿಂದ ನಿರ್ಗಮಿಸಬೇಕಾಯಿತು. ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತದ ಬಹುಕೋಟಿ ಹಗರಣದಲ್ಲಿ ಹಣ ಕಳೆದುಕೊಂಡ ಸಂತ್ರಸ್ತರು ಹಣ ಕಳೆದುಕೊಂಡ ವಿಚಾರವಾಗಿ ನಡೆದ ಮಾತಿನ ಸಂಘರ್ಷ ಇದಕ್ಕೆ ಕಾರಣ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪಿಟಿಐ ಶೇರ್ ಮಾಡಿರುವ ತೇಜಸ್ವಿ ಸೂರ್ಯ ಪ್ರಚಾರ ಸಭೆಯ ಗೊಂದಲದ ಕ್ಷಣಗಳ ವಿಡಿಯೋ

ಪಿಟಿಐ ಹಂಚಿಕೊಂಡ ಸಭೆಯ ವಿಡಿಯೋದಲ್ಲಿ ತೇಜಸ್ವಿ ಸೂರ್ಯ ಅವರನ್ನು ಅವರ ಸಂಗಡಿಗರು ಸ್ಥಳದಿಂದ ಹೊರಗೆ ಕರೆದೊಯ್ಯುವುದನ್ನು ತೋರಿಸಿದೆ. ಅವರು ದೂರ ಹೋಗುತ್ತಿದ್ದರೂ ಸಹ, ತೇಜಸ್ವಿ ಸೂರ್ಯ ಮತ್ತು ಕೆಲವು ಹೂಡಿಕೆದಾರರು ವಾಕ್ಸಮರ ನಡೆಸುತ್ತಿರುವ ದೃಶ್ಯವಿದೆ.

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಆಪಾದಿತ ವಂಚನೆಯಿಂದ ಸಂತ್ರಸ್ತರಾದ ಹೂಡಿಕೆದಾರರು ತಮ್ಮ ನಷ್ಟವನ್ನು ಸರಿದೂಗಿಸಲು ವಿಳಂಬವಾಗುತ್ತಿರುವ ಬಗ್ಗೆ ಬಿಜೆಪಿ ನಾಯಕರಿಂದ ಉತ್ತರವನ್ನು ಕೋರಿದ ಸಂದರ್ಭದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ ಎಂದು ವರದಿ ಹೇಳಿದೆ.

ಎಮರ್ಜೆನ್ಸಿ ಎಕ್ಸಿಟ್ ಡೋರ್‌ನಲ್ಲಿ ತೇಜಸ್ವಿ ಸೂರ್ಯ ಹೊರಕ್ಕೆ- ಕಾಂಗ್ರೆಸ್‌

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅದನ್ನು ಟ್ವೀಟ್ ಮಾಡಿದ ಕರ್ನಾಟಕ ಕಾಂಗ್ರೆಸ್‌, “ಬಿಜೆಪಿಯ ತೇಜಸ್ವಿ ಸೂರ್ಯ ಮತ್ತೊಮ್ಮೆ "ಎಮರ್ಜೆನ್ಸಿ ಎಕ್ಸಿಟ್ ಡೋರ್" ಮೂಲಕ ಜನರಿಂದ ಎಸ್ಕೇಪ್ ಆಗಿದ್ದಾರೆ! ಬೆಂಗಳೂರು ದಕ್ಷಿಣದ ಸಂಸದ 5 ವರ್ಷದುದ್ದಕ್ಕೂ ದೋಸೆ ತಿಂದುಕೊಂಡು, ಫುಟ್ ಬಾಲ್ ಆಡಿಕೊಂಡು, ಮೋಜು ಮಾಡಿಕೊಂಡು ಕಾಲ ಕಳೆದಿದ್ದರು, ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ಹಣ ಕಳೆದುಕೊಂಡ ಸಂತ್ರಸ್ತರ ಸಮಸ್ಯೆಯನ್ನು ಒಂದು ದಿನವೂ ಆಲಿಸದ ತೇಜಸ್ವಿ ಸೂರ್ಯ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ಮತದಾರರ ಮೇಲೆಯೇ ಹಲ್ಲೆ, ನಿಂದನೆ ಮಾಡಲು ಮುಂದಾಗುವ ತೇಜಸ್ವಿ ಸೂರ್ಯನ ಪಟಾಲಂನ ದುರಹಂಕಾರ ಮಿತಿ ಮೀರಿದೆ, ಮತದಾರರು ಈ ಅಹಂಗೆ ಪಾಠ ಕಲಿಸುವ ಸಮಯ ಬಂದಿದೆ. ಎಲ್ಲಾ ಕಡೆಯೂ ಮತದಾರರಿಂದ ಬಿಜೆಪಿ ಕರ್ನಾಟಕ ಅಭ್ಯರ್ಥಿಗಳು ಗೋಬ್ಯಾಕ್ ಎದುರಿಸುತ್ತಿದ್ದಾರೆ, ಈ ಜನಾಕ್ರೋಶಕ್ಕೆ ಬಿಜೆಪಿ ದೂಳಿಪಟ ಮಾಡುವುದು ನಿಶ್ಚಿತ.” ಎಂದು ವ್ಯಂಗ್ಯವಾಡಿದೆ.

ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂದು ತೇಜಸ್ವಿ ಸೂರ್ಯ ಪ್ರತಿಕ್ರಿಯೆ

ಇದೇ ವೇಳೆ, ಕಾಂಗ್ರೆಸ್ ಪಕ್ಷದ ಟ್ವೀಟ್‌ಗೆ ಉತ್ತರಿಸಿರುವ ತೇಜಸ್ವಿ ಸೂರ್ಯ, "ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಕಾಂಗ್ರೆಸ್ ನ ನೀಚ, ಕ್ಷುಲ್ಲಕ ರಾಜಕಾರಣದ 'ಕೈ' ಚಳಕ ಒಮ್ಮೆ ನೋಡಿ! ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಗೆ ಗೆಲುವು ಹಗಲುಗನಸು, ಕೇವಲ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಲು ನಡೆಸಿರುವ ಪಿತೂರಿಯ ಹಿಂದಿರುವ ಕಾಣದ 'ಕೈ' ಗಳು, ಅತೃಪ್ತ ಆತ್ಮಗಳು ನಡೆಸುತ್ತಿರುವ ಸಂಚಿಗೆ ಬೆಂಗಳೂರು ದಕ್ಷಿಣದ ಮತದಾರರು ಈ ಚುನಾವಣೆಯಲ್ಲಿ ಮುಟ್ಟಿ ನೋಡಿಕೊಳ್ಳುವ ರೀತಿಯ ಉತ್ತರ ನೀಡಲಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿರುವಂತೆ ಹತಾಶ, ಹೀನಾಯ ಸ್ಥಿತಿಗೆ ತಲುಪಿರುವ ಕರ್ನಾಟಕ ಕಾಂಗ್ರೆಸ್ ಪಕ್ಷವು ಜನರನ್ನು ದಾರಿತಪ್ಪಿಸುವ, ತನ್ನ ಸುಳ್ಳಿನ ಫ್ಯಾಕ್ಟರಿಯ ಉತ್ಪನ್ನಗಳನ್ನು ದಿನೇದಿನೇ ಬಿಡುಗಡೆಗೊಳಿಸುತ್ತಿರುವುದು ಆ ಪಕ್ಷ ತಲುಪಿರುವ ಹೀನಾಯ ಸ್ಥಿತಿಯ ಪ್ರತಿಬಿಂಬ. ದಿನಾಂಕ 13.04.2024 ರಂದು ನಡೆದ ಸಭೆಯಲ್ಲಿ ಉದ್ದೇಶಪೂರ್ವಕವಾಗಿಯೇ ಜನರನ್ನು ಕಳುಹಿಸಿ ದಾಂಧಲೆ ಎಬ್ಬಿಸಲು ಕಾಂಗ್ರೆಸ್ ಪಕ್ಷವು ನಡೆಸಿದ ಪಿತೂರಿ ಸಾಕ್ಷಿ ಸಮೇತ ಬಯಲಾಗಿದೆ.

ಬೆಂಗಳೂರು ದಕ್ಷಿಣದಲ್ಲಿ ಮತದಾರರನ್ನು ಹಣಬಲದಿಂದ ಕೊಳ್ಳುವ, ತೋಳ್ಬಲ ದಿಂದ ಬೆದರಿಸುವ ಪ್ರಯತ್ನ ನಿರಂತರ ಜಾರಿಯಲ್ಲಿದೆ. 2 ದಿನಗಳ ಹಿಂದಷ್ಟೇ ಜಯನಗರದಲ್ಲಿ ಸಿಕ್ಕಿಬಿದ್ದಿರುವ ಅಕ್ರಮ ಹಣ ಕಾಂಗ್ರೆಸ್ ನದ್ದು, ಮುಖ್ಯಮಂತ್ರಿಗಳ ಸಮಾವೇಶದಲ್ಲಿಯೇ ಗನ್ ಹಿಡಿದುಕೊಂಡು ತೋಳ್ಬಲದ ಪ್ರದರ್ಶನ ಕೂಡ ನಡೆದಿದೆ. ಮುಂದುವರೆದಂತೆ ಕಾಂಗ್ರೆಸ್ ನ ಕೆಲವರು ಬಿಜೆಪಿಯ ಸಭೆಗಳಲ್ಲಿ ದಾಂಧಲೆ ಎಬ್ಬಿಸುವ ವ್ಯವಸ್ಥಿತ ಸಂಚು ನಡೆಸುತ್ತಿರುವುದು ಆ ಪಕ್ಷದ ಹತಾಶೆಗೆ ಸಾಕ್ಷಿ.

ಬೆಂಗಳೂರು ದಕ್ಷಿಣದ ಜನತೆ ಪ್ರಜ್ಞಾವಂತರು. ದೇಶ ಮೊದಲು ಎಂಬ ಘನತೆಯನ್ನು ಕಾಯ್ದುಕೊಂಡು ಬಂದವರು. ಇದೇ ಏಪ್ರಿಲ್ 26 ರಂದು ನಡೆಯಲಿರುವ ಮತದಾನದಲ್ಲಿ ಕಾಂಗ್ರೆಸ್ ನ ಇಂತಹ ನೀಚ, ಕ್ಷುಲ್ಲಕ ರಾಜಕಾರಣಕ್ಕೆ ತಕ್ಕ ಮಟ್ಟದ ಉತ್ತರ ನೀಡಲಿದ್ದಾರೆ. ನರೇಂದ್ರ ಮೋದಿ ಅವರನ್ನು 3ನೇ ಬಾರಿಗೆ ಪ್ರಧಾನಿಯನ್ನಾಗಿ ಆಯ್ಕೆಗೊಳಿಸುವ ಮೂಲಕ , ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ವಿಜಯ ತಂದುಕೊಡಲಿರುವುದು ನಿಶ್ಚಿತ." ಎಂದು ಉತ್ತರಿಸಿದ್ದಾರೆ. ಇದರ ಜೊತೆಗೆ ಒಂದು ವಿವರಣೆಯ ವಿಡಿಯೋವನ್ನೂ ಶೇರ್ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ