Karnataka Weather: ಕಲಬುರಗಿ, ಬಾಗಲಕೋಟೆಯಲ್ಲಿ ಭಾರೀ ಬಿಸಿಲು, 3 ದಿನದಲ್ಲಿ ಮತ್ತಷ್ಟು ಹೆಚ್ಚುವ ಮುನ್ನೆಚ್ಚರಿಕೆ
Apr 03, 2024 08:38 AM IST
ಕರ್ನಾಟಕದ ಹಲವು ಕಡೆ ಬಿಸಿಲ ಗಾಳಿಯ ವಾತಾವರಣ ಕಂಡು ಬಂದಿದೆ.
- Heat wave: ಕರ್ನಾಟಕದ ಉತ್ತರ ಒಳನಾಡು ಮಾತ್ರವಲ್ಲದೇ ದಕ್ಷಿಣ ಒಳನಾಡಿನ ಕೆಲವು ಕಡೆ ಬಿಸಿಲ ಗಾಳಿಯ ವಾತಾವರಣ ಕಂಡು ಬಂದಿದೆ.
ಬೆಂಗಳೂರು: ಕರ್ನಾಟಕದಲ್ಲಿ ಬಿಸಿಲ ಪ್ರಮಾಣ ಭಾರೀ ಏರಿಕೆಯಾಗಿದೆ. ಉತ್ತರ ಕರ್ನಾಟಕವಂತೂ ಕಾದ ಬಾಣಲೆಯಂತಹ ವಾತಾವರಣವನ್ನು ಎದುರಿಸುತ್ತಿದೆ. ಕಲಬುರಗಿ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಸದ್ಯ ಎರಡು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣ ಈಗಾಗಲೇ 40 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕವಾಗಿದೆ. ಈ ವಾರಾಂತ್ಯದೊಳಗೆ ಇನ್ನೂ ಕೆಲವು ಜಿಲ್ಲೆಗಳಲ್ಲೂ ಇಂತಹದೇ ವಾತಾವರಣ ಕಂಡುಬರಬಹುದು. ಬಿಸಿ ಗಾಳಿಯೂ ಬೀಸುವ ಮುನ್ನೆಚ್ಚರಿಕೆಯನ್ನೂ ನೀಡಲಾಗಿದೆ.
ಕಳೆದ ಒಂದು ತಿಂಗಳಿನಿಂದಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲ ಝಳ ಹೆಚ್ಚಾಗಿಯೇ ಇದೆ. ಆದರೆ 40 ಡಿಗ್ರಿ ಸೆಲ್ಸಿಯಸ್ ಒಳಗೆ ಬಿಸಿಲಿನ ಪ್ರಮಾಣ ಇತ್ತು. ಈಗ ಅದು 40 ಡಿಗ್ರಿ ಸೆಲ್ಸಿಯಸ್ ಕೂಡ ದಾಟಿದೆ. ಕಲಬುರಗಿಯಲ್ಲಿ ಅತ್ಯಧಿಕ ಅಂದರೆ 41.6 ಡಿಗ್ರಿ ಸೆಲ್ಸಿಯಸ್ ಸೋಮವಾರ ದಾಖಲಾಗಿದೆ. ಬಾಗಲಕೋಟೆಯಲ್ಲಿ 40.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಕಂಡು ಬಂದಿದೆ. ರಾಯಚೂರಿನಲ್ಲೂ 39.6 ಡಿಗ್ರಿ, ವಿಜಯಪುರದಲ್ಲಿ 39.5 ಡಿಗ್ರಿ ಹಾಗೂ ಕೊಪ್ಪಳದಲ್ಲಿ 39.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಉತ್ತರ ಒಳನಾಡಿನ ಜತೆಯಲ್ಲಿ ದಕ್ಷಿಣ ಒಳನಾಡು, ಕರಾವಳಿಯಲ್ಲೂ ಕೂಡ ಉಷ್ಣಾಂಷ ಕೊಂಚ ಹೆಚ್ಚಳವಾಗಿದೆ.
ಐಎಂಡಿ ವರದಿ
ಸೋಮವಾರವೂ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಒಣ ಹವೆಯ ವಾತಾವರಣವಿತ್ತು. ಕಲಬುರಗಿಯಲ್ಲೇ ಅತ್ಯಧಿಕ ಉಷ್ಣಾಂಶ ದಾಖಲಾಗಿದ್ದರೆ, ಇತರೆಡೆಯೂ ಹೆಚ್ಚಿನ ಪ್ರಮಾಣದಲ್ಲಿ ಉಷ್ಣಾಂಶವಿದೆ. ದಕ್ಷಿಣ ಒಳನಾಡು, ಕರಾವಳಗೆ ಹೋಲಿಸಿದರೆ ಉತ್ತರ ಒಳನಾಡಿನಲ್ಲಿ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಏರಿಕೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ( IMD) ಬೆಂಗಳೂರು ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದಿನ ಮೂರು ದಿನಗಳಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸಲಿವೆ. ಉಷ್ಣಾಂಶದಲ್ಲಿ ಹೆಚ್ಚಳ ಕಂಡು ಬರುವ ಸಾಧ್ಯತೆಯಿದೆ. ಮುಂದಿನ 5 ದಿನಗಳಲ್ಲಿ ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಕಲಬುರಗಿ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 2 ರಿಂದ 5 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಬಹುದು. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಉಷ್ಣಾಂಶದ ಪ್ರಮಾಣವು 2 ರಿಂದ 3 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಳವಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ.
ಉತ್ತರ ಒಳನಾಡಿನ ಕಲಬುರಗಿ, ಬಾಗಲಕೋಟೆ, ರಾಯಚೂರು, ವಿಜಯಪುರ, ಕೊಪ್ಪಳ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಏಪ್ರಿಲ್ 6ವರೆಗೆ ಬಿಸಿಗಾಳಿಯ ಅಲೆಯ ಪರಿಸ್ಥಿತಿಗಳು ನಿರ್ಮಾಣವಾಗಬಹುದು. ಇದರಿಂದ ಜನತೆ ಮುನ್ನೆಚ್ಚರಿಕೆ ವಹಿಸಬೇಕು. ಬಿಸಿಲಿನಲ್ಲಿ ಅನಗತ್ಯವಾಗಿ ಸಂಚರಿಸಬಾರದು ಎಂದು ತಿಳಿಸಲಾಗಿದೆ.
ಬೆಂಗಳೂರು ಹವಾಮಾನ
ಬೆಂಗಳೂರಿನಲ್ಲೂ ಏಪ್ರಿಲ್ 3 ಮತ್ತು 4ರಂದು ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಮಧ್ಯಾಹ್ನ ಇಲ್ಲವೇ ಸಂಜೆಯ ಹೊತ್ತಿಗ ಮುಖ್ಯವಾಗಿ ನಿರ್ಮಲವಾದ ಆಕಾಶದ ವಾತಾವರಣ ಇರಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಗರಿಷ್ಠ ಉಷ್ಣಾಂಶವು 36 ಡಿಗ್ರಿ ಹಾಗೂ ಕನಿಷ್ಟ ಉಷ್ಣಾಂಶವು 24 ಡಿಗ್ರಿ ಸೆಲ್ಸಿಯಸ್‌ನಷ್ಟು ಕಂಡು ಬರಲಿದೆ ಎಂದು ಭಾರತೀಯ ಹಮಾಮಾನ ಇಲಾಖೆಯು ತಿಳಿಸಿದೆ.
ಎಲ್ಲೆಲ್ಲಿ ಎಷ್ಟು ಹವಾಮಾನ
ಗರಿಷ್ಠ ಕನಿಷ್ಠ
ಕಲಬುರಗಿ 41.6 27.0
ಬಾಗಲಕೋಟೆ 40.7 23.5
ವಿಜಯಪುರ 39.5 24.0
ರಾಯಚೂರು 39.6 24.0
ಕೊಪ್ಪಳ 39.2 24.6
ಗದಗ 38.7 23.0
ಬೆಂಗಳೂರು 35.1 24.5
ಮೈಸೂರು 36.7 -
ಮಂಗಳೂರು 35.4 26.2