ಪ್ರವೀಣ್ ನೆಟ್ಟಾರು ಹತ್ಯೆ ಕೇಸ್; ಸಕಲೇಶಪುರದಲ್ಲಿ ಮೂವರನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳು, ಇಬ್ಬರು ಆರೋಪಿಗಳು, ಅವರ ಆಶ್ರಯದಾತ ಬಂಧಿತರು
May 10, 2024 03:23 PM IST
ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ ಸಂಬಂಧಿಸಿ ಸಕಲೇಶಪುರದಲ್ಲಿ ಮೂವರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದರು.
ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ ಸಂಬಂಧಿಸಿ, ಎನ್‌ಐಎ ಅಧಿಕಾರಿಗಳು ಸಕಲೇಶಪುರದಲ್ಲಿ ಮೂವರನ್ನು ಬಂಧಿಸಿದರು. ಈ ಪೈಕಿ ಇಬ್ಬರು ಆರೋಪಿಗಳು ಮತ್ತು ಅವರ ಆಶ್ರಯದಾತ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ. 2022ರ ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಶುಕ್ರವಾರ ಬಂಧಿಸಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ. ಬಂಧಿತರನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆಯ ಮುಸ್ತಫಾ ಪೈಚಾರ್, ಸಿರಾಜ್ ಮತ್ತು ಇಲ್ಯಾಸ್ ಎಂದು ಗುರುತಿಸಲಾಗಿದೆ.
ಮುಸ್ತಫಾ ಮತ್ತು ಇಲ್ಯಾಸ್ ಇಬ್ಬರಿಗೂ ಹಾಸನ ಜಿಲ್ಲೆಯ ಸಕಲೇಶಪುರದ ಸಿರಾಜ್ ಆಶ್ರಯ ನೀಡಿದ್ದರು. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಮುಸ್ತಫಾ ಮತ್ತು ಇಲ್ಯಾಸ್ ಅವರನ್ನು ಎನ್ಐಎ ಬಂಧಿಸಿದ್ದರೆ, ಅವರಿಗೆ ಆಶ್ರಯ ನೀಡಿದ್ದಕ್ಕಾಗಿ ಸಿರಾಜ್ ಅವರನ್ನು ಬಂಧಿಸಲಾಗಿದೆ ಎಂದು ಎನ್ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎನ್ಐಎ ಮೂಲಗಳ ಪ್ರಕಾರ, ಮುಸ್ತಫಾ ಸುಳ್ಯದ ಶಾಂತಿ ನಗರದ ನಿವಾಸಿಯಾಗಿದ್ದು, ಕೇರಳದ ಪ್ರಮುಖ ಪಿಎಫ್ಐ ನಾಯಕನಾಗಿದ್ದ. ಕರ್ನಾಟಕದಲ್ಲಿ, ವಿಶೇಷವಾಗಿ ದಕ್ಷಿಣ ಕನ್ನಡದಲ್ಲಿ ಪಿಎಫ್ಐ ಅನ್ನು ಪ್ರಚೋದಿಸುವಲ್ಲಿ ಭಾಗಿಯಾಗಿದ್ದ ಎಂದು ಎನ್ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳು ಸಕಲೇಶಪುರದಲ್ಲಿ ಏನು ಮಾಡ್ತಿದ್ರು
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳಾದ ಮುಸ್ತಫಾ ಮತ್ತು ಇಲ್ಯಾಸ್ ಸಕಲೇಶಪುರ ತಾಲೂಕಿನ ಆನೆಮಹಲ್‌ನಲ್ಲಿ ಸಿರಾಜ್ ಬಳಿ ಕೆಲಸ ಮಾಡಿಕೊಂಡಿದ್ದರು. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮುಸ್ತಫಾ ಪೈಚಾರ್ ನಾಲ್ಕನೇ ಆರೋಪಿ. ಈತನ ಪತ್ತೆಗೆ ಎನ್‌ಐಎ ವಾಂಟೆಡ್ ನೋಟಿಸ್ ಕೂಡ ಪ್ರಕಟಿಸಿತ್ತು.
ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಮುಸ್ತಫಾ ಪೈಚಾರ್ ಮತ್ತು ಇಲ್ಯಾಸ್ ಹಾಸನ ಕಡೆಗೆ ಹೋಗಿದ್ದು, ಬಳಿಕ ಸಕಲೇಶಪುರದಲ್ಲಿ ಸಿರಾಜ್ ಜೊತೆಗೆ ಸೇರಿಕೊಂಡಿದ್ದರು ಎಂದು ಎನ್ಐಎ ಮೂಲಗಳು ತಿಳಿಸಿವೆ.
ಎರಡು ವರ್ಷ ಮೇಲಾಯಿತು ಹತ್ಯೆ ನಡೆದು
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26ರಂದು ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು. ಬೆಳ್ಳಾರೆಯಿಂದ ಪೆರುವಾಜೆಗೆ ಹೋಗುವ ಕ್ರಾಸ್ ಬಳಿ ಕೋಳಿ ಮಾಂಸದಂಗಡಿ ಹೊಂದಿರುವ ಪ್ರವೀಣ್ ನೆಟ್ಟಾರು ಅವರು ಜುಲೈ 26ರ ರಾತ್ರಿ ಅಂಗಡಿ ಬಾಗಿಲು ಹಾಕುತ್ತಿದ್ದರು. ಆಗ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರ ಬಳಿ ಏಕಾಕಿಯಾಗಿ ದಾಳಿ ನಡೆಸಿದ್ದರು. ಈ ದಾಳಿ ಸಂದರ್ಭದಲ್ಲಿ ಗಂಭೀರ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರು ಮೃತಪಟ್ಟಿದ್ದರು.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ರಾಜಕೀಯವಾಗಿ ಕೂಡ ಬಹಳ ಸಂಚಲನ ಮೂಡಿಸಿತ್ತು. ಪ್ರವೀಣ್ ನೆಟ್ಟಾರು ಅಂತಿಮ ದರ್ಶನ ಪಡೆಯಲು ಬಂದ ಅಂದಿನ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಾರನ್ನು ಬಿಜೆಪಿ ಕಾರ್ಯಕರ್ತರು ಅಲ್ಲಾಡಿಸಿ ಹಿಮ್ಮೆಟ್ಟಿಸಲು ಪ್ರಯತ್ನಿಸಿದ್ದೂ ಆಗಿತ್ತು.
ಈ ನಡುವೆ, ಈ ಹತ್ಯೆ ಪ್ರಕರಣ ಸಂಬಂಧ 15ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಎನ್‌ಐಎ ತಂಡ ಬಲೆ ಬೀಸಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ 1,500 ಪುಟಗಳ ಚಾರ್ಜ್‌ಶೀಟ್ ಅನ್ನು ತನಿಖಾ ತಂಡ ಸಲ್ಲಿಸಿದೆ. ಇದರಲ್ಲಿ ಆರೋಪಿಗಳಿಗೆ ಪಿಎಫ್‌ಐ ನಂಟು ಇರುವುದನ್ನು ತನಿಖಾ ತಂಡ ಉಲ್ಲೇಖಿಸಿತ್ತು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.