ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Analysis: ಮಹಿಳೆಯರ ಮನೆ ದುಡಿಮೆಗೆ ಬೆಲೆ ಕಟ್ಟಲು ಆದೀತೆ, ಅಂದಾಜು ಮಾಡುವ ಪ್ರಯತ್ನದಲ್ಲಿ ಬೆಳಕಿಗೆ ಬಂದ ಅಪರೂಪದ ವಿವರಗಳಿವು

Analysis: ಮಹಿಳೆಯರ ಮನೆ ದುಡಿಮೆಗೆ ಬೆಲೆ ಕಟ್ಟಲು ಆದೀತೆ, ಅಂದಾಜು ಮಾಡುವ ಪ್ರಯತ್ನದಲ್ಲಿ ಬೆಳಕಿಗೆ ಬಂದ ಅಪರೂಪದ ವಿವರಗಳಿವು

HT Kannada Desk HT Kannada

Oct 25, 2023 11:44 AM IST

ಮಹಿಳೆಯರು ಮನೆಯೊಳಗೂ ದುಡಿಯುತ್ತಲೇ ಇರಬೇಕು (ಸಂಗ್ರಹ ಚಿತ್ರ)

    • ಕೌಟುಂಬಿಕ ಕೆಲಸಗಳನ್ನು ಮಾಡುವ ಮಹಿಳೆಯೂ ಜಿಡಿಪಿ ಬೆಳವಣಿಗೆಗೆ ನೆರವಾಗುತ್ತಾಳೆ. ಆದರೆ ಲೆಕ್ಕಕ್ಕೆ ಪರಿಗಣಿಸುವುದಿಲ್ಲ ಏಕೆ? ಮನೆಯಿಂದ ಹೊರಗೆ ದುಡಿದರೆ ಮಾತ್ರ ಉದ್ಯೋಗವೇ? ಮನೆಯಲ್ಲಿ ಮಕ್ಕಳು ಮತ್ತು ಹಿರಿಯರನ್ನು ನೋಡಿಕೊಳ್ಳುವುದು ಉದ್ಯೋಗವಲ್ಲವೇ? ಇಲ್ಲಿದೆ ಉತ್ತರ. (ಬರಹ: ಎಚ್.ಮಾರುತಿ)
ಮಹಿಳೆಯರು ಮನೆಯೊಳಗೂ ದುಡಿಯುತ್ತಲೇ ಇರಬೇಕು (ಸಂಗ್ರಹ ಚಿತ್ರ)
ಮಹಿಳೆಯರು ಮನೆಯೊಳಗೂ ದುಡಿಯುತ್ತಲೇ ಇರಬೇಕು (ಸಂಗ್ರಹ ಚಿತ್ರ)

ಪುರುಷ ಮನೆಯ ಹೊರಗೆ ದುಡಿದರೆ ಮಹಿಳೆ ಮನೆಯ ಒಳಗೆ ದುಡಿಯುವುದು ಭಾರತೀಯ ಸಂಪ್ರದಾಯ. ಮನೆಯಲ್ಲೇ ಇದ್ದುಕೊಂಡು ಮಕ್ಕಳು ಮತ್ತು ಹಿರಿಯರನ್ನು ನೋಡಿಕೊಳ್ಳುವ ಜವಾಬ್ಧಾರಿ ಮಹಿಳೆಯದ್ದಾಗಿರುತ್ತದೆ. ಈ ರೀತಿಯ ವ್ಯವಸ್ಥೆಯಿಂದ ಭಾರತದ ಆರ್ಥಿಕ ಅಭಿವೃದ್ಧಿ ಸಾಧ್ಯವೇ ಎಂಬ ಚರ್ಚೆ ದಶಕಗಳಿಂದ ನಡೆದುಕೊಂಡು ಬರುತ್ತಿದೆ. ಕೆಲವೇ ವರ್ಷಗಳಲ್ಲಿ ಭಾರತ 5 ಟ್ರಿಲಿಯನ್ ಡಾಲರ್ (5 ಲಕ್ಷ ಕೋಟಿ ಡಾಲರ್) ಆರ್ಥಿಕತೆ ಹೊಂದುವ ದೇಶವಾಗಲಿದೆ ಎಂದು ವಾದವನ್ನು ಮಂಡಿಸಲಾಗುತ್ತಿದೆ. ಮಹಿಳೆಯ ಸಹಕಾರ ಮತ್ತು ಕೊಡುಗೆ ಇಲ್ಲದೆ ಭಾರತ ಇಂತಹ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದು ಅಸಾಧ್ಯ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Indian Railways: ಧಾರ್ಮಿಕ ಕ್ಷೇತ್ರ ದರ್ಶನಕ್ಕೆ ಭಾರತ್‌ ಗೌರವ್‌ ವಿಶೇಷ ರೈಲು, ಮೇ 18ಕ್ಕೆ ಆರಂಭ, ಮಾರ್ಗ, ದರ ಪರಿಶೀಲಿಸಿ

Viral Video: ಕಣ್ಣಿಲ್ಲದವರಿಗೂ ಫುಟ್‌ಬಾಲ್‌ ಮ್ಯಾಚ್ ಸವಿಯಲು ಅವಕಾಶ ಮಾಡಿಕೊಟ್ಟ ಹೃದಯವಂತ, ಸೂಪರ್ ಅಂತ ಮೆಚ್ಚಿದ ಜನ

ಸೌರ ಮಾರುತಗಳ ಆಟಕ್ಕೆ ಸಾಕ್ಷಿಯಾದ ಲಡಾಖ್ ಆಗಸ: ಇದು ಸೂರ್ಯನ ಹೋಳಿ ಆಟ, ಬಣ್ಣದೋಕುಳಿ ಕಂಡು ಸೂಪರ್ ಎಂದ ಜನ

ಭಾರತದ ಮುಂದಿನ ಪ್ರಧಾನಿ ಅಮಿತ್ ಶಾ, ಸಿಎಂ ಗದ್ದುಗೆ ಕಳೆದುಕೊಳ್ಳಲಿದ್ದಾರೆ ಯೋಗಿ ಆದಿತ್ಯನಾಥ್: ಅರವಿಂದ ಕೇಜ್ರಿವಾಲ್

ಇದು ಸಾಧ್ಯವಾಗಲು ಮನೆಯಲ್ಲಿ ಮಕ್ಕಳು ಮತ್ತು ಹಿರಿಯರನ್ನು ನೋಡಿಕೊಳ್ಳುವ ಕೆಲಸಕ್ಕೆ ಬೆಲೆ ಕಟ್ಟಬೇಕು. ಎರಡನೆಯದಾಗಿ ಮಹಿಳೆಯು ಮನೆಯಿಂದ ಹೊರಗೆ ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಸಂಪೂರ್ಣ ಬೆಂಬಲ ನೀಡಬೇಕು. ಆಗ ಮಾತ್ರ ನಿರೀಕ್ಷಿತ ಗುರಿ ತಲುಪಲು ಸಾಧ್ಯ ಎಂಬ ಮಾತು ಕೇಳಿಬರುತ್ತಿದೆ. ಎಲ್ಲ ಮಹಿಳೆಯರೂ ಕೆಲಸ ಮಾಡುತ್ತಾರೆ, ಆದರೆ ಎಲ್ಲರಿಗೂ ವೇತನ ನೀಡುವುದಿಲ್ಲ. ಇದು ಈ ವರ್ಷದ ನೊಬೆಲ್ ಪ್ರಶಸ್ತಿ ವಿಜೇತರದ ಆರ್ಥಿಕ ತಜ್ಞ ರದ ಕ್ಲಾಡಿಯಾ ಗೋಲ್ಡಿನ್ಸ್ ಅವರ ಮಾತು.

ಭಾರತದ ಮೊತ್ತ ಮೊದಲ ಟೈಮ್ ಯೂಸ್ ಸಮೀಕ್ಷೆ ಪ್ರಕಾರ ಭಾರತದಲ್ಲಿ ಕೇವಲ ಶೇ 29.1 ರಷ್ಟು ಪುರುಷರು ಮನೆ ಕೆಲಸದಲ್ಲಿ ತೊಡಗಿಸಿಕೊಂಡರೆ ಶೇ 81.2ರಷ್ಟು ಮಹಿಳೆಯರು ವೇತನ ರಹಿತವಾಗಿ ಮನೆಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಪುರುಷ ವಾರಕ್ಕೆ 42 ಗಂಟೆಗಳನ್ನು ಉತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಮಹಿಳೆ 19 ಗಂಟೆ ತೊಡಗಿಸಿಕೊಳ್ಳುತ್ತಾಳೆ. ಆದರೆ ಮಹಿಳೆಯು 34.6 ಗಂಟೆ ಮನೆ ಕೆಲಸದಲ್ಲಿ ತೊಡಗಿಸಿಕೊಂಡರೆ ಪುರುಷ ಕೇವಲ 3.6 ಗಂಟೆ ಮಾತ್ರ ನೆರವಾಗುತ್ತಾನೆ. ಅಂದರೆ ಪುರುಷನಿಗಿಂತ ಮಹಿಳೆ ಹತ್ತು ಪಟ್ಟು ಹೆಚ್ಚು ತೊಡಗಿಸಿಕೊಳ್ಳುತ್ತಾಳೆ. ಇಲ್ಲಿ ಎರಡು ವಿಷಯಗಳು ಗೋಚರಿಸುತ್ತವೆ. ದುಡಿಯುವ ಮಹಿಳೆ ಎರಡು ಹೊರೆಗಳನ್ನು ಹೊರಬೇಕಾಗಿರುತ್ತದೆ. ಮನೆ ಕೆಲಸದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಮನೆಯ ಹೊರಗೂ ದುಡಿಯುವ ಮೂಲಕ ಆದಾಯ ಗಳಿಕೆಗೆ ನೆರವಾಗುತ್ತಾಳೆ. ಆದರೆ ಮನೆಯ ಹೊರಗೆ ದುಡಿಯುವುದರಿಂದ ಆಕೆಯ ಮನೆ ಕೆಲಸದ ಹೊರೆಯೇನೂ ಕಡಿಮೆಯಾಗುವುದಿಲ್ಲ. ಈ ಕೆಲಸವನ್ನು ಪರಿಗಣನೆಗೆ ತೆಗೆದುಕೊಳ್ಳುವುದೇ ಇಲ್ಲ.

ಒಂದು ವಾರದಲ್ಲಿ ಮನೆಯಿಂದ ಹೊರಗೆ ದುಡಿಯುವ ಪುರುಷ ತೆಗೆದುಕೊಳ್ಳುವ ವಿರಾಮದ ಗಂಟೆಗಳಿಗೆ ಹೋಲಿಸಿದರೆ ಎರಡೂ ಕಡೆ ದಣಿಯುವ ಮಹಿಳೆಗೆ ವಿರಾಮದ ಅವಧಿ ತುಂಬಾ ಕಡಿಮೆ ಇರುತ್ತದೆ. ಮಹಿಳೆಯ ವೇತನರಹಿತ ಕೆಲಸವೂ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದೇಶದ ಸಮಗ್ರ ದೇಶೀಯ ಉತ್ಪನ್ನ (ಜಿಡಿಪಿ)ಗೆ ಶೇ 7.5 ರಷ್ಟು ಕೊಡುಗೆ ನೀಡುತ್ತಾಳೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಆದರೆ ಇವರು ನೌಕರರೇ ಅಲ್ಲ ಎಂದು ಪರಿಗಣಿಸಲಾಗಿದೆ. ಮಹಿಳೆಯರ ಮನೆ ಕೆಲಸವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು. ಜಿಡಿಪಿ ಲೆಕ್ಕಾಚಾರದಿಂದ ಹಿಡಿದು ಜನಗಣತಿಯಲ್ಲಿ ಕೇಳಲಾಗುವ ಪ್ರಶ್ನಾವಳಿಯವರೆಗೆ ಮಹಿಳೆಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಎಂದು ಮಹಿಳಾಪರ ಹೋರಾಟಗಾರರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಮನೆಯ ಹೊರಗೆ ಪುರುಷ ಸೀಮಿತ ಅವಧಿಗೆ ಕೆಲಸ ಮಾಡಿದರೆ ಮಹಿಳೆ ಪುರುಷನಿಗಿಂತಲೂ 1.5 ಗಂಟೆ ಹೆಚ್ಚು ಕೆಲಸ ಮಾಡುತ್ತಾಳೆ. ಅದೂ ವೇತನರಹಿತವಾಗಿ.

ಕಡಿಮೆ ಆದಾಯವಿರುವ ಮನೆಗಳಲ್ಲಿ ಮಹಿಳೆಯೂ ಮನೆಯ ಹೊರಗೆ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಆದರೆ ಇವರ ಕೆಲಸವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಪರಿಣಾಮ ಅಂಕಿಅಂಶಗಳಲ್ಲಿ ವ್ಯಕ್ತವಾಗುವುದಿಲ್ಲ. ಇಂತಹ ಕುಟುಂಬಗಳ ಮಹಿಳೆಯರ ಉದ್ಯೋಗ ಸೀಮಿತ ಅವಧಿಯದ್ದಾಗಿರುತ್ತದೆ. ಅಂದರೆ ವರ್ಷವಿಡೀ ಕೆಲಸ ಲಭ್ಯವಾಗುವುದಿಲ್ಲ. ಉದ್ಯೋಗಕ್ಕೆ ಕರೆ ಬಂದಾಗ ಮಾಡುತ್ತಾರೆ ಇಲ್ಲವೇ ಮನೆಯಲ್ಲಿರುತ್ತಾರೆ. ಇಂತಹವರ ಸಂಖ್ಯೆ ಶೇ 44 ರಷ್ಟು ಎಂದು ಹೇಳಲಾಗುತ್ತಿದೆ.

ದುಡಿಯುವ ಮಹಿಳೆಯರ ಸಂಖ್ಯೆ ಭಾರತದಲ್ಲಿ ತುಂಬ ಕಡಿಮೆಯಿದೆ. ವಿಶ್ವಬ್ಯಾಂಕ್ ಪ್ರಕಾರ ಶೇ 24 ರಷ್ಟು ಮಹಿಳೆಯರು ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದರೆ ಸರ್ಕಾರದ ಪ್ರಕಾರ ಇವರ ಸಂಖ್ಯೆ ಶೇ 32.8. ಚೀನಾದಲ್ಲಿ ಶೇ 61, ಬಾಂಗ್ಲಾದೇಶದಲ್ಲಿ ಶೇ 38, ನೇಪಾಳದಲ್ಲಿ ಶೇ 29 ಮತ್ತು ಪಾಕಿಸ್ತಾನದಲ್ಲಿ ಶೇ 25ರಷ್ಟು ಮಹಿಳೆಯರು ಉದ್ಯೋಗನಿರತರಾಗಿದ್ದಾರೆ.

ಕಾಲ ಬದಲಾಗುತ್ತಿದೆ. ಭವಿಷ್ಯದಲ್ಲಿ ಮನೆಯ ಒಳಗೂ ದುಡಿಯುವ ಮಹಿಳೆಯರ ಕೆಲಸಕ್ಕೆ ಮನ್ನಣೆ ಸಿಗಬಹುದು. ವೇತನವೂ ನಿಗದಿಯಾಗಬಹುದು. ಪುರುಷನೂ ಮನೆ ಕೆಲಸವನ್ನು ಸಮಾನವಾಗಿ ಹಂಚಿಕೊಳ್ಳುವ ದಿನಗಳು ಶೀಘ್ರ ಬರಬಹುದು.

(ಬರಹ: ಎಚ್.ಮಾರುತಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ