ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಬಲ ಭಾರತದ ಕನಸು; 2047ಕ್ಕೆ 30 ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ಬೃಹತ್ ಶಕ್ತಿಯಾಗುವ ಆಶಯದಲ್ಲಿ ಭಾರತ -ಸಂಪಾದಕೀಯ

ಸಬಲ ಭಾರತದ ಕನಸು; 2047ಕ್ಕೆ 30 ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ಬೃಹತ್ ಶಕ್ತಿಯಾಗುವ ಆಶಯದಲ್ಲಿ ಭಾರತ -ಸಂಪಾದಕೀಯ

HT Editorial HT Kannada

Nov 07, 2023 06:30 AM IST

ಭಾರತದ ಆರ್ಥಿಕ ಪ್ರಗತಿ ಭರವಸೆ ಮೂಡಿಸಿದೆ (ಪ್ರಾತಿನಿಧಿಕ ಚಿತ್ರ)

    • The Vision India@2047: ಇಷ್ಟುದಿನ ಅಭಿವೃದ್ಧಿಶೀಲ ದೇಶಗಳ ಸಾಲಿನಲ್ಲಿದ್ದ ಭಾರತವು ಇದೀಗ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರುವಲ್ಲಿ ದಾಪುಗಾಲು ಹಾಕುತ್ತಿದೆ. ಸ್ವಾತಂತ್ರ್ಯ ಬಂದು 100 ವರ್ಷಗಳಾಗುವ (2047) ಹೊತ್ತಿಗೆ 30 ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ಶಕ್ತಿಯಾಗಿ ಹೊರಹೊಮ್ಮುವ ಆಶಯವನ್ನು ನೀತಿ ಆಯೋಗ ಬಹಿರಂಗಪಡಿಸಿದೆ.
ಭಾರತದ ಆರ್ಥಿಕ ಪ್ರಗತಿ ಭರವಸೆ ಮೂಡಿಸಿದೆ (ಪ್ರಾತಿನಿಧಿಕ ಚಿತ್ರ)
ಭಾರತದ ಆರ್ಥಿಕ ಪ್ರಗತಿ ಭರವಸೆ ಮೂಡಿಸಿದೆ (ಪ್ರಾತಿನಿಧಿಕ ಚಿತ್ರ)

2047ರ ಅಂತ್ಯದ ವೇಳೆಗೆ ಭಾರತವು 30 ಲಕ್ಷ ಕೋಟಿ ಡಾಲರ್ ಗಾತ್ರದ ಬೃಹತ್ ಆರ್ಥಿಕ ಶಕ್ತಿಯಾಗಬೇಕೆನ್ನುವ ಕನಸಿನೊಂದಿಗೆ ಕೇಂದ್ರ ಸರ್ಕಾರವು ಕರಡು ಮಾರ್ಗಸೂಚಿಯನ್ನು ಅಂತಿಮಗೊಳಿಸಲು ಮುಂದಾಗಿದೆ. ಅಷ್ಟು ಹೊತ್ತಿಗೆ ಭಾರತದ ಜನಸಂಖ್ಯೆ 165 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಇಷ್ಟು ಜನರಿಂದ 18,181 ಡಾಲರ್‌ನಷ್ಟು ತಲಾ ಜಿಡಿಪಿ ನಿರೀಕ್ಷಿಸಲಾಗಿದೆ. ಪ್ರಸ್ತುತ ವಿಶ್ವಸಂಸ್ಥೆಯು 13,846 ಡಾಲರ್ ತಲಾವಾರು ಆದಾಯ ಇರುವ ದೇಶಗಳನ್ನು ಅಭಿವೃದ್ಧಿ ಹೊಂದಿದ ದೇಶಗಳು ಎಂದು ಗುರುತಿಸುತ್ತದೆ. ಈ ಗಡಿಯನ್ನು ದಾಟುವ ನಿರೀಕ್ಷೆಯನ್ನೂ ಭಾರತ ಸರ್ಕಾರವು ಇರಿಸಿಕೊಂಡಿರುವುದು ಗಮನಾರ್ಹ ಸಂಗತಿ.

ಟ್ರೆಂಡಿಂಗ್​ ಸುದ್ದಿ

Lok Sabha Election: 4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಆರಂಭ; ಆಂಧ್ರ ಪ್ರದೇಶ ವಿಧಾನಸಭೆಗೂ ಇಂದೇ ವೋಟಿಂಗ್

CBSE Result 2024: ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ ಯಾವಾಗ; ರಿಸಲ್ಟ್ ನೋಡಲು ಅಧಿಕೃತ ವೆಬ್‌ಸೈಟ್‌ಗಳು, ದಿನಾಂಕದ ಮಾಹಿತಿ ತಿಳಿಯಿರಿ

Indian Railways: ಧಾರ್ಮಿಕ ಕ್ಷೇತ್ರ ದರ್ಶನಕ್ಕೆ ಭಾರತ್‌ ಗೌರವ್‌ ವಿಶೇಷ ರೈಲು, ಮೇ 18ಕ್ಕೆ ಆರಂಭ, ಮಾರ್ಗ, ದರ ಪರಿಶೀಲಿಸಿ

Viral Video: ಕಣ್ಣಿಲ್ಲದವರಿಗೂ ಫುಟ್‌ಬಾಲ್‌ ಮ್ಯಾಚ್ ಸವಿಯಲು ಅವಕಾಶ ಮಾಡಿಕೊಟ್ಟ ಹೃದಯವಂತ, ಸೂಪರ್ ಅಂತ ಮೆಚ್ಚಿದ ಜನ

ಭಾರತದ ಜಿಡಿಪಿ ಸಹ ಡಾಲರ್‌ ಮೌಲ್ಯ ನಿಗದಿಪಡಿಸುವ ಲೆಕ್ಕಾಚಾರದಲ್ಲಿ ಒಂದು ನಿರ್ಧಾರಕ ಅಂಶ ಎನಿಸಿದೆ. ಇದು 2020 ರಲ್ಲಿ ಒಂದು ಡಾಲರ್‌ಗೆ 74.2 ರೂಪಾಯಿ ಮೌಲ್ಯವಿತ್ತು. 2028ಕ್ಕೆ ಇದು 83.9 ರೂಪಾಯಿ ಆಗುವ ನಿರೀಕ್ಷೆಯಿದೆ. ವಿಶ್ವ ಹಣಕಾಸು ಸಂಸ್ಥೆ ನೀಡಿರುವ "ವಿಶ್ವ ಆರ್ಥಿಕ ಔಟ್‌ಲುಕ್" ಮುನ್ನೋಟದ ದತ್ತಾಂಶಗಳಲ್ಲಿ ಈ ಅಂಶವು ಉಲ್ಲೇಖವಾಗಿದೆ. ಸದ್ಯೋಭವಿಷ್ಯದಲ್ಲಿ ಏನೆಲ್ಲಾ ಆಗಬಹುದು ಎನ್ನುವುದಕ್ಕೆ ವಿಶ್ವ ಹಣಕಾಸು ಸಂಸ್ಥೆಯ ಲೆಕ್ಕಾಚಾರವನ್ನು ಅರ್ಥಶಾಸ್ತ್ರಜ್ಞರು ಗಂಭೀರವಾಗಿ ಪರಿಗಣಿಸುತ್ತಾರೆ.

ಭಾರತ ಸರ್ಕಾರವು ಸಿದ್ಧಪಡಿಸಿರುವ "ಮುನ್ನೋಟ ಕರಡು ದಾಖಲೆ"ಯಲ್ಲಿ (ವಿಷನ್ ಡಾಕ್ಯುಮೆಂಟ್‌) 2047 ನೇ ಇಸವಿಯ ಹೊತ್ತಿಗೆ ರೂಪಾಯಿ-ಡಾಲರ್ ವಿನಿಮಯ ದರ ಎಷ್ಟು ಇರಬಹುದು ಎಂಬ ಅಂದಾಜು ಹೇಗಿರುತ್ತದೆ ಎನ್ನುವ ಬಗ್ಗೆಯೂ ವಿತ್ತ ವಲಯದಲ್ಲಿ ಕುತೂಹಲವಿದೆ. ಜಾಗತಿಕ ವಹಿವಾಟಿಗೆ ಭಾರತವು ಡಾಲರ್ ಮೌಲ್ಯವನ್ನು ನೆಚ್ಚಿಕೊಂಡಿರುವುದರಿಂದ 30 ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿಇದು ಮಹತ್ವದ ಪಾತ್ರ ನಿರ್ವಹಿಸುತ್ತದೆ. ಈ ಮಾಹಿತಿಯನ್ನು ಕರಡು ದಾಖಲೆಯು ಗೌಪ್ಯವಾಗಿ ಇರಿಸಿದರೆ ಗುರಿ ಸಾಧನೆಗೆ ಅನುಸರಿಸುವ ಕಾರ್ಯತಂತ್ರಗಳ ಬಗ್ಗೆ ಇನ್ನೂ ಸಾಕಷ್ಟು ಚರ್ಚೆ ನಡೆಯಬೇಕಿದೆ ಎಂಬ ಅರ್ಥ ಬರುತ್ತದೆ.

ಡಾಲರ್ ಎದುರು ರೂಪಾಯಿ ಮೌಲ್ಯ ವಹಿಸುವ ಪಾತ್ರವನ್ನು ಗುರುತಿಸಿದ ನಂತರ ಜಿಡಿಪಿ ಮತ್ತು ಆದಾಯ ಪ್ರಗತಿಯ ಮುನ್ನೋಟದ ಬಗ್ಗೆ ಎಲ್ಲರ ಗಮನ ಇದೆ. 2028ರ ವರೆಗೆ ಶೇ 6.5, ಶೇ 7.5 ಮತ್ತು ಶೇ 8.5 ರ ಜಿಡಿಪಿ ಪ್ರಗತಿ ಸಾಧ್ಯತೆಯನ್ನು ವಿಶ್ವ ಹಣಕಾಸು ಸಂಸ್ಥೆಯು ಅಂದಾಜಿಸಿದೆ. 2047ರ ಹೊತ್ತಿಗೆ ಜಿಡಿಪಿ ಪ್ರಗತಿಯಲ್ಲಿ ಶೇ 3.3, ಶೇ 4 ಮತ್ತು ಶೇ 4.7 ರ ಪ್ರಗತಿಯನ್ನು ಅಂದಾಜಿಸಬಹುದಾಗಿದೆ.

ಮಧ್ಯಮಾವಧಿಯಲ್ಲಿ ಭಾರತದ ಪ್ರಗತಿ ಸಾಧ್ಯತೆಯನ್ನು ಗರಿಷ್ಠಗೊಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಬೇಕಿದೆ. ಈ ಪ್ರಯತ್ನಕ್ಕೆ ಇರುವ ಪ್ರಾಮುಖ್ಯವನ್ನೂ ಈ ಸಂಖ್ಯೆಗಳು ವಿವರಿಸುತ್ತವೆ. ಶೇ 6.5 ರ ಜಿಡಿಪಿ ಪ್ರಗತಿ ದರವು ಭಾರತವನ್ನು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನಾಗಿ ರೂಪಿಸಲು ಸಾಕಾಗುತ್ತದೆ. ಭಾರತೀಯರ ಜೀವನಮಟ್ಟವನ್ನು ಹೆಚ್ಚಿಸಲು ಸರ್ಕಾರವು ಎಲ್ಲ ಪ್ರಯತ್ನಗಳನ್ನೂ ಮಾಡಬೇಕಿದೆ. ಇದಕ್ಕೂ ಸಮರ್ಪಕ ಗುರಿಗಳನ್ನು ನಿಗದಿಪಡಿಸಬೇಕು. ಜನರಲ್ಲಿ ದುಡಿಯುವ ಉತ್ಸಾಹ ಇದ್ದರೆ ಮಾತ್ರ ದೀರ್ಘಾವಧಿಯಲ್ಲಿ ಆರ್ಥಿಕ ಮುನ್ನಡೆ ಸಾಧ್ಯವಾಗುತ್ತದೆ.

ಪ್ರಪಂಚವು ಇತ್ತೀಚೆಗೆ ಹೆಚ್ಚು ರಕ್ಷಣಾತ್ಮಕವಾಗಿ ಬದಲಾಗುತ್ತಿದೆ. ಹಲವು ದೇಶಗಳಲ್ಲಿ ಅಸ್ಥಿರತೆ ಮನೆಮಾಡಿದ್ದು, ಸಾಮಾಜಿಕವಾಗಿ ಗೊಂದಲಗಳು ಉದ್ಭವಿಸುತ್ತಿವೆ. ಯಾವುದೇ ಒಂದು ದೇಶವು ವಿಶ್ವದ ಇತರ ದೇಶಗಳಲ್ಲಿ ಆಗುವ ಬೆಳವಣಿಗೆಗಳ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಭಾರತವು ದೇಶೀಯ ಆರ್ಥಿಕತೆಗೆ ಹೆಚ್ಚು ಒತ್ತುಕೊಡುವುದರ ಜೊತೆಗೆ ಸರ್ಕಾರದ ನೀತಿ ನಿರೂಪಣೆ ಮತ್ತು ಆರ್ಥಿಕ ವಹಿವಾಟಿನ ನಡುವೆ ಸಮತೋಲನ ಸಾಧಿಸಬೇಕಾದ ಅಗತ್ಯವನ್ನೂ ಈ ಬೆಳವಣಿಗೆ ಒತ್ತಿ ಹೇಳುತ್ತದೆ. ಭಾರತ ಭವಿಷ್ಯದ ಬಗ್ಗೆ ರೂಪಿಸುವ ಯಾವುದೇ ಕರಡು ದಾಖಲೆಯು ಈ ಎಲ್ಲ ಅಂಶಗಳನ್ನೂ ಗಮನದಲ್ಲಿರಿಸಿಕೊಂಡಿರಬೇಕು.

ಇನ್ನು ಮೂರು ತಿಂಗಳಲ್ಲಿ "ಭಾರತದ ದೃಷ್ಟಿಕೋನ 2047" (The Vision India@2047) ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಬಹುದು ಎಂದು ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಹೇಳಿದ್ದಾರೆ. ಈಗಾಗಲೇ ಕರಡು ದಾಖಲೆ ಅಂತಿಮ ಹಂತದಲ್ಲಿದ್ದು ಕೊನೆಯ ಕ್ಷಣದ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಪ್ರಸ್ತುತ ಭಾರತವು 3.7 ಲಕ್ಷ ಕೋಟಿ ಡಾಲರ್ ಆರ್ಥಿಕತೆಯೊಂದಿಗೆ ವಿಶ್ವದ 5ನೇ ಬೃಹತ್ ಆರ್ಥಿಕತೆಯಾಗಿದ್ದು, 2047ರ ಹೊತ್ತಿಗೆ ಭಾರತವು 30 ಲಕ್ಷ ಕೋಟಿ ಆರ್ಥಿಕತೆಯಾಗಬಹುದು ಎಂಬ ಕನಸು ಬಿತ್ತಲಾಗಿದೆ. ಭಾರತದ ಭವಿಷ್ಯ ಹೇಗಿರಬಹುದು ಎಂಬ ಇಣುಕುನೋಟವೂ ಈ ದಾಖಲೆಯಲ್ಲಿ ಸಿಗಲಿದೆ.

ಆರೋಗ್ಯ, ಸೌಂದರ್ಯ, ಜ್ಯೋತಿಷ್ಯ, ಹಬ್ಬ, ದೇಗುಲ... ಬದುಕಿನ ಸಂಭ್ರಮ ಹೆಚ್ಚಿಸುವ ಸಮಗ್ರ ಮಾಹಿತಿಗಾಗಿ "ಎಚ್‌ಟಿ ಕನ್ನಡ ಸಂಭ್ರಮ" ಕಮ್ಯುನಿಟಿಗೆ ಸೇರಿ. ಕಮ್ಯುನಿಟಿಗೆ ಸೇರಲು ಲಿಂಕ್: https://chat.whatsapp.com/JD3PfTHJMw6E4n53xdjBdu

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ