ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಂಪಾದಕೀಯ: ಕಾಡುತ್ತಿದೆ ಆಹಾರ ಬೆಲೆಏರಿಕೆ; ಹಣದುಬ್ಬರದ ಅಡಕತ್ತರಿಯಲ್ಲಿ ಸಿಲುಕಿದ ಜನ

ಸಂಪಾದಕೀಯ: ಕಾಡುತ್ತಿದೆ ಆಹಾರ ಬೆಲೆಏರಿಕೆ; ಹಣದುಬ್ಬರದ ಅಡಕತ್ತರಿಯಲ್ಲಿ ಸಿಲುಕಿದ ಜನ

HT Kannada Desk HT Kannada

Jul 17, 2023 06:00 AM IST

ಹಣದುಬ್ಬರಕ್ಕೆ ಆಹಾರ ಬೆಲೆ ಏರಿಕೆಯೂ ಕಾರಣ.

    • ಮೂರು ತಿಂಗಳ ಹಿಂದೆ ಟೊಮೆಟೊ ಬೆಲೆ ಕುಸಿದಿದ್ದು ಈಗಿನ ಟೊಮೆಟೊ ದರಏರಿಕೆ ಬಿಕ್ಕಟ್ಟಿಗೆ ಕಾರಣ. ದಿನದಿಂದ ದಿನಕ್ಕೆ ಕೃಷಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವ ಯುವಜನರ ಪ್ರಮಾಣ ಹೆಚ್ಚಾಗುತ್ತಿದೆ. ಬೀಡುಬಿದ್ದ ಕೃಷಿಭೂಮಿಗಳಲ್ಲಿ ಮತ್ತೆ ಹಸಿರು ನಗದಿದ್ದರೆ ಆಹಾರದ ಹಣದುಬ್ಬರ ಭಾರತದ ಸ್ವಾವಲಂಬನೆಯನ್ನು ಕುಗ್ಗಿಸುವ ಅಪಾಯವೂ ಇದೆ.
ಹಣದುಬ್ಬರಕ್ಕೆ ಆಹಾರ ಬೆಲೆ ಏರಿಕೆಯೂ ಕಾರಣ.
ಹಣದುಬ್ಬರಕ್ಕೆ ಆಹಾರ ಬೆಲೆ ಏರಿಕೆಯೂ ಕಾರಣ.

ಕಳೆದ ಬುಧವಾರ (ಜುಲೈ 12) ಬಿಡುಗಡೆಯಾದ ಜೂನ್ ತಿಂಗಳ ಹಣದುಬ್ಬರ ವಿವರಗಳಲ್ಲಿ ಎರಡು ಮುಖ್ಯ ವಿಚಾರಗಳು ಪ್ರಸ್ತಾಪವಾಗಿದ್ದವು. ಸಿಪಿಐ (ಗ್ರಾಹಕ ಬೆಲೆ ಸೂಚ್ಯಂಕ, Consumer Price Index - CPI) ಜೂನ್ ತಿಂಗಳಲ್ಲಿ ಶೇ 4.81 ಹೆಚ್ಚಾಗಿದೆ. ಇದಕ್ಕೆ ಹಿಂದಿನ 4 ತಿಂಗಳುಗಳಿಂದ ಸಿಪಿಐ ಪ್ರಮಾಣ ನಿಯಂತ್ರಣದಲ್ಲಿಯೇ ಇತ್ತು. ಏರುತ್ತಿರುವ ಆಹಾರದ ಬೆಲೆ ಚಿಲ್ಲರೆ ಹಣದುಬ್ಬರದ ಏರಿಕೆಗೆ ಮುಖ್ಯ ಕಾರಣವಾಗಿರುವುದು ಈ ದಾಖಲೆಯಲ್ಲಿ ನಾವು ಗಮನಿಸಬೇಕಾದ ಮೊದಲ ಅಂಶ. ಸೆಪ್ಟೆಂಬರ್‌ವರೆಗೆ ಈ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಾಣಿಸುವುದು ಕಷ್ಟ. ಜೂನ್ ತಿಂಗಳಲ್ಲಿ ಆಹಾರ ಹಣದುಬ್ಬರ ಪ್ರಮಾಣವು ಶೇ 4.49ರಷ್ಟು ಇತ್ತು. ಇದಕ್ಕೆ ಹಿಂದಿನ ತಿಂಗಳು, ಅಂದರೆ ಮೇ ತಿಂಗಳಲ್ಲಿ ಆಹಾರ ಹಣದುಬ್ಬರ ಪ್ರಮಾಣವು ಶೇ 2.96 ಇತ್ತು. ಇದಕ್ಕೆ ಪ್ರತಿಯಾಗಿ ಮೂಲ ಹಣದುಬ್ಬರವು (ಕೋರ್ ಇನ್‌ಫ್ಲೇಷನ್) ಜೂನ್ ತಿಂಗಳಲ್ಲಿ ಶೇ 5.1 ರಲ್ಲಿ ಸ್ಥಿರತೆ ಕಾಪಾಡಿಕೊಂಡಿತ್ತು.

ಟ್ರೆಂಡಿಂಗ್​ ಸುದ್ದಿ

CBSE Result 2024: ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ ಯಾವಾಗ; ರಿಸಲ್ಟ್ ನೋಡಲು ಅಧಿಕೃತ ವೆಬ್‌ಸೈಟ್‌ಗಳು, ದಿನಾಂಕದ ಮಾಹಿತಿ ತಿಳಿಯಿರಿ

Indian Railways: ಧಾರ್ಮಿಕ ಕ್ಷೇತ್ರ ದರ್ಶನಕ್ಕೆ ಭಾರತ್‌ ಗೌರವ್‌ ವಿಶೇಷ ರೈಲು, ಮೇ 18ಕ್ಕೆ ಆರಂಭ, ಮಾರ್ಗ, ದರ ಪರಿಶೀಲಿಸಿ

Viral Video: ಕಣ್ಣಿಲ್ಲದವರಿಗೂ ಫುಟ್‌ಬಾಲ್‌ ಮ್ಯಾಚ್ ಸವಿಯಲು ಅವಕಾಶ ಮಾಡಿಕೊಟ್ಟ ಹೃದಯವಂತ, ಸೂಪರ್ ಅಂತ ಮೆಚ್ಚಿದ ಜನ

ಸೌರ ಮಾರುತಗಳ ಆಟಕ್ಕೆ ಸಾಕ್ಷಿಯಾದ ಲಡಾಖ್ ಆಗಸ: ಇದು ಸೂರ್ಯನ ಹೋಳಿ ಆಟ, ಬಣ್ಣದೋಕುಳಿ ಕಂಡು ಸೂಪರ್ ಎಂದ ಜನ

ಬೇಗ ಹಾಳಾಗುವ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಿರುವುದು ಆಹಾರ ಹಣದುಬ್ಬರಕ್ಕೆ ಮುಖ್ಯ ಕಾರಣ. ಮಸಾಲೆ, ಧಾನ್ಯಗಳು, ತರಕಾರಿ ಮತ್ತು ಮೊಟ್ಟೆಗಳ ದರಏರಿಕೆ ಈಗಿನ ಹಣದುಬ್ಬರ ಪರಿಸ್ಥಿತಿಯ ಹಿಂದೆ ಇರುವ ಅಂಶ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಬೆಳವಣಿಗೆಯು ಋತುಮಾನವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕ, ಅಂದರೆ ಜನವರಿಯ ನಂತರ ಇದು ಇಳಿಕೆಯಾಗಬಹುದು ಎಂಬ ನಿರೀಕ್ಷೆಯಿದೆ. ದೇಶದ ಹಣಕಾಸು ಪರಿಸ್ಥಿತಿಯ ಮೇಲೆ ಹಣದುಬ್ಬರವು ಹಲವು ಪರಿಣಾಮಗಳನ್ನು ಬೀರಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು (Monetary Policy Committee - MPC) ರೆಪೊ ರೇಟ್ ತೀರ್ಮಾನಿಸುವಾಗ ಈ ಅಂಶವು ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.

ಗ್ರಾಹಕ ಬೆಲೆ ಸೂಚ್ಯಂಕದಲ್ಲಿರುವ ವಸ್ತುಗಳ ಪೈಕಿ ಆಹಾರ ಪದಾರ್ಥಗಳು ರಾಜಕೀಯ ಒತ್ತಡಗಳಿಗೆ ಈಡಾಗಬಹುದಾದ ಸಾಧ್ಯತೆ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಸರ್ಕಾರವು ಹಣದುಬ್ಬರ ತಗ್ಗಿಸಲು ಒಂದಿಷ್ಟು ಕ್ರಮಗಳನ್ನು ಜಾರಿಗೊಳಿಸಿತು. ಆದರೆ ಅದರಿಂದ ಮಿಶ್ರ ಫಲಿತಾಂಶ ಮಾತ್ರ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಕೃಷಿ ಪ್ರಧಾನ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಹಂತದಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕಡಿವಾಣಕ್ಕೆ ಮುಂದಾಗುವುದು ರಾಜಕೀಯವಾಗಿ ಲಾಭ ತಂದುಕೊಡಲಾರದು. ತಮ್ಮ ಆದಾಯಕ್ಕೆ ಕಡಿವಾಣ ಹಾಕುವ ರಾಜಕೀಯ ಪಕ್ಷವನ್ನು ರೈತರೂ ಇಷ್ಟಪಡುವುದಿಲ್ಲ. ಹೀಗಾಗಿ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಈ ಅಂಶವನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ.

ರಾಷ್ಟ್ರೀಯ ಸರಾಸರಿಗಿಂತಲೂ ಕೆಲ ರಾಜ್ಯಗಳಲ್ಲಿ ಹಣದುಬ್ಬರ ಪ್ರಮಾಣ ಹೆಚ್ಚಾಗಿಯೇ ಉಳಿದಿದೆ. ಮುಂಗಾರು ಮಳೆ ಉತ್ತಮವಾಗಿ ಆಗದಿದ್ದರೆ ಇದೇ ಪರಿಸ್ಥಿತಿ ಮುಂದುವರಿಯುವ ಅಪಾಯವಿದೆ. ದೇಶದಲ್ಲಿ ಸದ್ಯಕ್ಕೆ ಉತ್ತರ ಭಾರತದ ಪ್ರವಾಹ ದೊಡ್ಡ ಸುದ್ದಿಯಾಗುತ್ತಿದೆ. ಆದರೆ ಕರ್ನಾಟಕದ ಹಲವು ಜಿಲ್ಲೆಗಳೂ ಸೇರಿದಂತೆ ಸಾಕಷ್ಟು ಕಡೆ ಮಳೆ ಪ್ರಮಾಣ ಕಡಿಮೆಯಾಗಿದೆ. ಇನ್ನು ಕೆಲ ದಿನಗಳಲ್ಲಿ ಮಳೆ ಪರಿಸ್ಥಿತಿ ಸುಧಾರಿಸದಿದ್ದರೆ ಮುಂಗಾರು ಬೆಳೆಗಳ ಬಿತ್ತನೆ, ನಾಟಿ ಕಷ್ಟವಾಗುತ್ತದೆ. ಆಹಾರ ಹಣದುಬ್ಬರವು ಮತ್ತೊಂದು ಅವಧಿಗೂ ಮುಂದುವರಿಯುವ ಅಪಾಯಕ್ಕೆ ಇದು ಮುನ್ನುಡಿ ಆಗಬಹುದು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಸದ್ಯದ ಪರಿಸ್ಥಿತಿಯ ಜೊತೆಗೆ ದೀರ್ಘಾವಧಿ ಪರಿಣಾಮಗಳ ಬಗ್ಗೆಯೂ ಚಿಂತನೆ ನಡೆಸಬೇಕು. ಮೂರು ತಿಂಗಳ ಹಿಂದೆ ಟೊಮೆಟೊ ಬೆಲೆ ಕುಸಿದಿದ್ದು ಈಗಿನ ಟೊಮೆಟೊ ದರಏರಿಕೆ ಬಿಕ್ಕಟ್ಟಿಗೆ ಕಾರಣ. ದಿನದಿಂದ ದಿನಕ್ಕೆ ಕೃಷಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವ ಯುವಜನರ ಪ್ರಮಾಣ ಹೆಚ್ಚಾಗುತ್ತಿದೆ. ಬೀಡುಬಿದ್ದ ಕೃಷಿಭೂಮಿಗಳಲ್ಲಿ ಮತ್ತೆ ಹಸಿರು ನಗದಿದ್ದರೆ ಆಹಾರದ ಹಣದುಬ್ಬರ ಭಾರತದ ಸ್ವಾವಲಂಬನೆಯನ್ನು ಕುಗ್ಗಿಸುವ ಅಪಾಯವೂ ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ