Nari Nyay Scheme: ಲೋಕಸಭಾ ಚುನಾವಣೆಗೆ 5 ಗ್ಯಾರೆಂಟಿಗಳ ನಾರಿ ನ್ಯಾಯ ಭರವಸೆ ಘೋಷಿಸಿದ ಕಾಂಗ್ರೆಸ್, ಇಲ್ಲಿದೆ 5 ಅಂಶ
Mar 14, 2024 11:03 AM IST
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಎಡಕ್ಕೆ), ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (ಬಲಕ್ಕೆ)
Nari Nyay Scheme: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ 5 ಗ್ಯಾರೆಂಟಿಗಳ ನಾರಿ ನ್ಯಾಯ ಭರವಸೆ ಘೋಷಿಸಿದೆ. ಚುನಾವಣಾ ಪ್ರಚಾರಕ್ಕೆ ಕಾವು ಒದಗಿಸುವಲ್ಲಿ ಗ್ಯಾರೆಂಟಿ ಯೋಜನೆಗಳು ಹೆಚ್ಚು ಕೊಡುಗೆ ನೀಡುತ್ತಿವೆ. ಈ ಹಿಂದಿನ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಕಾಂಗ್ರೆಸ್ ಪಕ್ಷದ ಹುಮ್ಮಸ್ಸು ಹೆಚ್ಚಿಸಿದ್ದು, ಹೊಸ ಗ್ಯಾರೆಂಟಿ ಯೋಜನೆಗಳ 5 ಅಂಶ ಇಲ್ಲಿದೆ.
ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರದ ಕಾವು ಹೆಚ್ಚಿಸುವ ವಿದ್ಯಮಾನ ಒಂದರಲ್ಲಿ, ಕಾಂಗ್ರೆಸ್ ಪಕ್ಷವು ಚುನಾವಣಾ ಭರವಸೆ (Congress Poll Promise) ಯಾಗಿ 5 ಗ್ಯಾರೆಂಟಿಗಳ “ನಾರಿ ನ್ಯಾಯ್” (5 Guarantees Nari Nyay) ಯೋಜನೆಯನ್ನು ಘೋಷಿಸಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ 5 ಗ್ಯಾರೆಂಟಿ ಯೋಜನೆಗಳ ಘೋಷಣೆ ಬಳಿಕ ಸಿಕ್ಕ ಅಭೂತ ಪೂರ್ವ ಯಶಸ್ಸನ್ನು ತೆಲಂಗಾಣದಲ್ಲೂ ಕಂಡಿತ್ತು. ಇದನ್ನೇ ಲೋಕಸಭೆ ಚುನಾವಣೆಯಲ್ಲೂ ಮತ್ತೆ ಪಡೆಯಲು ಕಾಂಗ್ರೆಸ್ ಮುಂದಾಗಿದೆ.
ಈ ಸಲದ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಅನುರಣಿಸುತ್ತಿರುವುದು ಗ್ಯಾರೆಂಟಿ ಮಾತ್ರ. ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆಂದು ಆರಂಭಿಸಿದ ಗ್ಯಾರೆಂಟಿ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಮೇಲೂ ಒಂದಷ್ಟು ಒತ್ತಡವನ್ನು ಉಂಟುಮಾಡಿದೆ.
ಏನಿದು 5 ಗ್ಯಾರೆಂಟಿಗಳ ನಾರಿ ನ್ಯಾಯ್
ಲೋಕಸಭಾ ಚುನಾವಣೆಯ ಪ್ರಚಾರ ಶುರುಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ (ಮಾರ್ಚ್ 14), ಕಾಂಗ್ರೆಸ್ ಪಕ್ಷ ಇಂದು 'ನಾರಿ ನ್ಯಾಯ್ ಗ್ಯಾರಂಟಿ' ಘೋಷಿಸುತ್ತಿದೆ. ಇದರಲ್ಲಿ, ಪಕ್ಷವು ದೇಶದ ಮಹಿಳೆಯರಿಗಾಗಿ ಹೊಸ ಕಾರ್ಯಸೂಚಿಯನ್ನು ಹೊಂದಿಸಲಿದೆ. ‘ನಾರಿ ನ್ಯಾಯ್ ಗ್ಯಾರಂಟಿ’ಯಲ್ಲಿ ಕಾಂಗ್ರೆಸ್ ಐದು ಘೋಷಣೆಗಳನ್ನು ಮಾಡುತ್ತಿದೆ" ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಘೋಷಿಸಿದ 5 ಗ್ಯಾರೆಂಟಿಗಳ ನಾರಿ ನ್ಯಾಯ್ ರಾಜಕೀಯವಾಗಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ನಾರಿ ನ್ಯಾಯ್ ಗ್ಯಾರೆಂಟಿಗಳ ಬಗ್ಗೆ ಮಾತನಾಡಿದ್ದು, ನಾವು ಅಧಿಕಾರಕ್ಕೆ ಬಂದ ನಂತರ, ದೇಶಾದ್ಯಂತ ಜಾತಿ ಗಣತಿ ಮತ್ತು ಆರ್ಥಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸಲಿದ್ದೇವೆ. ಇದು ಒಂದು ಕ್ರಾಂತಿಕಾರಿ ಹೆಜ್ಜೆಯಾಗಿರಲಿದೆ.... ಜನಸಂಖ್ಯೆಯಲ್ಲಿ ಪ್ರತಿ ಜಾತಿಯ ನಿಖರ ಪ್ರಾತಿನಿಧ್ಯದ ದತ್ತಾಂಶವನ್ನೂ ಹೊಂದಿದ್ದೇವೆ. ಬಿಜೆಪಿ ಸರ್ಕಾರ ಕೈಗಾರಿಕೋದ್ಯಮಿಗಳಿಗೆ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡುವುದಾದರೆ, ನಾವು ಜನ ಸಾಮಾನ್ಯರಿಗೆ ಈ ಗ್ಯಾರೆಂಟಿ ನೀಡುವುದು ಕಷ್ಟವೇನೂ ಅಲ್ಲ ಎಂದು ಹೇಳಿದರು.
ನಾರಿ ನ್ಯಾಯ್ ಯೋಜನೆಯ 5 ಗ್ಯಾರೆಂಟಿಗಳ ವಿವರ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾರಿ ನ್ಯಾಯ್ ಯೋಜನೆಯ 5 ಗ್ಯಾರೆಂಟಿಗಳ ವಿವರವನ್ನು ಪ್ರಕಟಿಸಿದ್ದಾರೆ. "ಮಹಾಲಕ್ಷ್ಮಿ ಗ್ಯಾರಂಟಿ, ಆದಿ ಆಬಾದಿ ಪೂರಾ ಹಕ್, ಶಕ್ತಿ ಕಾ ಸಮ್ಮಾನ್, ಅಧಿಕಾರ್ ಮೈತ್ರಿ ಮತ್ತು ಸಾವಿತ್ರಿಬಾಯಿ ಫುಲೆ ಹಾಸ್ಟೆಲ್ ಎಂಬ ಐದು ಗ್ಯಾರೆಂಟಿಗಳು ನಾರಿ ನ್ಯಾಯ್ ಯೋಜನೆಯಲ್ಲಿರಲಿವೆ. ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
1) ಮಹಾಲಕ್ಷ್ಮಿ ಗ್ಯಾರಂಟಿ : ಇದರಲ್ಲಿ, ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ ನೀಡಲಾಗುತ್ತದೆ.
2) ಆದಿ ಆಬಾದಿ ಪೂರಾ ಹಕ್ - ಇದರ ಪ್ರಕಾರ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಹೊಸ ನೇಮಕಾತಿಗಳಲ್ಲಿ ಅರ್ಧದಷ್ಟು ಮಹಿಳೆಯರ ಹಕ್ಕುಗಳಾಗಿ ಇರಲಿದೆ.
3) ಶಕ್ತಿ ಕಾ ಸಮ್ಮಾನ್: ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಬಿಸಿಯೂಟ ಕಾರ್ಮಿಕರ ಮಾಸಿಕ ಆದಾಯಕ್ಕೆ ಕೇಂದ್ರ ಸರ್ಕಾರದ ಕೊಡುಗೆ ದ್ವಿಗುಣಗೊಳಿಸುವ ಭರವಸೆ.
4) ಅಧಿಕಾರ್ ಮೈತ್ರಿ - ಮಹಿಳೆಯರಲ್ಲಿ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರಿಗೆ ಸಹಾಯ ಮಾಡಲು ಪ್ರತಿ ಪಂಚಾಯಿತಿಯಲ್ಲಿ ಅರೆಕಾನೂನು ಪರಿಣತರ (ಪ್ಯಾರಾ ಲೀಗಲ್) ನೇಮಕ.
5) ಸಾವಿತ್ರಿಬಾಯಿ ಫುಲೆ ಹಾಸ್ಟೆಲ್: ಜಿಲ್ಲಾ ಕೇಂದ್ರಗಳಲ್ಲಿ ಉದ್ಯೋಗಸ್ಥ ಮಹಿಳೆಯರಿಗಾಗಿ ಕನಿಷ್ಠ ಒಂದು ಹಾಸ್ಟೆಲ್ ನಿರ್ಮಾಣ. ದೇಶಾದ್ಯಂತ ಈ ಹಾಸ್ಟೆಲ್ ಗಳ ಸಂಖ್ಯೆಯನ್ನು ದ್ವಿಗುಣ
ಮಹಾರಾಷ್ಟ್ರದಲ್ಲಿ 5 ಗ್ಯಾರೆಂಟಿಗಳ ನಾರಿ ನ್ಯಾಯ್ ಘೋಷಣೆ
ಮಹಾರಾಷ್ಟ್ರದ ಧುಲೆಯಲ್ಲಿ ನಡೆದ ಮಹಿಳಾ ಮೇಳಾವ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ವಿಡಿಯೋ ಸಂದೇಶವನ್ನು ಪ್ರಸಾರ ಮಾಡಲಾಗಿತ್ತು. ಅದರಲ್ಲಿ ಈ 5 ಗ್ಯಾರೆಂಟಿಗಳ ನಾರಿ ನ್ಯಾಯ್ ಘೋಷಣೆ ಮಾಡಲಾಗಿದೆ. ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಎಎನ್‌ಐ ವರದಿ ಮಾಡಿದೆ.
ಈ ಗ್ಯಾರೆಂಟಿಗಳಲ್ಲದೇ, ಯುವಕರು ಮತ್ತು ರೈತರು ಸೇರಿ ವಿವಿಧ ವರ್ಗಗಳಿಗೆ ಕಾಂಗ್ರೆಸ್ ಈ ಹಿಂದೆ ಭರವಸೆಗಳನ್ನು ಘೋಷಿಸಿತ್ತು. ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪಕ್ಷ ಭರವಸೆ ನೀಡಿದೆ.
(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)