ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಅನೇಕ ಅಚ್ಚರಿ; ಗಮನಸೆಳೆದ 10 ಅಂಶಗಳು ಹೀಗಿವೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಅನೇಕ ಅಚ್ಚರಿ; ಗಮನಸೆಳೆದ 10 ಅಂಶಗಳು ಹೀಗಿವೆ

ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಅನೇಕ ಅಚ್ಚರಿ; ಗಮನಸೆಳೆದ 10 ಅಂಶಗಳು ಹೀಗಿವೆ

ಲೋಕಸಭಾ ಚುನಾವಣೆಗೆ ಬಿಜೆಪಿ ಪ್ರಕಟಿಸಿರುವ ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಅನೇಕ ಅಚ್ಚರಿಗಳಿವೆ. ಲೋಕಸಭೆ ಚುನಾವಣೆಯ ಮೊದಲ ಪಟ್ಟಿಯಲ್ಲಿ 195 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಎರಡನೇ ಪಟ್ಟಿಯಲ್ಲಿ ಕರ್ನಾಟಕ 20 ಸೇರಿ 72 ಅಭ್ಯರ್ಥಿಗಳ ಹೆಸರುಗಳಿವೆ. ಇದರಲ್ಲಿ ಗಮನಸೆಳೆದ 10 ಅಂಶಗಳು ಹೀಗಿವೆ.

ಮುಂಬೈಯ ಉತ್ತರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಕೇಂದ್ರ ಸಚಿವ ಪಿಯೂಷ್ ಗೋಯೆಲ್
ಮುಂಬೈಯ ಉತ್ತರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಕೇಂದ್ರ ಸಚಿವ ಪಿಯೂಷ್ ಗೋಯೆಲ್ (PTI)

ನವದೆಹಲಿ: ಲೋಕಸಭಾ ಚುನಾವಣೆಗೆ (Lok Sabha Election 2024) ಬಿಜೆಪಿ ಬುಧವಾರ ಪ್ರಕಟಿಸಿದ 72 ಅಭ್ಯರ್ಥಿಗಳ ಹೆಸರು ಇರುವ ಪಟ್ಟಿಯಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳ ಹೆಸರು ಕಂಡುಬಂದಿದೆ. ಅದೇ ರೀತಿ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆ ಕಣಕ್ಕೆ ಇಳಿದಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಮನೋಹರ್ ಲಾಲ್ ಖಟ್ಟರ್, ಅನುರಾಗ್ ಠಾಕೂರ್ ಅವರ ಹೆಸರುಗಳು ಎದ್ದು ಕಾಣುತ್ತವೆ. ಅಚ್ಚರಿಯ ಆಯ್ಕೆ ಎಂಬಂತೆ ಕರ್ನಾಟಕದ ಮೈಸೂರು-ಕೊಡಗು ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಿದ್ದು, ಅವರ ಬದಲಿಗೆ ಮೈಸೂರಿನ 31 ವರ್ಷದ ರಾಜ ಯದುವೀರ ಒಡೆಯರ್ ಹೆಸರು ಪ್ರಕಟವಾಗಿದೆ.

ಇನ್ನೊಂದೆಡೆ, ಕೇಂದ್ರದ ಮಾಜಿ ಸಚಿವರಾದ ಸದಾನಂದ ಗೌಡ, ರಮೇಶ್‌ ಪೋಖ್ರಿಯಾಲ್‌ಗೆ ಟಿಕೆಟ್ ತಪ್ಪಿಹೋಗಿದೆ. ಸದಾನಂದ ಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿದ್ದು, ಆ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಬಾರಿ ಸ್ಪರ್ಧಿಸುತ್ತಿದ್ದಾರೆ. ಸದಾನಂದ ಗೌಡ ಅವರು ಕಳೆದ ವರ್ಷ ರಾಜಕೀಯ ನಿವೃತ್ತಿ ಘೋ‍ಷಿಸಿದ್ದರು. ಇನ್ನು ಹರಿದ್ವಾರದ ಹಾಲಿ ಸಂಸದ ರಮೇಶ್ ಪೋಖ್ರಿಯಾಲ್‌ ಅವರ ಕ್ಷೇತ್ರದಲ್ಲಿ ತ್ರಿವೇಂದ್ರ ಸಿಂಗ್ ರಾವತ್ ಕಣಕ್ಕೆ ಇಳಿದಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯ 10 ಅಂಶಗಳು

1) ಮೂವರು ಮಾಜಿ ಮುಖ್ಯಮಂತ್ರಿಗಳು: ಮನೋಹರ್ ಲಾಲ್ ಖಟ್ಟರ್ (ಹರಿಯಾಣ), ಬಸವರಾಜ ಬೊಮ್ಮಾಯಿ (ಕರ್ನಾಟಕ) ಮತ್ತು ತ್ರಿವೇಂದ್ರ ಸಿಂಗ್ ರಾವತ್ (ಉತ್ತರಾಖಂಡ) ಅವರ ಹೆಸರು ಎರಡನೇ ಪಟ್ಟಿಯಲ್ಲಿದೆ. ಖಟ್ಟರ್ ಕರ್ನಾಲ್‌ನಿಂದ, ಬೊಮ್ಮಾಯಿ ಹಾವೇರಿಯಿಂದ ಮತ್ತು ರಾವತ್ ಹರಿದ್ವಾರದಿಂದ ಸ್ಪರ್ಧಿಸಲಿದ್ದಾರೆ.

2) ಮಹಾರಾಷ್ಟ್ರದಲ್ಲಿ ಘಟಾನುಘಟಿಗಳು: ಕೇಂದ್ರ ಸಚಿವರಾದ ನಿತಿನ್ ಗಡ್ಕರಿ (ನಾಗ್ಪುರ) ಮತ್ತು ಪಿಯೂಷ್ ಗೋಯಲ್ (ಮುಂಬೈ ಉತ್ತರ) ಮಹಾರಾಷ್ಟ್ರದಿಂದ ಲೋಕಸಭೆ ಚುನಾವಣೆ ಕಣಕ್ಕಿಳಿದಿರುವ ಪ್ರಮುಖ ಅಭ್ಯರ್ಥಿಗಳು. ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ಎನ್ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.

3) ಮೊದಲ ಬಾರಿ ಲೋಕಸಭಾ ಚುನಾವಣೆ ಎದುರಿಸುತ್ತಿದ್ದಾರೆ ಪಿಯೂಷ್ ಗೋಯಲ್ : ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು 2024 ರಲ್ಲಿ ಮುಂಬೈ ಉತ್ತರದಿಂದ ತಮ್ಮ ಮೊದಲ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ. ಪ್ರಸ್ತುತ ಪಿಯೂಷ್ ಗೋಯಲ್ ರಾಜ್ಯಸಭಾ ಸದಸ್ಯರಾಗಿದ್ದಾರೆ.

ಮುಂಬೈ ಉತ್ತರದಿಂದ ಕಣಕ್ಕೆ ಇಳಿದ ಪಿಯೂಷ್ ಗೋಯೆಲ್ ಮೊದಲ ಟ್ವೀಟ್‌

"ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯ ಪರವಾಗಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ಮುಂಬೈ ಉತ್ತರದಿಂದ ಲೋಕಸಭಾ ಅಭ್ಯರ್ಥಿಯಾಗಿ ನನ್ನನ್ನು ನಾಮನಿರ್ದೇಶನ ಮಾಡಿದ್ದಕ್ಕಾಗಿ ಬಿಜೆಪಿ ರಾಜ್ಯ ಅಧ್ಯಕ್ಷ ಸಿ ಬವಾನ್‌ಕುಲೆ ಜಿ ಮತ್ತು ಮುಂಬೈ ಅಧ್ಯಕ್ಷ ಆಶಿಷ್‌ ಷೆಲಾರ್‌ ಜಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನನ್ನ ಸ್ನೇಹಿತ ಮತ್ತು ಸಹೋದ್ಯೋಗಿ ಗೋಪಾಲ್‌ ಶೆಟ್ಟಿಜಿ ಅವರಿಂದ ಆಶೀರ್ವಾದ ಪಡೆದಿದ್ದೇನೆ. ಅವರು ಉತ್ತರ ಮುಂಬೈನ ಅಭಿವೃದ್ಧಿ ಮತ್ತು ಉನ್ನತಿಗಾಗಿ ತಮ್ಮ ನಿರಂತರ ಬೆಂಬಲದ ಭರವಸೆ ನೀಡಿದರು" ಎಂದು ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.

4) ಗೌತಮ್ ಗಂಭೀರ್ ಬದಲಿಗೆ ಹರ್ಷ್ ಮಲ್ಹೋತ್ರಾ ಯಾರು?: ಹಾಲಿ ಸಂಸದ ಗೌತಮ್ ಗಂಭೀರ್ ರಾಜಕೀಯ ನಿವೃತ್ತಿ ಘೋಷಿಸಿದ ನಂತರ, ಪೂರ್ವ ದೆಹಲಿಯ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಪ್ರಕಟವಾಗಿದೆ. ಇದರಲ್ಲಿ ಈ ಕ್ಷೇತ್ರಕ್ಕೆ ಹರ್ಷ್‌ ಮಲ್ಹೋತ್ರಾ ಹೆಸರು ಇದೆ. ಇವರು ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಮಾಜಿ ಮೇಯರ್.

5) ಕರ್ನಾಲ್‌ನಲ್ಲಿ ಖಟ್ಟರ್: ದಿಢೀರ್ ರಾಜಕೀಯ ಬೆಳವಣಿಗೆ ಕಾರಣ ಹರಿಯಾಣದ ಮುಖ್ಯಮಂತ್ರಿ ಸ್ಥಾನಕ್ಕೆ ಮನೋಹರ್ ಲಾಲ್ ಖಟ್ಟರ್ ಮಂಗಳವಾರ ರಾಜೀನಾಮೆ ನೀಡಿದ್ದರು. ಕರ್ನಾಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬುಧವಾರ ಅವರು ಘೋಷಿಸಿದರು. "ಇಂದಿನಿಂದ, ನಮ್ಮ ಮುಖ್ಯಮಂತ್ರಿ ಕರ್ನಾಲ್ ವಿಧಾನಸಭಾ ಕ್ಷೇತ್ರವನ್ನು ನೋಡಿಕೊಳ್ಳುತ್ತಾರೆ" ಎಂದು ಹೇಳಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟವಾಗಿದೆ.

6) ಸಿರ್ಸಾದಿಂದ ಹೊಸ ಸೇರ್ಪಡೆ ಅಶೋಕ್ ತನ್ವರ್: ಹರಿಯಾಣದ ನಾಯಕ ಅಶೋಕ್ ತನ್ವರ್ ಜನವರಿಯಲ್ಲಿ ಎಎಪಿಯಿಂದ ಬಿಜೆಪಿಗೆ ಸೇರಿದರು. ಅವರು ಹರಿಯಾಣದ ಸಿರ್ಸಾದಲ್ಲಿ ಹಾಲಿ ಸಂಸದೆ ಸುನೀತಾ ದುಗ್ಗಲ್ ಅವರ ಸ್ಥಾನವನ್ನು ತುಂಬಲಿದ್ದಾರೆ.

7) ಗೋಪಿನಾಥ್ ಮುಂಡೆ ಪುತ್ರಿ: ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ದಿವಂಗತ ಗೋಪಿನಾಥ್ ಮುಂಡೆ ಅವರ ಪುತ್ರಿ ಪಂಕಜಾ ಮುಂಡೆ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಮಹಾರಾಷ್ಟ್ರದ ಬೀಡ್‌ನಿಂದ ಅವರ ಸ್ಪರ್ಧೆ ಇರಲಿದೆ. ಅವರ ಸಹೋದರಿ ಪ್ರೀತಮ್‌ ಮುಂಡೆ ಈ ಕ್ಷೇತ್ರದ ಹಾಲಿ ಸಂಸದೆ. ಇತ್ತೀಚೆಗೆ ಅವರು ಪಕ್ಷದೊಳಗಿನ ಬೆಳವಣಿಗೆಗೆ ಭಾರಿ ಅಸಮಾಧಾನಗೊಂಡಿದ್ದರು.

ಲೋಕಸಭಾ ಚುನಾವಣೆ 2024; ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಕರ್ನಾಟಕದ ಅಚ್ಚರಿ

8) ಕರ್ನಾಟಕದ ಅಚ್ಚರಿ: ಧಾರವಾಡದಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಿವಮೊಗ್ಗದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಸ್ಪರ್ಧಿಸಲಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಹಾಲಿ ಸಂಸದ ತೇಜಸ್ವಿ ಸೂರ್ಯಗೆ ಮತ್ತೆ ಸಿಕ್ಕಿದೆ. ಆದರೆ, ಮೈಸೂರಿನಲ್ಲಿ ಪ್ರತಾಪ್ ಸಿಂಹ ಬದಲಿಗೆ ಯದುವೀರ್ ಕೃಷ್ಣದತ್ತ ಒಡೆಯರ್ ಸ್ಪರ್ಧಿಸಲಿದ್ದಾರೆ. ಹಾವೇರಿಯಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರು ಕೂಡ ಅಚ್ಚರಿ ಮೂಡಿಸಿತ್ತು.

9) ಪ್ರತಾಪ್ ಸಿಂಹಗೆ ಏನಾಯಿತು?: ಪಟ್ಟಿ ಪ್ರಕಟವಾಗುವ ಕೆಲವೇ ಗಂಟೆಗಳ ಮೊದಲು, ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅನುಯಾಯಿಗಳನ್ನು ಪ್ರತಿಭಟನೆ ಮಾಡದಂತೆ ಒತ್ತಾಯಿಸಿದರು. ಅವರು ಏನನ್ನೂ ವಿವರಿಸದಿದ್ದರೂ, ಹಿಂದಿನ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಒಡೆಯರ್ ಅವರನ್ನು ಈ ಸ್ಥಾನಕ್ಕೆ ಅಭ್ಯರ್ಥಿ ಎಂದು ಘೋಷಿಸಿದ ನಂತರ ಇದು ಸ್ಪಷ್ಟವಾಯಿತು. ಪ್ರತಾಪ್ ಸಿಂಹ ಅವರು ಸಂಸತ್ತಿಗೆ ನುಸುಳುವವರ ಪಾಸ್ ಗಳಿಗೆ ಸಹಿ ಹಾಕುವ ಮೂಲಕ ವಿವಾದದಲ್ಲಿ ಸಿಲುಕಿದ್ದರು, ಇದು ದೊಡ್ಡ ಭದ್ರತಾ ಉಲ್ಲಂಘನೆಗೆ ಕಾರಣವಾಯಿತು.

10) ನಳಿನ್ ಕುಮಾರ್ ಕಟೀಲ್‌ಗೂ ಟಿಕೆಟ್ ಇಲ್ಲ: ಬಿಜೆಪಿಯ ನಿಕಟಪೂರ್ವ ರಾಜ್ಯ ಅಧ್ಯಕ್ಷ, ದಕ್ಷಿಣ ಕನ್ನಡದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌ ಅವರಿಗೂ ಈ ಬಾರಿ ಟಿಕೆಟ್ ಇಲ್ಲ. ಎರಡು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಕಟೀಲ್‌ಗೆ ಕ್ಷೇತ್ರದಲ್ಲಿ ಪ್ರಬಲ ವಿರೋಧ ಎದುರಾಗಿತ್ತು. ಇಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಕಣಕ್ಕೆ ಇಳಿಸಲಾಗಿದೆ.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.