ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇಸ್ರೋದಿಂದ ಮತ್ತೊಂದು ಸಾಧನೆ, ಫೆ 17ಕ್ಕೆ ನಭಕ್ಕೆ ನೆಗೆಯಲಿದೆ ಹವಾಮಾನ ಉಪಗ್ರಹ; ಇನ್‌ಸಾಟ್‌-3ಡಿಎಸ್‌ನ ವೈಶಿಷ್ಟ್ಯ ಹೀಗಿದೆ

ಇಸ್ರೋದಿಂದ ಮತ್ತೊಂದು ಸಾಧನೆ, ಫೆ 17ಕ್ಕೆ ನಭಕ್ಕೆ ನೆಗೆಯಲಿದೆ ಹವಾಮಾನ ಉಪಗ್ರಹ; ಇನ್‌ಸಾಟ್‌-3ಡಿಎಸ್‌ನ ವೈಶಿಷ್ಟ್ಯ ಹೀಗಿದೆ

Reshma HT Kannada

Feb 12, 2024 03:51 PM IST

ಫೆ 17ಕ್ಕೆ ನಭಕ್ಕೆ ನೆಗೆಯಲಿದೆ ಹವಾಮಾನ ಉಪಗ್ರಹ; ಇನ್‌ಸಾಟ್‌-3ಡಿಎಸ್‌ನ ವೈಶಿಷ್ಟ್ಯ ಹೀಗಿದೆ

    • ಪ್ರಾಕೃತಿಕ ವಿಕೋಪಗಳ ಬಗ್ಗೆ ಮುನ್ನೆಚ್ಚರಿಕೆ ಪಡೆಯುವ ವಿಷಯವಾಗಿ ಇಸ್ರೋ ಇದೀಗ ಒಂದು ಮಹತ್ವದ ಹೆಜ್ಜೆಯನ್ನು ಇರಿಸಿದೆ. ಫೆ. 17 ರಂದು ಹವಾಮಾನ ಉಪಗ್ರಹ ಇನ್‌ಸಾಟ್‌-3ಡಿಎಸ್‌ ಅನ್ನು ಉಡಾವಣೆ ಮಾಡಲಿದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ. ಈ ಉಪಗ್ರಹದ ವೈಶಿಷ್ಟ್ಯ ಹೇಗಿದೆ ನೋಡಿ. (ಬರಹ: ಗಿರೀಶ್ ಲಿಂಗಣ್ಣ)
 ಫೆ 17ಕ್ಕೆ ನಭಕ್ಕೆ ನೆಗೆಯಲಿದೆ ಹವಾಮಾನ ಉಪಗ್ರಹ; ಇನ್‌ಸಾಟ್‌-3ಡಿಎಸ್‌ನ ವೈಶಿಷ್ಟ್ಯ ಹೀಗಿದೆ
ಫೆ 17ಕ್ಕೆ ನಭಕ್ಕೆ ನೆಗೆಯಲಿದೆ ಹವಾಮಾನ ಉಪಗ್ರಹ; ಇನ್‌ಸಾಟ್‌-3ಡಿಎಸ್‌ನ ವೈಶಿಷ್ಟ್ಯ ಹೀಗಿದೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2024ರ ಹೊಸ ವರ್ಷದ ಮೊದಲ ದಿನವೇ ತನ್ನ ವರ್ಷದ ಮೊದಲ ಉಡಾವಣೆಯನ್ನು ನೆರವೇರಿಸಿ, ವರ್ಷಕ್ಕೆ ಶುಭಾರಂಭ ನೀಡಿತು. ಅದಾದ ಬಳಿಕ, ಇಸ್ರೋ ಈಗ ತನ್ನ ಎರಡನೇ ಯೋಜನೆಗೆ ಸಂಪೂರ್ಣ ಸಿದ್ಧತೆ ನಡೆಸಿಕೊಂಡಿದ್ದು, ಫೆಬ್ರವರಿ 17ರ ಸಂಜೆ 5.30ಕ್ಕೆ ಮುಂದಿನ ಉಡಾವಣೆಗೆ ಸಜ್ಜಾಗಿದೆ. ಇದು ಈ ಮೊದಲು ಜಿಎಸ್ಎಲ್‌ವಿ ಎಂಕೆ2 ಎಂದು ಕರೆಯಲ್ಪಡುತ್ತಿದ್ದ ಜಿಎಸ್ಎಲ್‌ವಿ ರಾಕೆಟ್‌ನ 16ನೇ ಯೋಜನೆಯಾಗಿರಲಿದೆ. ಈ ಬಾರಿ, ಜಿಎಸ್ಎಲ್‌ವಿ ರಾಕೆಟ್ ತನ್ನೊಡನೆ ಇನ್‌ಸಾಟ್‌-3ಡಿಎಸ್ ಉಪಗ್ರಹವನ್ನೂ ಬಾಹ್ಯಾಕಾಶಕ್ಕೆ ಒಯ್ಯಲಿದೆ. ಈ ಉಪಗ್ರಹವನ್ನು ವಾತಾವರಣ ವೀಕ್ಷಣೆಯನ್ನು ಉತ್ತಮಗೊಳಿಸಲು ಮತ್ತು ಹೆಚ್ಚು ನಿಖರವಾಗಿ ಹವಾಮಾನ ಮುನ್ಸೂಚನೆ ನೀಡಲು ಉಡಾವಣೆಗೊಳಿಸಲಾಗುತ್ತಿದೆ. ಇದು ಪ್ರಾಕೃತಿಕ ವಿಕೋಪಗಳ ಕುರಿತು ಮುಂಚಿತವಾಗಿಯೇ ಮಾಹಿತಿ ನೀಡಲು ಅನುಕೂಲಕರವಾಗಿದೆ.

ಟ್ರೆಂಡಿಂಗ್​ ಸುದ್ದಿ

CBSE Result 2024: ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ ಯಾವಾಗ; ರಿಸಲ್ಟ್ ನೋಡಲು ಅಧಿಕೃತ ವೆಬ್‌ಸೈಟ್‌ಗಳು, ದಿನಾಂಕದ ಮಾಹಿತಿ ತಿಳಿಯಿರಿ

Indian Railways: ಧಾರ್ಮಿಕ ಕ್ಷೇತ್ರ ದರ್ಶನಕ್ಕೆ ಭಾರತ್‌ ಗೌರವ್‌ ವಿಶೇಷ ರೈಲು, ಮೇ 18ಕ್ಕೆ ಆರಂಭ, ಮಾರ್ಗ, ದರ ಪರಿಶೀಲಿಸಿ

Viral Video: ಕಣ್ಣಿಲ್ಲದವರಿಗೂ ಫುಟ್‌ಬಾಲ್‌ ಮ್ಯಾಚ್ ಸವಿಯಲು ಅವಕಾಶ ಮಾಡಿಕೊಟ್ಟ ಹೃದಯವಂತ, ಸೂಪರ್ ಅಂತ ಮೆಚ್ಚಿದ ಜನ

ಸೌರ ಮಾರುತಗಳ ಆಟಕ್ಕೆ ಸಾಕ್ಷಿಯಾದ ಲಡಾಖ್ ಆಗಸ: ಇದು ಸೂರ್ಯನ ಹೋಳಿ ಆಟ, ಬಣ್ಣದೋಕುಳಿ ಕಂಡು ಸೂಪರ್ ಎಂದ ಜನ

ಈ ಉಪಗ್ರಹ ಯೋಜನೆಗೆ ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯ ಹಣಕಾಸಿನ ನೆರವು ನೀಡಿದೆ. ಇನ್‌ಸಾಟ್‌-3ಡಿಎಸ್ ಉಪಗ್ರಹ ಈ ಮೊದಲು ಉಡಾವಣೆಗೊಂಡ ಉಪಗ್ರಹಗಳಾದ ಇನ್‌ಸಾಟ್‌-3ಡಿ (2013ರಲ್ಲಿ ಉಡಾವಣೆಗೊಂಡಿತ್ತು) ಮತ್ತು ಇನ್‌ಸಾಟ್‌-3ಡಿಆರ್ (2016ರಲ್ಲಿ ಉಡಾವಣೆ) ಉಪಗ್ರಹಗಳ ಜೊತೆ ಸೇರಿ, ಹೆಚ್ಚಿನ ಹವಾಮಾನ ಮುನ್ಸೂಚನೆ ಒದಗಿಸಲಿದೆ.

ಉಡಾವಣೆಗೊಂಡ 20 ನಿಮಿಷಗಳ ಬಳಿಕ, 420 ಟನ್ ತೂಕದ ಜಿಎಸ್ಎಲ್‌ವಿ ರಾಕೆಟ್ ಉಪಗ್ರಹವನ್ನು ಭೂಮಿಯ ಸುತ್ತಲೂ ಅಂಡಾಕಾರದಲ್ಲಿರುವ ಜಿಯೋ ಟ್ರಾನ್ಸ್‌ಫರ್ ಕಕ್ಷೆಯಲ್ಲಿ ಇರಿಸಲಿದೆ. ಅದಾದ ಬಳಿಕ, ಉಪಗ್ರಹ ತನ್ನದೇ ಆದ ಇಂಜಿನ್‌ಗಳನ್ನು ಬಳಸಿಕೊಂಡು, ಭೂಮಿಯಿಂದ ಬಹಳಷ್ಟು ಎತ್ತರದಲ್ಲಿ, ಅಂದಾಜು 36,000 ಕಿಲೋಮೀಟರ್ ದೂರದಲ್ಲಿರುವ ವೃತ್ತಾಕಾರವಾಗಿರುವ ಭೂಸ್ಥಿರ ಕಕ್ಷೆಗೆ (ಜಿಯೋಸ್ಟೇಷನರಿ ಆರ್ಬಿಟ್) ತಲುಪಲಿದೆ.

ಭೂಸ್ಥಿರ ಕಕ್ಷೆಯಲ್ಲಿರುವ ಉಪಗ್ರಹಗಳು ಭೂಮಿ ಚಲಿಸುವ ರೀತಿ ಮತ್ತು ವೇಗಕ್ಕೆ ಸಮಾನವಾಗಿ ಚಲಿಸುವುದರಿಂದ, ಭೂಮಿಯಲ್ಲಿ ನಿಂತು ನೋಡುವ ಸಂದರ್ಭದಲ್ಲಿ ಅವುಗಳು ಒಂದೇ ಸ್ಥಾನದಲ್ಲಿ ನಿಂತಿರುವಂತೆ ತೋರುತ್ತವೆ.

ಇನ್‌ಸಾಟ್‌- 3ಡಿಎಸ್‌ ವೈಶಿಷ್ಟ್ಯ

ಇನ್‌ಸಾಟ್‌ -3ಡಿಎಸ್ ಉಪಗ್ರಹ ಕಲೆ ಹಾಕುವ ಮಾಹಿತಿಗಳು ಹವಾಮಾನ ಇಲಾಖೆ (ಐಎಂಡಿ), ನ್ಯಾಷನಲ್ ಸೆಂಟರ್ ಫಾರ್ ಮೀಡಿಯಂ ರೇಂಜ್ ವೆದರ್ ಫಾರ್‌ಕಾಸ್ಟಿಂಗ್ (ಎನ್‌ಸಿಎಂಆರ್‌ಡಬ್ಲ್ಯುಎಫ್), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮಿಟಿಯಾರಾಲಜಿ (ಐಐಟಿಎಂ), ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಶನ್ ಟೆಕ್ನಾಲಜಿ (ಎನ್ಐಒಟಿ) ಮತ್ತು ಇಂಡಿಯನ್ ನ್ಯಾಷನಲ್ ಸೆಂಟರ್ ಫಾರ್ ಓಶನ್ ಇನ್ಫಾರ್ಮೇಶನ್ ಸರ್ವಿಸಸ್ (ಐಎನ್‌ಸಿಒಐಎಸ್) ಸೇರಿದಂಥ ಭೂ ವಿಜ್ಞಾನ ಸಚಿವಾಲಯಕ್ಕೆ ಸೇರಿದ ವಿವಿಧ ಸಂಸ್ಥೆಗಳು ಮತ್ತು ಶಾಖೆಗಳಿಗೆ ನೆರವಾಗುತ್ತವೆ. ಈ ಸಂಸ್ಥೆಗಳು ಮತ್ತು ಇಲಾಖೆಗಳು ಇನ್ಸಾಟ್-3ಡಿಎಸ್ ಒದಗಿಸುವ ಮಾಹಿತಿಗಳನ್ನು ಬಳಸಿಕೊಂಡು, ಇನ್ನಷ್ಟು ನಿಖರವಾದ ಹವಾಮಾನ ಮುನ್ಸೂಚನಾ ಸೇವೆಗಳನ್ನು ಒದಗಿಸಲಿವೆ.

ಗಿರೀಶ್‌ ಲಿಂಗಣ್ಣ (ಎಡಚಿತ್ರ)

ಹವಾಮಾನ ಮುನ್ಸೂಚನೆ ನೀಡುವ ಸಾಮರ್ಥ್ಯಗಳ ಜೊತೆಗೆ, ಈ ಉಪಗ್ರಹ ಸ್ಯಾಟಲೈಟ್ ಏಯ್ಡೆಡ್ ಸರ್ಚ್ ಆ್ಯಂಡ್ ರೆಸ್ಕ್ಯೂ (ಎಸ್ಎಎಸ್&ಆರ್) ಟ್ರಾನ್ಸ್‌ಪಾಂಡರ್ ಅನ್ನು ಹೊಂದಿದೆ. ಅಂದರೆ, ಉದಾಹರಣೆಗೆ ಈ ಉಪಗ್ರಹಕ್ಕೆ ತುರ್ತು ಪರಿಸ್ಥಿತಿಯ ಸಂದೇಶ ಕಳುಹಿಸುವ ಸಾಮರ್ಥ್ಯ ಹೊಂದಿರುವ ಉಪಕರಣಗಳನ್ನು ಹೊಂದಿರುವ ಮೀನುಗಾರರು ಉಪಗ್ರಹಕ್ಕೆ ಸಂದೇಶ ಕಳುಹಿಸಬಹುದು. ಈ ಸಂದೇಶ ಸ್ವೀಕರಿಸಿದ ಬಳಿಕ ಉಪಗ್ರಹ ಅದನ್ನು ರಕ್ಷಣಾ ಕಾರ್ಯಾಚರಣೆ ನಡೆಸಲು ಸೂಕ್ತ ಸಂಸ್ಥೆಗೆ ರವಾನಿಸುತ್ತದೆ. ಭೂಮಿಯಿಂದ ಸಾಕಷ್ಟು ಎತ್ತರದಲ್ಲಿರುವ ಈ ಉಪಗ್ರಹ ಭೂಮಿಯ ಮೂರನೇ ಒಂದು ಪ್ರದೇಶವನ್ನು ವೀಕ್ಷಿಸುವ ಸಾಮರ್ಥ್ಯ ಹೊಂದಿದ್ದು, ಆ ಮೂಲಕ ಭೂಮಿಗೆ ಸನಿಹದ ಕಕ್ಷೆಗಳಲ್ಲಿರುವ ಉಪಗ್ರಹಗಳು ನೀಡುವುದಕ್ಕಿಂತ ಹೆಚ್ಚಿನ ವೀಕ್ಷಣಾ ಮಾಹಿತಿಯನ್ನು ಒದಗಿಸುತ್ತದೆ.

ಲೇಖಕರು: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ