ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಡಿವೋರ್ಸ್ ಕೇಸ್‌; 26 ವರ್ಷ ಮನೆಗೆಲಸಕ್ಕೆ 79 ಲಕ್ಷ ರೂ ಪರಿಹಾರ, ಮಾಸಿಕ ಪಿಂಚಣಿಯೂ ಕೊಡಿ; ಸ್ಪೇನ್ ಕೋರ್ಟ್ ತೀರ್ಪು

ಡಿವೋರ್ಸ್ ಕೇಸ್‌; 26 ವರ್ಷ ಮನೆಗೆಲಸಕ್ಕೆ 79 ಲಕ್ಷ ರೂ ಪರಿಹಾರ, ಮಾಸಿಕ ಪಿಂಚಣಿಯೂ ಕೊಡಿ; ಸ್ಪೇನ್ ಕೋರ್ಟ್ ತೀರ್ಪು

Umesh Kumar S HT Kannada

Apr 02, 2024 04:52 PM IST

26 ವರ್ಷ ಮನೆಗೆಲಸಕ್ಕೆ 79 ಲಕ್ಷ ರೂ ಪರಿಹಾರ, ಮಾಸಿಕ ಪಿಂಚಣಿಯೂ ಕೊಡಿ ಎಂದ ಸ್ಪೇನ್ ಕೋರ್ಟ್ (ಸಾಂಕೇತಿಕ ಚಿತ್ರ)

  • ವಿವಾಹ ವಿಚ್ಛೇದನ ಪ್ರಕರಣಗಳು ಕೆಲವೊಮ್ಮೆ ಗಮನಸೆಳೆಯುತ್ತವೆ. ಅಂಥದ್ದೇ ಒಂದು ಪ್ರಕರಣದಲ್ಲಿ ಸ್ಪೇನ್‌ನ ನ್ಯಾಯಾಲಯ ಇತ್ತೀಚೆಗೆ ನೀಡಿದ ತೀರ್ಪು ಅದು ಪರಿಗಣಿಸಿದ ಅಂಶಕ್ಕಾಗಿ ವೈರಲ್ ಆಗಿದೆ. 26 ವರ್ಷ ಮನೆಗೆಲಸಕ್ಕೆ 79 ಲಕ್ಷ ರೂ ಪರಿಹಾರ, ಮಾಸಿಕ ಪಿಂಚಣಿಯೂ ಕೊಡಿ ಎಂದು ಪತಿಯಾಗಿದ್ದವನಿಗೆ ಕೋರ್ಟ್ ಆದೇಶಿಸಿದೆ. ಇದರ ವರದಿ ಇಲ್ಲಿದೆ.

26 ವರ್ಷ ಮನೆಗೆಲಸಕ್ಕೆ 79 ಲಕ್ಷ ರೂ ಪರಿಹಾರ, ಮಾಸಿಕ ಪಿಂಚಣಿಯೂ ಕೊಡಿ ಎಂದ ಸ್ಪೇನ್ ಕೋರ್ಟ್ (ಸಾಂಕೇತಿಕ ಚಿತ್ರ)
26 ವರ್ಷ ಮನೆಗೆಲಸಕ್ಕೆ 79 ಲಕ್ಷ ರೂ ಪರಿಹಾರ, ಮಾಸಿಕ ಪಿಂಚಣಿಯೂ ಕೊಡಿ ಎಂದ ಸ್ಪೇನ್ ಕೋರ್ಟ್ (ಸಾಂಕೇತಿಕ ಚಿತ್ರ) (canva)

ನವದೆಹಲಿ/ಬೆಂಗಳೂರು: ಮನೆಯಲ್ಲಿದ್ದಾರೆ ಅವರಿಗೇನು ಕೆಲಸ ಎಂದು ಮನೆಗಳಲ್ಲಿ ಹೆಣ್ಮಕ್ಕಳ ಬಗ್ಗೆ ಮೂಗು ಮುರಿಯಬೇಡಿ. ಅವರು ಮಾಡುತ್ತಿರುವುದು ಕೂಡ “ಕೆಲಸ” ಎಂಬ ಅಂಶವನ್ನು ಕೋರ್ಟ್‌ ಕೂಡ ಗಮನಿಸತೊಡಗಿದೆ. ಹಿಂದೆಲ್ಲ ವಿವಾಹ ವಿಚ್ಛೇದನ ಪಡೆಯುವಾಗ ಪತ್ನಿಯಾಗಿದ್ದವಳಿಗೆ ಪತಿಯಾಗಿದ್ದವನು ತಿಂಗಳಿಗೆ ಇಷ್ಟು ಎಂದೋ ಅಥವಾ ಒಂದು ಇಡುಗಂಟು ಮೊತ್ತದ ಜೀವನಾಂಶವನ್ನೋ ಕೊಡುವಂತೆ ಕೋರ್ಟ್ ಸೂಚಿಸುತ್ತಿತ್ತು. ಆದರೆ ದಿನಮಾನ, ಕಾಲಮಾನಗಳು ಬದಲಾಗುತ್ತಿರುವಂತೆ ಮನಸ್ಥಿತಿಯೂ ಬದಲಾಗುತ್ತಿದೆ. ಹೆಣ್ಮಕ್ಕಳನ್ನೂ, ಅವರು ಮನೆಗಳಲ್ಲಿ ಮಾಡುವ ಕೆಲಸವನ್ನೂ ಗೌರವದಿಂದ ಕಾಣುವ ವಾತಾವರಣ ನಿರ್ಮಾಣವಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಯಶೋಗಾಥೆ: ಬರಪೀಡಿತ ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಜಲಕ್ರಾಂತಿ ಹುಟ್ಟುಹಾಕಿದ ಸುರತ್ಕಲ್‌ ಹಳೆ ವಿದ್ಯಾರ್ಥಿ

ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ಇದು ಸ್ಪೇನ್‌ನಲ್ಲಿ ಇತ್ತೀಚೆಗೆ ನಡೆದ ಪ್ರಕರಣ. ಅದೊಂದು ಜೋಡಿ 26 ವರ್ಷ ಸಂಸಾರ ಮಾಡಿತು. ಬಳಿಕ ವಿಚ್ಛೇದನ ಪಡೆಯಲು ಮುಂದಾದ್ರು. ಈ ಜೋಡಿಗೆ ಒಬ್ಬ ಮಗಳೂ ಇದ್ದಳು. ವಿಚ್ಛೇದನ ಅಂದ ಮೇಲೆ ಕೋರ್ಟ್‌ಗೆ ಹೋಗಬೇಕಾದ್ದು ಅನಿವಾರ್ಯ. ಹೋದರು. ಪತಿಯಾಗಿದ್ದವನು, ಪತ್ನಿಯಾಗಿದ್ದವಳಿಗೆ ಪರಿಹಾರ ಕೊಡಬೇಕಾದ್ದು ಗೊತ್ತಿರುವ ವಿಚಾರವೇ. ಆದರೆ ಈ ಕೇಸ್‌ನಲ್ಲಿ ಕೋರ್ಟ್‌ ಗಮನಿಸಿದ ಅಂಶ ವಿಶೇಷವಾದುದು.

ಪತಿಯಾಗಿದ್ದವನು ಪತ್ನಿಯಾಗಿದ್ದವಳಿಗೆ ಆಕೆ 26 ವರ್ಷ ಕಾಲ ಮಾಡಿದ “ಮನೆಗೆಲಸ”ಗಳನ್ನು ಪರಿಗಣಿಸಿ 78.85 ಲಕ್ಷ ರೂಪಾಯಿ (88,025 ಯೂರೋ) ಪಾವತಿಸುವಂತೆ ಸ್ಪೇನ್‌ನ ಪೊಂಟೆವೆಡ್ರಾ (Pontevedra)ದ ಪ್ರಾಂತೀಯ ಕೋರ್ಟ್‌ ತೀರ್ಪು ನೀಡಿರುವುದಾಗಿ ಎಲೊಮುಂಡೊ (ELOMUNDO) ವೆಬ್‌ತಾಣ ವರದಿ ಮಾಡಿದೆ.

26 ವರ್ಷದ ಮನೆಗೆಲಸಕ್ಕೆ ವೇತನ ಪರಿಹಾರ, 3 ವರ್ಷ ಮಾಸಿಕ ಪಿಂಚಣಿ

ಸ್ಪೇನ್‌ನ ಪೊಂಟೆವೆಡ್ರಾ ಪ್ರಾಂತೀಯ ಕೋರ್ಟ್‌ನಲ್ಲಿ ವಿಚ್ಛೇದನ ಕೋರಿದ್ದ ಜೋಡಿಯು 1996ರಲ್ಲಿ ವಿವಾಹವಾಗಿತ್ತು. 2022ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ತನಕವೂ ಮಹಿಳೆ ಪತಿಯಾಗಿದ್ದವನ ಮನೆಯ ಕೆಲಸಗಳನ್ನು ನಿರ್ವಹಿಸಿದ್ದಳು. ಈ ಅವಧಿಯಲ್ಲಿ ಮದುವೆಯಾದ ಹೊಸತರಲ್ಲಿ 205 ದಿನಗಳ ಕಾಲವಷ್ಟೆ ಹೊರಗೆ ಹೋಗಿ ದುಡಿದು ಹಣಗಳಿಸಿದ್ದಳು. ಬಳಿಕ ಮನೆಗೆಲಸಗಳು, ಮನೆಯ ಸದಸ್ಯರ ಬೇಕು ಬೇಡಗಳಿಗೆ ಸ್ಪಂದಿಸಿದ್ದಾಗಿ ಜೀವನಾಂಶ ಕೇಳುವಾಗ ಪತ್ನಿ ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದ್ದಳು.

ವಿಚ್ಛೇದನ ಪಡೆದ ಕೂಡಲೇ ಪತ್ನಿಯಾಗಿದ್ದವಳು ಬೇರೆ ಮನೆಗೆ ಹೋಗಬೇಕಾದ್ದು ಅನಿವಾರ್ಯವಾಗಿತ್ತು. ಪತಿಯಾಗಿದ್ದವನು ಅದೇ ಮನೆಯಲ್ಲಿ ಉಳಿದುಕೊಂಡ. ಕೋರ್ಟ್‌ನಲ್ಲಿ ಪರಿಹಾರಕ್ಕಾಗಿ ದಾವೆ ಮುಂದುವರಿಸಿದ ಮಹಿಳೆ, ತತ್‌ಕ್ಷಣಕ್ಕೆ ಉದ್ಯೋಗ ಹುಡುಕಬೇಕಾಗಿತ್ತು. ಆದರೆ, 26 ವರ್ಷ ಕಾಲ ಗೃಹಿಣಿ (House Wife)ಯಾಗಿ ಕೆಲಸ ಮಾಡಿದ್ದರಿಂದ ಅದು ಸಾಧ್ಯವಾಗುತ್ತಿಲ್ಲ. ಪತಿಯಾಗಿದ್ದವನು ತನ್ನ ಬದುಕನ್ನು ತನ್ನದೇ ವೃತ್ತಿ ಬದುಕು ರೂಪಿಸಿಕೊಳ್ಳಲು ಮೀಸಲಾಗಿಟ್ಟ ಕಾರಣ ವೃತ್ತಿ ಬದುಕಿನಲ್ಲಿ ಮುನ್ನಡೆದಿದ್ದ. ಆದ್ದರಿಂದ 26 ವರ್ಷ ಕಾಲ ವೇತನ ಇಲ್ಲದೇ ಮನೆಗೆಲಸ ಮಾಡಿದ್ದರಿಂದಾಗಿ ತನಗೆ ಅದಕ್ಕೆ ಸಮನಾದ ಪರಿಹಾರ ಕೇಳುವ ಹಕ್ಕು ಇದೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಳು.

ಈ ವಾದ ಸರಣಿಗೆ ತಲೆದೂಗಿದ ಪ್ರಾಂತೀಯ ಕೋರ್ಟ್‌, ಆರಂಭಿಕ ಪರಿಹಾರವಾಗಿ 1.08 ಕೋಟಿ ರೂಪಾಯಿ (1.2 ಲಕ್ಷ ಯೂರೋ) ಪತ್ನಿಯಾಗಿದ್ದವಳಿಗೆ ನೀಡುವಂತೆ ಪತಿಯಾಗಿದ್ದವನಿಗೆ ಆದೇಶ ನೀಡಿತು. ಈ ಹಂತದಲ್ಲಿ ಇಬ್ಬರೂ ಮೇಲ್ಮನವಿ ಸಲ್ಲಿಸಿದರು. ಮಹಿಳೆ ತನಗೆ 1.65 ಕೋಟಿ ರೂಪಾಯಿ (183,629.36 ಯೂರೋ) ಪರಿಹಾರ ಬೇಕು. ಮಗಳನ್ನು ದೊಡ್ಡವಳಾಗುವ ತನಕವೂ ಜೋಪಾನವಾಗಿ ನೋಡಿಕೊಂಡಿದ್ದೆ. ಪತಿಯ ಬೇಕು ಬೇಡಗಳಿಗೂ ಯಾವುದೇ ಲೋಪ ಇಲ್ಲದಂತೆ ಸ್ಪಂದಿಸಿದ್ದೆ. ನಾನು ಕೇಳುವುದರಲ್ಲಿ ನ್ಯಾಯವಿದೆ ಎಂದು ಅಪೀಲು ಹೋದರೆ, ಆಕೆಯ ಪತಿಯಾಗಿದ್ದವನು ಅಷ್ಟು ದೊಡ್ಡ ಮೊತ್ತ ಪಾವತಿಸಲು ಕಷ್ಟವಾಗುತ್ತದೆ. ಅದರಿಂದ 54 ಲಕ್ಷ ರೂಪಾಯಿ (60,000 ಯೂರೋ) ಕಡಿಮೆ ಮಾಡಿ ಎಂದು ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ.

ಕೊನೆಗೆ ನ್ಯಾಯಪರಾಮರ್ಶೆ ಮಾಡಿ ಪತಿಯ ಬೇಡಿಕೆಯಂತೆ 1.08 ಕೋಟಿ ರೂಪಾಯಿ (1.2 ಲಕ್ಷ ಯೂರೋ) ಪರಿಹಾರವನ್ನು 78.85 ಲಕ್ಷ ರೂಪಾಯಿ (88,025 ಯೂರೋ)ಗೆ ಕೋರ್ಟ್‌ ಇಳಿಸಿತು. ಆದರೆ, ಮುಂದಿನ ಮೂರು ವರ್ಷ ಕಾಲ ಪ್ರತಿ ತಿಂಗಳೂ 31,370 ರೂಪಾಯಿ (350 ಯೂರೋ)ಯನ್ನು ಪಿಂಚಣಿಯಾಗಿ ಮಹಿಳೆಗೆ ನೀಡಬೇಕು. ಇದು ವರ್ಷಕ್ಕೊಮ್ಮೆ ರಾಷ್ಟ್ರೀಯ ಹಣದುಬ್ಬರದ ದರಕ್ಕೆ ಅನುಗುಣವಾಗಿ ಪರಿಷ್ಕರಣೆಯಾಗಲಿದೆ ಎಂಬ ಒಕ್ಕಣೆಯೊಂದಿಗೆ ತೀರ್ಪು ನೀಡಿತು. ಅಂದ ಹಾಗೆ ಯುರೋಪ್‌ನಲ್ಲಿ ಇಂತಹ ಕೇಸ್‌ಗಳು ಸಾಮಾನ್ಯ ಎಂದು ವೆಬ್‌ಸೈಟ್ ವರದಿ ಉಲ್ಲೇಖಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ