logo
ಕನ್ನಡ ಸುದ್ದಿ  /  ಕ್ರೀಡೆ  /  ತವರಿನಲ್ಲಿ ಬೆಂಗಳೂರು ಎಫ್‌ಸಿ ತಂಡಕ್ಕೆ ಒಡಿಶಾ ಎಫ್‌ಸಿ ಎದುರಾಳಿ; ಸಂಭಾವ್ಯ ಲೈನಪ್‌, ನೇರಪ್ರಸಾರ ವಿವರ

ತವರಿನಲ್ಲಿ ಬೆಂಗಳೂರು ಎಫ್‌ಸಿ ತಂಡಕ್ಕೆ ಒಡಿಶಾ ಎಫ್‌ಸಿ ಎದುರಾಳಿ; ಸಂಭಾವ್ಯ ಲೈನಪ್‌, ನೇರಪ್ರಸಾರ ವಿವರ

Jayaraj HT Kannada

Mar 30, 2024 01:05 PM IST

google News

ಬೆಂಗಳೂರು ಎಫ್‌ಸಿ ತಂಡಕ್ಕೆ ಒಡಿಶಾ ಎಫ್‌ಸಿ ಎದುರಾಳಿ; ಸಂಭಾವ್ಯ ಲೈನಪ್‌, ನೇರಪ್ರಸಾರ ವಿವರ

    • Bengaluru FC vs Odisha FC: ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡವು ಒಡಿಶಾ ಎಫ್‌ಸಿಯನ್ನು ಎದುರಿಸುತ್ತಿದೆ. ಮಾರ್ಚ್‌ 30ರ ಶನಿವಾರ ಸಂಜೆ 5 ಗಂಟೆಗೆ ಪಂದ್ಯ ನಡೆಯಲಿದ್ದು, ಪ್ಲೇ ಆಫ್‌ ಪ್ರವೇಶದ ಗುರಿ ಹೊಂದಿರುವ ಬಿಎಫ್‌ಸಿ ಮುಂದಿನ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ..
ಬೆಂಗಳೂರು ಎಫ್‌ಸಿ ತಂಡಕ್ಕೆ ಒಡಿಶಾ ಎಫ್‌ಸಿ ಎದುರಾಳಿ; ಸಂಭಾವ್ಯ ಲೈನಪ್‌, ನೇರಪ್ರಸಾರ ವಿವರ
ಬೆಂಗಳೂರು ಎಫ್‌ಸಿ ತಂಡಕ್ಕೆ ಒಡಿಶಾ ಎಫ್‌ಸಿ ಎದುರಾಳಿ; ಸಂಭಾವ್ಯ ಲೈನಪ್‌, ನೇರಪ್ರಸಾರ ವಿವರ (PTI)

ಇಂಡಿಯನ್ ಸೂಪರ್ ಲೀಗ್‌ (Indian Super League -ISL) ಪಂದ್ಯಾವಳಿಯು ಅಂತಿಮ ಹಂತದತ್ತ ಬರುತ್ತಿದೆ. ಈ ನಡುವೆ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ತಂಡವು ಈ ಬಾರಿಯ ಐಎಸ್‌ಎಲ್‌ ಟೂರ್ನಿಯ ಪ್ಲೇಆಫ್‌ಗೆ ಲಗ್ಗೆ ಹಾಕುವತ್ತ ಗುರಿ ಇಟ್ಟಿದೆ. ಅಂತಾರಾಷ್ಟ್ರೀಯ ಪಂದ್ಯಗಳಿಂದಾಗಿ ಸುದೀರ್ಘ ವಿರಾಮದಲ್ಲಿದ್ದ ಆಟಗಾರರು, ಮತ್ತೆ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ವಿಸ್ತೃತ ಬ್ರೇಕ್‌ ನಂತರ ಮಾರ್ಚ್ 30ರ ಶನಿವಾರದಂದು ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡವು ಒಡಿಶಾ ಎಫ್‌ಸಿಯನ್ನು (Bengaluru FC vs Odisha FC) ಎದುರಿಸುತ್ತಿದೆ. ಪ್ಲೇ ಆಫ್‌ ರೇಸ್‌ನಲ್ಲಿ ಜೀವಂತವಾಗಿ ಉಳಿಯಲು ತವರು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗೆಲ್ಲುವ ಗುರಿ ಬೆಂಗಳೂರು ತಂಡದ್ದು.

ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ 5 ಗಂಟೆಗೆ ಪಂದ್ಯ ಆರಂಭವಾಗಲಿದೆ. ಬಿಎಫ್‌ಸಿ ಮುಂದೆ ಕೇವಲ ಮೂರು ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಮುಂದಿನ ಹಂತ ಪ್ರವೇಶಕ್ಕೆ ಈ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇದರೊಂದಿಗೆ ಬೇರೆ ತಂಡಗಳ ಸೋಲಿಗೂ ಕಾಯಬೇಕಿದೆ. ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದು 30 ಅಂಕ ಪಡೆದರೂ, ಏಳನೇ ಸ್ಥಾನದಲ್ಲಿರುವ ಬಿಎಫ್‌ಸಿ ತಂಡವು ಚೆನ್ನೈಯಿನ್ ಎಫ್‌ಸಿ ಮತ್ತು ಪಂಜಾಬ್ ಎಫ್‌ಸಿ ಸೋಲಿಗಾಗಿ ಎದುರು ನೋಡುತ್ತಿದೆ.

ಪ್ಲೇ ಆಫ್‌ಗಾಗಿ ಪೈಪೋಟಿ ನಡೆಸುತ್ತಿರುವ ಬೆಂಗಳೂರು ಎಫ್‌ಸಿ, ಸದ್ಯ ಟೂರ್ನಿಯಲ್ಲಿನ ಈವರೆಗೆ ಆಡಿದ 19 ಪಂದ್ಯಗಳಲ್ಲಿ ಕೇವಲ 5 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಹೀಗಾಗಿ ಒಟ್ಟು 21 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಅತ್ತ ಪಂಜಾಬ್ ಎಫ್‌ಸಿ ಕೂಡಾ ಇಷ್ಟೇ ಅಂಕಗಳನ್ನು ಹೊಂದಿದ್ದು, ಒಂದು ಸ್ಥಾನ ಮೇಲಿದೆ. ಕೇವಲ ಮೂರು ಪಾಯಿಂಟ್‌ ವ್ಯತ್ಯಾಸದೊಂದಿಗೆ 11ನೇ ಸ್ಥಾನದಲ್ಲಿರುವ ಚೆನ್ನೈಯಿನ್ ಎಫ್‌ಸಿ, ಮುಂದಿನ ಪಂದ್ಯಗಳನ್ನು ಗೆದ್ದರೆ ಮೇಲೇರುವ ಸಾಧ್ಯತೆ ಇದೆ.

ಇದನ್ನೂ ಓದಿ | Sunil Chhetri: ಭಾರತದ ಪರ 150ನೇ ಪಂದ್ಯದಲ್ಲಿ ಗೋಲ್ ಗಳಿಸಿ ವಿಶೇಷ ದಾಖಲೆ ಬರೆದ ಸುನಿಲ್ ಛೆಟ್ರಿ

ಬೆಂಗಳೂರು ತಂಡವು ಎರಡು ತವರಿನ ಪಂದ್ಯಗಳನ್ನು ಆಡುತ್ತಿರುವುದು ತಂಡಕ್ಕೆ ಅನುಕೂಲಕರವಾಗಿದೆ. ಇದೇ ವೇಳೆ ಈಸ್ಟ್ ಬೆಂಗಾಲ್ ವಿರುದ್ಧ ಒಂದು ಪಂದ್ಯವನ್ನು ಕೋಲ್ಕತ್ತಾದಲ್ಲಿ ಆಡಲಿದೆ.

ಒಡಿಶಾ ತಂಡವು ಈಗಾಗಲೇ ಪ್ಲೇಆಫ್ ಸ್ಥಾನವನ್ನು ಕಾಯ್ದಿರಿಸಿದ್ದು, ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ, ಟ್ರೋಫಿ ರೇಸ್‌ನಲ್ಲಿ ಉಳಿಯುವ ಗುರಿಯೊಂದಿಗೆ, ಮುಂದಿನ ಎಲ್ಲಾ ನಾಲ್ಕು ಪಂದ್ಯಗನ್ನು ಗೆದ್ದು ಎಲ್ಲಾ ಅಂಕಗಳನ್ನು ಬಾಚಿಕೊಳ್ಳುವ ಉತ್ಸಾಹದಲ್ಲಿದೆ. ತವರು ಮೈದಾನಲ್ಲಿ ಅದ್ಭುತ ರೆಕಾರ್ಡ್‌ ಹೊಂದಿರುವ ಬೆಂಗಳೂರು, ಈ ಬಾರಿ ಒಡಿಶಾ ತಂಡಕ್ಕೆ ಸವಾಲಾಗಲಿದೆ.

ನೇರಪ್ರಸಾರ ವಿವರ

ಬೆಂಗಳೂರು ಎಫ್‌ಸಿ ಮತ್ತು ಒಡಿಶಾ ಎಫ್‌ಸಿ ತಂಡಗಳ ನಡುವಿನ ಐಎಸ್‌ಎಲ್ ಪಂದ್ಯವನ್ನು ಭಾರತದಲ್ಲಿ ಸ್ಪೋರ್ಟ್ಸ್ 18 ಮತ್ತು ವಿಹೆಚ್ 1ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಮಾರ್ಚ್ 30ರ ಶನಿವಾರ ಸಂಜೆ 5.00 ಗಂಟೆಗೆ ಪಂದ್ಯ ಆರಂಭವಾಗಲಿದೆ. ಇದೇ ವೇಳೆ ಜಿಯೋ ಸಿನಿಮಾ ಅಪ್ಲಿಕೇಶನ್‌ ಮತ್ತು ವೆಬ್‌ಸೈಟ್‌ನಲ್ಲಿ ಪಂದ್ಯ ಲೈವ್ ಸ್ಟ್ರೀಮ್ ಆಗಲಿದೆ.

ಬೆಂಗಳೂರು ಎಫ್‌ಸಿ ಸಂಭಾವ್ಯ ಲೈನ್‌ಅಪ್

ಗುರುಪ್ರೀತ್ ಸಿಂಗ್ ಸಂಧು (ಗೋಲ್‌ ಕೀಪರ್), ನಿಖಿಲ್ ಪೂಜಾರಿ, ಚಿಂಗ್ಲೆನ್ಸನಾ ಸಿಂಗ್, ಸ್ಲಾವ್ಕೊ ದಮ್ಜಾನೋವಿಕ್, ನವೊರೆಮ್ ರೋಷನ್ ಸಿಂಗ್, ಶಿವಾಲ್ಡೊ ಸಿಂಗ್, ಸುರೇಶ್ ಸಿಂಗ್, ರಯಾನ್ ವಿಲಿಯಮ್ಸ್, ಜೇವಿ ಹೆರ್ನಾಂಡೆಜ್, ಆಲಿವರ್ ಡ್ರೊಸ್ಟ್, ಸುನಿಲ್ ಛೆಟ್ರಿ.

ಒಡಿಶಾ ಎಫ್‌ಸಿ ಸಂಭಾವ್ಯ ಲೈನ್‌ಅಪ್

ಅಮರಿಂದರ್ ಸಿಂಗ್ (ಗೋಲ್‌ ಕೀಪರ್), ಅಮಿ ರಾನವಾಡೆ, ಮೌರ್ತಡಾ ಫಾಲ್, ನರೇಂದರ್ ಗಹ್ಲೋಟ್, ಜೆರ್ರಿ ಲಾಲ್ರಿಂಜುಲಾ, ಅಹ್ಮದ್ ಜಹೌಹ್, ಪುಯಿಟಿಯಾ, ಪ್ರಿನ್ಸ್‌ಟನ್ ರೆಬೆಲ್ಲೊ, ಇಸಾಕ್ ವನ್‌ಲಾಲ್‌ರುವಾಟ್‌ಫೆಲಾ, ರಾಯ್ ಕೃಷ್ಣ, ಡಿಯಾಗೋ ಮೌರಿಸಿಯೊ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ