ಕನ್ನಡ ಸುದ್ದಿ  /  ಕ್ರೀಡೆ  /  Sunil Chhetri: ಭಾರತದ ಪರ 150ನೇ ಪಂದ್ಯದಲ್ಲಿ ಗೋಲ್ ಗಳಿಸಿ ವಿಶೇಷ ದಾಖಲೆ ಬರೆದ ಸುನಿಲ್ ಛೆಟ್ರಿ

Sunil Chhetri: ಭಾರತದ ಪರ 150ನೇ ಪಂದ್ಯದಲ್ಲಿ ಗೋಲ್ ಗಳಿಸಿ ವಿಶೇಷ ದಾಖಲೆ ಬರೆದ ಸುನಿಲ್ ಛೆಟ್ರಿ

Sunil Chhetri: ಅಫ್ಘಾನಿಸ್ತಾನ ವಿರುದ್ಧದ ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಭಾರತದ ಪರ ಗೋಲ್ ಬಾರಿಸುವ ಮೂಲಕ ಸುನಿಲ್ ಛೆಟ್ರಿ ಮಹೋನ್ನತ ದಾಖಲೆ ಮಾಡಿದ್ದಾರೆ. ತಮ್ಮ 150ನೇ ಪಂದ್ಯದಲ್ಲಿ ವಿಶೇಷ ಮೈಲಿಗಲ್ಲು ತಲುಪಿದ್ದಾರೆ.

 150ನೇ ಪಂದ್ಯದಲ್ಲಿ ಗೋಲ್ ಗಳಿಸಿ ವಿಶೇಷ ದಾಖಲೆ ಬರೆದ ಸುನಿಲ್ ಛೆಟ್ರಿ
150ನೇ ಪಂದ್ಯದಲ್ಲಿ ಗೋಲ್ ಗಳಿಸಿ ವಿಶೇಷ ದಾಖಲೆ ಬರೆದ ಸುನಿಲ್ ಛೆಟ್ರಿ (AFP)

2026ರ ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಭಾರತ ಫುಟ್ಬಾಲ್‌ ತಂಡದ ನಾಯಕ ಸುನಿಲ್‌ ಛೆಟ್ರಿ (Sunil Chhetri) ಹೊಸ ಮೈಲಿಗಲ್ಲು ತಲುಪಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಸೆಣಸುವುದರೊಂದಿಗೆ ಅನುಭವಿ ಫುಟ್ಬಾಲ್ ಆಟಗಾರ ಎರಡೆರಡು ದಾಖಲೆ ಬರೆದಿದ್ದಾರೆ. ಗುವಾಹಟಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ‌ ನಡೆದ ಪಂದ್ಯದಲ್ಲಿ ಆಡುವ ಮೂಲಕ ಭಾರತದ ಪರ 150ನೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಮೈಲಿಗಲ್ಲು ಛೆಟ್ರಿ ತಲುಪಿದ್ದಾರೆ. ಇದೇ ವೇಳೆ ತಮ್ಮ ಅಂತಾರಾಷ್ಟ್ರೀಯ ಗೋಲುಗಳ ಸಂಖ್ಯೆಯನ್ನು 94ಕ್ಕೆ ವಿಸ್ತರಿಸಿದ್ದಾರೆ.

ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಛೆಟ್ರಿ ಗಳಿಸಿದ ನಿರ್ಣಾಯಕ ಗೋಲಿನ ಹೊರತಾಗಿಯೂ ಪಂದ್ಯದಲ್ಲಿ ಭಾರತ ಸೋಲು ಕಂಡಿತು. ಪಂದ್ಯದಲ್ಲಿ ಭಾರತ ಗಳಿಸಿದ್ದು ಏಕೈಕ ಗೋಲು. ಈ ಗೋಲಿನೊಂದಿಗೆ ತಮ್ಮ ವೃತ್ತಿಜೀವನದ 25, 50, 75, 100, 125 ಮತ್ತು 150ನೇ ಪಂದ್ಯಗಳಲ್ಲಿ ಭಾರತದ ಪರ ಗೋಲು ಗಳಿಸಿದ ವಿಶಿಷ್ಟ ದಾಖಲೆಯನ್ನು ಛೆಟ್ರಿ ನಿರ್ಮಿಸಿದ್ದಾರೆ.

ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ಸಕ್ರಿಯ ಆಟಗಾರರ ಪೈಕಿ ಛೆಟ್ರಿಗೆ ಮೂರನೇ ಸ್ಥಾನ. ಪೋರ್ಚುಗಲ್‌ನ ಫುಟ್ಬಾಲ್‌ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ 128 ಗೋಲುಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ 106 ಗೋಲು ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ | FIFA World Cup: ಫಿಫಾ ವಿಶ್ವಕಪ್ ಕ್ವಾಲಿಫೈಯರ್: ಭಾರತ vs ಅಫ್ಘಾನಿಸ್ತಾನ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯ

ಅಫ್ಘಾನಿಸ್ತಾನ ವಿರುದ್ಧದ ರೋಚಕ ಪಂದ್ಯದಲ್ಲಿ 37ನೇ ನಿಮಿಷದಲ್ಲಿ ಛೆಟ್ರಿ ಗೋಲು ಬಾರಿಸಿದರು. ಆ ಬಳಿಕ ಭಾರತದಿಂದ ಗೋಲು ಗಳಿಸಿಲು ಸಾಧ್ಯವಾಗಲಿಲ್ಲ. ಪ್ರವಾಸಿ ಅಫ್ಘಾನಿಸ್ತಾನವು ಮತ್ತೆ ಎರಡು ಗೋಲು ಗಳಿಸುವುದರೊಂದಿಗೆ ಪಂದ್ಯದಲ್ಲಿ ಭಾರತವನ್ನು 2-1 ಗೋಲುಗಳಿಂದ ಸೋಲಿಸುವಲ್ಲಿ ಯಶಸ್ವಿಯಾಯ್ತು.

ಭಾರತ ತಂಡವು 2026ರ ಫಿಫಾ ವಿಶ್ವಕಪ್ ಕ್ವಾಲಿಫೈಯರ್‌ನಲ್ಲಿ ಕೆಲವು ದಿನಗಳ ಹಿಂದೆ ಅಭಾದಲ್ಲಿ ನಡೆದ ಪಂದ್ಯದಲ್ಲಿ ಇದೇ ಅಫ್ಘನ್‌ ವಿರುದ್ಧ ನಿರಾಶಾದಾಯಕ ಡ್ರಾ ಸಾಧಿಸಿತ್ತು.‌ ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಛೆಟ್ರಿ ಗೋಲು ಬಾರಿಸುವುದರೊಂದಿಗೆ, ಭಾರತ ತಂಡವು ಈ ವರ್ಷ ಗೋಲಿನ ಬರವನ್ನು ಕೊನೆಗೊಳಿಸಿತು. ಭಾರತ ಫುಟ್ಬಾಲ್‌ ತಂಡವು 2023ರ ನವೆಂಬರ್‌ ತಿಂಗಳಲ್ಲಿ ಕುವೈತ್ ವಿರುದ್ಧ ಕೊನೆಯ ಗೋಲು ಗಳಿಸಿತ್ತು.

ಎಐಎಫ್ಎಫ್ ಸನ್ಮಾನ

150ನೇ ಪಂದ್ಯವನ್ನಾಡಿದ ಛೆಟ್ರಿ ಅವರನ್ನು ಗುವಾಹಟಿಯಲ್ಲಿ ಸನ್ಮಾನಿಸಲಾಯಿತು. ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಅಧ್ಯಕ್ಷ ಕಲ್ಯಾಣ್ ಚೌಬೆ, ಅಸ್ಸಾಂ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಸಂಗ್ರಂಗ್ ಬ್ರಹ್ಮ, ಎಐಎಫ್ಎಫ್ ತಾಂತ್ರಿಕ ಸಮಿತಿ ಅಧ್ಯಕ್ಷ ಐಎಂ ವಿಜಯನ್ ಅವರು ಇಂದಿರಾ ಗಾಂಧಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಚೆಟ್ರಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

2005ರ ಜೂನ್ 12ರಂದು ಛೆಟ್ರಿ ಭಾರತ ಫುಟ್ಬಾಲ್ ತಂಡಕ್ಕೆ ಪದಾರ್ಪಣೆ ಮಾಡಿದರು. ಪಾಕಿಸ್ತಾನ ವಿರುದ್ಧದ ಸ್ನೇಹಪರ ಪಂದ್ಯದಲ್ಲಿ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಿದ್ದರು.