logo
ಕನ್ನಡ ಸುದ್ದಿ  /  ಕ್ರೀಡೆ  /  Virat Kohli: ಐಷಾರಾಮಿ ಕಾರುಗಳನ್ನು ಮಾರಾಟ ಮಾಡಿದ ವಿರಾಟ್ ಕೊಹ್ಲಿ; ಕಾರಣವೇ ಅಚ್ಚರಿ!

Virat Kohli: ಐಷಾರಾಮಿ ಕಾರುಗಳನ್ನು ಮಾರಾಟ ಮಾಡಿದ ವಿರಾಟ್ ಕೊಹ್ಲಿ; ಕಾರಣವೇ ಅಚ್ಚರಿ!

HT Kannada Desk HT Kannada

Mar 30, 2023 05:18 PM IST

google News

ವಿರಾಟ್​ ಕೊಹ್ಲಿ

  • Virat Kohli: ಐಪಿಎಲ್ ಸೀಸನ್‌ಗೂ ಮುನ್ನ ವಿರಾಟ್ ಕೊಹ್ಲಿ ಹಲವು ಕಾರುಗಳನ್ನು ಮಾರಾಟ ಮಾಡಿದ್ದಾರೆ. ಐಷಾರಾಮಿಗಳ ಕಾರುಗಳನ್ನು ಮಾರಾಟ ಮಾಡಿದ್ದು ಯಾಕೆ ಎಂಬುದರ ಕುರಿತು ಸ್ವತಃ ಕಿಂಗ್​​​​​ ಕೊಹ್ಲಿಯೇ ಬಹಿರಂಗಪಡಿಸಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

ಟೀಮ್ ಇಂಡಿಯಾ ಮಾಜಿ ನಾಯಕ, ದಾಖಲೆಗಳ ಒಡೆಯ, ರನ್​ಮಷಿನ್ ವಿರಾಟ್ ಕೊಹ್ಲಿ (Virat Kohli), ಕೇವಲ ಕ್ರಿಕೆಟ್ ದುನಿಯಾದ ಕಿಂಗ್ ಅಲ್ಲ. ಜಾಹೀರಾತು ಕಂಪನಿಗಳೇ ಕೊಹ್ಲಿ ಮನೆಯ ಮುಂದೆ ಕ್ಯೂ ನಿಲ್ಲುತ್ತಿವೆ. ವರ್ಷಕ್ಕೆ ಕೋಟಿ ಕೋಟಿ ಆದಾಯ ಬರುತ್ತಿದೆ. ಸಾವಿರಾರು ಕೋಟಿಗಳ ಒಡೆಯ ಕಿಂಗ್​ ಕೊಹ್ಲಿ. ಪ್ರಮುಖ ಕಂಪನಿಗಳ ರಾಯಭಾರಿ ಕೂಡ ಹೌದು.! ಕೊಹ್ಲಿಗಿರೋವಷ್ಟು ಫಾಲೋವರ್ಸ್​, ​ಆದಾಯ ಯಾವ ಕ್ರಿಕೆಟರ್​ಗೂ ಇಲ್ಲ. ಕ್ರಿಕೆಟ್​​ ಜಗತ್ತಿನ ಶ್ರೀಮಂತ ಆಟಗಾರ.

ಸಾವಿರಾರು ಕೋಟಿಗಳ ಒಡೆಯ ಮನೆಯಲ್ಲಿ ಐಷಾರಾಮಿ ಕಾರುಗಳ ದೊಡ್ಡ ಪಟ್ಟಿಯೇ ಇದೆ. ಅದರಲ್ಲೂ ಕೊಹ್ಲಿಗೆ ಕಾರುಗಳ ಮೇಲೆ ವಿಶೇಷ ಪ್ರೀತಿ ಇರುವುದನ್ನು ಬಿಡಿಸಿ ಹೇಳಬೇಕಿಲ್ಲ. Audi Q7, Audi RS5, ಜಾಗ್ವಾರ್, ರೇಂಜ್​​ ರೋವರ್, ಬೆಂಟ್ಲಿ ಮತ್ತಿತರ ಐಷಾರಾಮಿ ಕಾರುಗಳೇ ಕೊಹ್ಲಿ ಗ್ಯಾರೇಜ್‌ನಲ್ಲಿದ್ದವು. ಆದರೆ ಐಪಿಎಲ್ ಸೀಸನ್‌ಗೂ ಮುನ್ನ ವಿರಾಟ್ ಹಲವು ಕಾರುಗಳನ್ನು ಮಾರಾಟ ಮಾಡಿದ್ದಾರೆ. ಈ ವಿಷಯವನ್ನು ಸ್ವತಃ ವಿರಾಟ್​ ಕೊಹ್ಲಿಯೇ ಬಹಿರಂಗಪಡಿಸಿದ್ದಾರೆ.

ಐಪಿಎಲ್ 16ನೇ (Indian Premier League) ಸೀಸನ್​ಗೂ ಮುನ್ನ ಆರ್‌ಸಿಬಿ ತಂಡ ಆಟಗಾರರಿಗಾಗಿ ಫೋಟೋ ಶೂಟ್ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕೊಹ್ಲಿ, ನನ್ನ ಗ್ಯಾರೇಜ್‌ನಲ್ಲಿ ಅತ್ಯಂತ ಬೆಲೆ ಬಾಳುವ ಕಾರುಗಳನ್ನೇ ಹೊಂದಿದ್ದೆ. ಹಿಂದೂ ಮುಂದು ನೋಡದೇ ಖರೀದಿಸಿದ್ದೆ. ಆದರೆ ಅವುಗಳನ್ನು ಹೆಚ್ಚಾಗಿ ಓಡಿಸಿರಲಿಲ್ಲ. ಸ್ವಲ್ಪ ಸಮಯದ ನಂತರ ನಾನು ಅವುಗಳನ್ನು ಅನಗತ್ಯವಾಗಿ ಖರೀದಿಸಿದೆ ಎಂದು ನನಗೆ ಅನಿಸಿತು. ಅದಕ್ಕಾಗಿಯೇ ಬಹಳಷ್ಟು ಕಾರುಗಳನ್ನು ಮಾರಾಟ ಮಾಡಿದೆ ಎಂದು ಕುತೂಹಲಕಾರಿ ಅಂಶವನ್ನು ಬಹಿರಂಗಪಡಿಸಿದ್ದಾರೆ.

ನಾನು ಮತ್ತು ಅನುಷ್ಕಾ ಸಂಪೂರ್ಣವಾಗಿ ಯಾವುದು ಅಗತ್ಯವೆಂದು ಭಾವಿಸುತ್ತೇವೋ ಅದನ್ನಷ್ಟೇ ಬಳಸುತ್ತೇವೆ. ಸದ್ಯ ಅನಗತ್ಯ ಎನಿಸಿದ ಕಾರುಗಳನ್ನು ಮಾರಾಟ ಮಾಡಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಲು ತೀರ್ಮಾನ ಕೈಗೊಂಡಿದ್ದೇವೆ. ನಾವು ಬೆಳೆದಂತೆಲ್ಲಾ ಪ್ರಬುದ್ಧರಾಗಿ ಯೋಚಿಸುತ್ತೇವೆ. ಹೆಚ್ಚು ಮನವರಿಕೆಯಾಗುತ್ತದೆ. ಆಗ ನಿಮಗೆ ಅಂತಹ ವಸ್ತುಗಳನ್ನು ಹೊಂದಲು ಅನಿಸುವುದಿಲ್ಲ. ಇದು ಪ್ರಾಕ್ಟಿಕಲ್​. ಅನಗತ್ಯ ಎಂದು ತಿಳಿದ ಮೇಲೂ ಅವುಗಳನ್ನು ಉಳಿಸಿಕೊಳ್ಳುವುದು ತಪ್ಪು ಎಂದು ಹೇಳಿದ್ದಾರೆ.

ಪ್ರಸ್ತುತ IPL​​ಗೆ ವಿರಾಟ್​ ಕೊಹ್ಲಿ ಸಜ್ಜಾಗುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಮೂರು ಫಾರ್ಮೆಟ್​ನಲ್ಲೂ ಅದ್ಭುತ ಪ್ರದರ್ಶನ ತೋರಿದ ಕೊಹ್ಲಿ, ರನ್​ ಪರ್ವ ಸೃಷ್ಟಿಸಿದ್ದಾರೆ. ಇದೀಗ ಐಪಿಎಲ್​​​ನಲ್ಲೂ ಅದೇ ಪ್ರದರ್ಶನ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ. ಈವರೆಗೂ IPL​​​ನಲ್ಲಿ 223 ಪಂದ್ಯಗಳಲ್ಲಿ 6624 ರನ್​ ಗಳಿಸಿ ಐಪಿಎಲ್​​ನಲ್ಲಿ ಹೆಚ್ಚು ರನ್​ಗಳಿಸಿದ ಆಟಗಾರರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹಲವು ದಾಖಲೆಗಳ ಮೇಲೂ ಕಣ್ಣಿಟ್ಟಿದ್ದಾರೆ. 5 ಶತಕ, 44 ಅರ್ಧಶತಕ ಸಿಡಿಸಿದ್ದಾರೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು, ಏಪ್ರಿಲ್​ 2ರಂದು IPL​ನಲ್ಲಿ ಏಪ್ರಿಲ್​ 2ರಂದು ತಮ್ಮ ಅಭಿಯಾನ ಆರಂಭಿಸಲಿದೆ. ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐದು ಬಾರಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡವನ್ನು ಎದುರಿಸಲಿದೆ. ಉಭಯ ತಂಡಗಳು ಒಟ್ಟು 30 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಮುಂಬೈ ತಂಡವೇ ಮೇಲುಗೈ ಸಾಧಿಸಿದೆ. ಮುಂಬೈ 17 ಗೆಲುವು ದಾಖಲಿಸಿದ್ದರೆ, ಬೆಂಗಳೂರು 13 ಗೆಲುವು ಸಾಧಿಸಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ