ಕನ್ನಡ ಸುದ್ದಿ  /  ಮನರಂಜನೆ  /  ಶತಮಾನದ ಹೊಸ್ತಿಲಲ್ಲಿ ಕನ್ನಡ ಚಿತ್ರರಂಗ; ನೆಲದ ಕಥೆಗಳೊಂದಿಗೆ ಹೊಸ ಅಲೆ ಸೃಷ್ಟಿಸುತ್ತಿದ್ದಾರೆ ಯುವ ನಿರ್ದೇಶಕರು

ಶತಮಾನದ ಹೊಸ್ತಿಲಲ್ಲಿ ಕನ್ನಡ ಚಿತ್ರರಂಗ; ನೆಲದ ಕಥೆಗಳೊಂದಿಗೆ ಹೊಸ ಅಲೆ ಸೃಷ್ಟಿಸುತ್ತಿದ್ದಾರೆ ಯುವ ನಿರ್ದೇಶಕರು

Praveen Chandra B HT Kannada

Feb 02, 2024 07:00 AM IST

ಡೇರ್‌ಡೇವಿಲ್‌ ಮುಸ್ತಫಾ ಚಿತ್ರದ ಫೋಟೋ

    • ಕನ್ನಡ ಚಿತ್ರರಂಗ ಶತಮಾನೋತ್ಸವ ಆಚರಿಸುವ ಹೊಸ್ತಿಲಲ್ಲಿದೆ. ಇದೇ ಸಮಯದಲ್ಲಿ ಕನ್ನಡದ ಹೊಸ ತಲೆಮಾರಿನ ನಿರ್ದೇಶಕರು ಕನ್ನಡ ಚಿತ್ರರಂಗದಲ್ಲಿ ಹೇಗೆ ಹೊಸ ಅಲೆ ಸೃಷ್ಟಿಸುತ್ತಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ, ಕಾಂತಾರ, ಕೆಜಿಎಫ್‌, ಲೂಸಿಯಾ ಮುಂತಾದ ಸಿನಿಮಾಗಳು ಕನ್ನಡ ಚಿತ್ರರಂಗವನ್ನು ಹೊಸ ಎತ್ತರಕ್ಕೆ ತಲುಪಿಸಿವೆ.  (ಲೇಖನ: ಲತಾ ಶ್ರೀನಿವಾಸನ್‌)
ಡೇರ್‌ಡೇವಿಲ್‌ ಮುಸ್ತಫಾ ಚಿತ್ರದ ಫೋಟೋ
ಡೇರ್‌ಡೇವಿಲ್‌ ಮುಸ್ತಫಾ ಚಿತ್ರದ ಫೋಟೋ

ಬೆಂಗಳೂರು: 2023ರ ವರ್ಷವನ್ನು ಕನ್ನಡ ಚಿತ್ರರಂಗದ ವರ್ಷವೆಂದು ಕರೆಯಬಹುದು. ಡೇರ್ ಡೆವಿಲ್ ಮುಸ್ತಫಾ, ಸಪ್ತ ಸಾಗರದಾಚೆ ಎಲ್ಲೋ (ಸೈಡ್ ಎ ಮತ್ತು ಸೈಡ್ ಬಿ), ಆಚಾರ್ ಅಂಡ್ ಕೋ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಸ್ವಾತಿ ಮುತ್ತಿನ ಮಳೆ ಹನಿಯೇ ಮುಂತಾದ ಹಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದವು. ಈ ಸಿನಿಮಾಗಳು ಕನ್ನಡೇತರ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಬರುವಂತೆ ಮಾಡಿವೆ. ಕಳೆದ ಐದು ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾಗಿರುವ ಚಿತ್ರಗಳು ಖಂಡಿತವಾಗಿಯೂ ದೊಡ್ಡಮಟ್ಟದ ಬದಲಾವಣೆ ಸೃಷ್ಟಿಸಿವೆ. 2018ರ ಪ್ಯಾನ್‌ ಇಂಡಿಯಾ ಹಿಟ್‌ ಸಿನಿಮಾ ಕೆಜಿಎಫ್‌: ಚಾಪ್ಟರ್‌ 1 ಅನ್ನು 80 ಕೋಟಿ ರೂನ ಭಾರಿ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಆದರೆ, ಆರಂಭದಲ್ಲಿ ಉಲ್ಲೇಖಿಸಿರುವ ಚಿತ್ರಗಳನ್ನು ಸಣ್ಣ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಸಣ್ಣ ಬಜೆಟ್‌ ಚಿತ್ರಗಳಾದರೂ ಸೂಪರ್‌ಹಿಟ್‌ ಆಗಿ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದಿವೆ.

ಟ್ರೆಂಡಿಂಗ್​ ಸುದ್ದಿ

ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಮೊದಲ ಹಾಡು ಬಿಡುಗಡೆ; ಬಾಯಿಗೆ ಬಾರದೆ ಮಾತು ಹಾಡನ್ನು ಕೇಳೋಣ ಬನ್ನಿ

ಅಪಘಾತದಲ್ಲಿ ಮೃತಪಟ್ಟ ಪವಿತ್ರಾ ಜಯರಾಮ್‌ ನೆನೆದು ಪತಿ ಚಂದ್ರಕಾಂತ್‌ ಭಾವುಕ ಬರಹ; ಚಂದು ಅಣ್ಣನ ಅಳು ನೋಡಲಾಗುತ್ತಿಲ್ಲ ಎದ್ದು ಬಾ ಅಕ್ಕ

ನೈಂಟಿ ಬಿಡಿ ಮನೀಗ್ ನಡಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌; ವೈಜನಾಥ ಬಿರಾದಾರ್ ನಟನೆಯ ಸಿನಿಮಾ ಇಲ್ಲಿದೆ ಉಚಿತವಾಗಿ ನೋಡಿ

ಟರ್ಬೊ ಟ್ರೇಲರ್‌ ಬಿಡುಗಡೆ: ಮಮ್ಮುಟ್ಟಿ ಜತೆ ರಾಜ್‌ ಬಿ ಶೆಟ್ಟಿ ನಟಿಸಿರುವ ಪ್ಯಾನ್‌ ಇಂಡಿಯಾ ಚಿತ್ರ ಮುಂದಿನ ವಾರ ರಿಲೀಸ್‌

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ

2017ರಲ್ಲಿ ತೆರೆಕಂಡ ಊರ್ವಿ ಚಿತ್ರಕ್ಕಾಗಿ ನಿರ್ದೇಶಕ ಬಿ.ಎಸ್.ಪ್ರದೀಪ್ ವರ್ಮಾ ಹಲವು ಪ್ರಶಸ್ತಿ ಪಡೆದಿದ್ದಾರೆ. ಅವರು ಬ್ರಾಹ್ಮಿ (ಕಿರುಚಿತ್ರ) ಮತ್ತು 'ದಿ ಫಾಲನ್' ಚಿತ್ರಗಳನ್ನು ನಿರ್ಮಿಸಿದ್ದರು. ಇವರ ಸಿನಿಮಾಗಳು ಮಾಸ್‌ ಕಮರ್ಷಿಯಲ್‌ ವಿಭಾಗದ ಸಿನಿಮಾಗಳು ಅಲ್ಲ. ಆದರೆ, ಇವು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದಿವೆ.

"ಕನ್ನಡ ಚಿತ್ರರಂಗವು ಕೆಲವು ದಶಕಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಸಾಕಷ್ಟು ಬದಲಾಗಿದೆ. ಇಂಟರ್‌ನೆಟ್‌ ಮತ್ತು ಜಗತ್ತಿನಾದ್ಯಂತ ವೀಕ್ಷಕರನ್ನು ಪಡೆಯುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಒಳ್ಳೆಯದು ಅಥವಾ ಅಸಾಧಾರಣವಾಗಿರುವುದು ಮಾತ್ರ ವರ್ಕ್‌ ಆಗುತ್ತದೆ. ಸಾಧಾರಣ, ಸರಾಸರಿ ಸಿನಿಮಾಗಳು ಕೆಲಸ ಮಾಡುವುದಿಲ್ಲ. ಇದನ್ನು ಕನ್ನಡ ನಿರ್ದೇಶಕರು ಅರ್ಥ ಮಾಡಿಕೊಂಡಿದ್ದಾರೆ. ಒಳ್ಳೆಯ ಸಿನಿಮಾ ನೀಡಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಅಪಾಯವೂ ಇದೆ. ವಿಭಿನ್ನವಾಗಿ ಮಾಡುವ ಗುರಿಯು ಕನ್ನಡ ಚಿತ್ರರಂಗವನ್ನು ನಾಶಪಡಿಸಬಾರದು. ನಾವು ಧ್ವಜವನ್ನು ಎತ್ತರದಲ್ಲಿ ಹಾರಿಸಬೇಕು" ಎಂದು ಬಿಎಸ್‌ ಪ್ರದೀಪ್‌ ವರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ನಿರ್ದೇಶಕರಿಂದ ನೆಲದ ಕಥೆ ಆಯ್ಕೆ

ಕನ್ನಡ ಚಿತ್ರರಂಗವನ್ನು ಹೊಸ ವಿಷಯದತ್ತ ಕೊಂಡೊಯ್ಯುವಲ್ಲಿ 41 ವರ್ಷದ ಪವನ್‌ ಕುಮಾರ್‌ ಪಾತ್ರವಿದೆ. ಅವರನ್ನು ಟ್ರೆಂಡ್‌ ಸೆಟ್ಟರ್‌ ಎಂದು ಕೆಲವು ಕನ್ನಡದ ನಿರ್ದೇಶಕರು ಹೇಳುತ್ತಾರೆ. 2013ರಲ್ಲಿ ಪವನ್‌ ಕುಮಾರ್‌ ಲೂಸಿಯಾ ಚಿತ್ರಕ್ಕೆ ಕ್ರೌಡ್‌ ಫಂಡ್‌ ಮಾಡಿದರು. ಸುಮಾರು 50 ಲಕ್ಷ ರೂಪಾಯಿಯ ಸಣ್ಣ ಬಜೆಟ್‌ನ ಈ ಸೈಕಾಲಜಿಕಲ್‌ ಥ್ರಿಲ್ಲರ್‌ ಸಿನಿಮಾವು ಮೂರು ಕೋಟಿ ರೂಪಾಯಿ ಗಳಿಸಿತು.

ಅಭಿಲಾಷ್‌ ಶೆಟ್ಟಿ ಅವರು 2021ರಲ್ಲಿ ಕೋಲಿ ತಾಲ್‌ ಸಿನಿಮಾ ಬಿಡುಗಡೆ ಮಾಡಿದರು. ಇದು ಹಲವು ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆಯಿತು. ಸದ್ಯ ಇವರು ತಮ್ಮ ಎರಡನೇ ಸಿನಿಮಾದಲ್ಲಿ ನಿರತರಾಗಿದ್ದಾರೆ. ಅವರ ಪ್ರಕಾರ, "ಕಳೆದ ಕೆಲವು ಸಮಯದಿಂದ ಇಂತಹ ಚಿತ್ರಗಳು ನಿರ್ಮಾಣವಾಗುತ್ತಿವೆ. ಲೂಸಿಯಾ, ಉಳಿದವರು ಕಂಡಂತೆ, ತಿಥಿ, ರಂಗಿತರಂಗ, ಒಂದು ಮೊಟ್ಟೆಯ ಕಥೆಯನ್ನು ಉದಾಹರಣೆಯಾಗಿ ನೋಡಬಹುದು. ಈ ಚಿತ್ರಗಳ ಯಶಸ್ಸು ಇತರೆ ಚಲನಚಿತ್ರ ನಿರ್ಮಾಪಕರಿಗೆ ಪ್ರೇರಣೆಯಾಗಿದೆ. ಕನ್ನಡದ ಹಲವು ಯುವ ನಿರ್ಮಾಪಕರು ನೆಲದ ಕಥೆಯೊಂದಿಗೆ ಹೊರಬರುತ್ತಿದ್ದಾರೆ. ಇದು ಜನರಿಗೆ ಇಷ್ವವಾಗುತ್ತಿದೆ. ಕೊರೊನಾ ಬಳಿಕ ಕನ್ನಡ ಚಿತ್ರರಂಗದಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಈಗ ಹಲವು ನಿರ್ಮಾಪಕರು ಪ್ರಯೋಗಾತ್ಮಕ ಸಿನಿಮಾಗಳಿಗೆ ಹಣ ಹೂಡಿಕೆ ಮಾಡುತ್ತಿದ್ದಾರೆ" ಎಂದು ಅಭಿಲಾಷ್‌ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

2022ರಲ್ಲಿ ರಕ್ಷಿತ್‌ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಹೆಚ್ಚು ಸದ್ದು ಮಾಡಿತು. ವ್ಯಕ್ತಿ ಮತ್ತು ಆತನ ನಾಯಿಯ ಒಡನಾಟದ ಕಥೆ ಬ್ಲಾಕ್‌ಬಸ್ಟರ್‌ ಸಿನಿಮಾವಾಗಿತು. ಇದು 100 ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿತು. ರಕ್ಷಿತ್‌ ಶೆಟ್ಟಿಗೆ ಕರ್ನಾಟಕದ ಹೊರಗೂ ಅಭಿಮಾನಿಗಳು ಸೃಷ್ಟಿಯಾದರು.

2023ರಲ್ಲಿ ರಕ್ಷಿತ್‌ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಎರಡು ಭಾಗಗಳಲ್ಲಿ ಬಿಡುಗಡೆಯಾಯಿತು - ಸೈಡ್ ಎ ಮತ್ತು ಸೈಡ್ ಬಿ ಚಿತ್ರ ಈಗ ಒಟಿಟಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ. ಹೇಮಂತ್ ಎಂ ರಾವ್ ನಿರ್ದೇಶನದ ಈ ಚಿತ್ರವೂ ಜನರನ್ನು ಸೆಳೆಯಿತು. ಗೋಧಿ ಬಣ್ಣ ಸಾಧಾರಣ ಮೈಕಟ್ಟು (2016) ಮತ್ತು ಕವಲುದಾರಿ (2019) ಚಿತ್ರವನ್ನು ಹೇಮಂತ್‌ ನಿರ್ದೇಶಣ ಮಾಡಿದ್ದರು. ಸಪ್ತ ಸಾಗರದಾಚೆ ಎಲ್ಲೋ ವಿಭಿನ್ನ ಮಾದರಿಯಲ್ಲಿ ಗಮನ ಸೆಳೆಯಿತು. ಸಪ್ತ ಸಾಗರದಾಚೆ ಸಿನಿಮಾವು ಇವರನ್ನು ಕನ್ನಡದ ಪ್ರತಿಭಾನ್ವಿತ ನಿರ್ದೇಶಕರ ಸಾಲಿಗೆ ಸೇರಿಸಿದೆ.

ಕೆಜಿಎಫ್ ಮತ್ತು ಕಾಂತಾರ ಸಿನಿಮಾದ ಜಾಗತಿಕ ಯಶಸ್ಸು

"ಇದು ಬಹಳಷ್ಟು ಅರ್ಥವನ್ನು ನೀಡುತ್ತದೆ. ಕರ್ನಾಟಕವು ಈಗ ಪ್ಯಾನ್‌ ಇಂಡಿಯಾ, ಬಹುಭಾಷಾ ಚಲನಚಿತ್ರಗಳಿಗೆ ಪ್ರಮುಖ ಕೇಂದ್ರವಾಗಿದೆ. . ಬೇರೆ ಯಾವುದೇ ರಾಜ್ಯದಲ್ಲಿ ಐದು ಅಥವಾ ಆರು ಚಲನಚಿತ್ರೋದ್ಯಮಗಳ (ತಮಿಳು, ಮಲಯಾಳಂ, ತೆಲುಗು, ಹಿಂದಿ, ಮರಾಠಿ) ಚಲನಚಿತ್ರಗಳು ತಮ್ಮ ತವರು ರಾಜ್ಯದ ಜೊತೆಗೆ ಕರ್ನಾಟಕದಲ್ಲಿ ಬಿಡುಗಡೆಯಾಗುತ್ತವೆ. ಅವರಿಗೆ ಕರ್ನಾಟಕವು ಎರಡನೇ ಮಾರುಕಟ್ಟೆ. ಇದೇ ಸಂದರ್ಭದಲ್ಲಿ ಕನ್ನಡ ಚಿತ್ರಗಳು ಕೂಡ ಕರ್ನಾಟಕದಲ್ಲಿ ಮತ್ತು ಕರ್ನಾಟಕದ ಹೊರಗಡೆ ಉತ್ತಮವಾಗಿ ಕಾರ್ಯನಿರ್ವಹಿಸುವುದು, ದೇಶದ ಇತರೆ ಭಾಗಗಳಲ್ಲಿ ಮೆಚ್ಚುಗೆ ಪಡೆಯುವುದು ಉತ್ತಮ ಬೆಳವಣಿಗೆ. ಸಿನಿಮಾ ದುಬಾರಿ ಮಾಧ್ಯಮ. ಮಾರುಕಟ್ಟೆ ವಿಸ್ತರಣೆಯಾದರೆ ನಮಗೆ ದೊಡ್ಡ ಬಜೆಟ್‌ ಸಿನಿಮಾ ಮಾಡಲು ಸಾಧ್ಯವಾಗುತ್ತದೆ" ಎಂದು ಹಂಬಲ್‌ ಪೊಲಿಟಿಷಿಯನ್‌ ನೋಗ್‌ರಾಜ್‌ನಂತಹ ಚಿತ್ರದ ಸಹ ನಿರ್ಮಾಪಕರೂ ಆಗಿರುವ ಹೇಮಂತ್‌ ರಾವ್‌ ಹೇಳಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌ನ ಕೆಜಿಎಫ್‌ ಮತ್ತು ಕಾಂತಾರ ಚಿತ್ರಗಳ ಜಾಗತಿಕ ಯಶಸ್ಸು ಕೂಡ ಕನ್ನಡ ಚಿತ್ರೋದ್ಯಮಕ್ಕೆ ವರದಾನವಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ. "ಈ ಹಿಂದೆ ಉಳಿದವರು ಕಂಡಂತೆ, ರಂಗಿತರಂಗ, ನನ್ನ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮುಂತಾದ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಹಲವು ಸಿನಿಮಾಗಳು ಇದ್ದವು. ಆದರೆ, ಅವು ಹೆಚ್ಚು ಪ್ರೇಕ್ಷಕರನ್ನು ತಲುಪಲಿಲ್ಲ. ಕೆಜಿಎಫ್‌, ಕಾಂತಾರದಂತಹ ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸು ಕಂಡವು. ಕೊರೊನಾ ಬಳಿಕ ಒಟಿಟಿ ವೀಕ್ಷಕರ ಸಂಖ್ಯೆಯೂ ಹೆಚ್ಚಾಯಿತು. ಈಗ ಡಬ್‌ ಮಾಡಿದ, ಬೇರೆ ಭಾಷೆಯ ಶೀರ್ಷಿಕೆಯ ಚಿತ್ರಗಳನ್ನು ಜನರು ವೀಕ್ಷಿಸುತ್ತಾರೆ" ಎಂದು ಹೇಮಂತ್‌ ರಾವ್‌ ಹೇಳಿದ್ದಾರೆ.

1934ರಲ್ಲಿ ಕನ್ನಡದ ಮೊದಲ ವಾಕ್‌ಚಿತ್ರ ಸತಿ ಸುಲೋಚನಾ ತೆರೆಗೆ ಬಂತು. ಕನ್ನಡ ಚಲನಚಿತ್ರೋದ್ಯಮವು ಶತಮಾನ ಪೂರೈಸುವ ಈ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರು ಸಾಂಸ್ಕೃತಿಕ ಬೇರುಗಳತ್ತ ಹೆಚ್ಚು ಆಸಕ್ತಿವಹಿಸುತ್ತಿರುವುದು ಮೆಚ್ಚುಗೆಯನ್ನು ಪಡೆಯುತ್ತಿದೆ.

(ಲೇಖನ: ಲತಾ ಶ್ರೀನಿವಾಸನ್‌, ಹಿಂದೂಸ್ತಾನ್‌ ಟೈಮ್ಸ್‌)

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ