ಕನ್ನಡ ಸುದ್ದಿ  /  ಮನರಂಜನೆ  /  Garadi Review: ಗರಡಿ.. ಇದು ಯೋಗರಾಜ್‌ ಭಟ್ಟರ 2.o ವರ್ಷನ್;‌ ಕುಸ್ತಿ ಅಖಾಡದಲ್ಲಿ ಹೈಲೈಟೇ ದರ್ಶನ್‌

Garadi Review: ಗರಡಿ.. ಇದು ಯೋಗರಾಜ್‌ ಭಟ್ಟರ 2.O ವರ್ಷನ್;‌ ಕುಸ್ತಿ ಅಖಾಡದಲ್ಲಿ ಹೈಲೈಟೇ ದರ್ಶನ್‌

Nov 10, 2023 12:26 PM IST

Garadi Review: ಗರಡಿ.. ಇದು ಯೋಗರಾಜ್‌ ಭಟ್ಟರ 2.O ವರ್ಷನ್;‌ ಕುಸ್ತಿ ಅಖಾಡದಲ್ಲಿ ಹೈಲೈಟೇ ದರ್ಶನ್‌

    • Garadi movie review in Kannada: ನಿರ್ದೇಶಕ ಯೋಗರಾಜ್‌ ಭಟ್‌ ಗರಡಿ ಸಿನಿಮಾ ಮೂಲಕ ಆಗಮಿಸಿದ್ದಾರೆ. ದೇಸಿ ಕಲೆಯ ಜತೆಗೆ ಕಮರ್ಷಿಯಲ್‌ ಕೋನದಲ್ಲಿಯೂ ಕಥೆ ಹೆಣೆದು ಪ್ರೇಕ್ಷಕನ ತಟ್ಟೆಗೆ ಬಡಿಸಿದ್ದಾರೆ ಭಟ್ರು. ನಾಯಕ ಯಶಸ್‌ ಸೂರ್ಯ ಗಮನಸೆಳೆದರೆ, ಕ್ಲೈಮ್ಯಾಕ್ಸ್‌ನಲ್ಲಿ ದರ್ಶನ್‌ ಅಬ್ಬರಿಸಿದ್ದಾರೆ. 
Garadi Review: ಗರಡಿ.. ಇದು ಯೋಗರಾಜ್‌ ಭಟ್ಟರ 2.O ವರ್ಷನ್;‌ ಕುಸ್ತಿ ಅಖಾಡದಲ್ಲಿ ಹೈಲೈಟೇ ದರ್ಶನ್‌
Garadi Review: ಗರಡಿ.. ಇದು ಯೋಗರಾಜ್‌ ಭಟ್ಟರ 2.O ವರ್ಷನ್;‌ ಕುಸ್ತಿ ಅಖಾಡದಲ್ಲಿ ಹೈಲೈಟೇ ದರ್ಶನ್‌

ಚಿತ್ರ: ಗರಡಿ

ಟ್ರೆಂಡಿಂಗ್​ ಸುದ್ದಿ

QPL 2024: ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌ ಶುರು; ಬ್ಯಾಟು ಬಾಲು ಹಿಡಿದು ಕ್ರಿಕೆಟ್ ಆಡಲು ಹೊರಟ ಕಿರುತೆರೆ, ಹಿರಿತೆರೆ ಹೆಣ್ಮಕ್ಕಳು

ಸೀತಾ ರಾಮ ಸೀರಿಯಲ್‌ ದೃಶ್ಯದಲ್ಲಿ ಹೆಲ್ಮೆಟ್‌ ಧರಿಸದೇ ಪ್ರಯಾಣ; ನಟಿ ವೈಷ್ಣವಿ ಗೌಡಗೆ ದಂಡ ವಿಧಿಸಿದ ಟ್ರಾಫಿಕ್‌ ಪೊಲೀಸರು

Pavitra Jayaram: ಭೀಕರ ರಸ್ತೆ ಅಪಘಾತದಲ್ಲಿ ಜೀ ಕನ್ನಡದ ತ್ರಿನಯನಿ ಧಾರಾವಾಹಿ ನಟಿ ಪವಿತ್ರಾ ಜಯರಾಂ ಸಾವು

ಗೌರಿ ಚಿತ್ರದಿಂದ ಹೊರಬಂತು ‘ಒಳ್ಳೆ ಟೈಮ್‌ ಬರುತ್ತೆ’ ಹಾಡು; ಚಂದನ್‌ ಶೆಟ್ಟಿ ಕಂಠಕ್ಕೆ ಸಮರ್ಜಿತ್‌ ಲಂಕೇಶ್‌ ಡಾನ್ಸ್‌

ನಿರ್ದೇಶನ: ಯೋಗರಾಜ್‌ ಭಟ್‌

ನಿರ್ಮಾಣ: ಕೌರವ ಬಿ.ಸಿ. ಪಾಟೀಲ್‌

ತಾರಾಗಣ: ಯಶಸ್‌ ಸೂರ್ಯ, ದರ್ಶನ್‌, ಸೋನಲ್‌ ಮೊಂಟೆರೋ, ಬಿ.ಸಿ. ಪಾಟೀಲ್‌, ರವಿಶಂಕರ್‌, ಸುಜಯ್‌ ಬೇಲೂರು, ಧರ್ಮಣ್ಣ ಕಡೂರು ಸೇರಿ ಮುಂತಾದವರು.

ಸ್ಟಾರ್‌: 3\5

Garadi Review: ಯೋಗರಾಜ್‌ ಭಟ್‌ ಸಿನಿಮಾ ಅಂದ್ರೆ ಒಂದಷ್ಟು ಅಂಶಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ಪೋಲಿತನ, ಹುಡುಗಾಟಿಕೆ, ಹಾಡುಗಳಲ್ಲಿ ಕಾಣಸಿಗುವ ಸಾಹಿತ್ಯ, ಚೆಂದದ ಸಂಭಾಷಣೆ.. ಹೀಗೆ ಇದು ಭಟ್ಟರದ್ದೇ ಸಿನಿಮಾ ಎಂದು ಹೇಳಿಬಿಡಬಹುದು. ಆದರೆ, ಗರಡಿ ಮೂಲಕ ಕಮರ್ಷಿಯಲ್‌ ಅಂಶಗಳ ಜತೆಗೆ ಹೊಸ ಅಖಾಡಕ್ಕೆ ಇಳಿದಿದ್ದಾರೆ ಯೋಗರಾಜ್‌ ಭಟ್. ಹಾಗಾಗಿ ಈ ಗರಡಿ ನೋಡುಗರಿಗೂ ಚೂರು ಹೊಸದೆನಿಸಬಹುದು.

ಗರಡಿ‌ ಸಿನಿಮಾ ಶೀರ್ಷಿಕೆಗೆ ತಕ್ಕಂತೆ, ಗ್ರಾಮೀಣ ಕಲೆಯನ್ನು ಕಮರ್ಷಿಯಲ್‌ ಕೋನದಲ್ಲಿ ತೋರಿಸಿದ್ದಾರೆ. ಮಾಸ್‌ ಮತ್ತು ಕ್ಲಾಸ್‌ ಮಿಶ್ರಣವನ್ನು ಹದವಾಗಿ ಬೆರೆಸಿ ಕುಟುಂಬದ ಜತೆ ಕುಳಿತು ನೋಡುವ ಸಿನಿಮಾ ನೀಡಿದ್ದಾರೆ. ದರ್ಶನ್‌ ಅವರೂ ಗರಡಿ ಮನೆಯ ಹೈಲೈಟ್‌. ನಿರ್ಮಾಪಕ ಕೌರವ ಬಿ.ಸಿ. ಪಾಟೀಲ್‌ ಸಹ ಅಖಾಡಕ್ಕಿಳಿದು ತೊಡೆತಟ್ಟಿದ್ದಾರೆ. ಹಾಗಾದರೆ ಸಿನಿಮಾ ಹೇಗಿದೆ? ಚಿತ್ರದ ಪಾಸಿಟಿವ್‌, ನೆಗೆಟಿವ್‌ ಏನು? ಇಲ್ಲಿದೆ ವಿವರ.

ಭಟ್ಟರ ಹೊಸ ವರ್ಷನ್‌

ನಿರ್ದೇಶಕ ಯೋಗರಾಜ್‌ ಭಟ್‌ ಸಿನಿಮಾಗಳೆಂದರೆ ಅಲ್ಲಿ ಸಾಮಾನ್ಯವಾದ ಒಂದಷ್ಟು ವಿಷಯಗಳು ಕಾಣಿಸುತ್ತವೆ. ಆದರೆ, ಗರಡಿ ಸಿನಿಮಾ ಈ ಹಿಂದಿನ ಅವರ ಸಿನಿಮಾಗಳಿಗೆ ಹೋಲಿಕೆ ಆಗದಂಥ ಚಿತ್ರ. ಟಿಪಿಕಲ್‌ ಭಟ್ಟರ ಡೈಲಾಗ್‌ಗಳು ಚಿತ್ರದಲ್ಲಿ ಹುಡುಕಿದರೂ ಕೇಳಿಸುವುದಿಲ್ಲ. ಪ್ರೀತಿ, ಪ್ರೇಮದ ತಂಗಾಳಿಯೂ ಭಟ್ಟರ ಸಿನಿಮಾದಲ್ಲಿ ಸಾಮಾನ್ಯ. ಅದರ ಅಲೆ ಇಲ್ಲಿ ಇಲ್ಲಿ ಕೊಂಚ ಕಡಿಮೆ. ಉಸಿರು ಬಿಗಿ ಹಿಡಿದು ಡೈಲಾಗ್‌ ಹೇಳುವ ನಾಯಕ ಇಲ್ಲಿಲ್ಲ, ಗರಡಿ ಅಖಾಡದಲ್ಲಿ ಕುಸ್ತಿ ಪಟ್ಟುಗಳ ಮೂಲಕವೇ ಎದುರಾಳಿಯ ಎದೆ ನಡುಗಿಸುವ ನಾಯಕ ಇಲ್ಲಿ ಕಾಣಿಸುತ್ತಾನೆ. ಹಾಗಾಗಿ ನಿರ್ದೇಶನದ ವಿಚಾರದಲ್ಲಿ ಗರಡಿ ಸಿನಿಮಾ ಯೋಗರಾಜ್‌ ಭಟ್ಟರ ಹೊಸ ವರ್ಷನ್‌ ಎಂದೇ ಹೇಳಬಹುದು.

ಚಿತ್ರದ ಕಥೆ ಏನು?

ಗರಡಿ ಸಿನಿಮಾ ದೇಸಿ ಕಲೆ ಕುಸ್ತಿ ಕುರಿತಾದ ಚಿತ್ರ. ಚಿತ್ರದ ಕಥೆ ತುಂಬ ಸಿಂಪಲ್.‌ ಕುಸ್ತಿಯಲ್ಲಿ ಸೋಲು ಕಾಣದ ಮನೆತನವೆಂದರು ಅದು ರಾಣೆ (ರವಿಶಂಕರ್‌) ಕುಟುಂಬ. ಅದೇ ಮನೆಯವನನ್ನು ಪೈಲ್ವಾನನೊಬ್ಬ ಹೊಡೆದು ಸಾಯಿಸುತ್ತಾನೆ. ಅದೇ ಸೇಡಿಗೆ ಪೈಲ್ವಾನನ್ನೂ ರಾಣೆ ಹತ್ಯೆ ಮಾಡುತ್ತಾನೆ. ಹಾಗೆ ಹತನಾದ ಕುಸ್ತಿಪಟುವಿನ ಮಕ್ಕಳೇ ಶಂಕರ (ದರ್ಶನ್)‌ ಮತ್ತು ಸೂರಿ (ಯಶಸ್ ಸೂರ್ಯ). ಆದರೆ, ಇದೇ ಇಬ್ಬರು ಮಕ್ಕಳಿಗೆ ಕುಸ್ತಿ ಗುರು ಕೋರಾಪಿಟ್‌ ರಂಗಣ್ಣ (ಬಿಸಿ ಪಾಟೀಲ್‌) ನಿಷೇಧ ಹೇರಿ, ಅನಾಥರನ್ನು ಸಾಕುವ ಹೊಣೆಯನ್ನೂ ಹೊತ್ತಿರುತ್ತಾನೆ. ಹಾಗಾದರೆ, ಅದೇ ಸೂರಿ ಕುಸ್ತಿ ಅಖಾಡಕ್ಕೆ ಹೇಗೆ ಇಳಿಯುತ್ತಾನೆ? ರಟ್ಟಿಹಳ್ಳಿ ಕುಸ್ತಿ ಕಪ್‌ ಹೇಗೆ ಗೆಲ್ಲುತ್ತಾನೆ? ಅದನ್ನು ಸಿನಿಮಾದಲ್ಲಿಯೇ ನೋಡಬೇಕು.

ಟ್ವಿಸ್ಟು ಟರ್ನು ಇಲ್ಲ, ನೇರ ದಾರಿ!

ಯಾವುದೇ ಏರಿಳಿತಗಳಿಲ್ಲದೆ, ನೇರವಾಗಿ ಸಾಗುವ ಕಥೆಯಲ್ಲಿ ಟ್ವಿಸ್ಟ್‌ ಟರ್ನ್‌ ಕಾಣಿಸದು. ಮುಂದಾನಾಗಬಹುದು ಎಂಬುದನ್ನು ನೋಡುಗ ಸಲೀಸಾಗಿಯೇ ವೀಕ್ಷಿಸಬಹುದು. ಮಾಸ್‌ ಖದರ್‌ ಜತೆಗೆ ದೇಸಿ ಶೈಲಿಗೂ ಹೊಳಪು ನೀಡಿದ್ದಾರೆ ಭಟ್ರು. ಹಾಗಾಗಿಯೇ ವಿಶೇಷತೆ ಇರದ ಚಿತ್ರವೂ ನಿಮ್ಮನ್ನು ನೋಡಿಸಿಕೊಂಡು ಹೋಗುತ್ತದೆ. ಮೇಕಿಂಗ್‌ ವಿಚಾರದಲ್ಲಿ ಭಟ್ಟರು ಮತ್ತು ನಿರ್ಮಾಪಕ ಬಿ.ಸಿ. ಪಾಟೀಲ್‌ ಗೆದ್ದಿದ್ದಾರೆ. ಜಗ ಜಟ್ಟಿಗಳ ಅಖಾಡದಲ್ಲಿ ನಡೆಯುವ ಕುಸ್ತಿ ಕಾಳಗ ನೋಡುಗನನ್ನು ಅರೆ ಕ್ಷಣ ಹುಬ್ಬೇರಿಸುವಂತೆ ಮಾಡುತ್ತದೆ.

ಪಾತ್ರಧಾರಿಗಳ ನಟನೆ ಹೇಗಿದೆ?

ಇಡೀ ಸಿನಿಮಾದಲ್ಲಿ ನಟ ಯಶಸ್‌ ಸೂರ್ಯ ಒಂದೊಳ್ಳೆ ಪಾತ್ರದ ಮೂಲಕ ಕಂಬ್ಯಾಕ್‌ ಮಾಡಿದ್ದಾರೆ. ನಟನೆಯಲ್ಲಿ ಪಕ್ವತೆ ಕಾಣಿಸಿದೆ. ಸೋನಲ್‌ ಮೊಂಟೆರೋ ಯಶಸ್‌ಗೆ ಜೋಡಿಯಾಗಿ ಗಮನ ಸೆಳೆದಿದ್ದಾರೆ. ಕಾಮಿಡಿಗೆ ಧರ್ಮಣ್ಣ ಹೇಳಿ ಮಾಡಿಸಿದಂತಿದೆ. ಕೌರವ ಬಿ.ಸಿ. ಪಾಟೀಲ್‌ ಕುಸ್ತಿ ಗುರುವಾಗಿ ಅಬ್ಬರಿಸಿದ್ದಾರೆ. ಖಳನಟ ರವಿಶಂಕರ್‌ ಖಡಕ್‌ ಆಗಿಯೇ ತಮ್ಮ ಖದರ್‌ ತೋರಿಸಿದ್ದಾರೆ. ಇನ್ನುಳಿದಂತೆ ಚಿತ್ರದ ಕ್ಲೈಮ್ಯಾಕ್ಸ್‌ನ 20 ನಿಮಿಷವನ್ನು ತಿಂದು ತೇಗಿದ್ದಾರೆ ನಟ ದರ್ಶನ್‌. ದರ್ಶನ್‌ ಎಂಟ್ರಿಯಾಗ್ತಿದ್ದಂತೆ, ಶಿಳ್ಳೆ ಚಪ್ಪಾಳೆ ಚಿತ್ರಮಂದಿರವನ್ನು ಆವರಿಸುತ್ತದೆ. ಅಬ್ಬರದ ಹೊಡಿ ಬಡಿ ಮೂಲಕವೇ ಮಾಸ್‌ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಚಿತ್ರದ ಕ್ಯಾಮರಾ ವರ್ಕ್‌ ಚೆನ್ನಾಗಿದೆ. ಪ್ರತಿ ಫ್ರೇಮ್‌ನಲ್ಲೂ ಒಂದಷ್ಟು ಹೊಸತನಗಳನ್ನು ಕಾಣಬಹುದು. ಆದರೆ, ಹಾಡುಗಳ ವಿಚಾರದಲ್ಲಿ ಯೋಗರಾಜ್‌ ಭಟ್‌ ಸೋತಿದ್ದಾರೆ. ಭಟ್ರ ಸಿನಿಮಾ ಹಾಡುಗಳೆಂದರೆ, ಅದಕ್ಕೇ ಆದ ಒಂದು ವರ್ಗವಿತ್ತು. ಆದರೆ, ಗರಡಿಯಲ್ಲಿ ಅದು ಕೊಂಚ ನಿರಾಸೆ ಮೂಡಿಸಿದೆ. ವಿ. ಹರಿಕೃಷ್ಣ ಅವರ ಸಂಗೀತ ಅಷ್ಟಾಗಿ ಎಫೆಕ್ಟಿವ್‌ ಎನಿಸಿಲ್ಲ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ