Yuva: ಅಣ್ಣಾವ್ರ ಮೂರನೇ ತಲೆಮಾರಿಗೆ ಸಿಗದ ನಿರೀಕ್ಷಿತ ಯಶಸ್ಸು!; ಆ ಹಣೆಪಟ್ಟಿ ಕಳಚುತ್ತಾನಾ ‘ಯುವ’ ರಾಜ್‌ಕುಮಾರ್?
Mar 27, 2024 01:35 PM IST
Yuva: ಅಣ್ಣಾವ್ರ ಮೂರನೇ ತಲೆಮಾರಿಗೆ ಸಿಗದ ನಿರೀಕ್ಷಿತ ಯಶಸ್ಸು!; ಆ ಹಣೆಪಟ್ಟಿ ಕಳಚುತ್ತಾನಾ ‘ಯುವ’ ರಾಜ್‌ಕುಮಾರ್?
- ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ ಯುವ ಈ ವಾರ ಬಿಡುಗಡೆ ಆಗುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಬಹುನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾ ಮೂಲಕ ರಾಜ್‌ಕುಮಾರ್ ಕುಟುಂಬದ ಮೂರನೇ ತಲೆಮಾರಿನ ಕುಡಿಗೆ ನಿರೀಕ್ಷಿತ ಯಶಸ್ಸು ಸಿಗುತ್ತಾ ಎಂಬುದಕ್ಕೆ ಇನ್ನೆರಡು ದಿನಗಳಲ್ಲಿ ಉತ್ತರ ಸಿಗಲಿದೆ.
Dr Rajkumar Family: ವರನಟ, ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಕನ್ನಡ ಚಿತ್ರೋದ್ಯಮದ ಮೇರು ನಟರಲ್ಲೊಬ್ಬರು. ಪೌರಾಣಿಕ ಸಿನಿಮಾಗಳು, ಕೌಟುಂಬಿಕ ಪ್ರಧಾನ ಚಿತ್ರಗಳಲ್ಲಿನ ಅಭಿನಯದ ಜತೆಗೆ, ಗಾಯನದ ಮೂಲಕವೂ ಅವರು ಹೆಸರುವಾಸಿ. ಕರ್ನಾಟಕ ಮಾತ್ರವಲ್ಲ, ಇತರ ಪರಭಾಷಿಕ ಸಿನಿಮಾ ಪ್ರೇಮಿಗಳ ಗಮನವನ್ನೂ ತನ್ನತ್ತ ಸೆಳೆದಿದ್ದರು ಈ ಬಂಗಾರದ ಮನುಷ್ಯ. ಇದೀಗ ಈ ಕುಟುಂಬ ಇಡೀ ಕನ್ನಡ ಚಿತ್ರೋದ್ಯಮಕ್ಕೆ ದೊಡ್ಮನೆಯಾಗಿದೆ. ಅಣ್ಣಾವ್ರ ಮಕ್ಕಳೂ ಅಪ್ಪನ ಹಾದಿಯಲ್ಲಿಯೇ ಚಿತ್ರೋದ್ಯಮದಲ್ಲಿ ಸ್ಟಾರ್ ನಟರಾಗಿ ಮಿಂಚಿದ್ದಾರೆ. ಆದರೆ, ಡಾ. ರಾಜ್ ಅವರ ಮೂರನೇ ತಲೆಮಾರಿಗೆ ಆ ಯಶಸ್ಸು ಮಾತ್ರ ಇನ್ನೂ ಗಗನ ಕುಸುಮವೇ ಆಗಿದೆ!
ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಚಂದವನದಲ್ಲಿ ದೊಡ್ಡ ಮಟ್ಟದ ಸ್ಟಾರ್‌ಡಮ್ ಗಳಿಸಿಕೊಂಡವರು. ಕನ್ನಡ ಚಿತ್ರೋದ್ಯಮಕ್ಕೆ ಈ ಮೂವರ ಕೊಡುಗೆಯೂ ಅನನ್ಯ. ಅದರಲ್ಲೂ 60 ಪ್ಲಸ್ ವಯಸ್ಸಾದರೂ ಸೆಂಚುರಿ ಸ್ಟಾರ್ ಶಿವಣ್ಣ, ಇಂದಿಗೂ ಚಿತ್ರೋದ್ಯಮದಲ್ಲಿ ಯುವಕರನ್ನೇ ನಾಚಿಸುವಂತಿದ್ದಾರೆ. ಲವಲವಿಕೆಯಲ್ಲಿಯೇ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ ಅಕಾಲಿಕ ಸಾವಿನಿಂದ ಪುನೀತ್ ಇಲ್ಲವಾದರೂ, ತಮಗೆ ಸಿಕ್ಕ ಅವಧಿಯಲ್ಲಿಯೇ ಕರುನಾಡಿನ ತುಂಬೆಲ್ಲ ಪಸರಿಸಿದ್ದಾರವರು. ಅಪ್ಪನಂತೆ, ಗಾಯನದಲ್ಲೂ ಮುಂದಿದ್ದರು. ಇತ್ತ ರಾಘವೇಂದ್ರ ರಾಜ್‌ಕುಮಾರ್ ಸಹ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ಆಗೊಂದು ಈಗೊಂದು ಸಿನಿಮಾಗಳಲ್ಲಿ ಬಣ್ಣಹಚ್ಚುತ್ತಿದ್ದಾರೆ.
ವಿನಯ್ ರಾಜ್‌ಕುಮಾರ್: ರಾಘವೇಂದ್ರ ರಾಜ್‌ಕುಮಾರ್ ಅವರ ಹಿರಿ ಮಗ ವಿನಯ್ ರಾಜ್‌ಕುಮಾರ್‌ಗೆ ಚೊಚ್ಚಲ ಚಿತ್ರ ಸಿದ್ಧಾರ್ಥ್ ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ನಿರ್ಮಾಣವಾದರೂ, ಹೆಚ್ಚು ಸದ್ದು ಮಾಡಲಿಲ್ಲ. ಅಲ್ಲಿಂದ ಶುರುವಾದ ಅವರ ಸಿನಿಮಾ ಜರ್ನಿಯಲ್ಲಿ ಗೆಲುವಿಗಿಂತ ಸೋಲುಗಳನ್ನು ಕಂಡಿದ್ದೇ ಹೆಚ್ಚು. ರನ್ ಆಂಟೋನಿ, ಅನಂತು ವರ್ಸಸ್ ನುಸ್ರತ್, ಟೆನ್ ಚಿತ್ರಗಳು ನಿರೀಕ್ಷಿತ ಮಟ್ಟ ತಲುಪಲಿಲ್ಲ. ಇತ್ತೀಚೆಗೆ ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಒಂದು ಸರಳ ಪ್ರೇಮ ಕಥೆ ಚಿತ್ರ ಕೊಂಚ ಮೋಡಿ ಮಾಡಿದರೂ, ಗೆಲುವಿನ ಅಂಚಿಗೆ ಬಂದು ನಿಂತಿತ್ತು. ಇತ್ತ ಗ್ರಾಮಾಯಣ, ಪೆಪೆ ಸೇರಿ ಹಲವು ಸಿನಿಮಾಗಳಲ್ಲೂ ವಿನಯ್ ನಟಿಸುತ್ತಿದ್ದಾರೆ.
ಧನ್ಯಾ ರಾಮ್‌ಕುಮಾರ್: ರಾಜ್‌ಕುಮಾರ್ ಪುತ್ರಿ ಪೂರ್ಣಿಮಾ ಮತ್ತು ರಾಮ್‌ಕುಮಾರ್ ದಂಪತಿಯ ಮಗಳು ಧನ್ಯಾ ರಾಮ್‌ಕುಮಾರ್ ಸಹ ಚಿತ್ರೋದ್ಯಮಕ್ಕೆ ಕಾಲಿರಿಸಿದ್ದಾರೆ. 2021ರಲ್ಲಿ ನಿನ್ನ ಸನಿಹಕೆ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಧನ್ಯಾಗೆ ಮೊದಲ ಚಿತ್ರವೇ ಕೈ ಹಿಡಿಯಲಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಆ ಸಿನಿಮಾ ಗೆಲುವನ್ನು ಅವರಿಗೆ ಕರುಣಿಸಲಿಲ್ಲ. ಅದಾದ ಬಳಿಕ ಹಲವು ಸಿನಿಮಾಗಳಲ್ಲಿ ಧನ್ಯಾ ನಟಿಸಿದ್ದರಾದರೂ, ಆ ಪೈಕಿ ಹೈಡ್ ಅಂಡ್ ಸೀಕ್ ಚಿತ್ರ ಇತ್ತೀಚೆಗಷ್ಟೇ ತೆರೆಕಂಡಿದೆ. ಕಾಲಾಪತ್ಥರ್, ಪೌಡರ್ ಸೇರಿ ಹಲವು ಚಿತ್ರಗಳಲ್ಲೂ ನಾಯಕಿಯಾಗಿದ್ದಾರೆ. ಇನ್ನಷ್ಟೇ ಈ ಚಿತ್ರಗಳು ಬಿಡುಗಡೆ ಆಗಬೇಕಿದೆ.
ಧೀರೇನ್ ರಾಮ್‌ಕುಮಾರ್: ಇನ್ನು ರಾಜ್‌ಕುಮಾರ್ ಮೊಮ್ಮಗ, ಪೂರ್ಣಿಮಾ ಮತ್ತು ರಾಮ್‌ಕುಮಾರ್ ದಂಪತಿಯ ಪುತ್ರ ಧೀರೇನ್ ರಾಮ್‌ಕುಮಾರ್ ಸಹ ಚಂದನವನದಲ್ಲಿ ನಾಯಕನಾಗಿ ಪರೀಕ್ಷೆಗಿಳಿದಿದ್ದರು. ಅನಿಲ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ಶಿವ 143 ಚಿತ್ರದಲ್ಲಿ ನಟಿಸಿದ್ದರು. ಅಣ್ಣಾವ್ರ ಕುಟುಂಬದ ಕುಡಿ ಎಂಬ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಸಹ ಆ ನಿರೀಕ್ಷೆಯನ್ನು ತಲುಪಲು ವಿಫಲವಾಯ್ತು. ಈಗ ನಿರ್ದೇಶಕ ಚೇತನ್ ಕುಮಾರ್ ಜತೆಗೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಧೀರೇನ್.
ಯುವ ಮೇಲೆ ಬೆಟ್ಟದಷ್ಟು ನಿರೀಕ್ಷೆ
ಇದೀಗ ಯುವ ರಾಜ್‌ಕುಮಾರ್ ಯುವ ಚಿತ್ರದ ಮೂಲಕ ಆಗಮಿಸುತ್ತಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿ ಮಗ ಯುವ, ಕರುನಾಡಲ್ಲಿ ದೊಡ್ಡ ಹೈಪ್ ಗಿಟ್ಟಿಸಿಕೊಂಡಿದ್ದಾರೆ. ಚಿಕ್ಕಪ್ಪ ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನದ ಬಳಿಕ, ಅವರ ಸ್ಥಾನ ತುಂಬಬಲ್ಲ ನಾಯಕ ಎಂದೂ ಅಭಿಮಾನಿ ಬಳಗದಿಂದ ಕರೆಸಿಕೊಂಡಿದ್ದಾರೆ. ಇನ್ನೇನು ಮಾ. 29ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
"ಯುವ" ಸಿನಿಮಾಕ್ಕೂ ಮೊದಲು "ಯುವ ರಣಧೀರ ಕಂಠೀರವ" ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಕಾರಣಾಂತರಗಳಿಂದ ಆ ಚಿತ್ರ ಸೆಟ್ಟೇರಲಿಲ್ಲ. ಈಗ ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ಸಂತೋಷ್ ಆನಂದ್ ರಾಮ್ ಯುವ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಾಜ್ಯಾದ್ಯಂತ ಸಿನಿಮಾ ಮೇಲಿನ ನಿರೀಕ್ಷೆಯೂ ಜೋರಾಗಿಯೇ ಇದೆ. ಅದು ಗೆಲುವಾಗಿ ಕನ್ವರ್ಟ್ ಆಗುತ್ತಾ? ಈ ಮೂಲಕ ರಾಜ್ ಕುಟುಂಬದ ಮೂರನೇ ತಲೆಮಾರಿಗೆ ಸಿಗುತ್ತಾ ನಿರೀಕ್ಷಿತ ಯಶಸ್ಸು? ಈ ಪ್ರಶ್ನೆಗೆ ಇನ್ನೆರಡು ದಿನಗಳಲ್ಲಿ ಉತ್ತರ ಸಿಗಲಿದೆ.