ಕನ್ನಡ ಸುದ್ದಿ  /  Entertainment  /  Sandalwood News Mohaka Taare Ramya Walked Out Of Daali Dhananjay Starrer Uttarakhanda Movie Here Is The Reason Mnk

ಚಿತ್ರರಂಗದಿಂದ ಮತ್ತೆ ರಮ್ಯಾ ದೂರ ದೂರ! ‘ಉತ್ತರಕಾಂಡ’ ಸಿನಿಮಾ ಕೈಬಿಟ್ಟು, ರಾಜಕೀಯಕ್ಕೂ ಹೋಗದ ಮೋಹಕ ತಾರೆ, ಯಾಕೀ ನಿರ್ಧಾರ?

ನಟಿ ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರುತ್ತಿರುವುದಾಗಿ ಹೇಳಿದ ಬಳಿಕ, ಅವರ ಅಭಿಮಾನಿಗಳು ಪುಳಕಗೊಂಡಿದ್ದರು. ಡಾಲಿ ಧನಂಜಯ್‌ ಜತೆಗೆ ಉತ್ತರ ಕರ್ನಾಟಕ ಭಾಷಾ ಸೊಗಡಿನ ಸಿನಿಮಾಕ್ಕೆ ನಾಯಕಿಯಾಗಿದ್ದರು. ಆದರೆ, ಈಗ ಇದೇ ನಟಿ ಈ ಚಿತ್ರದಿಂದಲೂ ಹಿಂದೆ ಸರಿದಿದ್ದಾರೆ.

ಚಿತ್ರರಂಗದಿಂದ ಮತ್ತೆ ರಮ್ಯಾ ದೂರ ದೂರ! ‘ಉತ್ತರಕಾಂಡ’ ಸಿನಿಮಾ ಕೈಬಿಟ್ಟು, ರಾಜಕೀಯಕ್ಕೂ ಹೋಗದ ಮೋಹಕ ತಾರೆ, ಯಾಕೀ ನಿರ್ಧಾರ?
ಚಿತ್ರರಂಗದಿಂದ ಮತ್ತೆ ರಮ್ಯಾ ದೂರ ದೂರ! ‘ಉತ್ತರಕಾಂಡ’ ಸಿನಿಮಾ ಕೈಬಿಟ್ಟು, ರಾಜಕೀಯಕ್ಕೂ ಹೋಗದ ಮೋಹಕ ತಾರೆ, ಯಾಕೀ ನಿರ್ಧಾರ?

Ramya: ಸ್ಯಾಂಡಲ್‌ವುಡ್‌ನ ಮೋಹಕ ತಾರೆ ನಟಿ ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರುತ್ತಿರುವುದಾಗಿ ಹೇಳಿದ ಮೇಲೆ, ಅವರ ಅಪಾರ ಅಭಿಮಾನಿ ಬಳಗ ಖುಷಿಪಟ್ಟಿತ್ತು. ಅವರ ಆಗಮನಕ್ಕೆ ಕೆಂಪು ಹಾಸಿನ ಸ್ವಾಗತ ಕೋರಿತ್ತು. ಸುದೀರ್ಘ 8 ವರ್ಷಗಳ ಬಳಿಕ ಚಂದನವನಕ್ಕೆ ಮರಳಿದ್ದ ರಮ್ಯಾ, ಉತ್ತರಕಾಂಡ ಚಿತ್ರಕ್ಕೆ ನಾಯಕಿಯಾಗಿದ್ದರು. ಸಿನಿಮಾ ಕಥೆ ಕೇಳಿ ಥ್ರಿಲ್‌ ಆಗಿದ್ದೇನೆ, ಇನ್ಮ್ಯಾಲಿಂದ ಫುಲ್‌ ಗುದ್ದಾಂ ಗುದ್ದಿ ಎಂದೂ ಹೇಳಿಕೊಂಡಿದ್ದರು. ಆದರೆ, ಈಗ ಇದೇ ರಮ್ಯಾ, ಅಭಿಮಾನಿ ವಲಯದ ಆಸೆಯನ್ನು ನಿರಾಸೆ ಮಾಡಿದ್ದಾರೆ. ಉತ್ತರಕಾಂಡ ಚಿತ್ರದಿಂದ ಹಿಂದೆ ಸರಿದಿದ್ದಾರೆ!

ದೇಶದಲ್ಲೀಗ ಲೋಕಸಭೆ ಚುನಾವಣೆಯ ಕಾವು ಜೋರಾಗಿದೆ. ಈ ಮೊದಲು ಕಾಂಗ್ರೆಸ್‌ ಪಕ್ಷದಿಂದ ಗುರುತಿಸಿಕೊಂಡಿದ್ದ ರಮ್ಯಾ, ಇದೀಗ ಇದೇ ಚುನಾವಣೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆಯೇ? ಅದರಲ್ಲೂ ರಮ್ಯಾಗೆ ಈ ಸಲವೂ ಟಿಕೆಟ್‌ ಸಿಕ್ಕಿಲ್ಲ. ಟಿಕೆಟ್‌ ಸಿಗದಿದ್ದರೇನಂತೆ, ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕೆ ಮುಂದಾಗಲಿದ್ದಾರೆ ಎಂದೂ ಹೇಳಲಾಗುತ್ತಿತ್ತು. ಆದರೆ, ಈಗ ಇದೇ ವಿಚಾರವನ್ನು ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಮ್ಯಾ, ಉತ್ತರಕಾಂಡ ಸಿನಿಮಾ ಮಾತ್ರವಲ್ಲದೇ ರಾಜಕೀಯದ ಬಗ್ಗೆಯೂ ತಿಳಿಸಿದ್ದಾರೆ.

ಸಿನಿಮಾನೂ ಬೇಡ, ರಾಜಕೀಯವೂ ಬೇಡ!

"ಡೇಟ್‌ ಕೊರತೆಯಿಂದ ನಾನು ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತಿಲ್ಲ. ಆ ಚಿತ್ರದಿಂದ ಹಿಂದೆ ಸರಿದಿದ್ದೇನೆ. ಈ ಮೂಲಕ ನಾನು ಸಿನಿಮಾ ಮತ್ತು ರಾಜಕೀಯ ಕೆಲಸಗಳನ್ನು ಹೋಲ್ಡ್‌ ಮಾಡಿದ್ದೇನೆ. ಉತ್ತರಕಾಂಡ ಚಿತ್ರತಂಡಕ್ಕೆ ನನ್ನ ಶುಭ ಹಾರೈಕೆಗಳು" ಎಂದು ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಪೋಸ್ಟ್‌ ಮಾಡಿದ್ದಾರೆ. ಬಹುತೇಕರು ಲೋಕಸಭೆ ಚುನಾವಣೆ ನಿಮಿತ್ತ ನಟಿ ರಮ್ಯಾ ಸಿನಿಮಾ ಕೈ ಬಿಟ್ಟಿರಬಹುದು ಎಂದುಕೊಂಡಿದ್ದರು. ಈಗ ಪೋಸ್ಟ್‌ನಲ್ಲಿ ರಾಜಕೀಯದಲ್ಲೂ ತೊಡಗಿಸಿಕೊಳ್ಳದಿರುವ ಬಗ್ಗೆ ಖಾತ್ರಿ ಪಡಿಸಿದ್ದಾರೆ. ಆದರೆ, ಈ ನಿರ್ಧಾರಕ್ಕೆ ಕಾರಣ ಏನಿರಬಹುದು? ಅದನ್ನು ಅವರೇ ಹೇಳಬೇಕು.

ಮತ್ತೆ ಮಾತು ತಪ್ಪಿದ ರಮ್ಯಾ

2016ರಲ್ಲಿ ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿಬಂದಿದ್ದ ನಾಗರಹಾವು ಸಿನಿಮಾದಲ್ಲಿ ಪೂರ್ಣಪ್ರಮಾಣದ ನಾಯಕಿಯಾಗಿ ರಮ್ಯಾ ನಟಿಸಿದ್ದರು. ಅದಾದ ಬಳಿಕ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜತೆಗೆ ತಮ್ಮದೇ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲೂ ನಟಿಸುವುದಾಗಿ ಹೇಳಿದ್ದರು. ಆದರೆ, ರಾಜ್‌ ಬಿ ಶೆಟ್ಟಿ ನಿರ್ದೇಶನದ ಆ ಸಿನಿಮಾದಿಂದಲೂ ರಮ್ಯಾ ಹಿಂದೆ ಸರಿದರು. ಅವರ ಸ್ಥಾನಕ್ಕೆ ಸಿರಿ ರವಿಕುಮಾರ್‌ ಅವರನ್ನು ಕರೆತಂದರು. ಕಳೆದ ವರ್ಷ ಬಿಡುಗಡೆಯಾಗಿದ್ದ ಆ ಸಿನಿಮಾ ಅಷ್ಟೇನೂ ಸದ್ದು ಮಾಡಲಿಲ್ಲ. ಹೀಗಿರುವಾಗಲೇ ಈಗ ಉತ್ತರಕಾಂಡದಿಂದಲೂ ಆಚೆ ನಡೆದಿದ್ದಾರೆ ರಮ್ಯಾ.

ರಮ್ಯಾ ಸ್ಥಾನಕ್ಕೆ ಯಾರು ಬರ್ತಾರೆ?

ರತ್ನನ್‌ ಪ್ರಪಂಚ ಸಿನಿಮಾ ಮೂಲಕ ಕ್ಲಾಸ್‌ ಹಿಟ್‌ ಕೊಟ್ಟಿದ್ದ ನಿರ್ದೇಶಕ ರೋಹಿತ್‌ ಪದಕಿ, ಉತ್ತರಕಾಂಡ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಮುಹೂರ್ತ ಮುಗಿಸಿಕೊಂಡು, ಚಿತ್ರೀಕರಣಕ್ಕೂ ಚಾಲನೆ ನೀಡಿತ್ತು. ಜತೆಗೆ ಇದೇ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಸಹ ಇರಲಿದ್ದಾರೆ ಎಂಬ ವಿಚಾರವೂ ಹೊರಬಿದ್ದು, ಅಭಿಮಾನಿ ವಲಯದಲ್ಲಿ ಕುತೂಹಲ ಮೂಡಿಸಿತ್ತು. ಇತ್ತ ರಮ್ಯಾ ಯಾರಿಗೆ ಜೋಡಿ ಆಗಲಿದ್ದಾರೆ ಎಂಬ ವಿಚಾರವೂ ಸದ್ದು ಮಾಡಿತ್ತು. ಆದರೆ, ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ ಉತ್ತರಕಾಂಡ ಸಿನಿಮಾವನ್ನೇ ಬಿಟ್ಟು ಹೊರನಡೆದಿದ್ದಾರೆ ರಮ್ಯಾ.

ಆಡಿಷನ್‌ಗೆ ಆಹ್ವಾನ

ಕಳೆದ ನಾಲ್ಕು ದಿನಗಳ ಹಿಂದಷ್ಟೇ ಉತ್ತರಕಾಂಡ ಸಿನಿಮಾಕ್ಕೆ ಕಲಾವಿದರು ಬೇಕಾಗಿದ್ದಾರೆ ಎನ್ನುವ ಮೂಲಕ ಆಡಿಷನ್‌ ಕಾಲ್‌ ಮಾಡಿತ್ತು ಚಿತ್ರತಂಡ. "ಉತ್ತರಕಾಂಡ"ದ ಮಂದಿಗ ಉತ್ತರ ಕರ್ನಾಟಕದ ಮಂದಿ ಬೇಕು!!! ಆಡಿಷನ್‌ಗೆ ಬತ್ತೀರೇನ್ರೀ?? ನಿಮ್‌ ವಯಸ್ಸು 12-75 ಒಳಗಿದ್ದು, ಚಲೋ acting ಮಾಡೋಕ್ ಬಂದ್ರೆ ಸಾಕು‌ ನೋಡ್ರೀ... ಏನಂತೀರ್ರೀ? ಮಾರ್ಚ್ 27- ವಿಜಯಪುರ, ಮಾರ್ಚ್ 28- ಹುಬ್ಬಳ್ಳಿ, ಜಾಗ, ದಿನಾಂ ಗೊತ್ತಾತಲ್ಲ..ಬರ್ರೀ ಮತಾ. ಆಡಿಷನ್ ಪ್ರೋಮೋ ಬಂದೈತಿ.. ಶೇರ್‌ ಮಾಡ್ರೀ.. ಉತ್ತರಕರ್ನಾಟಕದಾಗ ಗುಲ್ಲೆಬ್ಸಿ ಎಂದು ಪೋಸ್ಟ್‌ ಹಂಚಿಕೊಂಡಿತ್ತು.