ಕರ್ನಾಟಕ ಹವಾಮಾನ ಏಪ್ರಿಲ್ 26; ಬಾಗಲಕೋಟೆ, ಮಂಡ್ಯ, ತುಮಕೂರು ಸೇರಿ 12 ಜಿಲ್ಲೆಗಳಲ್ಲಿ ಶಾಖದ ಅಲೆ ಎಚ್ಚರಿಕೆ, ಉಳಿದೆಡೆ ಒಣಹವೆ
Apr 26, 2024 06:08 AM IST
ಕರ್ನಾಟಕ ಹವಾಮಾನ ಏಪ್ರಿಲ್ 26; ಬಾಗಲಕೋಟೆ, ಮಂಡ್ಯ, ತುಮಕೂರು ಸೇರಿ 12 ಜಿಲ್ಲೆಗಳಲ್ಲಿ ಶಾಖದ ಅಲೆ ಎಚ್ಚರಿಕೆಯ ನಕ್ಷೆಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಪ್ರಕಟಿಸಿದೆ.
ಕರ್ನಾಟಕ ಹವಾಮಾನ ಏಪ್ರಿಲ್ 26: ಕರ್ನಾಟಕದಲ್ಲಿ ಇಂದು ಬಾಗಲಕೋಟೆ, ಮಂಡ್ಯ, ತುಮಕೂರು ಸೇರಿ 12 ಜಿಲ್ಲೆಗಳಲ್ಲಿ ಶಾಖದ ಅಲೆಗಳ ಮುನ್ನೆಚ್ಚರಿಕೆ ಇದೆ. ಇದೇ ಪರಿಸ್ಥಿತಿ ಇನ್ನೂ ಮೂರು ದಿನ ಮುಂದುವರಿಯಲಿದೆ. ಉಳಿದೆಡೆ ಒಣಹವೆ, ತಾಪಮಾನ ಹೆಚ್ಚಳ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ಹೇಳಿದೆ.
ಬೆಂಗಳೂರು: ಕರ್ನಾಟಕದ ಬಾಗಲಕೋಟೆ, ಮಂಡ್ಯ, ತುಮಕೂರು ಸೇರಿ 12 ಜಿಲ್ಲೆಗಳಲ್ಲಿ ಇಂದು (ಏಪ್ರಿಲ್ 26) ಶಾಖದ ಅಲೆಗಳ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಉಳಿದಡೆ ಒಣಹವೆ ಇರಲಿದ್ದು, ತಾಪಮಾನ ಹೆಚ್ಚಳ ಅನುಭವಕ್ಕೆ ಬರಲಿದೆ. ಕರ್ನಾಟಕದಲ್ಲಿ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಹೆಚ್ಚಳ ಕಂಡುಬರಲಿದೆ. ಕರಾವಳಿಯ ಜಿಲ್ಲೆಗಳಲ್ಲಿ ಬಿಸಿಲಿನ ಜೊತೆಗೆ ಆರ್ದ್ರತೆಯೂ ಇರಲಿದ್ದು, ಸುಡುಬಿಸಿಲಿನ ಅನುಭವ ತೀವ್ರಗೊಳ್ಳಲಿದೆ ಎಂದು ಹವಾಮಾನ ಮುನ್ಸೂಚನಾ ವರದಿ ಹೇಳಿದೆ.
ಭಾರತೀಯ ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ವರದಿ ಪ್ರಕಾರ, ಏಪ್ರಿಲ್ 27ರ ಬೆಳಗ್ಗೆ 8.30ರ ತನಕದ ಅವಧಿಯಲ್ಲಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ಏಪ್ರಿಲ್ 29 ರ ತನಕ ಗರಿಷ್ಠ ಉಷ್ಣಾಂಶ 2 ರಿಂದ 2 ಡಿಗ್ರಿ ಸೆಲ್ಶಿಯಸ್ ಏರಿಕೆಯಾಗುವ ಸಾಧ್ಯತೆ ಇದೆ. ಏಪ್ರಿಲ್ 25 ರಿಂದ 29 ರ ತನಕದ ಅವಧಿಯಲ್ಲಿ ಬಿಸಿ ಮತ್ತು ಆರ್ದ್ರತೆಯ ಪ್ರಮಾಣ ಹೆಚ್ಚಾಗಲಿದೆ.
ಉತ್ತರ ಒಳನಾಡಿನ ಬಾಲಕೋಟೆ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಶಾಖದ ಅಲೆಗಳ ಮುನ್ನೆಚ್ಚರಿಕೆ ನೀಡಲಾಗಿದೆ. ಇನ್ನುಳಿದಂತೆ ಬೆಳಗಾವಿ, ಬೀದರ್, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಒಣಹವೆ ಇರಲಿದ್ದು, ಗರಿಷ್ಠ ತಾಪಮಾನದಲ್ಲಿ ಏರಿಕೆಯಾಗಬಹುದು ಎಂದು ವರದಿ ಎಚ್ಚರಿಸಿದೆ. ಈ ಪ್ರದೇಶಗಳಲ್ಲಿ ಏಪ್ರಿಲ್ 29ರ ತನಕ ತಾಪಮಾನವು 2 ರಿಂದ 3 ಡಿಗ್ರಿ ಸೆಲ್ಶಿಯಸ್ ಹೆಚ್ಚಳವಾಗು ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ.
ದಕ್ಷಿಣ ಒಳನಾಡಿನ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಶಾಖದ ಅಲೆಗಳನ್ನು ಎದುರಿಸಬೇಕಾಗಬಹುದು. ಇನ್ನು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದ್ದು, ಏಪ್ರಿಲ್ 29ರ ತನಕ ದಕ್ಷಿಣ ಒಳಾನಾಡಿನ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 2 ರಿಂದ 3 ಡಿಗ್ರಿ ಸೆಲ್ಶಿಯಸ್‌ನಷ್ಟು ಏರಿಕೆಯಾಗಬಹುದು ಎಂದು ವರದಿ ಹೇಳಿದೆ.
ಶಾಖದ ಅಲೆಗಳ ಮುನ್ನೆಚ್ಚರಿಕೆ
ಕರ್ನಾಟಕದಲ್ಲಿ ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ಧಾರವಾಡ, ದಾವಣಗೆರೆ, ಕೋಲಾರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಏಪ್ರಿಲ್ 29ರ ತನಕ ಶಾಖದ ಅಲೆಗಳು ಉಂಟಾಗಬಹುದು. ಆದ್ದರಿಂದ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲುಸ್ತುವಾರಿ ಕೇಂದ್ರದ ವರದಿ ಎಚ್ಚರಿಸಿದೆ.
ಬೆಂಗಳೂರು ಹವಾಮಾನ ಇಂದು (ಏಪ್ರಿಲ್ 26), ಗರಿಷ್ಠ 37 ಡಿಗ್ರಿ ಸೆಲ್ಶಿಯಸ್ ಕನಿಷ್ಠ 24 ಡಿಗ್ರಿ ಸೆಲ್ಶಿಯಸ್
ಬೆಂಗಳೂರು ನಗರದಲ್ಲಿ ಇಂದು (ಏಪ್ರಿಲ್ 26) ಗರಿಷ್ಠ ತಾಪಮಾನವು 37 ಡಿಗ್ರಿ ಸೆಲ್ಶಿಯಸ್ ಕನಿಷ್ಠ 24 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು ಎಂದು ಬೆಂಗಳೂರು ಹವಾಮಾನ ಕೇಂದ್ರದ ಮುನ್ಸೂಚನಾ ವರದಿ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಕೂಡ ಗರಿಷ್ಠ 37 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 24 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಇರಬಹುದು. ನಿನ್ನೆ (ಏಪ್ರಿಲ್ 25) ಬೆಂಗಳೂರು ನಗರ ಜಿಲ್ಲೆಯ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ಉಷ್ಣಾಂಶ 24.8 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಇದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ ಕೂಡ ಉಷ್ಣಾಂಶ ಗರಿಷ್ಠ 37 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 24 ಡಿಗ್ರಿ ಸೆಲ್ಶಿಯಸ್ ಅಂದಾಜಿಸಲಾಗಿದೆ. ನಿನ್ನೆ (ಏಪ್ರಿಲ್ 25) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗರಿಷ್ಠ ತಾಪಮಾನ 37.5 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 23.2 ಡಿಗ್ರಿ ಸೆಲ್ಶಿಯಸ್ ಇತ್ತು ಎಂದು ಬೆಂಗಳೂರು ಹವಾಮಾನ ಕೇಂದ್ರದ ವರದಿ ಹೇಳಿದೆ.
ಪ್ರಮುಖ ನಗರಗಳ ತಾಪಮಾನ
ಭಾರತೀಯ ಹವಾಮಾನ ಇಲಾಖೆಯ ದತ್ತಾಂಶ ಪ್ರಕಾರ, ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು (ಏಪ್ರಿಲ್ 26 ) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ತಾಪಮಾನಗಳ ವಿವರ.
ಬೆಂಗಳೂರು – 28.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 61)
ಮಂಗಳೂರು – 28 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 84)
ಚಿತ್ರದುರ್ಗ – 32 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 23)
ಗದಗ – 30.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 60)
ಹೊನ್ನಾವರ – 29.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 78)
ಕಲಬುರಗಿ – 31.3 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 26)
ಬೆಳಗಾವಿ – 29 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 74)
ಕಾರವಾರ – 34.8 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 64 )
----------------------
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)