Bengaluru Temperature: ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ ಎಫೆಕ್ಟ್; ಮಾರ್ಚ್ ಬಳಿಕ ಅತಿ ಕಡಿಮೆ ತಾಪಮಾನ ದಾಖಲು
May 12, 2024 09:30 AM IST
ಬೆಂಗಳೂರಿನಲ್ಲಿ ಸತತ ಮಳೆಯಾಗುತ್ತಿರುವುರಿಂದ ಮಾರ್ಚ್ ಬಳಿಕ ಅತಿ ಕಡಿಮೆ ತಾಪಮಾನ ದಾಖಲಾಗಿದೆ.
- ದೀರ್ಘಕಾಲದ ರಣ ಬಿಸಿಲಿನ ನಂತರ ಬೆಂಗಳೂರು ಕೂಲ್ ಆಗಿದೆ. ಸತತ ಮಳೆಯಿಂದಾಗಿ ಇತ್ತೀಚೆಗೆ ನಗರದ ತಾಪಮಾನದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. ಗರಿಷ್ಠ 31.9 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಇದು ಮಾರ್ಚ್ ತಿಂಗಳ ನಂತರದ ಕನಿಷ್ಠ ಉಷ್ಣಾಂಶವಾಗಿದೆ.
ಬೆಂಗಳೂರು: ನಿಗಿ ನಿಗಿ ಕೆಂಡವಾಗಿದ್ದ ಉದ್ಯಾನ ನಗರಿ ಬೆಂಗಳೂರು ಇದೀಗ ಸಖತ್ ಕೂಲ್ ಆಗಿದೆ. ಇದಕ್ಕೆ ಕಾರಣವಾಗಿರೋದು ಮಳೆರಾಯ. ನಗರದಲ್ಲಿ ಶುಕ್ರವಾರ (ಮೇ 10) ಇಡೀ ರಾತ್ರಿ ಧಾರಾಕಾರ ಮಳೆಯಾಗಿದೆ. ನಾಲ್ಕೈದು ದಿನಗಳಿಂದ ನಗರದಲ್ಲಿ ಮಳೆ ಸುರಿಯುತ್ತಿರುವುದರ ಪರಿಣಾಮವಾಗಿ ದಾಖಲೆಯ ಮಟ್ಟದಲ್ಲಿ ತಾಪಮಾನ ಇಳಿಕೆಯಾಗಿದೆ. ಸುಮಾರು ಎರಡು ತಿಂಗಳ ಸುಡುವ ಬಿಸಿಯನ್ನು ಸಹಿಸಿಕೊಂಡಿರುವ ಜನರಿಗೆ ವರುಣನ ತಂಪೆರೆಯುತ್ತಿದ್ದು, ಮಾರ್ಚ್ ನಂತರ ಇದೇ ಮೊದಲ ಬಾರಿ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಶುಕ್ರವಾರ ನಗರದಲ್ಲಿ ತಾಪಮಾನ 31.9 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಇದು ಕೇವಲ ಒಂದೆರಡು ದಿನಗಳವರೆಗೆ ಇದೇ ವಾತಾವರಣ ಇರಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಅಂಕಿ ಅಂಶಗಳು ತಿಳಿಸಿವೆ.
ಶುಕ್ರವಾರದ ಗರಿಷ್ಠ ತಾಪಮಾನವು ಬೆಂಗಳೂರಿನಲ್ಲಿ ಮೇ ತಿಂಗಳ ಸರಾಸರಿಗಿಂತ 1.3 ಡಿಗ್ರಿ ಕಡಿಮೆಯಾಗಿದೆ. ಫೆಬ್ರವರಿಯಲ್ಲಿ 30.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಐಎಂಡಿ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಮಾರ್ಚ್‌ನಲ್ಲಿ ಕನಿಷ್ಠ 32.6 ಡಿಗ್ರಿ ಸೆಲ್ಸಿಯಸ್ ಮತ್ತು ಏಪ್ರಿಲ್‌ನಲ್ಲಿ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಬೆಂಗಳೂರಿನಲ್ಲಿ ಇತ್ತೀಚಿಗೆ ತಾಪಮಾನ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿತ್ತು.
ಮೇ ನಲ್ಲಿ ಬೆಂಗಳೂರಿಗೆ ಮತ್ತಷ್ಟು ಮಳೆಯ ಮುನ್ಸೂಚನೆ
ವಿಜ್ಞಾನಿ ಸಿ.ಎಸ್ ಪಾಟೀಲ್ ಅವರು ತಾಪಮಾನ ಕುಸಿತಕ್ಕೆ ಇತ್ತೀಚಿನ ಮಳೆ ಕಾರಣ ಎಂದು ಹೇಳಿದ್ದಾರೆ. ಮುಂಬರುವ ವಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದಿದ್ದಾರೆ. ಮೇ ತಿಂಗಳಲ್ಲಿ ತಾಪಮಾನವು 10 ದಿನಗಳಲ್ಲಿ 38.1 ರಿಂದ 31.9 ಡಿಗ್ರಿ ಸೆಲ್ಸಿಯಸ್‌ಗೆ ಗಮನಾರ್ಹವಾಗಿ ಇಳಿದಿದೆ. ಈ ತಿಂಗಳಲ್ಲಿ ಇನ್ನೂ ಮಳೆಯಾಗುವ ನಿರೀಕ್ಷೆಯಿದೆ. ಇದು ತಂಪಾದ ಪರಿಸ್ಥಿತಿಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಗರದಲ್ಲಿ ಸಾಮಾನ್ಯವಾಗಿ ಮೇ ತಿಂಗಳಲ್ಲಿ 128.7 ಮಿ.ಮೀ ಮಳೆಯಾಗುತ್ತದೆ ಎಂದು ಪಾಟೀಲ್ ಹೇಳಿದ್ದಾರೆ.
ಐಎಂಡಿಯ ಇತ್ತೀಚಿನ ಮುನ್ಸೂಚನೆಯು ಮೇ 14 ರವರೆಗೆ ನಗರದಲ್ಲಿ ಗಾಳಿಯೊಂದಿಗೆ ಹಗುರದಿಂದ ಕೂಡಿದ ಮಳೆಯಾಗಲಿದೆ ಎಂದು ಸೂಚಿಸುತ್ತದೆ. ಮುಖ್ಯವಾಗಿ ಸಂಜೆ ಅಥವಾ ರಾತ್ರಿ ಮಳೆ ಸುರಿಯುವ ಮುನ್ಸೂಚನೆ ಇದೆ. ಮುಂದಿನ ಎರಡು ದಿನಗಳಲ್ಲಿ ತಾಪಮಾನವು ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಬೇಸಿಗೆಯ ಮಳೆಯಿಂದ ಜನ ಖುಷ್, ಕೆಲವೆಡೆ ಜನಜೀವನ ಅಸ್ತವ್ಯಸ್ತ
ಶುಕ್ರವಾರ (ಮೇ 10) ಸುರಿದ ಧಾರಾಕಾರ ಮಳೆಯಿಂದ ಹಲವು ರಸ್ತೆಗಳು ಉಕ್ಕಿ ಹರಿದು ಸಂಪೂರ್ಣವಾಗಿ ಜಲಾವೃತವಾಗಿದ್ದವು. ಕೆಲವೊಂದು ಕಡೆ ರಾತ್ರಿಯ ಸಂಚಾರ ಸ್ಥಗಿತಗೊಂಡಿತ್ತು. ಬಿರುಗಾಳಿ ಸಹಿತ ಮಳೆಗೆ ಮರಗಳು ಬುಡಮೇಲಾಗಿವೆ. ತೀವ್ರ ಪ್ರವಾಹದ ಪರಿಸ್ಥಿತಿಯಿಂದಾಗಿ ಹಲವಾರು ಪ್ರದೇಶಗಳಲ್ಲಿ ಸಂಚಾರ ಸ್ಥಗಿತಗೊಂಡಿದತ್ತು. ನಗರದ ಮಂದಿ ಗುಡುಗು ಸಹಿತ ಮಳೆಯ ವಿಡಿಯೊಗಳು ಮತ್ತು ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಡಾ.ರಾಜ್ ಕುಮಾರ್ ಸ್ಮಾರಕದ ಬಳಿ ತಡರಾತ್ರಿ ಮಳೆಯ ಆರ್ಭಟ ಆರಂಭವಾಗಿದೆ. ನಗರದ ಉತ್ತರ, ಸಿಬಿಡಿ ಮತ್ತು ಪಶ್ಚಿಮ ಭಾಗಗಳಲ್ಲಿ ಸಣ್ಣ ಪಾಪ್ ಅಪ್ ಗಳು. ಈಶಾನ್ಯ ಭಾರತದಿಂದ ನಗರವನ್ನು ಪ್ರವೇಶಿಸುವ ಅಂಚಿನಲ್ಲಿ ಒಂದು ತೀವ್ರವಾದ ಗುಡುಗು ಮಿಂಚು ಇದೆ. ಅಂಗಡಿಯಲ್ಲಿ ಏನಿದೆ ಎಂದು ನೋಡೋಣ" ಎಂದು ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.
"ಈ ಮಳೆಯನ್ನು ನಾವು ಏನೆಂದು ಕರೆಯುತ್ತೇವೆ? ಜ್ಞಾನಭಾರತಿಯಲ್ಲಿ ನಿರಂತರ ಗುಡುಗು ಸಹಿತ ನಂಬಲಾಗದ ಮಳೆ" ಎಂದು ಮತ್ತೊಬ್ಬರು ಹಂಚಿಕೊಂಡಿದ್ದಾರೆ.
"ಹೆಬ್ಬಾಳ ಮಾರ್ಗದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ನೀರು ನಿಂತಿದೆ" ಎಂದು ಮತ್ತೊಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಒಟ್ಟಾರೆಯಾಗಿ ಬಿಸಿಲಿಗೆ ತತ್ತರಿಸಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಜನರಿಗೆ ವರುಣ ತಂಪೆರೆದಿದ್ದಾನೆ. ಇನ್ನೂ ನಾಲ್ಕೈದು ದಿನ ಮಳೆಯ ಮುನ್ಸೂಚನೆ ಇರುವುದರಿಂದ ಬಿಬಿಎಂಪಿ ಎಚ್ಚೆತ್ತುಕೊಂಡಿದೆ.