Breakfast Recipes: ಬೆಳಗ್ಗೆ ಎದ್ದ ಕೂಡಲೇ ಆಲಸ್ಯ ಅನ್ನಿಸ್ತಿದ್ಯಾ; ಇಡೀ ದಿನ ಲವಲವಿಕೆಯಿಂದ ಇರಲು ಈ ಬ್ರೇಕ್‌ಫಾಸ್ಟ್‌ಗಳನ್ನು ಸೇವಿಸಿ
Mar 28, 2024 07:00 AM IST
ಬೆಳಗಿನ ಉಪಹಾರಕ್ಕೆ ಶಕ್ತಿಯುತ ಆಹಾರಗಳು
Breakfast Recipes: ಬೆಳಗ್ಗೆ ನಮ್ಮ ದೇಹದಲ್ಲಿ ಶಕ್ತಿ ಸಂಗ್ರಹವಾಯ್ತು ಎಂದರೆ ಇಡೀ ದಿನ ನಾವು ಲವ ಲವಿಕೆಯಿಂದ ಇರುತ್ತೇವೆ. ಹೀಗಾಗಿ ಬೆಳ್ಳಂ ಬೆಳಗ್ಗೆ ನಿಮ್ಮ ದೇಹಕ್ಕೆ ಅಪಾರ ಪ್ರಮಾಣದ ಶಕ್ತಿಯನ್ನು ತಂದುಕೊಂಡುವಂತಹ ಆರೋಗ್ಯಕರವಾದ ಉಪಹಾರಗಳನ್ನು ತಯಾರಿಸುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
Breakfast Recipes: ಕೆಲವೊಮ್ಮೆ ನಿದ್ದೆ ಸರಿಯಾಗಿ ಮಾಡದಿದ್ದಾಗ ಹಾಸಿಗೆಯಿಂದ ಮೇಲೆಳಲು ಮನಸ್ಸು ಬರುವುದೇ ಇಲ್ಲ. ನಮ್ಮ ನಿದ್ರೆಯ ಗುಣಮಟ್ಟವು ನಮ್ಮ ದೇಹದ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಅದೇ ರೀತಿ ನಮ್ಮ ಶಕ್ತಿಯ ಮೇಲೆ ಪರಿಣಾಮ ಬೀರುವ ಇನ್ನೊಂದು ಪ್ರಮುಖ ಅಂಶವೆಂದರೆ ನಾವು ಸೇವಿಸುವ ಆಹಾರ.
ನಾವು ಸೇವಿಸುವ ಆಹಾರವು ದಿನವಿಡೀ ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತಲೇ ಇರುತ್ತದೆ. ಆರೋಗ್ಯಕರವಾದ ಉಪಹಾರಗಳು ನಿಮ್ಮ ದೇಹಕ್ಕೆ ಅಗತ್ಯವಾದ ಕಾರ್ಬೋಹೈಡ್ರೇಟ್‌ಗಳು, ಪ್ರೊಟೀನ್ ಹಾಗೂ ಆರೋಗ್ಯಕರ ಕೊಬ್ಬುಗಳನ್ನು ಒದಗಿಸುತ್ತದೆ. ಹೀಗಾಗಿ ನಿಮ್ಮ ದೇಹಕ್ಕೆ ಸರಿಯಾದ ರೀತಿಯಲ್ಲಿ ಶಕ್ತಿಯನ್ನು ಪಡೆದುಕೊಳ್ಳಲು ಬೆಳಗ್ಗೆ ಉಪಹಾರಕ್ಕೆ ನೀವು ಯಾವೆಲ್ಲ ಆಹಾರ ಸೇವನೆ ಮಾಡಬಹುದು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ ನೋಡಿ.
1.ಅಕ್ಕಿ-ಹೆಸರುಬೇಳೆ ಇಡ್ಲಿ
ಬೇಕಾಗುವ ಸಾಮಗ್ರಿಗಳು
1/2 ಕಪ್ ಅಕ್ಕಿ
1/4 ಚಮಚ ಮೆಂತ್ಯ
1/2 ಕಪ್ ಹೆಸರು ಬೇಳೆ
1/2 ಕಪ್ ತುರಿದ ಕ್ಯಾರೆಟ್
1/2 ಕಪ್ ಕತ್ತರಿಸಿದ ಈರುಳ್ಳಿ
ಉಪ್ಪು
ಮಾಡುವ ವಿಧಾನ
ಬೇಳೆ, ಅಕ್ಕಿ ಮತ್ತು ಮೆಂತ್ಯಯನ್ನು 2 ಗಂಟೆಗಳ ಕಾಲ ನೆನೆಸಿ.
ಬಳಿಕ ಇವುಗಳನ್ನು ರುಬ್ಬಿಕೊಂಡು ಪೇಸ್ಟ್ ರೀತಿ ಮಾಡಿಕೊಳ್ಳಿ.
ಈರುಳ್ಳಿ, ಕ್ಯಾರೆಟ್ ಮತ್ತು ಉಪ್ಪು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ತನ್ನಿ.
ಇಡ್ಲಿ ಮೇಕರ್‌ನಲ್ಲಿ 10 ನಿಮಿಷಗಳ ಕಾಲ ಅವುಗಳನ್ನು ಬೇಯಿಸಿ.
2. ಜೋಳದ ಉಪ್ಪಿಟ್ಟು
ಬೇಕಾಗುವ ಸಾಮಗ್ರಿಗಳು
2 ಚಮಚ ಎಣ್ಣೆ
1 ಕಪ್ ಜೋಳದ ಹಿಟ್ಟು
1 ಚಮಚ ಸಾಸಿವೆ
1/4 ಚಮಚ ಇಂಗು
½ ಕಪ್ ಬೇಯಿಸಿದ ಬಟಾಣಿ
½ ಕಪ್ ಈರುಳ್ಳಿ
½ ಕಪ್ ರವೆ
2 ಚಮಚ ಹಸಿರು ಮೆಣಸಿನಕಾಯಿ ಪೇಸ್ಟ್
ಉಪ್ಪು
ಮಾಡುವ ವಿಧಾನ
ಸಾಸಿವೆ ಹಾಗೂ ಇಂಗನ್ನು ಹುರಿದುಕೊಂಡು ಬಳಿಕ ಇದಕ್ಕೆ ಈರುಳ್ಳಿಯನ್ನು ಸೇರಿಸಿ ಹುರಿದುಕೊಳ್ಳಿ. ಇದಾದ ಬಳಿಕ ಜೋಳದ ಹಿಟ್ಟು ಹಾಗೂ ರವೆಯನ್ನು ಹಾಕಿ.
ಹಸಿ ಮೆಣಸಿನ ಕಾಯಿ ಪೇಸ್ಟ್, ಬಟಾಣಿಯನ್ನು ನೀರಿನಲ್ಲಿ ಹಾಕಿ ಬೇಯಿಸಿಕೊಳ್ಳಿ. ಬಳಿಕ ಇದೇ ನೀರಿಗೆ ಜೋಳದ ಹಿಟ್ಟು , ರವೆಯ ಮಿಶ್ರಣವನ್ನು ಹಾಕಿ. ಉಪ್ಪಿಟ್ಟಿನ ಹದಕ್ಕೆ ಬರುವವರೆಗೂ ಬೇಯಿಸಿ.
3. ಗೋಧಿ ಬಟಾಣಿ ಪರೋಠಾ
ಬೇಕಾಗುವ ಸಾಮಗ್ರಿಗಳು
½ ಕಪ್ ಗೋಧಿ ಹಿಟ್ಟು
1 ಚಮಚ ಕತ್ತರಿಸಿದ ಹಸಿರು ಮೆಣಸಿನಕಾಯಿಗಳು
½ ಕಪ್ ಬೇಯಿಸಿದ ಹಸಿರು ಬಟಾಣಿ
1 ಚಮಚ ಮೊಸರು
1/8 ಚಮಚ ಓಮ
ಉಪ್ಪು
¼ ಚಮಚ ಎಣ್ಣೆ
ಮಾಡುವ ವಿಧಾನ
ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಗೆ ಹಾಕಿಕೊಂಡು ಪರೋಠಾ ಹದಕ್ಕೆ ಹಿಟ್ಟನ್ನು ತಯಾರಿಸಿಕೊಳ್ಳಿ.
ಈಗ ಪರೋಠಾಗಳನ್ನು ಲಟ್ಟಿಸಿಕೊಂಡು ಅವುಗಳು ಹೊಂಬಣ್ಣಕ್ಕೆ ತಿರುಗುವವರೆಗೂ ಚೆನ್ನಾಗಿ ತವಾದಲ್ಲಿ ಎಣ್ಣೆ ಹಾಕಿ ಬೇಯಿಸಿ.
4. ಓಟ್ಸ್ ಉಪ್ಪಿಟ್ಟು
ಬೇಕಾಗುವ ಸಾಮಗ್ರಿಗಳು
1 ಕಪ್ ಓಟ್ಸ್
1 ಈರುಳ್ಳಿ
¾ ಕಪ್ ಮಿಶ್ರ ತರಕಾರಿಗಳು
3 ಹಸಿ ಮೆಣಸಿನಕಾಯಿಗಳು
½ ಕಪ್ ನೀರು
ಉಪ್ಪು
1 ಟೀ ಚಮಚ ತೆಂಗಿನ ಎಣ್ಣೆ
1 ಚಮಚ ಸಾಸಿವೆ
ಮಾಡುವ ವಿಧಾನ
ಎಲ್ಲಾ ಮಸಾಲಾ ಪದಾರ್ಥಗಳನ್ನು ಹುರಿದುಕೊಂಡು ಇದಕ್ಕೆ ಈರುಳ್ಳಿಯನ್ನು ಸೇರಿಸಿ.
ಈರುಳ್ಳಿ ಹೊಂಬಣಕ್ಕೆ ತಿರುಗಿದ ಬಳಿಕ ನೀರನ್ನು ಹಾಕಿ , ಇದಕ್ಕೆ ಉಪ್ಪನ್ನು ಸೇರಿಸಿ ತರಕಾರಿಯನ್ನು ಬೇಯಿಸಿಕೊಳ್ಳಿ.
ತರಕಾರಿ ಮುಕ್ಕಾಲು ಭಾಗ ಬೆಂದ ಬಳಿಕ ಇದಕ್ಕೆ ಓಟ್ಸ್ ಸೇರಿಸಿ ಉಪ್ಪಿಟ್ಟಿನ ಹದಕ್ಕೆ ಬರುವವರೆಗೂ ಚೆನ್ನಾಗಿ ಬೇಯಿಸಿಕೊಳ್ಳಿ.
5. ಬೀಟ್‌ರೂಟ್ ದೋಸೆ
ಬೇಕಾಗುವ ಸಾಮಗ್ರಿಗಳು
2 ಕಪ್ ಇಡ್ಲಿ/ ದೋಸೆ ಹಿಟ್ಟು
1 ಸಣ್ಣ ಬೀಟ್‌ರೂಟ್
2 ಕೆಂಪು ಮೆಣಸಿನಕಾಯಿಗಳು
½ ಟೀ ಚಮಚ ಜೀರಿಗೆ
⅛ ಟೀ ಚಮಚ ಇಂಗು
ಅಡುಗೆ ಎಣ್ಣೆ
ಮಾಡುವ ವಿಧಾನ
ಜೀರಿಗೆ, ಇಂಗು, ಮೆಣಸಿನಕಾಯಿಯನ್ನು ಹುರಿದುಕೊಂದು ಬಳಿಕ ಮತ್ತು ಬೀಟ್‌ರೂಟ್ ಸೇರಿಸಿ ರುಬ್ಬಿಕೊಳ್ಳಿ.
ಈಗ ದೋಸೆ ಹಿಟ್ಟಿಗೆ ಈ ಪೇಸ್ಟ್ ಸೇರಿಸಿ.
ಈಗ ಹೆಂಚಿನ ಮೇಲೆ ಬೀಟ್‌ರೂಟ್ ದೋಸೆ ಮಾಡಿಕೊಂಡು ಸವಿಯಿರಿ.
6. ಮಲ್ಟಿಗ್ರೇನ್ ಪರೋಠಾ
ಬೇಕಾಗುವ ಸಾಮಗ್ರಿಗಳು
1 ಕಪ್ ಗೋಧಿ ಹಿಟ್ಟು
ರಾಗಿ, ಜೋಳದ ಹಿಟ್ಟು ಮತ್ತು ಓಟ್ಸ್ ಹಿಟ್ಟು ತಲಾ 1 ಚಮಚ
ಉಪ್ಪು
ನೀರು
ತುಪ್ಪ
ಮಾಡುವ ವಿಧಾನ
ಎಲ್ಲಾ ಹಿಟ್ಟುಗಳನ್ನು ಮಿಶ್ರಣ ಮಾಡಿಕೊಳ್ಳಿ. ಬಳಿಕ ಅವುಗಳನ್ನು ಪರೋಠಾದ ಆಕೃತಿಗೆ ತನ್ನಿ.
ದೋಸೆ ಹೆಂಚಿನ ಮೇಲೆ ತುಪ್ಪವನ್ನು ಸವರಿ ಪರೋಠಾಗಳನ್ನು ಹೊಂಬಣ್ಣ ಬರುವವರೆಗೂ ಕಾಯಿಸಿ.
8. ಮೊಟ್ಟೆ ಪರೋಠಾ
ಬೇಕಾಗುವ ಸಾಮಗ್ರಿಗಳು
2 ಕಪ್ ಗೋಧಿ ಹಿಟ್ಟು
3 ಮೊಟ್ಟೆಗಳು
1 ಈರುಳ್ಳಿ
3 ಹಸಿ ಮೆಣಸಿನಕಾಯಿಗಳು
1 ದೊಡ್ಡ ಮೆಣಸಿನಕಾಯಿ
½ ಟೀ ಚಮಚ ಜೀರಿಗೆ
1/4 ಟೀಚಮಚ ಇಂಗು
ಅಡುಗೆ ಎಣ್ಣೆ
2 ತುರಿದ ಕ್ಯಾರೆಟ್
ಮಾಡುವ ವಿಧಾನ
ಗೋಧಿ ಹಿಟ್ಟಿನಿಂದ ಚಪಾತಿ ಹಿಟ್ಟನ್ನು ತಯಾರಿಸಿಕೊಂಡು ಚಪಾತಿ ಲಟ್ಟಿಸಿಕೊಳ್ಳಿ.
ಚಪಾತಿ ಮಧ್ಯ ಭಾಗಕ್ಕೆ ಬೇಯಿಸಿ ಬುರ್ಜಿ ಮಾಡಿದ ಮೊಟ್ಟೆ, ಮೆಣಸಿನಕಾಯಿ, ಈರುಳ್ಳಿ, ದೊಡ್ಡಮೆಣಸು ಹಾಗೂ ಕ್ಯಾರೆಟ್ ಮಿಶ್ರಣದಿಂದ ತಯಾರಿಸಿದ ಹೂರಣವನ್ನು ಸೇರಿಸಿ ಮತ್ತೊಮ್ಮೆ ಲಟ್ಟಿಸಿಕೊಳ್ಳಿ.
ಈಗ ಸ್ವಲ್ಪ ಎಣ್ಣೆ ಸೇರಿಸಿ ಚಪಾತಿ ಬೇಯಿಸಿಕೊಳ್ಳಿ.
ವಿಭಾಗ