Ice cream Recipes: ಸೇಬು, ಸಪೋಟಾ ಬಳಸಿ ಮನೆಯಲ್ಲೇ ತಯಾರಿಸಿ ಬಾಯಲ್ಲಿ ನೀರೂರಿಸುವ ರುಚಿ ರುಚಿಯಾದ ಐಸ್‌ಕ್ರೀಮ್
Ice Cream Recipes: ಬಿಸಿಲಿನ ಧಗೆಯಿಂದ ಪಾರಾಗಲು ನಾವೆಲ್ಲಾ ಎಳನೀರು, ಜ್ಯೂಸ್, ಐಸ್‌ಕ್ರೀಮ್‌ಗಳ ಮೊರೆ ಹೋಗುತ್ತೇವೆ. ಒಂದು ವೇಳೆ ನೀವು ಮನೆಯಲ್ಲೇ ಐಸ್‌ಕ್ರೀಮ್ ತಯಾರಿಸಬೇಕು ಎಂದುಕೊಂಡಿದ್ದರೆ ಇಲ್ಲಿ ಅತ್ಯಂತ ಸುಲಭವಾಗಿ ಹಾಗೂ ಕಡಿಮೆ ಪದಾರ್ಥಗಳಲ್ಲಿ ತಯಾರಿಸಬಹುದಾದ ರೆಸಿಪಿಗಳಿವೆ.
Ice Cream Recipes: ಬೇಸಿಗೆಕಾಲ ಅದಾಗಲೇ ಶುರುವಾಗಿಬಿಟ್ಟಿದೆ. ಎಷ್ಟು ನೀರು ಕುಡಿದರೂ ಬಿಸಿಲಿನ ಧಗೆ ಕಡಿಮೆ ಎನಿಸುವುದೇ ಇಲ್ಲ. ಈ ಸಮಯದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವೆಗೂ ಐಸ್ ಕ್ರೀಮ್ ಸವಿಯಲು ಇಷ್ಟಪಡುತ್ತಾರೆ. ಪ್ರತಿ ಬಾರಿಯೂ ಅಂಗಡಿಯಿಂದ ಐಸ್ ಕ್ರೀಂಗಳನ್ನು ತಂದು ತಿನ್ನುವುದು ಎಂದರೆ ಅದು ಆಗಿ ಹೋಗುವ ಮಾತಲ್ಲ. ಹೀಗಾಗಿ ಮನೆಯಲ್ಲಿ ಅತ್ಯಂತ ಸುಲಭವಾಗಿ ಆರೋಗ್ಯಕ್ಕೂ ಹಿತ ಎನಿಸುವಂತಹ ನ್ಯಾಚುರಲ್ ಐಸ್‌ಕ್ರೀಮ್ ತಯಾರಿಸುವುದು ಹೇಗೆ ನೋಡೋಣ.
1. ಸ್ಟಫ್ ಸೇಬು ಹಣ್ಣಿನ ಐಸ್ ಕ್ರೀಂ
ಬೇಕಾಗುವ ಸಾಮಗ್ರಿಗಳು : ಸೇಬು ಹಣ್ಣು 1 ದೊಡ್ಡದು, ಕಂಡೆನ್ಸಡ್ ಹಾಲು(ಮಾರುಕಟ್ಟೆಗಳಲ್ಲಿ ಸಿಗುತ್ತದೆ) 50 ಮಿ.ಲೀ, ಗೋಡಂಬಿ 20 ಗ್ರಾಂ, ಪುದೀನಾ ಎಲೆಗಳು : 4, ಕ್ರೀಂ ಮಿಲ್ಕ್ (ಮಾರುಕಟ್ಟೆಯಲ್ಲಿ ಸಿಗುತ್ತದೆ) 500 ಮಿ.ಲೀ, ಬಾದಾಮಿ 20 ಗ್ರಾಂ, ಸಕ್ಕರೆ 50 ಗ್ರಾಂ
ಮಾಡುವ ವಿಧಾನ
ಒಂದು ತಾಜಾ ಸೇಬುಹಣ್ಣನ್ನು ತೆಗೆದುಕೊಂಡು ಮಧ್ಯಭಾಗದಿಂದ ಚಮದ ಸಹಾಯದಿಂದ ಒಳಗಿನ ತಿರುಳುಗಳನ್ನು ನಿಧಾನವಾಗಿ ತೆಗೆಯಿರಿ.
ಹಾಲನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಹಾಲು 1/3ನೇ ಭಾಗಕ್ಕೆ ಬರುವವರೆಗೂ ಕುದಿಸುತ್ತಲೇ ಇರಿ. ಹಾಲಿಗೆ ಸಕ್ಕರೆ ಹಾಕಿ ಕೆಲವು ಸಮಯದವರೆಗೆ ಕುದಿಸಿ. ಈಗ ಹಾಲು ಗಟ್ಟಿಯಾಗುತ್ತದೆ. ಈಗ ಹಾಲಿಗೆ ಕಂಡೆನ್ಸಡ್ ಹಾಲು ಹಾಕಿ ಇನ್ನೂ 2 ನಿಮಿಷಗಳ ಕಾಲ ಕುದಿಸಿ.
ಈಗ ಈ ಹಾಲು ತಣ್ಣಗಾದ ಬಳಿಕ ಇದನ್ನು ಸೇಬು ಹಣ್ಣಿನ ಮೇಲೆ ಹಾಕಿ ಅದನ್ನು ಫ್ರೀಜ್ ಮಾಡಿ. ಐದು ಗಂಟೆಗಳ ಕಾಲವಾದರೂ ನೀವು ಇದನ್ನು ಫ್ರೀಜರ್‌ನಲ್ಲಿ ಇಡಬೇಕು. ಇದಾದ ಬಳಿಕ ನೀವು ಮೇಲೆ ಪುದೀನಾ ಎಲೆಯನ್ನು ಅಲಂಕರಿಸಿ ಕುಟುಂಬದವರಿಗೆ ಸವಿಯಲು ಕೊಡಿ.
2. ಚಿಕ್ಕೂ ಐಸ್ ಕ್ಯಾಂಡಿ
ಬೇಕಾಗುವ ಸಾಮಗ್ರಿಗಳು : ಸಪೋಟಾ 4, ಹಾಲು 1ಕಪ್, ಮೊಸರು 1 ಕಪ್, ಚಿಯಾ ಬೀಜಗಳು 2 ಚಮಚ, ಪುಡಿ ಮಾಡಿದ ಸಕ್ಕರೆ 4 ಚಮಚ
ಮಾಡುವ ವಿಧಾನ
ಸಪೋಟಾ ಹಣ್ಣಿನ ಸಿಪ್ಪೆಗಳನ್ನು ಸುಲಿದು ಬೀಜಗಳನ್ನು ತೆಗೆಯಿರಿ. ಇದಾದ ಬಳಿಕ ಹಣ್ಣುಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಆದಷ್ಟು ಮಾಗಿದ ಚಿಕ್ಕೂ ಹಣ್ಣುಗಳನ್ನೇ ಇದಕ್ಕೆ ಆಯ್ಕೆ ಮಾಡಿಕೊಳ್ಳಿ. ಆಗ ಮಾತ್ರ ನಿಮ್ಮ ಐಸ್ ಕ್ಯಾಂಡಿ ರುಚಿಯಾಗಿ ಬರಲು ಸಾಧ್ಯವಿದೆ.
ಈಗ ಚಿಕ್ಕೂ ಹಣ್ಣಿನ ತುಂಡುಗಳನ್ನು ಚೆನ್ನಾಗಿ ಬ್ಲೆಂಡ್ ಮಾಡಿಕೊಳ್ಳಿ. ಚಿಕ್ಕೂ ಹಣ್ಣಿನ ಪ್ಯೂರಿಗೆ ಹಾಲು, ಮೊಸರು, ಸಕ್ಕರೆ ಹಾಗೂ ಚಿಯಾ ಬೀಜಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ
ಮೊದಲೇ ರೆಫ್ರಿಜರೇಟರ್‌ನಲ್ಲಿ ಫ್ರೀಜ್ ಮಾಡಿಟ್ಟ ಐಸ್ ಕ್ಯಾಂಡಿ ಅಚ್ಚುಗಳಿಗೆ ಈ ಮಿಶ್ರಣವನ್ನು ಹಾಕಿ ಡೀಪ್ ಫ್ರೀಜರ್‌ನಲ್ಲಿಡಿ. ಹಿಂದಿನ ದಿನ ಐಸ್‌ಕ್ರೀಮ್ ತಯಾರಿಸಿ ಮಾರನೇ ದಿನ ಫ್ರಿಡ್ಜ್‌ನಿಂದ ತೆಗೆದು ತಿಂದರೆ ಐಸ್‌ಕ್ಯಾಂಡಿ ಸಖತ್ ರುಚಿಯಾಗಿ ಇರುತ್ತದೆ.
ವಿಭಾಗ