Rice Leftover Recipes: ಮಿಕ್ಕುಳಿದ ಅನ್ನದ ಕುರಿತು ಚಿಂತೆ ಏಕೆ, ಬಾಕಿ ಉಳಿದ ಅನ್ನದಿಂದ ಈ 5 ರೆಸಿಪಿ ಟ್ರೈ ಮಾಡಿ
Rice Leftover Recipes: ಬಾಕಿ ಉಳಿದ ಅನ್ನದಿಂದ ದೋಸೆ ಮಾಡಬಹುದು. ಪಕೋಡ, ಕಟ್ಲೆಟ್ ಮಾಡಬಹುದು. ಚಿತ್ರಾನ್ನ, ಪುಳಿಯೊಗರೆ, ನಿಂಬೆ ಅನ್ನ ಸೇರಿದಂತೆ ಬಗೆಬಗೆಯ ಅಡುಗೆ ಮಾಡಬಹುದು.
ಸಾಮಾನ್ಯವಾಗಿ ಮನೆಯಲ್ಲಿ ಎಲ್ಲರೂ ಊಟ ಮಾಡಿದ ಬಳಿಕ ಅನ್ನ ಉಳಿದೇ ಉಳಿಯುತ್ತದೆ. ಈ ರೀತಿ ಮಿಕ್ಕುಳಿದ ಅನ್ನವನ್ನು ಏನು ಮಾಡಬಹುದು ಎಂಬ ಚಿಂತೆ ಸಾಕಷ್ಟು ಜನರಲ್ಲಿ ಇರುತ್ತದೆ. ಚಿತ್ರಾನ್ನ ಮಾಡಬಹುದು, ಪುಳಿಯೋಗರೆ ಮಾಡಬಹುದು ಎಂದು ತಿಳಿದಿರುವ ನೀವು ಪ್ರತಿದಿನ ಅದನ್ನೇ ಮಾಡಿದರೆ ಮನೆಯಲ್ಲಿ ಮಕ್ಕಳು ಮುಖ ಊದಿಸಿಕೊಳ್ಳಬಹುದು. ಮಿಕ್ಕುಳಿದ ಅನ್ನದಿಂದ ಮಾಡಬಹುದಾದ ವಿವಿಧ ಬಗೆಯ ತಿಂಡಿ ತಿನಿಸುಗಳ ವಿವರ ಇಲ್ಲಿದೆ.
ಬಾಕಿ ಉಳಿದ ಅನ್ನದಿಂದ ದೋಸೆ ಮಾಡಿ
ರುಚಿಕರವಾದ ಗರಿಗರಿಯಾದ ದೋಸೆಯನ್ನು ಬಾಕಿ ಉಳಿದ ಅನ್ನದಿಂದ ಮಾಡಬಹುದು. ಇದಕ್ಕಾಗಿ ಒಂದು ಕಪ್ ರವೆ ತೆಗೆದುಕೊಳ್ಳಿ. ಮಿಕ್ಕುಳಿದ ಅನ್ನ ಒಂದೂವರೆ ಕಪ್ ಇರಲಿ. ಹುಳಿ ಮೊಸರು ಒಂದು ಕಪ್, ರುಚಿಗೆ ಉಪ್ಪು, ಅಡುಗೆ ಸೋಡ ಇರಲಿ. ಬ್ಲೆಂಡರ್ ಮಿಕ್ಸಿ ಜಾರ್‌ನ ನೆರವಿನಿಂದ ರವೆಯನ್ನು ಪುಡಿಪುಡಿ ಮಾಡಿ. ಅದೇ ಜಾರ್‌ಗೆ ಅನ್ನ ಹಾಕಿ ರುಬ್ಬಿ. ಬಳಿಕ ಒಂದು ಕಪ್ ಮೊಸರು ಹಾಕಿ, ಕೆಲವು ಸೆಕೆಂಡ್ ರುಬ್ಬಿ. ಕಾಳು ಕಪ್ ನೀರು ಸೇರಿಸಿ ರುಬ್ಬಿ. ಈ ಹಿಟ್ಟನ್ನು ಪಾತ್ರೆಗೆ ಹಾಕಿ ಮುಚ್ಚಲ ಮುಚ್ಚಿ. ಒಂದು ಹತ್ತು ನಿಮಿಷ ಹಾಗೆಯೇ ಇಡಿ. ಇದಾದ ಬಳಿಕ ಅಡುಗೆ ಸೋಡ ಕೊಂಚ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಪ್ಯಾನ್‌ನಲ್ಲಿ ದೋಸೆ ಮಾಡಿ. ದೋಸೆಯ ಮೇಲೆ ಕೊಂಚ ತುಪ್ಪ ಹಾಕಿದರೆ ವಾಹ್ ಎನಿಸಬಹುದು.
ಪಕೋಡಾ ಮಾಡಿ
ಒಂದು ಕಪ್ ರೈಸ್ ತೆಗೆದುಕೊಲ್ಳಿ. ಅದನ್ನು ಚಮಚ ಅಥವಾ ಕೈಯಿಂದ ಹಿಸುಕಿ. ಚೆನ್ನಾಗಿ ಬೆಂದ ಅನ್ನ ಇದ್ದರೆ ಉತ್ತಮ. ಗಟ್ಟಿ ಇದ್ದರೆ ಸ್ವಲ್ಪ ಹೊತ್ತು ಬೇಯಿಸಿ. ಈ ಅನ್ನದ ಮುದ್ದೆಗೆ 5 ಟೇಬಲ್ ಚಮಚ ಕಾಳು ಹಿಟ್ಟು ಅಥವಾ ಬೀಸನ್, ಒಂದು 1 ಮಧ್ಯಮ ಗಾತ್ರದ ಸಣ್ಣದಾಗಿ ಕೊಚ್ಚಿದ ಈರುಳ್ಳಿ (ಅಥವಾ ½ ಕಪ್ ಸಣ್ಣದಾಗಿ ಕೊಚ್ಚಿದ ಈರುಳ್ಳಿ) , 1 ಇಂಚು ಸಣ್ಣದಾಗಿ ಕೊಚ್ಚಿದ ಅಥವಾ ತುರಿದ ಶುಂಠಿ, 1 ಕತ್ತರಿಸಿದ ಹಸಿರು ಮೆಣಸಿನಕಾಯಿ (ಅಥವಾ ½ ಟೀಚಮಚ ಕೆಂಪು ಮೆಣಸಿನ ಪುಡಿ) , ¼ ಕಪ್ ಕತ್ತರಿಸಿದ ಕೊತ್ತಂಬರಿ ಸೊಪ್ಪು, ½ ಟೀಚಮಚ ಕೇರಂ ಬೀಜಗಳು ( ಅಜ್ವೈನ್) (ಬಳಸದೆ ಇದ್ದರೂ ಪರವಾಗಿಲ್ಲ), ½ ಟೀಚಮಚ ಜೀರಿಗೆ ಪುಡಿ, ½ ಟೀಚಮಚ ಕೊತ್ತಂಬರಿ ಪುಡಿ, ¼ ಟೀಚಮಚ ಅರಿಶಿನ ಪುಡಿ, 1 ಚಿಟಿಕೆ ಇಂಗು (ಹಿಂಗ್) ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.ಇದನ್ನು ಚೆನ್ನಾಗಿ ಮಿಶ್ರ ಮಾಡಿ ಐದತ್ತು ನಿಮಿಷ ಇಡಿ. ಈರುಳ್ಳಿ ನೀರು ಬಿಟ್ಟಿರುತ್ತದೆ. ಈಗ ಸ್ವಲ್ಪ ನೀರು ಸೇರಿಸಿ. ಸಣ್ಣ ಸಣ್ಣ ಉಂಡೆ ಮಾಡಿ ಎಣ್ಣೆಯಲ್ಲಿ ಫ್ರೈ ಮಾಡಿ.
ಮಿಕ್ಕುಳಿದ ಅನ್ನದಿಂದ ಕಟ್ಲೆಟ್ ಮಾಡಿ
ಅನ್ನ ಬಾಕಿಯಾಗಿದೆ ಎಂದು ಚಿತ್ರಾನ್ನ, ಪುಳಿಯೊಗರೆ ಮಾಡುವುದು ಬೇಡ ಎಂದಾದರೆ, ವಿಶೇಷವಾಗಿ ಮನೆಯಲ್ಲಿ ಮಕ್ಕಳು ಇದ್ದರೆ ಅವರಿಗೆ ರುಚಿಯಾದ ಕಟ್ಲೆಟ್ ಮಾಡಿ ಕೊಡಬಹುದು. ಎರಡು ಬೇಯಿಸಿದ ಆಲೂಗಡ್ಡೆ, ಒಂದು ಕಪ್ ಅನ್ನ ಇರಲಿ. ಜತೆಗೆ ಕಡಲೆ ಬೇಯಿರಿ. ಇದನ್ನು ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸು, ಕೊಂಚ ಮೆಣಸಿನ ಪುಡಿ, ಸ್ವಲ್ಪ ಉಪ್ಪು, ಜೀರಿಗೆ ಪುಡಿ ಇತ್ಯಾದಿಗಳನ್ನು ಹಾಕಿ ಹಿಟ್ಟು ಮಾಡಿ. ಬಳಿಕ ಇದನ್ನು ಸಣ್ಣ ಉಂಡೆ ಮಾಡಿ. ಬಳಿಕ ಇದನ್ನು ಕಟ್ಲೆಟ್ ಆಕಾರಕ್ಕೆ ಚಪ್ಪಟೆ ಮಾಡಿ. ಮಕ್ಕಳಿಗೆ ಇಷ್ಟವಾದ ಆಕಾರ ಮಾಡಿ ಎಣ್ಣೆಯಲ್ಲಿ ಫ್ರೈ ಮಾಡಿ.
ಚಿತ್ರಾನ್ನ ಮಾಡಿ
ಬಾಕಿ ಉಳಿದ ಅನ್ನದಿಂದ ಬಹುತೇಕರು ಚಿತ್ರಾನ್ನ ಮಾಡುತ್ತಾರೆ. ಮೊದಲಿಗೆ ಉಳಿದ ಅನ್ನವನ್ನು ಹಬೆಯಲ್ಲಿ ಬಿಸಿಮಾಡಿ. ಹಾಗೆಯೂ ಬಳಸಬಹುದು. ಚಿತ್ರಾನ್ನದ ಒಗ್ಗರಣೆ ಹಾಕಿ ಈ ಅನ್ನವನ್ನು ಬೆರೆಸಿ. ನಿಂಬೆ ಹಾಕಿದರೆ ಲೆಮೆನ್ ರೈಸ್ ಆಗುತ್ತದೆ.
ಪುಳಿಯೊಗರೆ
ಮನೆಯಲ್ಲಿ ಪುಳಿಯೊಗರೆ ಗೊಜ್ಜು ಇದ್ದರೂ ಕೂಡ ಬಾಕಿ ಉಳಿದ ಅನ್ನದಿಂದ ಪುಳಿಯೊಗರೆ ಮಾಡಬಹುದು. ಅಥವಾ ಅಂಗಡಿಗಳಲ್ಲಿ ದೊರಕುವ ಪುಳಿಯೊಗರೆ ಪೌಡರ್ ಬಳಸಬಹುದು.
ಇವು ಉದಾಹರಣೆಯಾಗಿ ನೀಡಿದ ಐದು ರೆಸಿಪಿಗಳು. ಬಾಕಿ ಉಳಿದ ಅನ್ನದಿಂದ ಹೀಗೆ ಹತ್ತು ಹಲವು ಬಗೆಯ ರೆಸಿಪಿಗಳನ್ನು ಮಾಡಬಹುದು. ಅಡುಗೆ ಕುರಿತು ಅಪ್‌ಡೇಟ್ ಪಡೆಯಲು ಹಿಂದೂಸ್ತಾನ್ ಟೈಮ್ಸ್‌ನ ರೆಸಿಪಿ ವಿಭಾಗಕ್ಕೆ ಭೇಟಿ ನೀಡಿ.
ವಿಭಾಗ