ISRO News: ಕಪ್ಪು ಕುಳಿಗಳ ಅಧ್ಯಯನಕ್ಕಾಗಿ ಇಸ್ರೋ ಎಕ್ಸ್‌ಪೋಸ್ಯಾಟ್ ಉಡಾವಣೆ ಇಂದು; ನೇರ ಪ್ರಸಾರದ ವಿವರ ಹೀಗಿದೆ
Jan 01, 2024 05:48 AM IST
ಕಾಸ್ಮಿಕ್ ಎಕ್ಸ್-ಕಿರಣಗಳನ್ನು ಅಧ್ಯಯನ ಮಾಡಲು ಇಸ್ರೋ ತನ್ನ ಐತಿಹಾಸಿಕ ಎಕ್ಸ್‌ಪೋಸ್ಯಾಟ್ ಉಪಗ್ರಹವನ್ನು ಇಂದು ಉಡಾವಣೆ ಮಾಡುತ್ತಿದೆ.
ಕಪ್ಪುಕುಳಿಗಳ ಅಧ್ಯಯನಕ್ಕಾಗಿ ಎಕ್ಸ್‌ಪೋಸ್ಯಾಟ್ ಎಂಬ ಉಪಗ್ರಹವನ್ನು ಇಸ್ರೋ ಇಂದು (ಜ.1) ಬೆಳಗ್ಗೆ 9.10ಕ್ಕೆ ಪಿಎಸ್‌ಎಲ್‌ವಿ ಸಿ -58ರ ಮೂಲಕ ಉಡಾವಣೆ ಮಾಡುತ್ತಿದೆ. ಉಡಾವಣೆಯ ನೇರ ಪ್ರಸಾರವನ್ನು ಎಲ್ಲಿ ಹೇಗೆ ವೀಕ್ಷಿಸುವುದು- ಇಲ್ಲಿದೆ ವಿವರ.
ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈ ವರ್ಷದ ಮೊದಲ ಉಪಗ್ರಹ ಉಡಾವಣೆಯನ್ನು ಇಂದು (ಜ.1) ನೆರವೇರಿಸಲು ಸಿದ್ಧವಾಗಿದೆ. ಕಪ್ಪುಕುಳಿಗಳ ಅಧ್ಯಯನಕ್ಕಾಗಿ ಇರುವ ಎಕ್ಸ್‌ಪೋಸ್ಯಾಟ್ (XPoSat (X-ray Polarimeter Satellite)) ಅನ್ನು ತನ್ನ ಪಿಎಸ್‌ಎಲ್‌ವಿ ಸಿ58 (PSLV-C58) ರಾಕೆಟ್ ಮೂಲಕ ಉಡಾವಣೆ ಮಾಡಲಿದೆ.
ಎಕ್ಸ್‌ಪೋಸ್ಯಾಟ್ ಎಂಬುದು ಭಾರತದ ಮಟ್ಟಿಗೆ ಮೊದಲ ಪೋಲಾರಿಮೆಟ್ರಿ ಮಿಷನ್ ಆಗಿದ್ದು, ಇದು ವಿಪರೀತವೆನಿಸುವ ವಾತಾವರಣದಲ್ಲಿ ಪ್ರಕಾಶಮಾನ ಖಗೋಳ ಎಕ್ಸ್-ರೇ ಮೂಲಗಳ ವಿವಿಧ ಡೈನಾಮಿಕ್ಸ್ ಅನ್ನು ಅಧ್ಯಯನ ಮಾಡಲಿದೆ.
ಎಕ್ಸ್‌ಪೋಸ್ಯಾಟ್ ಅನ್ನು ಪಿಎಸ್‌ಎಲ್‌ವಿ ಸಿ 58 ಮೂಲಕ ಇಂದು (ಜನವರಿ 1) ಬೆಳಗ್ಗೆ 9.10ಕ್ಕೆ ಉಡಾವಣೆ ಮಾಡಲು ಇಸ್ರೋ ಸಜ್ಜಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್‌ನ ಮೊದಲ ಉಡಾವಣಾ ವೇದಿಕೆಯಿಂದ ಈ ಉಪಗ್ರಹ ಉಡಾವಣೆ ನಡೆಯಲಿದೆ.
ಎಕ್ಸ್‌ಪೋಸ್ಯಾಟ್ ಉಡಾವಣೆ ನೇರ ಪ್ರಸಾರ: ಈ ಉಡಾವಣಾ ಕಾರ್ಯದ ನೇರ ಪ್ರಸಾರವನ್ನು ಇಸ್ರೋ ಬೆಳಗ್ಗೆ 8:40ಕ್ಕೆ ಶುರು ಮಾಡಲಿದೆ. ಇದನ್ನು ವೀಕ್ಷಿಸುವುದಕ್ಕೆ ಓದುಗರು ಈ ಕೆಳಗಿನ ಲಿಂಕ್‌ಗಳನ್ನು ಗಮನಿಸಬಹುದು.
1. ಯೂಟ್ಯೂಬ್ - (ಎಕ್ಸ್‌ಪೋಸ್ಯಾಟ್ ಉಡಾವಣೆ ನೇರ ಪ್ರಸಾರದ ವೀಕ್ಷಣೆಗೆ ಇಸ್ರೋ ಯೂಟ್ಯೂಬ್ ಚಾನೆಲ್)
2. ಇಸ್ರೋ ವೆಬ್ಸೈಟ್ (ಎಕ್ಸ್‌ಪೋಸ್ಯಾಟ್ ಉಡಾವಣೆ ನೇರ ಪ್ರಸಾರ ಇಸ್ರೋ ವೆಬ್ಸೈಟ್ನಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ)
3. ಇಸ್ರೋ ಫೇಸ್ಬುಕ್ ಪುಟ(ಎಕ್ಸ್‌ಪೋಸ್ಯಾಟ್ ಉಡಾವಣೆ ನೇರ ಪ್ರಸಾರಕ್ಕೆ ಇಸ್ರೋದ ಫೇಸ್ಬುಕ್ ಖಾತೆಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ)
4. DD National's account on X (ಎಕ್ಸ್‌ಪೋಸ್ಯಾಟ್ ಉಡಾವಣೆ ನೇರ ಪ್ರಸಾರ ದೂರದರ್ಶನದ ಎಕ್ಸ್ ಖಾತೆಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ)
ಎಕ್ಸ್‌ಪೋಸ್ಯಾಟ್ ಕುರಿತಾದ ಒಂದಿಷ್ಟು ಮಾಹಿತಿ
ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಕಪ್ಪು ಕುಳಿಗಳಂತಹ ಆಕಾಶ ವಸ್ತುಗಳ ಒಳನೋಟ ನೀಡುವ ತನ್ನ ಮೊದಲ ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹವನ್ನು ಇಂದು (ಜ.1) ಉಡಾವಣೆ ಮಾಡುತ್ತಿದೆ. ಪಿಎಸ್‌ಎಲ್‌ವಿ ತನ್ನ 60 ನೇ ಮಿಷನ್‌ನಲ್ಲಿ ಪಿಎಸ್‌ಎಲ್‌ವಿ ಸಿ 58 ರಾಕೆಟ್ ಎಕ್ಸ್ ಫೋಸ್ಯಾಟ್ ಮತ್ತು 10 ಇತರ ಉಪಗ್ರಹಗಳನ್ನು ಭೂಮಿಯ ಕಕ್ಷೆಗಳಲ್ಲಿ ನಿಯೋಜಿಸಲು ಯೋಜಿಸಿದೆ.
ಎಕ್ಸ್‌ಪೋ ಸ್ಯಾಟ್ ಅಥವಾ ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹವು ಬಾಹ್ಯಾಕಾಶದಲ್ಲಿ ತೀವ್ರವಾದ ಎಕ್ಸ್- ರೇ ಮೂಲಗಳ ಧ್ರುವೀಕರಣದ ಕುರಿತು ಅಧ್ಯಯನ ಮಾಡುವ ಗುರಿ ಹೊಂದಿದೆ. ಇದು ಆಕಾಶ ಮೂಲಗಳಿಂದ ಎಕ್ಸ್-ರೇ ಹೊರ ಸೂಸುವಿಕೆಯ ಬಾಹ್ಯಾಕಾಶ ಆಧಾರಿತ ಧ್ರುವೀಕರಣ ಮಾಪನಗಳಲ್ಲಿ ಸಂಶೋಧನೆ ಕೈಗೊಳ್ಳಲು ಇಸ್ರೋದ ಮೊದಲ ಉಪಗ್ರಹ ಎಂದು ಇಸ್ರೋ ಹೇಳಿದೆ.
ಎಕ್ಸ್‌ಪೋ ಸ್ಯಾಟ್‌ನ ಪೇಲೋಡ್‌ಗಳಲ್ಲಿ ಒಂದಾದ ಎಕ್ಸ್‌ಎಸ್‌ಪೆಕ್ಟ್, "ಎಲ್‌ಎಮ್‌ಎಕ್ಸ್‌ಬಿಗಳು, ಎಜಿಎನ್‌ಗಳು ಮತ್ತು ಮ್ಯಾಗ್ನೆಟಾರ್‌ಗಳಲ್ಲಿ ಎಕ್ಸ್-ರೇ ಪಲ್ಸರ್‌ಗಳು, ಬ್ಲ್ಯಾಕ್‌ಹೋಲ್ ಬೈನರಿಗಳು, ಕಡಿಮೆ ಮ್ಯಾಗ್ನೆಟಿಕ್ ಫೀಲ್ಡ್ ನ್ಯೂಟ್ರಾನ್ ಸ್ಟಾರ್ (ಎನ್‌ಎಸ್) ಹಲವಾರು ರೀತಿಯ ಮೂಲಗಳನ್ನು ಗಮನಿಸುತ್ತದೆ".
ಮತ್ತೊಂದು ಪೇಲೋಡ್ ಪೋಲಿಕ್ಸ್ “ ಎಕ್ಸ್‌ಪೋಸ್ಯಾಟ್ ಮಿಷನ್‌ನ ಯೋಜಿತ 5 ವರ್ಷಗಳ ಜೀವಿತಾವಧಿಯಲ್ಲಿ ವಿವಿಧ ವರ್ಗಗಳ ಸುಮಾರು 40 ಪ್ರಕಾಶಮಾನವಾದ ಖಗೋಳ ಮೂಲಗಳನ್ನು ವೀಕ್ಷಿಸುವ ನಿರೀಕ್ಷೆಯಿದೆ” ಎಂದು ಇಸ್ರೋ ವಿವರಿಸಿದೆ.
ತಿರುಪತಿಯಲ್ಲಿ ಪೂಜೆ: ಈ ಮಿಷನ್‌ನ ಯಶಸ್ಸಿಗಾಗಿ ಇಸ್ರೋ ವಿಜ್ಞಾನಿಗಳಾದ ಅಮಿತ್ ಕುಮಾರ್ ಪಾತ್ರ, ವಿಕ್ಟರ್ ಜೋಸೆಫ್, ಯಶೋದಾ ಮತ್ತು ಶ್ರೀನಿವಾಸ್ ಅವರು ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.