logo
ಕನ್ನಡ ಸುದ್ದಿ  /  ಮನರಂಜನೆ  /  ಲಾಲ್ ಸಲಾಮ್ ಸಿನಿಮಾ ವಿಮರ್ಶೆ: ಧರ್ಮದಾಟದಲ್ಲಿ ಮಾನವೀಯತೆಯ ಪಾಠ; ಮೊಯ್ದಿನ್‌ ಬಾವಾನಾಗಿ ರಜನಿಕಾಂತ್‌ ಪರಕಾಯ ಪ್ರವೇಶ

ಲಾಲ್ ಸಲಾಮ್ ಸಿನಿಮಾ ವಿಮರ್ಶೆ: ಧರ್ಮದಾಟದಲ್ಲಿ ಮಾನವೀಯತೆಯ ಪಾಠ; ಮೊಯ್ದಿನ್‌ ಬಾವಾನಾಗಿ ರಜನಿಕಾಂತ್‌ ಪರಕಾಯ ಪ್ರವೇಶ

Praveen Chandra B HT Kannada

Feb 09, 2024 04:08 PM IST

ಲಾಲ್ ಸಲಾಮ್ ಸಿನಿಮಾ ವಿಮರ್ಶೆ: ಧರ್ಮದಾಟದಲ್ಲಿ ಮಾನವೀಯತೆಯ ಪಾಠ

    • Lal Salaam movie review: ರಜನಿಕಾಂತ್‌ ನಟನೆಯ ಐಶ್ವರ್ಯಾ ರಜನಿಕಾಂತ್‌ ನಿರ್ದೇಶನದ ಲಾಲ್‌ ಸಿನಿಮಾ ಸಾಮಾಜಿಕ ಸಂದೇಶವುಳ್ಳ ಕ್ರಿಕೆಟ್‌-ಧರ್ಮದ ವಿಚಾರ ಹೊಂದಿರುವ ಡ್ರಾಮಾ. ಈ ಸಿನಿಮಾದಲ್ಲಿ ಮೊಯ್ದಿನ್‌ಭಾವನಾಗಿ ರಜನಿಕಾಂತ್‌ ಪರಕಾಯ ಪ್ರವೇಶ ಮಾಡಿದ್ದಾರೆ. ಸೂಪರ್‌ಸ್ಟಾರ್‌ ಅಭಿಮಾನಿಗಳಿಗೆ ಮೊಯ್ದಿನ್‌ಭಾವ ಮಾನವೀಯ ಸಂದೇಶಗಳ ಗೋಸ್‌ಬಂಪ್‌ ನೀಡಿದ್ದಾರೆ.
ಲಾಲ್ ಸಲಾಮ್ ಸಿನಿಮಾ ವಿಮರ್ಶೆ: ಧರ್ಮದಾಟದಲ್ಲಿ ಮಾನವೀಯತೆಯ ಪಾಠ
ಲಾಲ್ ಸಲಾಮ್ ಸಿನಿಮಾ ವಿಮರ್ಶೆ: ಧರ್ಮದಾಟದಲ್ಲಿ ಮಾನವೀಯತೆಯ ಪಾಠ

Lal Salaam movie review: ಹಲವು ಕಾರಣಗಳಿಂದ ರಜನಿಕಾಂತ್‌ ನಟನೆಯ ಲಾಲ್‌ ಸಲಾಮ್‌ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ ಸಿನಿಮಾ. ಮೊದಲನೆಯದಾಗಿ ಈ ಸಿನಿಮಾದ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್‌ ಸುಮಾರು ಎಂಟು ವರ್ಷ ಕಳೆದು ಡೈರೆಕ್ಟರ್‌ ಕ್ಯಾಪ್‌ ತೊಟ್ಟಿದ್ದಾರೆ. ಗಮನಾರ್ಹ ಸಂಗತಿಯೆಂದರೆ ಆಕೆ ತನ್ನ ತಂದೆ ಸೂಪರ್‌ಸ್ಟಾರ್‌ ರಜನಿಕಾಂತ್‌ಗೆ ನಿರ್ದೇಶನ ಮಾಡಿದ್ದಾರೆ. ಲಾಲ್‌ ಸಲಾಮ್‌ನಲ್ಲಿ ವಿಷ್ಣು ವಿಶಾಲ್‌ ಮತ್ತು ವಿಕ್ರಾಂತ್‌ ನಟಿಸಿದ್ದಾರೆ. ಕ್ರಿಕೆಟ್‌ ಮತ್ತು ಧಾರ್ಮಿಕ ವಿಷಯಗಳ ಸುತ್ತ ಸಿನಿಮಾ ಸುತ್ತುತ್ತದೆ. ಹಳ್ಳಿಯೊಂದರಲ್ಲಿ ಜನಪ್ರಿಯ ಕ್ರಿಕೆಟ್‌ ಕ್ರೀಡೆಗೆ ಜನರು ಹೇಗೆ ರಾಜಕೀಯದ ಹುಳಿ ಹಿಂಡ್ತಾರೆ ಮತ್ತು ಅದರ ಪರಿಣಾಮ ಏನು ಎಂದು ತಿಳಿಯಲು ಲಾಲ್‌ ಸಲಾಮ್‌ ಸಿನಿಮಾ ನೋಡಬಹುದು.

ಟ್ರೆಂಡಿಂಗ್​ ಸುದ್ದಿ

chef ಚಿದಂಬರ ಚಿತ್ರದ ಮೊದಲ ಹಾಡು ರಿಲೀಸ್;‌ ಶೀರ್ಷಿಕೆ ಗೀತೆಗೆ ಧ್ವನಿಯಾದ ನಾಯಕ ಅನಿರುದ್ಧ ಜತ್ಕರ್

Brundavana Serial: ಪುಷ್ಪಾಗೆ ಕಾಲ್‌ ಮಾಡಿ ಚಾಲೆಂಜ್‌ ಮಾಡುವ ಭಾರ್ಗವಿ; ಬೃಂದಾವನಕ್ಕೆ ಕೇಡು ತಪ್ಪಿದಲ್ವಾ?

ಅಮೃತಧಾರೆ ಧಾರಾವಾಹಿ ಕಥೆ: ಜೀವನ ಸಂಗಾತಿ ಬಿಸ್ನೆಸ್‌ ಆರಂಭಿಸಿದ ಜೀವನ್‌; ಕೆಂಚನ ಅಟ್ಟಹಾಸಕ್ಕೆ ಬೆದರಿದ ದಿವಾನ್‌ ಕುಟುಂಬ

ಬ್ಲಿಂಕ್‌ ಕನ್ನಡ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ; ಅಮೆಜಾನ್‌ ಪ್ರೈಮ್‌ನಲ್ಲಿರುವ ಈ ಸಿನಿಮಾ ನಿಮಗೆ ಕಾಣಿಸುತ್ತಾ ನೋಡಿ

ತಿರು (ವಿಷ್ಣು ವಿಶಾಲ್) ಮತ್ತು ಮೊಯ್ದೀನ್ ಭಾಯ್ (ರಜನಿಕಾಂತ್) ಅವರ ಮಗ ಶಂಸುದ್ದೀನ್ (ವಿಕ್ರಾಂತ್) ಬಾಲ್ಯದಿಂದಲೂ ಪ್ರತಿಸ್ಪರ್ಧಿಗಳು. ಕ್ರಿಕೆಟ್‌ ಗ್ರೌಂಡ್‌ನಲ್ಲಿ ಮಾತ್ರವಲ್ಲದೆ ಗ್ರಾಮದಲ್ಲೂ ಇವರು ಸ್ಪರ್ಧಿಗಳೇ. ಮೊಯಿದ್ದೀನ್ ಭಾಯ್ ಪ್ರಾರಂಭಿಸಿದ ತ್ರೀ ಸ್ಟಾರ್ ಕ್ರಿಕೆಟ್‌ ತಂಡದಲ್ಲಿ ತಿರು ಮತ್ತು ಶಂಶು ಕೂಡ ಆಡಿದ್ದಾರೆ. ಅವರೂ ಗೆಲುವು ಪಡೆದಿದ್ದಾರೆ. ಆದರೆ, ತಿರುವಿನ ಯಶಸ್ಸು ಅವರಿಗೆ ಅರಗಿಸಿಕೊಳ್ಳಲು ಆಗಲಿಲ್ಲ. ಇದೇ ಕಾರಣಕ್ಕೆ ಆತನನ್ನು ತಂಡದಿಂದ ಹೊರಹಾಕುತ್ತಾರೆ. ತಿರು ಇದಕ್ಕೆ ಎದುರಾಗಿ ಎಂಸಿಸಿ ತಂಡ ಕಟ್ತಾನೆ. ಈ ಎರಡು ತಂಡಗಳು ಎರಡು ಪ್ರತ್ಯೇಕ ಧರ್ಮಗಳನ್ನು ಪ್ರತಿನಿಧಿಸುತ್ತವೆ. ಹಳ್ಳಿ ಎರಡು ಭಾಗವಾಗುತ್ತದೆ. ಹಿಂದೂ ಮತ್ತು ಮುಸ್ಲಿಂ ತಂಡಗಳಾಗುತ್ತವೆ. ಈ ಹಿಂದೆ ಶಾಂತಿಯುತ ಸಾಮರಸ್ಯದಿಂದ ವಾಸಿಸುತ್ತಿದ್ದ ಗ್ರಾಮದಲ್ಲಿ ಕ್ರಿಕೆಟ್‌ ಪಂದ್ಯವನ್ನು "ಭಾರತ ಮತ್ತು ಪಾಕಿಸ್ತಾನ" ಕ್ರಿಕೆಟ್‌ ಪಂದ್ಯವೆಂದು ಕರೆಯಲಾಗುತ್ತದೆ. ಇದು ಆಗಿನ ಕಥೆ.

ಈಗಿನ ಕಥೆಯಲ್ಲಿ ಮೊಯಿದ್ದೀನ್ ಭಾಯ್ ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ವಾಸಿಸ್ತಾ ಇರುತ್ತಾರೆ. ಅವರಿಗೆ ಒಳ್ಳೆಯ ಆಟಗಾರನಾದ ಶಂಶು ಭಾರತಕ್ಕಾಗಿ ಆಡುವುದನ್ನು ನೋಡಬೇಕೆಂಬ ಕನಸು ಇರುತ್ತದೆ. ಆದರೆ, ಹಳ್ಳಯಲ್ಲಿ ನಡೆದ ಒಂದು ಪಂದ್ಯವು ತಿರು ಮತ್ತು ಶಂಶು ಜೀವನದಲ್ಲಿ ದೊಡ್ಡ ತಿರುವಿಗೆ ಕಾರಣವಾಗುತ್ತದೆ. ಇವರಿಬ್ಬರಿಗೆ ಏನಾಗುತ್ತದೆ. ಶಂಶು ಕೊನೆಗೂ ಭಾರತಕ್ಕಾಗಿ ಆಡುತ್ತಾನೆಯೇ? ಹುಡುಗರ ಜಗಳ, ಹಳ್ಳಿಯ ಹಿಂದೂ-ಮುಸ್ಲಿಂ ಸಂಘರ್ಷವನ್ನು ಮೊಯಿದ್ದೀನ್ ಭಾಯ್ ಕೊನೆಗೊಳಿಸ್ತಾರ?

ಸಿನಿಮಾದ ಮೊದಲಾರ್ಧವು ಹಳ್ಳಿ, ಅಲ್ಲಿನ ಜನರು, ಅಲ್ಲಿರುವ ಹಿಂದೂ ಮತ್ತು ಮುಸ್ಲಿಂ ಜನರ ಸಂಬಂಧದ ಸುತ್ತ ಸುತ್ತುತ್ತದೆ. ಇದೇ ಸಂದರ್ಭದಲ್ಲಿ ತಿರು ಮತ್ತು ಶಂಶು ನಡುವಿನ ಪ್ರತಿಸ್ಪರ್ಧೆಯೂ ಇರುತ್ತದೆ. ದ್ವಿತೀಯಾರ್ಧದಲ್ಲಿ ಚಿತ್ರ ಇನ್ನಷ್ಟು ವೇಗ ಪಡೆಯುತ್ತದೆ. ರಜನಿಕಾಂತ್‌ ತಮ್ಮ ಅಮೋಘ ನಟನೆಯಿಂದ ಸೆಳೆಯುತ್ತಾರೆ.

ರಜನಿಕಾಂತ್ ಅವರು ಮೊಯಿದ್ದೀನ್ ಭಾಯ್ ಎಂಬ ಮುಸ್ಲಿಂ ನಾಯಕನ ಪಾತ್ರದಲ್ಲಿ ಜೀವಿಸಿದ್ದಾರೆ. ಈ ಪಾತ್ರದಲ್ಲಿ ಇವರನ್ನು ನೋಡಲು ನಿಜಕ್ಕೂ ಖುಷಿಯಾಗುತ್ತದೆ. ಅವರಿಗೆ ನೀಡಲಾದ ಕೆಲವೊಂದು ಸಂಭಾಷಣೆಗಳಲ್ಲಿ ಅವರ ವೈಯಕ್ತಿಕ ನಂಬಿಕೆಗಳನ್ನೂ ಸ್ಪಷ್ಟವಾಗಿ ಹೇಳಿಸಿದಂತೆ ಇದೆ. ಈ ಸಂಭಾಷಣೆಗಳು ಈಗಿನ ಕಾಲಕ್ಕೂ ಅರ್ಥಪೂರ್ಣವಾಗಿ ಕಾಣಿಸಿದೆ. ಇವು ಗೂಸ್ ಬಂಪ್ ಅಥವಾ ರೋಮಾಂಚನ ಉಂಟು ಮಾಡುವ ಕ್ಷಣವೂ ಹೌದು.

ಉದಾಹರಣೆಗೆ ಒಂದೆಡೆ ಮೊಯಿದ್ದೀನ್ ಭಾಯ್ ಡೈಲಾಗ್‌ ಈ ರೀತಿ ಇದೆ. "ಭಾರತ ಇರುವುದು ಭಾರತೀಯರಿಗಾಗಿ. ನಾನು ಭಾರತದ ಮುಸ್ಲಿಂ. ನಾನು ಇಲ್ಲಿಯೇ ಹುಟ್ಟಿದ್ದೇನೆ. ಇಲ್ಲಿಯೇ ಸಾಯುತ್ತೇನೆ. ಇದು ನನ್ನ ಮನೆ. ನನ್ನ ಜಾತಿ ಅಥವಾ ಧರ್ಮದ ಬಗ್ಗೆ ಮಾತನಾಡಬಾರದು. ಮಾನವೀಯತೆಯ ಬಗ್ಗೆ ಮಾತನಾಡಬೇಕು. ಮಾನವೀಯತೆ ಎಲ್ಲಕ್ಕಿಂತ ಮಿಗಿಲಾದದ್ದು. ಜೈ ಹಿಂದ್‌" ಎಂದು ಹೇಳಿದ್ದಾರೆ. ಇದನ್ನು ರಜನಿಕಾಂತ್‌ ಸ್ಟೈಲ್‌ನಲ್ಲಿ ಕಲ್ಪಿಸಿಕೊಳ್ಳಿ. ಸೂಪರ್‌ ಸ್ಟಾರ್‌ ರಜನಿಕಾಂತ್‌ ಈ ಸಿನಿಮಾದಲ್ಲಿ ಮಾನವಿಯತೆ ಕುರಿತು ಮಾತನಾಡಿದ್ದಾರೆ. ರಿಯಲ್‌ ಬದುಕಿನಲ್ಲೂ ರಜನಿಕಾಂತ್‌ ಹೀಗೆಯೇ ಇದ್ದಾರೆ. ಹೀಗಾಗಿ ಇವರಿಗೆ ನೀಡಿರುವ ಸಂಭಾಷಣೆಗಳು ಇವರದ್ದೇ ಸಂಭಾಷಣೆಗಳಂತೆ ಕಾಣಿಸುತ್ತವೆ.

ಇದನ್ನು ಹೊರತುಪಡಿಸಿದರೆ ರಜನಿಕಾಂತ್‌ ಅವರು ಬಲು ಸೊಗಸಾಗಿ ಡಬಲ್‌ ಆಕ್ಟಿಂಗ್‌ ಮಾಡಿದ್ದಾರೆ. ಒಂದರಲ್ಲಿ ತನ್ನ ಮಗನ ಕುರಿತು ಮಹಾತ್ವಕಾಂಕ್ಷೆ ಹೊಂದಿರುವ ತಂದೆ. ಮತ್ತೊಂದರಲ್ಲಿ ಧಾರ್ಮಿಕ ನಾಯಕ. ಯಾವುದೇ ಜಾತಿ ಧರ್ಮವಾಗಿದ್ದರೂ ಎಲ್ಲರೂ ಒಂದೇ ಎನ್ನುವ ಧಾರ್ಮಿಕ ನಾಯಕನಾಗಿ ನಟಿಸಿದ್ದಾರೆ. ಫೈಟಿಂಗ್‌ ಸೀನ್‌ಗಳು ತುಂಬಾ ಅದ್ಭುತ ಎನ್ನುವಂತೆ ಇಲ್ಲ. ಲಾಲ್‌ ಸಲಾಮ್‌ ಸಿನಿಮಾದ ನಿಜವಾದ ಬೆನ್ನೆಲುಬು ರಜನಿಕಾಂತ್‌ ಎಂದರೆ ಅತಿಶಯೋಕ್ತಿಯಲ್ಲ.

ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ತಮಗೆ ನೀಡಿದ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಲು ಯತ್ನಿಸಿದ್ದಾರೆ. ಇವರಿಬ್ಬರು ನಿಜ ಜೀವನದಲ್ಲಿಯೂ ಕ್ರಿಕೆಟ್‌ ಆಡುವುದರಿಂದ ಅವರ ನಟನೆ ಸಹಜವಾಗಿ ಇಷ್ಟವಾಗುತ್ತದೆ. ಎಆರ್‌ ರೆಹಮಾನ್‌ ಸಂಗೀತವು ಚಿತ್ರದ ಇನ್ನೊಂದು ಪ್ಲಸ್‌ ಪಾಯಿಂಟ್‌. ಸ್ಥಳೀಯ ಅಂಶಗಳು ಮತ್ತು ಸೂಫಿ ಅಂಶಗಳನ್ನು ಸಂಯೋಜಿಸಿ ಸಂಗೀತ ನೀಡಿದ್ದಾರೆ.

ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಅವರು ಇಂದಿನ ರಾಜಕೀಯ ಮತ್ತು ಸಾಮಾಜಿಕ ವಾತಾವರಣಕ್ಕೆ ಸೂಕ್ತವಾಗುವಂತಹ ಕಥೆಯನ್ನು ಆಯ್ಕೆ ಮಾಡಿದ್ದಾರೆ. ಇಂತಹ ವಿಭಿನ್ನ ಕಥೆಯ ಮೂಲಕ ಭರ್ಜರಿಯಾಗಿಯೇ ಮತ್ತೆ ಡೈರೆಕ್ಷನ್‌ಗೆ ಇಳಿದಿದ್ದಾರೆ. ಈ ಚಲನಚಿತ್ರ ಖಂಡಿತಾ ಮಾತನಾಡುತ್ತದೆ. ಈ ಚಿತ್ರ ಸಮಾಜಕ್ಕೆ ಏನೋ ಹೇಳಲು ಪ್ರಯತ್ನಿಸುತ್ತದೆ. ವಿಷ್ಣು ರಂಗಸ್ವಾಮಿ ಅವರು ಕಥೆಯನ್ನು ಇನ್ನಷ್ಟು ಚೆನ್ನಾಗಿ ಬರೆಯಬಹುದಿತ್ತು. ಕೆಲವು ಕಥಾವಸ್ತುಗಳಲ್ಲಿ ಸ್ಪಷ್ಟತೆ ಇಲ್ಲ. ಕೆಲವು ಕಡೆ ಕತ್ತರಿ ಪ್ರಯೋಗ ಮಾಡಿದ್ದರೆ ಚಿತ್ರ ಇನ್ನಷ್ಟು ಇಷ್ಟವಾಗುತ್ತಿತ್ತು.

ಒಟ್ಟಾರೆ ಐಶ್ವರ್ಯಾ ರಜನಿಕಾಂತ್‌ ಅವರ ಲಾಲ್‌ ಸಲಾಮ್‌ ಸಿನಿಮಾವು ಸಮಾಜಕ್ಕೆ ಉತ್ತಮ ಸಂದೇಶವನ್ನು ಹೊಂದಿರುವ ಸೋಷಿಯಲ್‌ ಡ್ರಾಮಾ. ಪ್ರೇಕ್ಷಕರು ರಜನಿಕಾಂತ್‌ರನ್ನು ಮೊಯಿದ್ದೀನ್‌ ಭಾಯ್‌ ಆಗಿ ಇಷ್ಟಪಡುತ್ತಾರೆ. ರಜನಿಕಾಂತ್‌ ಹೇಳಿರುವ "ಎಲ್ಲಕ್ಕಿಂತ ಮನುಷ್ಯತ್ವ ಮುಖ್ಯ" ಎನ್ನುವ ಪಾಠ ಪ್ರೇಕ್ಷಕರ ಕಿವಿಯಲ್ಲಿ ಮತ್ತು ಮನಸ್ಸಲ್ಲಿ ಸಾಕಷ್ಟು ಸಮಯ ಉಳಿಯಬಹುದೆಂಬ ಆಶಯವಿದೆ.

ಚಿತ್ರ ವಿಮರ್ಶೆ: ಲತಾ ಶ್ರೀನಿವಾಸನ್‌ (ಹಿಂದೂಸ್ತಾನ್‌ ಟೈಮ್ಸ್‌- ಎಂಟರ್‌ಟೇನ್‌ಮೆಂಟ್‌)

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ