Gyrocopter Ride: ಉತ್ತರಾಖಂಡ್ನಲ್ಲಿ ಶೀಘ್ರದಲ್ಲೇ ಭಾರತದ ಮೊದಲ ಗೈರೋಕಾಪ್ಟರ್ ರೈಡ್; ಏರ್ಸಫಾರಿ ಮೂಲಕ ನೋಡಬಹುದು ಹಿಮಾಲಯ!
Dec 23, 2023 12:21 PM IST
ಉತ್ತರಾಖಂಡ್ನಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ ಭಾರತದ ಮೊದಲ ಗೈರೋಕಾಪ್ಟರ್ ರೈಡ್
Uttarakhand Tourism: ಹಿಮಾಲಯವನ್ನು ಕಣ್ತುಂಬಿಕೊಳ್ಳಬೇಕು ಎಂದು ಕಾಯುತ್ತಿರುವವರಿಗೆ ಇಲ್ಲೊಂದು ಸಿಹಿಸುದ್ದಿಯಿದೆ. ಈ ವರ್ಷಾಂತ್ಯದಲ್ಲಿ ಭಾರತದ ಮೊಟ್ಟ ಮೊದಲ ಗೈರೋಕಾಪ್ಟರ್ ರೈಡ್ ಆರಂಭಗೊಳ್ತಿದ್ದು ಇನ್ಮೇಲೆ ನೀವು ಏರ್ ಸಫಾರಿ ಮಾಡುತ್ತಾ ಹಿಮಾಲಯ ಶಿಖರಗಳ ಸೌಂದರ್ಯ ಸವಿಯಬಹುದಾಗಿದೆ.
Uttarakhand Tourism: ಮೊದಲೆಲ್ಲ ಸಾಹಸಮಯಿ ಪ್ರವಾಸವನ್ನು ಎಂಜಾಯ್ ಮಾಡಬೇಕು ಎಂದರೆ ವಿದೇಶಗಳಿಗೆ ತೆರಳಬೇಕಿತ್ತು. ಆದರೆ ಈಗ ಹಾಗಿಲ್ಲ. ಭಾರತವು ಬದಲಾಗುತ್ತಿದ್ದು ಭಾರತದ ಪ್ರವಾಸೋದ್ಯಮ ತ್ವರಿತಗತಿಯಲ್ಲಿ ಬೆಳೆಯುತ್ತಿದೆ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ಉತ್ತರಾಖಂಡ್ನಲ್ಲಿ ಗೈರೋಕಾಫ್ಟರ್ ರೈಡ್ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ಅಂದಹಾಗೆ ಇದು ಭಾರತದಲ್ಲಿ ಆರಂಭಗೊಳ್ಳುತ್ತಿರುವ ಮೊಟ್ಟ ಮೊದಲ ಗೈರೋಕಾಪ್ಟರ್ ಸಫಾರಿ ಎನಿಸಿದೆ.
ಗೈರೋಕಾಪ್ಟರ್ನ ಪ್ರಾಯೋಗಿಕ ಪರೀಕ್ಷೆ ಯಶಸ್ವಿ
ಉತ್ತರಾಖಂಡ್ ಪ್ರವಾಸೋದ್ಯಮ ಇಲಾಖೆಯು ಹಿಮಾಲಯ ಏರ್ಸಫಾರಿಯನ್ನು ಆರಂಭಿಸುವ ಮೂಲಕ ಭಾರತೀಯ ಪ್ರವಾಸೋದ್ಯಮಕ್ಕೆ ಹೊಸ ಗರಿಯನ್ನು ನೀಡಲು ಸಿದ್ಧವಾಗುತ್ತಿದೆ. ಈಗಾಗಲೇ ಹರಿದ್ವಾರದ ಬೈರಾಗಿ ಕ್ಯಾಂಪ್ನಲ್ಲಿ ಗೈರೋಕಾಪ್ಟರ್ನ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಈ ವರ್ಷದಲ್ಲೇ ಹಿಮಾಯಲ ಏರ್ಸಫಾರಿ ಆರಂಭಗೊಳ್ಳಲಿದೆ ಎಂದು ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ. ಉತ್ತರಾಖಂಡ್ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ರಾಜಾಸ್ ಏರೋಸ್ಪೋರ್ಟ್ಸ್ ಹಾಗೂ ಅಡ್ವೆಂಚರರ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದ ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಪ್ರವಾಸಿಗರು ಏರ್ ಸಫಾರಿ ಮೂಲಕ ಭಾರತದ ಅದ್ಭುತ ಭೂದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಗೈರೋಕಾಫ್ಟರ್ ಪ್ರಾಯೋಗಿಕ ಪರೀಕ್ಷೆಯ ಸಂದರ್ಭದಲ್ಲಿ ಭಾಗಿಯಾಗಿದ್ದ ಮಂಡಳಿಯ ಹೆಚ್ಚುವರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರ್ನಲ್ ಅಶ್ವಿನಿ ಪುಂಡೀರ್, ಶೀಘ್ರದಲ್ಲಿಯೇ ನಾವು ಗೈರೋಕಾಫ್ಟರ್ಗಳನ್ನು ಬಳಸಿ ಹಿಮಾಲಯನ್ ಏರ್ಸಫಾರಿ ಪ್ರಾಜೆಕ್ಟ್ನ್ನು ಉತ್ತರಾಖಂಡ್ನಲ್ಲಿ ಆರಂಭಿಸಲಿದ್ದೇವೆ. ಈ ಹೊಸ ಪ್ರಯತ್ನದಿಂದಾಗಿ ಪ್ರವಾಸಿಗರು ಹಿಮಾಲಯದ ಶಿಖರಗಳ ಸೌಂದರ್ಯವನ್ನು ಗೈರೋಕಾಫ್ಟರ್ನಿಂದ ಆನಂದಿಸಬಹುದಾಗಿದೆ. ಇದು ರೋಮಾಂಚನಕಾರಿ ಪ್ರವಾಸದ ಅನುಭವ ನೀಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜರ್ಮನಿಯಿಂದ ತರಿಸಲಾದ ಅತ್ಯಾಧುನಿಕ ಗೈರೋಕಾಫ್ಟರ್‌ಗಳು
ಹಿಮಾಲಯನ್ ಏರ್ ಸಫಾರಿಯ ಅನುಭವ ನೀಡಲು ನಾವು ಜರ್ಮನಿಯಿಂದ ಅತ್ಯಾಧುನಿಕ ಗೈರೋಕಾಫ್ಟರ್ಗಳನ್ನು ಖರೀದಿಸಿದ್ದೇವೆ. ಪರಿಣಿತಿ ಪಡೆದ ಜರ್ಮನ್ ಪೈಲೆಟ್ಗಳು ಗೈರೋಕಾಫ್ಟರ್ಗಳನ್ನು ಮುನ್ನೆಡಸಲಿದ್ದಾರೆ. ಉತ್ತರಾಖಂಡ್ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರಿಗೆ ಉತ್ತರಾಖಂಡ್ನ ಸೌಂದರ್ಯವನ್ನು ಅತ್ಯಂತ ಸುರಕ್ಷಿತ ರೂಪದಲ್ಲಿ ಹಾಗೂ ರೋಮಾಂಚನಕಾರಿ ರೀತಿಯಲ್ಲಿ ನೋಡಲು ಈ ರೀತಿಯಾಗಿ ಹೊಸ ಅವಕಾಶವನ್ನು ಮಾಡಿಕೊಡುತ್ತಿದೆ. ಇದು ಸಂಪೂರ್ಣ ಭಾರತದಲ್ಲಿಯೇ ಹೊಸ ಪ್ರಯತ್ನವಾಗಿದೆ. ನಾಗರಿಕ ವಿಮಾನಯಾನ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಸಹಯೋಗದಲ್ಲಿ ನಾವು ಉತ್ತರಾಖಂಡ್ನ ವಿವಿಧ ರಮಣೀಯ ಪ್ರದೇಶಗಳಲ್ಲಿ ಏರ್ಸ್ಟ್ರಿಪ್ಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನದಲ್ಲಿದ್ದೇವೆ ಎಂದೂ ಸಹ ಪುಂಡೀರ್ ಮಾಹಿತಿ ನೀಡಿದ್ದಾರೆ.
ಗೈರೋಕಾಫ್ಟರ್ ರೈಡ್ಗಳ ಮೂಲಕ ಪ್ರವಾಸಿಗರು ಹಿಂದೆಂದೂ ಕಾಣದ ರೀತಿಯಲ್ಲಿ ಹಿಮಾಲಯದ ಸೌಂದರ್ಯವನ್ನು ಸವಿಯಲು ಸಾಧ್ಯವಿದೆ. ಹಿಮಾಲಯದ ಶಿಖರಗಳು ಹಾಗೂ ನದಿಗಳ ಸೌಂದರ್ಯವನ್ನು ಆಕಾಶದಿಂದ ನಿಂತು ನೋಡಿದಾಗ ಹೇಗೆ ಕಾಣಬಹುದು ಎಂಬ ಅನುಭವ ಇಲ್ಲಿ ಪ್ರವಾಸಿಗರಿಗೆ ಸಿಗಲಿದೆ. ಇದು ಮಾತ್ರವಲ್ಲದೇ ಮುಂದಿನ ದಿನಗಳಲ್ಲಿ ಕೈಲಾಸ ಹಾಗೂ ಓಂ ಪರ್ವತಗಳನ್ನು ಶಿವ ನಗರಿಯಾಗಿ ಮತ್ತು ಕಾರ್ಬೇಟ್, ಸೀತಾಬನವನ್ನು ಸಮಗ್ರ ಪ್ರಾಣಿ ಸಾಮ್ರಾಜ್ಯವನ್ನಾಗಿ ಮಾರ್ಪಾಡಿಸುವ ಗುರಿಯನ್ನೂ ಉತ್ತರಾಖಂಡ್ ಪ್ರವಾಸೋದ್ಯಮ ಇಲಾಖೆ ಹಾಕಿಕೊಂಡಿದೆ.