ಕನ್ನಡ ಸುದ್ದಿ  /  Karnataka  /  Vijayapura District News Cyclist Velodrome Project Not Completed Heartland For Professional Cyclists In Karnataka Pcp

Vijayapura News: ಆಮೆಗತಿಯಲ್ಲಿ ಸಾಗುತ್ತಿದೆ ವೆಲೋಡ್ರೋಮ್‌, ವಿಜಯಪುರದ ಸೈಕ್ಲಿಸ್ಟ್‌ಗಳ ಕನಸು ನನಸಾಗುವುದೆಂದು?

ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜಯಪುರ ಸೈಕ್ಲಿಸ್ಟ್‌ಗಳು ಮಿಂಚಲು ತರಬೇತಿಯ ವೇದಿಕೆಯಾಗಬೇಕಾದ `ವೆಲೋಡ್ರೋಮ್’ ಕಾಮಗಾರಿ ವಿಳಂಬಗತಿಯಲ್ಲಿ ಸಾಗುತ್ತಿದ್ದು, ಪದಕ ಗೆಲ್ಲುವ ಸೈಕ್ಲಿಸ್ಟ್‌ಗಳ ಆಶಯ ಸಾಕಾರಗೊಳ್ಳುತ್ತಿಲ್ಲ.

Vijayapura News: ಆಮೆಗತಿಯಲ್ಲಿ ಸಾಗುತ್ತಿದೆ ವೆಲೋಡ್ರೋಮ್‌, ವಿಜಯಪುರದ ಸೈಕ್ಲಿಸ್ಟ್‌ಗಳ ಕನಸು ನನಸಾಗುವುದೆಂದು?
Vijayapura News: ಆಮೆಗತಿಯಲ್ಲಿ ಸಾಗುತ್ತಿದೆ ವೆಲೋಡ್ರೋಮ್‌, ವಿಜಯಪುರದ ಸೈಕ್ಲಿಸ್ಟ್‌ಗಳ ಕನಸು ನನಸಾಗುವುದೆಂದು?

ವಿಜಯಪುರ : ಸೈಕ್ಲಿಸ್ಟ್‌ಗಳ ತವರೂರು ವಿಜಯಪುರದಲ್ಲಿ ಪ್ರತಿಭಾನ್ವಿತ ಸೈಕ್ಲಿಸ್ಟ್‌ಗಳ ಕೊರತೆ ಇಲ್ಲ, ಆದರೆ ಅವರು ಸೈಕ್ಲಿಂಗ್ ಪ್ರಾಕ್ಟಿಸ್ ಮಾಡಬೇಕಾದರೂ ಎಲ್ಲಿ? ರಾಜ್ಯ, ರಾಷ್ಟ್ರೀಯ ಹೆದ್ದಾರಿಯಲ್ಲಿ ತರಬೇತಿ ಮಾಡುವುದು ಅಪಾಯಕ್ಕೆ ಆಹ್ವಾನ, ಆದರೂ ಸಹ ದೇಶಕ್ಕಾಗಿ, ನಾಡಿಗಾಗಿ ಪದಕ ಗೆಲ್ಲುವ ಏಕೈಕ ಆಶಯದೊಂದಿಗೆ ಅನೇಕ ಸೈಕ್ಲಿಸ್ಟ್‌ಗಳು ಈ ರಾಜ್ಯ, ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ತಯಾರಿ ಮಾಡಲು ಹೋಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸೈಕ್ಲಿಸ್ಟ್‌ಗಳ ತರಬೇತಿಯ ತಾಣವಾಗಿರುವ ವೆಲೋಡ್ರೋಮ್ ಪೂರ್ಣಗೊಂಡಿದ್ದರೆ ಯಾವ ಜಂಜಾಟವಿಲ್ಲದೇ ಸೈಕ್ಲಿಸ್ಟ್‌ಗಳು ತಯಾರಿ ಮಾಡಿಕೊಳ್ಳಬಹುದು. ಆದರೆ ಈ ಕಾಮಗಾರಿ ವಿಳಂಬ, ವಿಳಂಬವಾಗುತ್ತಲೇ ಸಾಗಿರುವುದು ಸೈಕ್ಲಿಸ್ಟ್‌ಗಳಲ್ಲಿ ಆತಂಕ ಮೂಡಿಸುತ್ತಿದೆ.

ವಿಜಯಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ ನೂರಾರು ಜನ ಸೈಕ್ಲಿಸ್ಟಗಳು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಆದರೆ ಅವಳಿ ಜಿಲ್ಲೆಯ ಸೈಕ್ಲಿಸ್ಟಗಳಿಗೆ ಪ್ರ್ಯಾಕ್ಟೀಸ್ ಮಾಡಲು ಒಂದು ವೆಲೋಡ್ರಮ್ ಇಲ್ಲದಂತಾಗಿದೆ.

ವಿಳಂಬಕ್ಕೆ ಕಾರಣ ನೂರಾರು

ವಿಜಯಪುರ ನಗರ ಹೊರಭಾಗದ ಭೂತನಾಳ ಕೆರೆಯ ಬಳಿ 8.10 ಎಕರೆ ವಿಶಾಲ ಪ್ರದೇಶದಲ್ಲಿ 7.34 ಕೋಟಿ ವೆಚ್ಚದಲ್ಲಿ ಸೈಕ್ಲಿಂಗ್ ವೆಲೋಡ್ರಮ್ ಮಾಡುವ ಕಾಮಗಾರಿಗೆ 2015 ರಲ್ಲಿಯೇ ಚಾಲನೆ ನೀಡಲಾಯಿತು. ಬಳಿಕ ಕಾಮಗಾರಿ ಪ್ರಾರಂಭವಾದರೂ ಇಂತಹ ಕಾಮಗಾರಿಯನ್ನ ಯಶಸ್ವಿಯಾಗಿ ನಿರ್ವಹಿಸಿದ ಗುತ್ತಿಗೆದಾರರ ಅನುಭವದ ಕೊರತೆ ಕಾರಣ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ವೆಲೋಡ್ರಮ್ ಕಾಮಗಾರಿ ನಿಂತು ಹೋಯಿತು. ಆದರೆ ಈ ಹಿಂದಿನ ವಿಜಯಪುರ ಜಿಲ್ಲಾದಿಕಾರಿ ಪಿ.ಸುನೀಲಕುಮಾರ ಅವರ ಮುತುವರ್ಜಿಯಿಂದಾಗಿ ಕಾಮಗಾರಿ ಮತ್ತೆ ಆರಂಭಗೊಂಡರೂ ಮಂದಗತಿಯಲ್ಲಿ ಸಾಗುತ್ತಿರುವ ಕಾರಣ ಸೈಕ್ಲಿಸ್ಟಗಳು ಆಕ್ರೋಶ ಹೊರಹಾಕುವಂತಾಗಿದೆ.

ಒಟ್ಟು ನಿಗದಿ ಪಡಿಸಿದ್ದ 7.34 ಕೋಟಿ ವೆಚ್ಚದಲ್ಲಿ ಸದ್ಯ 4 ಕೋಟಿ ಮೊತ್ತದ ಕಾಮಗಾರಿ ಮಾಡಲಾಗಿದ್ದು 4 ಕೋಟಿ ಹಣದ ಬಿಲ್ ಕೂಡಾ ಪಾವತಿಯಾಗಿದೆ ನಿಕಟಪೂರ್ವ ಡಿಸಿ ಪಿ.ಸುನೀಲಕುಮಾರ ಅವರು ಮುತುವರ್ಜಿ ವಹಿಸಿ ಚೆನೈಗೆ ತೆರಳಿ, ಅಲ್ಲಿನ ಪರಿಣಿತರ ತಂಡದೊಂದಿಗೆ ಚರ್ಚಿಸಿದ ಬಳಿಕ ಈಗಾಗಲೇ ಸೈಕ್ಲಿಂಗ್ ಫೆಡರೆಷನ್ ಆಪ್ ಇಂಡಿಯಾ (ಸಿಎಫ್‌ಐ) ತಂಡದ ತಜ್ಞರು ಸೆ 21, 2021 ರಂದು ವಿಜಯಪುರದಲ್ಲಿ ನಿರ್ಮಾಣಹಂತದಲ್ಲಿರುವ ವೆಲೋಡ್ರಮ್‌ಗೆ ಭೇಟಿ ನೀಡಿ, ಪರಿಶೀಲಿಸಿ, ಅರೆಬರೆಯಾಗಿ ನಿಂತಿರುವ ವೆಲೋಡ್ರೋಮ್ ಕಾಮಗಾರಿಯಲ್ಲಿ ಎಲ್ಲಿ ನ್ಯೂನ್ಯತೆಯಾಗಿದೆ ಎನ್ನುವ ಕುರಿತು ಸಮಗ್ರ ವರದಿಯನ್ನು ಈ ತಂಡ ಜಿಲ್ಲಾಡಳಿತಕ್ಕೆ ಸಲ್ಲಿಸಿತು. ನಂತರ ಈ ತಂಡ ನೀಡಿರುವ ವರದಿ ಆಧರಿಸಿ ವೆಲೋಡ್ರೋಮ್ ಕಾಮಗಾರಿ ಮತ್ತೆ ಆರಂಭಿಸಲಾಗಿದೆ, ಅರೆಬರೆಯಾದ ವೆಲೋಡ್ರೋಮ್ ಸರಿ ವಿಧಾನದಲ್ಲಿ ನಿರ್ಮಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಸಹ ನಿರ್ಮಿಸಲಾಗಿದ್ದು, ಸಂಬಂಧಿಸಿದ ಅಧಿಕಾರಿ, ಅಭಿಯಂತರರು ಸದಸ್ಯರಾಗಿದ್ದಾರೆ. ಈಗಾಗಲೇ ಹೈದರಾಬಾದ್, ಪಟಿಯಾಲಾದಲ್ಲಿ ಸೈಕ್ಲಿಂಗ್ ವೆಲೋಡ್ರೋಮ್ ಇದ್ದು, ಪುಣೆಯಲ್ಲಿ ನಿರ್ಮಿಸಿದ ವೆಲೋಡ್ರೋಮ್ ಕೂಡ ತಾಂತ್ರಿಕ ದೋಷದಿಂದ ಸಮಸ್ಯೆಯಾಗಿ ನಿಂತಿದೆ. ಹೀಗಾಗಿ ಪುಣೆಯ ವೆಲೋಡ್ರೋಮ್‌ಗೆ ಆದ ಗತಿ ವಿಜಯಪುರದ ವೆಲೋಡ್ರೋಮ್‌ಗೆ ಆಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಈ ಸಮಿತಿ ರಚಿಸಲಾಗಿದೆ. ಸದ್ಯ ಸಮಿತಿಯ ನಿರ್ಣಯದಂತೆ ಕಾಮಗಾರಿ ಆರಂಭಗೊಂಡರೂ ಶೇಕಡಾ ತೊಂಭತ್ತರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಇನ್ನುಳಿದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ.

ವಿಜಯಪುರ ಜಿಲ್ಲೆಯ ಪ್ರತಿಭೆಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಸಾಕಷ್ಟು ಸಾಧನೆ ಮಾಡಿದ್ದು ಈ ವೆಲೋಡ್ರಮ್ ಕಾಮಗಾರಿ ಪೂರ್ಣಗೊಳಿಸಿದರೆ ಸೈಕ್ಲಿಸ್ಟಗಳು ಸಾಧನೆ ಮಾಡಲು ಇನ್ನಷ್ಟು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಕಾಮಗಾರಿ ಆದಷ್ಟು ಬೇಗ ಮುಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂಬುದೇ ಹಿಂದುಸ್ತಾನ್ ಟೈಮ್ಸ್ ಕನ್ನಡದ ಆಶಯ.

( ವರದಿ: ಸಮೀವುಲ್ಲಾ ಉಸ್ತಾದ್‌)

IPL_Entry_Point