‘ಫಾದರ್’ ಪ್ರಕಾಶ್ ರಾಜ್‌ಗೆ ಮಗನಾದ ಡಾರ್ಲಿಂಗ್ ಕೃಷ್ಣ; ಅಪ್ಪ ಮಗನ ಬಾಂಧವ್ಯದ ಕಥೆಗೆ ಆರ್ ಚಂದ್ರು ನಿರ್ಮಾಪಕ
Apr 28, 2024 08:38 AM IST
‘ಫಾದರ್’ ಪ್ರಕಾಶ್ ರಾಜ್‌ಗೆ ಮಗನಾದ ಡಾರ್ಲಿಂಗ್ ಕೃಷ್ಣ; ಅಪ್ಪ ಮಗನ ಬಾಂಧವ್ಯದ ಕಥೆಗೆ ಆರ್ ಚಂದ್ರು ನಿರ್ಮಾಪಕ
- ಡಾರ್ಲಿಂಗ್ ಕೃಷ್ಣ ಮತ್ತು ಪ್ರಕಾಶ್ ರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಲಿರುವ ಫಾದರ್ ಸಿನಿಮಾದ ಅದ್ಧೂರಿ ಮುಹೂರ್ತ ನೆರವೇರಿದೆ. ಆರ್‌ಸಿ ಚಂದ್ರು ನಿರ್ಮಾಣ ಮಾಡಲಿರುವ ಈ ಸಿನಿಮಾದ ಮೊದಲ ದೃಶ್ಯಕ್ಕೆ ಶಿವರಾಜ್‌ಕುಮಾರ್ ಕ್ಲಾಪ್ ಮಾಡಿ ಶುಭ ಕೋರಿದರು.
Father Movie Launch: ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಆರ್ ಚಂದ್ರು, ಕೆಲವು ದಿನಗಳ ಹಿಂದೆ ಆರ್‌ಸಿ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸುವುದರ ಮೂಲಕ ಐದು ಸಿನಿಮಾಗಳನ್ನು ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಆ ಪೈಕಿ ಮೊದಲ ಚಿತ್ರವಾಗಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ "ಫಾದರ್" ಚಿತ್ರ ನಿರ್ಮಾಣವಾಗುತ್ತಿದೆ. ಇತ್ತೀಚಿಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಅವರು ಆರಂಭ ಫಲಕ ತೋರುವುದರ ಮೂಲಕ "ಫಾದರ್ ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿದರು.
ಚಿತ್ರಕ್ಕೆ ಕ್ಲಾಪ್ ಮಾಡಿದ ಶಿವಣ್ಣ
ಆರ್ ಚಂದ್ರು ನನ್ನ ಆತ್ಮೀಯರು. ಸಿನಿಮಾವನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. ಆರ್ ಸಿ ಸ್ಟುಡಿಯೋಸ್ ಮೂಲಕ ಮೊದಲ ಚಿತ್ರವಾಗಿ ಫಾದರ್ ಚಿತ್ರ ಆರಂಭಿಸಿದ್ದಾರೆ. ಚಂದ್ರು ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಶುಭವಾಗಲಿ ಎಂದು ಶಿವರಾಜಕುಮಾರ್ ಹಾರೈಸಿದರು. ಶಿವಣ್ಣನ ಮಾತಿಗೆ ಪ್ರತಿಕ್ರಿಯಿಸಿದ ಚಂದ್ರು, ನನ್ನ ಚಾರ್ ಮಿನಾರ್ ಚಿತ್ರ ಆರಂಭವಾದಾಗಿನಿಂದ ಹಿಡಿದು ಈವರೆಗೂ ನನಗೆ ಶಿವಣ್ಣ ಹಾಗೂ ಗೀತಾ ಶಿವರಾಜಕುಮಾರ್ ಅವರು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಚುನಾವಣೆ ಸಮಯ. ಆದರೂ ಇಂದು ಇಲ್ಲಿಗೆ ಆಗಮಿಸಿ, ನಮ್ಮ ಫಾದರ್ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಅವರಿಗೆ ಹಾಗೂ ಆಗಮಿಸಿರುವ ಎಲ್ಲಾ ಗಣ್ಯರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು ಆರ್ ಚಂದ್ರು.
ಆರ್‌ಸಿ ಸಂಸ್ಥೆಯ ಮೊದಲ ಹೆಜ್ಜೆ
"ಕೆಲವು ದಿನಗಳ ಮುಂಚೆ ನಮ್ಮ ಆರ್ ಸಿ ಸ್ಟುಡಿಯೋಸ್ ಸಂಸ್ಥೆಯನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು. ಈ ಸಂಸ್ಥೆಯಿಂದ ಒಂದು ವರ್ಷದಲ್ಲಿ ಐದು ಸಿನಿಮಾಗಳನ್ನು ನಿರ್ಮಿಸುವುದಾಗಿ ಹೇಳಿದ್ದೆ. ಅದರ ಮೊದಲ ಹೆಜ್ಜೆಯಾಗಿ ಇಂದು ಫಾದರ್ ಚಿತ್ರ ಆರಂಭವಾಗಿದೆ. ಶಿವಣ್ಣ ಅವರ ಭೈರಾಗಿ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ರಾಜ್ ಮೋಹನ್ ಈ ಚಿತ್ರದ ನಿರ್ದೇಶಕರು. ಡಾರ್ಲಿಂಗ್ ಕೃಷ್ಣ ನಾಯಕರಾಗಿ, ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಪ್ರಕಾಶ್ ರಾಜ್, ಸುನೀಲ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮುಂಬೈನ ಆನಂದ್ ಪಂಡಿತ್ ಅವರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಹನುಮಾನ್ ಚಿತ್ರದ ಖ್ಯಾತಿಯ ಹರಿ ಸಂಗೀತ ನೀಡುತ್ತಿದ್ದಾರೆ ಎಂದರು.
ತಂದೆ ಮಗನ ಬಾಂಧವ್ಯದ ಕಥೆ
ಇದೊಂದು ತಂದೆ - ಮಗನ ಬಾಂಧವ್ಯದ ಚಿತ್ರ. ಕಥೆ ತುಂಬಾ ಚೆನ್ನಾಗಿದೆ. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು "ಫಾದರ್" ಚಿತ್ರದಲ್ಲಿದೆ ಎಂದರು ನಿರ್ದೇಶಕ ರಾಜ್ ಮೋಹನ್. ನಿರ್ದೇಶಕರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು. ಆರ್ ಚಂದ್ರು ಅವರ ಜೊತೆಗೆ ಇದು ನನ್ನ ಮೊದಲ ಚಿತ್ರ ಎಂದು ನಾಯಕ ಡಾರ್ಲಿಂಗ್ ಕೃಷ್ಣ ತಿಳಿಸಿದರು. ಕಥೆ ಹಾಗೂ ನನ್ನ ಪಾತ್ರ ಎರಡು ತುಂಬಾ ಚೆನ್ನಾಗಿದೆ ಎಂದರು ನಾಯಕಿ ಅಮೃತ ಅಯ್ಯಂಗಾರ್. ಸಂಗೀತ ನಿರ್ದೇಶಕ ಹರಿ ಸೇರಿದಂತೆ ಅನೇಕರು ಚಿತ್ರದ ಕುರಿತು ಮಾತನಾಡಿದರು.
ಮುಖ್ಯ ಪಾತ್ರಗಳನ್ನು ಹೊರತುಪಡಿಸಿ, ಇನ್ನುಳಿದ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸುಜ್ಞಾನ ಛಾಯಾಗ್ರಹಣ, ಮಂಜು ಮಾಂಡವ್ಯ ಸಂಭಾಷಣೆ, ರವಿ ವರ್ಮಾ ಮತ್ತು ಚೇತನ್ ಡಿಸೋಜಾ ಸಾಹಸ ನಿರ್ದೇಶನ, ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಚಿತ್ರಕ್ಕಿರಲಿದೆ.
ರಾಜಕೀಯ ಮುಖಂಡ ಎಚ್.ಎಂ.ರೇವಣ್ಣ, ಶಾಸಕ ಪ್ರದೀಪ್ ಈಶ್ವರ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಬಹದ್ದೂರ್ ಚೇತನ್ ಕುಮಾರ್, ಮಂಜುನಾಥ್, ಮಮತ ದೇವರಾಜ್, ಮಂಜುನಾಥ್ ಮುಂತಾದ ಗಣ್ಯರು ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.