Ranneeti Review: ಒಂದು ಯುದ್ಧದ ಹಿಂದಿನ ಹಲವು ಯುದ್ಧಗಳ ಕಥೆ; ದೇಶದೇಶಗಳ ರಾಜಕೀಯ ಚದುರಂಗದಲ್ಲಿ ಸುದ್ದಿಯೂ ಅಸ್ತ್ರ -ರಣ್‌ನೀತಿ ವೆಬ್‌ಸೀರೀಸ್
ಭಾರತದ ಸಶಸ್ತ್ರಪಡೆಗಳು ಮತ್ತು ಗುಪ್ತಚರ ವಿಭಾಗಗಳ ಸಂಘಟಿತ ಕಾರ್ಯಾಚರಣೆ ಬಾಲಾಕೋಟ್ ದಾಳಿ. ಈ ಕಾರ್ಯಾಚರಣೆ ಮತ್ತು ನಂತರದ ವಿದ್ಯಮಾನಗಳ ತೆರೆಯ ಹಿಂದಿನ ಕಥೆಯನ್ನು ಸಿನಿಮಾ ವ್ಯಾಕರಣದಲ್ಲಿ ಹೇಳುವ ಪ್ರಯತ್ನ ‘ರಣನೀತಿ: ಬಾಲಾಕೋಟ್ ಅಂಡ್ ಬಿಯಾಂಡ್’ ವೆಬ್‌ಸರಣಿಯಲ್ಲಿದೆ.
ರಣ್‌ನೀತಿ ವೆಬ್‌ಸೀರೀಸ್: ಭಾರತದ ರಕ್ಷಣಾ ಇತಿಹಾಸದಲ್ಲಿ ಬಾಲಾಕೋಟ್ ದಾಳಿಯನ್ನು ಪ್ರಮುಖ ಮೈಲಿಗಲ್ಲು ಎಂದೇ ಗುರುತಿಸಲಾಗಿದೆ. ಇತರೆಲ್ಲ ಮಿಲಿಟರಿ ಕಾರ್ಯಾಚರಣೆಗಳ ಸಂದರ್ಭದಲ್ಲಿ ಇರುವಂತೆಯೇ ಬಾಲಾಕೋಟ್ ದಾಳಿ ಮತ್ತು ಅದರ ಯಶಸ್ಸಿನ ಬಗ್ಗೆ ಹಲವು ಕಥನಗಳು (ನೆರೇಟೀವ್ಸ್) ಚಾಲ್ತಿಯಲ್ಲಿವೆ. ಭಾರತದ ಸಶಸ್ತ್ರಪಡೆಗಳು ಮತ್ತು ಗುಪ್ತಚರ ವಿಭಾಗದ ಈ ಸಂಘಟಿತ ಕಾರ್ಯಾಚರಣೆಯ ನಂತರ ಒಟ್ಟಾರೆಯಾಗಿ ಕಾಶ್ಮೀರ ಕುರಿತಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗ್ರಹಿಕೆಗಳು ಮತ್ತು ಅಭಿಪ್ರಾಯಗಳು ಬದಲಾಗಿದ್ದು ಸುಳ್ಳಲ್ಲ. ಬಾಲಾಕೋಟ್ ಕಾರ್ಯಾಚರಣೆ ಅಷ್ಟರಮಟ್ಟಿಗೆ ಯಶಸ್ವಿ. ದಕ್ಷಿಣ ಏಷ್ಯಾ ವಲಯದಲ್ಲಿ ಭಾರತೀಯ ವಾಯುಸೇನೆಯ ಪ್ರಭಾವ ಎಷ್ಟರಮಟ್ಟಿಗೆ ಎನ್ನುವುದನ್ನೂ ಸಾರಿ ಹೇಳಿದ ಘಟನೆ ಇದಾಗಿದೆ.
ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರು ಭಾರತದ ಕೇಂದ್ರೀಯ ಮೀಸಲು ಪಡೆ ಪೊಲೀಸರು (ಸಿಆರ್‌ಪಿಎಫ್) ಇದ್ದ ಬಸ್ ಒಂದರ ಮೇಲೆ ಆತ್ಮಾಹುತಿ ನಡೆಸಿದ್ದರು. ದಾಳಿಯ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವ ಮಾಹಿತಿ ಕಲೆ ಹಾಕಿದ ಭಾರತದ ರಕ್ಷಣಾ ಪಡೆಗಳು ಪಾಕಿಸ್ತಾನದ ಗಡಿಯೊಳಗೆ ಪ್ರವೇಶಿಸಿ ಕಾರ್ಯಾಚರಣೆ ನಡೆಸಲು ಮುಂದಾದವು. ಅಂಥ ಕಾರ್ಯಾಚರಣೆಯ ಸಿದ್ಧತೆ, ದಾಳಿ ಮತ್ತು ನಂತರದ ಬೆಳವಣಿಗೆಗಳ ಕುರಿತ ಮಾಹಿತಿಯನ್ನು ರೋಚಕವಾಗಿ ಕಟ್ಟಿಕೊಡುತ್ತದೆ 'ರಣ್‌ನೀತಿ: ಬಾಲಾಕೋಟ್ ಅಂಡ್ ಬಿಯಾಂಡ್' ವೆಬ್‌ಸೀರೀಸ್.
ಇತ್ತೀಚಿನ ದಿನಗಳಲ್ಲಿ ತೆರೆಕಂಡ ಹೃತಿಕ್ ರೋಷನ್-ದೀಪಿಕಾ ಪಡುಕೋಣೆ ಅಭಿನಯದ 'ಫೈಟರ್', ವರುಣ್ ತೇಜ್-ಮಾನುಷಿ ಛಿಲ್ಲರ್ ಅಭಿಯನದ 'ಆಪರೇಷನ್ ವ್ಯಾಲಂಟೈನ್' ಚಿತ್ರಗಳ ಹಿನ್ನೆಲೆಯಲ್ಲಿಯೇ 'ರಣ್‌ನೀತಿ' ವೆಬ್ ಸರಣಿಯನ್ನೂ ಗ್ರಹಿಸಬಹುದು. ಮೊದಲ ಎರಡು ಚಿತ್ರಗಳು ಒಂದು ಕಾಲಮಿತಿಯಲ್ಲಿ ನಿರ್ದಿಷ್ಟ ಘಟನೆಯನ್ನು ಪ್ರಸ್ತಾಪಿಸಿ ಮುಗಿದು ಹೋಗುತ್ತವೆ. ಆದರೆ 'ರಣ್‌ನೀತಿ' ಒಂದು ಮಿಲಿಟರಿ ಕಾರ್ಯಾಚರಣೆಗೆ ಇರುವ ಹಲವು ಮುಖಗಳನ್ನು ಸಾವಧಾನವಾಗಿ ಅನಾವರಣಗೊಳಿಸಲು ಪ್ರಯತ್ನಿಸುತ್ತದೆ.
ರಣ್‌ನೀತಿ: ಬಾಲಾಕೋಟ್ ಅಂಡ್ ಬಿಯಾಂಡ್ ವೆಬ್ ಸರಣಿಯ ಕಥಾಹಂದರ ಏನು?
ಭಾರತೀಯ ಗುಪ್ತಚರ ಇಲಾಖೆ (R&AW) ಏಜೆಂಟ್ ಮತ್ತು ಅವರ ತಂಡವು ಪುಲ್ವಾಮಾ ಮೇಲಿನ ದಾಳಿಗಾಗಿ ಸರಿಯಾದ ರೀತಿಯಲ್ಲಿ ಪಾಕಿಸ್ತಾನದ ಮೇಲೆ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡುತ್ತಾರೆ. ಈ ದಾಳಿ ಮತ್ತು ಅದರ ನಂತರದ ಬೆಳವಣಿಗೆಗಳು ಕೇವಲ ಮಿಲಿಟರಿ ಕಾರ್ಯಾಚರಣೆಗಷ್ಟೇ ಸೀಮಿತವಾಗುವುದಿಲ್ಲ. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಸುದ್ದಿ ಮಾಧ್ಯಮಗಳನ್ನೂ ಹೇಗೆ ತಮ್ಮ ತಂತ್ರಗಾರಿಕೆಯ ಭಾಗವಾಗಿಸಿಕೊಳ್ಳುತ್ತವೆ. ಆ ಮೂಲಕ ಇಡೀ ಜಗತ್ತು ಘಟನೆಯನ್ನು ಹೇಗೆ ನೋಡಬೇಕು, ಅರ್ಥೈಸಿಕೊಳ್ಳಬೇಕು ಎನ್ನುವ ಬಗ್ಗೆ ತಮ್ಮ ದೃಷ್ಟಿಕೋನವನ್ನು ಮುಂದಿಡುತ್ತವೆ. ಕ್ಷಿಪಣಿಯೊಂದು ಮೈಕ್ ಆಗಿ ಪರಿವರ್ತನೆಯಾಗುವುದು, ಸುದ್ದಿ-ದಾಖಲೆಗಳು ಬಂದೂಕಿನ ಗುಂಡುಗಳಾಗಿ ಪರಿವರ್ತನೆಯಾಗುವ ಗ್ರಾಫಿಕ್ಸ್ ಪ್ರತಿ ಸಂಚಿಕೆಯ ಆರಂಭದಲ್ಲಿ ಬರುತ್ತದೆ. ಈ ಮೂಲಕ ಮಾಹಿತಿ ಸಮರದ ಮಹತ್ವವನ್ನೂ ಬಿಂಬಿಸಲಾಗಿದೆ. ಬಾಲಾಕೋಟ್ ದಾಳಿಯ ಮುಖ್ಯ ಹೈಲೈಟ್ ಎನಿಸಿದ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್ ಅವರ ಧೈರ್ಯ, ಸಾಹಸ ಮತ್ತು ಚಾಕಚಕ್ಯತೆಯನ್ನೂ ಮನಮುಟ್ಟುವಂತೆ ವಿವರಿಸಲಾಗಿದೆ.
ರಣ್‌ನೀತಿ: ಬಾಲಾಕೋಟ್ ಅಂಡ್ ಬಿಯಾಂಡ್ ವೆಬ್ ಸರಣಿ ಹೇಗಿದೆ? ನೋಡೋದು ಟೈಮ್‌ವೇಸ್ಟ್ ಅನ್ಸುತ್ತಾ?
ರಣ್‌ನೀತಿ ವೆಬ್‌ಸರಣಿಯು ಒಟ್ಟು 9 ಸಂಚಿಕೆಯಾಗಿ ವಿಭಾಗವಾಗಿದೆ. ದೃಷ್ಟಿಕೋನ್, ಯುಕ್ತಿಕೋನ್, ಅನುಭೂತಿಕೋನ್, ಪ್ರತಿಶೋಧಿತಾಕೋನ್, ಶಕ್ತಿನೋನ್, ಕಥಾಕೋನ್, ಝೂಟ್‌ಕೋನ್, ರಹಸ್ಯಕೋನ್, ವಾಸ್ತವಿಕಕೋನ್ ಎಂದು 9 ಸಂಚಿಕೆಗಳಿಗೆ ಅನ್ವಯವಾಗುವಂತೆ ಹೆಸರಿಸಲಾಗಿದೆ. ಪ್ರತಿ ಸಂಚಿಕೆಯೂ ಕಥನದ ಒಂದು ಮುಖವನ್ನು ಅನಾವರಣಗೊಳಿಸಿ ಮುಂದಿನ ಸಂಚಿಕೆಗೆ ಭೂಮಿಕೆ ಸಿದ್ಧಪಡಿಸಿ ಮುಕ್ತಾಯಗೊಳ್ಳುತ್ತದೆ. ಪ್ರತಿ ಸಂಚಿಕೆಯು ಸುಮಾರು 40 ನಿಮಿಷಗಳ ಅವಧಿ ಹೊಂದಿವೆ.
'ಯುದ್ಧವಾಗಲಿ, ರಾಜಕೀಯವಾಗಲಿ ನೀವು ಯಾವ ಬಿಂದುವಿನಿಂದ ನಿಂತು ನೋಡ್ತೀರಿ ಎನ್ನುವುದೇ ಮುಖ್ಯ. ಯುದ್ಧಗಳು ಮೊದಲು ನಡೆಯುವುದು ಮನುಷ್ಯನ ತಲೆಯಲ್ಲಿ. ಅದಕ್ಕೆ ಬಂದೂಕು, ಕ್ಷಿಪಣಿಗಳಷ್ಟೇ ಸಾಲದು. ಮಾಧ್ಯಮಗಳೂ ಬೇಕು, ಸುದ್ದಿ-ಮಾಹಿತಿಯು ಈಗ ಯುದ್ಧದ ಪ್ರಮುಖ ಅಸ್ತ್ರಗಳು' ಎನ್ನುವುದು ಈ ವೆಬ್‌ಸರಣಿ ಪ್ರತಿಪಾದಿಸುವ ಅತಿಮುಖ್ಯ ಅಂಶ.
ಸಮಕಾಲೀನ ಇತಿಹಾಸ (ಕಾನ್‌ಟೆಂಪರರಿ ಹಿಸ್ಟರಿ) ಕುರಿತ ಇಂಥ ವೆಬ್‌ಸರಣಿಗಳಲ್ಲಿ ಸಹಜವಾಗಿಯೇ ನಮ್ಮ ಕಾಲದ ಎಷ್ಟೋ ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಒಂದು ಪಕ್ಷದ ಪರವಾಗಿ ಇದೆ ಎನ್ನಿಸುವ ಹಲವು ಸಂಭಾಷಣೆಗಳೂ ಇವೆ. ಚುನಾವಣೆ ಕಾವೇರಿರುವ ಸಂದರ್ಭದಲ್ಲಿಯೇ ಈ ವೆಬ್‌ಸರಣಿ ಬಿಡುಗಡೆಯಾಗಿರುವುದರ ಹಿಂದೆಯೂ ಪರೋಕ್ಷ ಉದ್ದೇಶಗಳು ಇರುವುದನ್ನು ಅಲ್ಲಗಳೆಯಲು ಆಗುವುದಿಲ್ಲ. ಆದರೆ ಇದೊಂದೇ ಕಾರಣಕ್ಕಾಗಿ ಈ ವೆಬ್‌ಸರಣಿಯನ್ನು ತಿರಸ್ಕರಿಸಬೇಕಾಗಿಯೂ ಇಲ್ಲ.
ರಣ್‌ನೀತಿಯ ನಿರ್ಮಾಣ, ಗ್ರಾಫಿಕ್ಸ್ ಬಳಕೆ ಗಮನ ಸೆಳೆಯುತ್ತವೆ. ಆದರೆ ಚಿತ್ರಕತೆ ಮತ್ತು ಸಂಭಾಷಣೆ ಮೆಚ್ಚುಗೆಗೆ ಪಾತ್ರವಾಗುತ್ತವೆ. ಸುದೀರ್ಘ ಅವಧಿಯ ಸರಣಿಗಳಲ್ಲಿ ಕುತೂಹಲ ಉಳಿಸಿಕೊಳ್ಳುವುದು ಮತ್ತು ಗಂಟೆಗಟ್ಟಲೆ ನೋಡಿದ ಮೇಲೆಯೂ ಒಂದು ಸಾರ್ಥಕ್ಯ ಭಾವ ಮೂಡುವಂತೆ ಸರಣಿಯನ್ನು ಮುಗಿಸುವುದು ಸುಲಭವಲ್ಲ.
ಈ ಸರಣಿಯ ಏರ್‌ಫೋರ್ಸ್ ಪೈಲಟ್ ಅಭಿಮನ್ಯು (ನಿಜ ಜೀವನದ ಅಭಿಮನ್ಯು ವರ್ಧಮಾನ್) ಪಾಕಿಸ್ತಾನದಲ್ಲಿ ಸೆರೆ ಸಿಕ್ಕ ನಂತರದ ವಿದ್ಯಮಾನಗಳನ್ನು ಮಾಧ್ಯಮಗಳು ಗ್ರಹಿಸಿದ ರೀತಿಯ ವಿಶ್ಲೇಷಣೆ ಮನಮುಟ್ಟುವಂತಿದೆ. ಭಾರತ ಮತ್ತು ಪಾಕಿಸ್ತಾನ; ಎರಡೂ ದೇಶಗಳ ಸರ್ಕಾರ ಮತ್ತು ಮಾಧ್ಯಮಗಳು ಅಭಿಮನ್ಯು ಪ್ರಕರಣದಿಂದ ಏನು ಸಾಧಿಸಲು ಹೊರಟಿದ್ದವು ಎನ್ನುವ ಸಂಗತಿಗೆ ಈ ವೆಬ್‌ಸರಣಿ ಹೊಸ ದೃಷ್ಟಿಕೋನವನ್ನೇ ನೀಡಿದೆ. ಇಡೀ ಸರಣಿಯನ್ನು ಮುನ್ನಡೆಸುವ ಹೊಣೆಗಾರಿಕೆಯನ್ನು 'ಕಶ್ಯಪ್ ಸಿನ್ಹಾ' ಪಾತ್ರಧಾರಿ ಜಿಮ್ಮಿ ಶೆರ್‌ಗಿಲ್ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಸಂವಹನ ತಜ್ಞೆ ಮನಿಷಾ ಪಾತ್ರದಲ್ಲಿ ಲಾರಾ ದತ್ತಾ, ರಾಷ್ಟ್ರೀಯ ಭದ್ರತಾ ಸಲಹೆಗಾರನ ಪಾತ್ರದಲ್ಲಿ ಆಶೀಶ್ ವಿದ್ಯಾರ್ಥಿ ಅಭಿನಯ ಗಮನ ಸೆಳೆಯುತ್ತದೆ.
ಬೇಸಿಗೆ ರಜೆಯಲ್ಲಿ ನೋಡಲು, 14 ವರ್ಷ ದಾಟಿದ ಮಕ್ಕಳಿಗೆ ತೋರಿಸಲು ಈ ವೆಬ್ ಸರಣಿ ಉತ್ತಮ ಆಯ್ಕೆ ಆಗಬಲ್ಲದು.
ರಣ್‌ನೀತಿ: ಬಾಲಾಕೋಟ್ ಅಂಡ್ ಬಿಯಾಂಡ್ ವೆಬ್‌ಸರಣಿಯ ಮುಖ್ಯ ವಿವರ
ಹೆಸರು: ರಣ್‌ನೀತಿ: ಬಾಲಾಕೋಟ್ ಅಂಡ್ ಬಿಯಾಂಡ್ (ರಣನೀತಿ: ಬಾಲಾಕೋಟ್ ಮತ್ತು ಅದರಾಚೆಗೆ)
ಹೈಲೈಟ್ಸ್: ಉತ್ತಮ ಅಭಿನಯ, ಬಿಗಿಯಾದ ಸಂಭಾಷಣೆ, ಬಿಗಿ ಬಂಧದ ಚಿತ್ರಕತೆ, ರೋಮಾಂಚನಗೊಳಿಸುವ ಗ್ರಾಫಿಕ್ಸ್ ಮತ್ತು ನಿರ್ಮಾಣ
ಯಾವ ಓಟಿಟಿಯಲ್ಲಿ ಲಭ್ಯ: ಜಿಯೊ ಸಿನಿಮಾ ಪ್ರೀಮಿಯಮ್
ಭಾಷೆ: ಕನ್ನಡ, ಹಿಂದಿ, ಮರಾಠಿ, ತೆಲುಗು, ತಮಿಳು, ಬಾಂಗ್ಲಾ
ತಾರಾಗಣ: ಜಿಮ್ಮಿ ಶೇರ್‌ಗಿಲ್, ಆಶುತೋಷ್ ರಾಣಾ, ಲಾರಾ ದತ್ತಾ, ಆಶೀಷ್ ವಿದ್ಯಾರ್ಥಿ, ಪ್ರಸನ್ನ ಇತರರು
ನಿರ್ದೇಶನ: ಸಂತೋಷ್ ಸಿಂಗ್
(Review of Ranneeti Balakot & Beyond. This copy first appeared in Hindustan Times Kannada. To read more on OTT, please visit kannada.hindustantimes.com . ಮನರಂಜನೆ, ಓಟಿಟಿ ಕುರಿತ ಮತ್ತಷ್ಟು ಸುದ್ದಿ, ಮಾಹಿತಿ, ಫೋಟೊಗ್ಯಾಲರಿ, ವೆಬ್‌ಸ್ಟೋರಿ ನೋಡಲು ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ.)