ಕನ್ನಡ ಸುದ್ದಿ  /  Entertainment  /  Tamil Actor Karthi Praised Bangalore In Ponniyin Selvan Promotion

Tamil actor praises Bangalore: ಸಿಲಿಕಾನ್‌ ಸಿಟಿ ನನಗೆ ನ್ಯೂಯಾರ್ಕ್‌ ಸಿಟಿ ಇದ್ದಂತೆ...ಬೆಂಗಳೂರನ್ನು ಹಾಡಿ ಹೊಗಳಿದ ತಮಿಳು ನಟ

ಬೆಂಗಳೂರು ನಮಗೆ ಆಗ ನ್ಯೂಯಾರ್ಕ್‌ ಇದ್ದ ಹಾಗೆ ಇತ್ತು. ಇಲ್ಲಿ ಇಂಗ್ಲೀಷ್‌ ಸಿನಿಮಾಗಳು ರಿಲೀಸ್‌ ಆಗುತ್ತಿತ್ತು. ರೂಮ್‌ ಬಹಳ ದುಬಾರಿ ಆಗಿದ್ದರಿಂದ ಎಲ್ಲಿಯೂ ರೂಮ್‌ ಬುಕ್‌ ಮಾಡದೆ ಸುತ್ತಾಡಿ, ಎಂ.ಜಿ ರೋಡ್‌ನಲ್ಲಿ ವಿಂಡೋ ಶಾಪಿಂಗ್‌ ಮಾಡುತ್ತಿದ್ದೆವು ತಮಿಳು ನಟ ಕಾರ್ತಿ ಬೆಂಗಳೂರಿನ ಬಗ್ಗೆ ಮಾತನಾಡಿದ್ದಾರೆ.

ಬೆಂಗಳೂರು ಹೊಗಳಿದ ತಮಿಳು ನಟ ಕಾರ್ತಿ
ಬೆಂಗಳೂರು ಹೊಗಳಿದ ತಮಿಳು ನಟ ಕಾರ್ತಿ (PC: karthi_offl Instagram )

ಖ್ಯಾತ ನಿರ್ದೇಶಕ ಮಣಿರತ್ನಂ ಆಕ್ಷನ್‌ ಕಟ್‌ ಹೇಳಿರುವ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ 'ಪೊನ್ನಿಯಿನ್‌ ಸೆಲ್ವನ್‌' ಸೆಪ್ಟೆಂಬರ್ 30ರಂದು ತೆರೆ ಕಾಣುತ್ತಿದೆ. ಇತ್ತೀಚೆಗೆ ಚಿತ್ರತಂಡ ಟ್ರೇಲರ್‌ ಕೂಡಾ ಬಿಡುಗಡೆ ಮಾಡಿತ್ತು. ಇದು ಪ್ಯಾನ್‌ ಇಂಡಿಯಾ ಸಿನಿಮಾ ಆಗಿರುವುದರಿಂದ ಚಿತ್ರತಂಡ ದೇಶದ ಪ್ರಮುಖ ನಗರಗಳಿಗೆ ತೆರಳಿ ಪ್ರಚಾರ ಕಾರ್ಯ ಮಾಡುತ್ತಿದೆ. ನಿನ್ನೆ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ವಿಕ್ರಮ್‌, ಕಾರ್ತಿ, ಜಯಂರವಿ, ತ್ರಿಷಾ ಹಾಗೂ ಇನ್ನಿತರರು ಭಾಗವಹಿಸಿದ್ದರು. ಎಲ್ಲರೂ ಸಿನಿಮಾ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ನಟ ಕಾರ್ತಿ, ಬೆಂಗಳೂರು, ಪುನೀತ್‌ ರಾಜ್‌ಕುಮಾರ್‌, ಡಾ. ರಾಜ್‌ಕುಮಾರ್‌ ಸಿನಿಮಾಗಳನ್ನು ಹಾಡಿ ಹೊಗಳಿದರು. ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಕಾರ್ತಿ, ನಂತರ ನನಗೆ ಇಷ್ಟೇ ಕನ್ನಡ ಬರುವುದು ಎಂದರು, ನಂತರ ತಮಿಳು ಹಾಗೂ ಇಂಗ್ಲೀಷ್‌ನಲ್ಲಿ ಮಾತನಾಡಿದರು. ಇಲ್ಲಿಗೆ ಬರುತ್ತಿದ್ದಂತೆ ನನಗೆ ಕಾಲೇಜು ದಿನಗಳು ನೆನಪಾಯ್ತು. ನಾವು ಮನೆಯಲ್ಲಿ ಸುಳ್ಳು ಹೇಳಿ ರಾತ್ರಿ ಚೆನ್ನೈನಿಂದ ಬೆಂಗಳೂರಿಗೆ ಬಂದು ಇಲ್ಲೆಲ್ಲಾ ಸುತ್ತಾಡಿ ನಂತರ ಚೆನ್ನೈ ಬಸ್‌ ಹಿಡಿದು ಹೊರಡುತ್ತಿದ್ದೆವು.

ಬೆಂಗಳೂರು ನಮಗೆ ಆಗ ನ್ಯೂಯಾರ್ಕ್‌ ಇದ್ದ ಹಾಗೆ ಇತ್ತು. ಇಲ್ಲಿ ಇಂಗ್ಲೀಷ್‌ ಸಿನಿಮಾಗಳು ರಿಲೀಸ್‌ ಆಗುತ್ತಿತ್ತು. ರೂಮ್‌ ಬಹಳ ದುಬಾರಿ ಆಗಿದ್ದರಿಂದ ಎಲ್ಲಿಯೂ ರೂಮ್‌ ಬುಕ್‌ ಮಾಡದೆ ಸುತ್ತಾಡಿ, ಎಂ.ಜಿ ರೋಡ್‌ನಲ್ಲಿ ವಿಂಡೋ ಶಾಪಿಂಗ್‌ ಮಾಡುತ್ತಿದ್ದೆವು. ಕಡಿಮೆ ಬೆಲೆಗೆ ಸಿಗುತ್ತಿದ್ದರಿಂದ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಬೇಕಿದ್ದನ್ನು ಖರೀದಿಸುತ್ತಿದ್ದೆವು. ಅದನ್ನು ನೆನಪಿಸಿಕೊಂಡರೆ ಬಹಳ ಖುಷಿಯಾಗುತ್ತಿದೆ. ಕನ್ನಡದಲ್ಲಿ ಡಾ. ರಾಜ್‌ಕುಮಾರ್‌ ಅವರು ಬಹಳ ಅದ್ಭುತ ಸಿನಿಮಾಗಳನ್ನು ಮಾಡಿದ್ದಾರೆ. ಅವರು ನಿಜಕ್ಕೂ ಬಹಳ ಇಂಟ್ರಸ್ಟಿಂಗ್‌ ಪರ್ಸನಾಲಿಟಿ, ಪುನೀತ್‌ ನಮಗೆ ಬಹಳ ಸ್ಪೆಷಲ್‌, ಅವರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇವೆ ಎಂದರು. ವಿಕ್ರಮ್‌, ತ್ರಿಷಾ, ಜಯಂ ರವಿ ಕೂಡಾ ಮಾತನಾಡಿ ಚಿತ್ರವನ್ನು ನೋಡಿ ಎಂದು ಮನವಿ ಮಾಡಿದರು.

'ಪೊನ್ನಿಯಿನ್ ಸೆಲ್ವನ್' 500 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗುತ್ತಿರುವ ಸಿನಿಮಾ. ಸ್ಟಾರ್ ನಟರ ದಂಡೇ ಈ ಚಿತ್ರದಲ್ಲಿದೆ. ಚಿತ್ರವನ್ನು ಮದ್ರಾಸ್ ಟಾಕೀಸ್ ಹಾಗೂ ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಜೊತೆ ಸೇರಿ ನಿರ್ಮಿಸುತ್ತಿವೆ. ಖ್ಯಾತ ನಿರ್ದೇಶಕ ಮಣಿರತ್ನಂ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ವಿಕ್ರಮ್, ಐಶ್ವರ್ಯ ರೈ ಬಚ್ಚನ್, ಜಯಂ ರವಿ, ಶರತ್​ ಕುಮಾರ್, ಕಾರ್ತಿ, ತ್ರಿಷಾ, ವಿಕ್ರಮ್ ಪ್ರಭು, ಪ್ರಕಾಶ್ ರಾಜ್, ಶೋಭಿತಾ ಧುಲಿಪಾಲ ಹಾಗೂ ಇನ್ನಿತರರು ನಟಿಸಿದ್ದಾರೆ. 2 ಭಾಗಗಗಳಲ್ಲಿ ತಯಾರಾಗಿರುವ ಸಿನಿಮಾ ಇದೇ ಸೆಪ್ಟೆಂಬರ್ 30 ರಂದು ತಮಿಳು, ಹಿಂದಿ, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ತೆರೆ ಕಾಣುತ್ತಿದೆ.

'ಪೊನ್ನಿಯಿನ್‌ ಸೆಲ್ವನ್‌' ಚೋಳ ಸಾಮ್ರಾಜ್ಯದ ಕಥೆಯಾಗಿದ್ದು ಕಲ್ಕಿ ಕೃಷ್ಣಮೂರ್ತಿ ಅವರು ಬರೆದ ಪೊನ್ನಿಯಿನ್‌ ಸೆಲ್ವನ್‌ ಕೃತಿ ಆಧರಿಸಿ ತಯಾರಾದ ಚಿತ್ರವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಪೊನ್ನಿ ನದಿ...ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ನೋಡಲು ಅಭಿಮಾನಿಗಳು ಬಹಳ ಎಕ್ಸೈಟ್‌ ಆಗಿದ್ದಾರೆ.

 

 

IPL_Entry_Point